ಸುಮಾ ವೀಣಾ
ಮಾಡಿದುದಂ ನಾವುಣ್ಣುದೆ ಪೋಕುಮೆ– ನಾವು ಮಾಡಿದ ಕರ್ಮಾಕರ್ಮಗಳಿಗೆ ನಾವೆ ಹೊಣೆಗಾರರು ಅದರಲ್ಲಿ ಪಾಲು ಯಾರಿಗೂ ಇಲ್ಲ ಎಂಬರ್ಥ ಇಲ್ಲಿದೆ. ನಾವು ಮಾಡಿದ ಅಡುಗೆಯನ್ನು ನಾವೆ ಸೇವಿಸಬೇಕು. ಉಪ್ಪು ತಿಂದವನು ನೀರು ಕುಡಿಯಲೆ ಬೇಕು ಎನ್ನುವ ಅರ್ಥ ಇಲ್ಲಿ ಬರುತ್ತದೆ.
ಮೂಲತಃ ಈ ಮಾತನ್ನು ಜನ್ನನ “ಯಶೋಧರಾ ಚರಿತೆ” ಕಾವ್ಯದಿಂದ ಆರಿಸಿದೆ. ಈ ಕಾವ್ಯವು ಯಶೋಧರ ಎಂಬ ಅಯೋಧ್ಯೆಯ ರಾಜ ಹಾಗು ಅವನ ತಾಯಿಯಾದ ಚಂದ್ರಮತಿಯು ಒಂದು ಜನ್ಮದಲ್ಲಿ ಮಾಡುವ ಸಂಕಲ್ಪವನ್ನು ಮಾಡಿದ್ದರಿಂದ ನಾನಾ ಜನ್ಮಗಳನ್ನು ಎತ್ತಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿ ಬರುತ್ತದೆ.
ಅದರಲ್ಲಿ ಮಾರಿದತ್ತನ ವರ್ಣನೆ ಸಂದರ್ಭದಲ್ಲಿ ಅಭಯರುಚಿ ಮತ್ತು ಅಭಯಮತಿಯರು ಮಾರಿದತ್ತನ ಮುಂದೆ ಮಾರಿಗೆ ಬಲಿಯಾಗಲು ಬಂದು ನಿಲ್ಲಬೇಕಾದ ಪ್ರಸಂಗ. ಆ ಸಂದರ್ಭದಲ್ಲಿ ಅಣ್ಣ ತಂಗಿಯರ ಸಂಭಾಷಣೆಯ ಸಂದರ್ಭದಲ್ಲಿ ಅಭಯಮತಿ ಈ ಮಾತುಗಳನ್ನಾಡುತ್ತಾಳೆ.
ನಾವು ಮಾಡಿದ ಕರ್ಮದ ಪ್ರತಿಫಲವನ್ನು ನಾವೆ ಸ್ವೀಕರಿಸಬೇಕು ಅದು ಬೇರೆಯವರ ಹೆಗಲಿಗೆಣೆಯಲ್ಲ ಎಂಬುದು “ಮಾಡಿದುದಂ ನಾವುಣ್ಣುದೆ ಪೋಕುಮೆ” ಎಂಬ ಮಾತಿನ ಮೂಲಕ ಸ್ಪಷ್ಟವಾಗಿ ಗ್ರಾಹ್ಯವಾಗುತ್ತದೆ. ಒಳ್ಳೆಯದೆ ಆಗಲಿ ಕೆಟ್ಟದ್ದೆ ಆಗಲಿ ಎಲ್ಲವೂ ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತಿರುತ್ತದೆ. ಹಾಗಾಗಿ ಒಳ್ಳೆಯ ಆಲೋಚನೆ ಎಂದಿಗೂ ಕ್ಷೇಮವೆ ಅದೇ ಕೆಟ್ಟ ಕೆಲಸ ಮಾಡುವುದಿರಲಿ ಕೆಟ್ಟ ಆಲೋಚನೆ ಮಾಡಿದರೂ ಅದಕ್ಕೆ ಪ್ರಾಯಶ್ಚಿತ್ತಪಡ ಬೇಕಾಗುತ್ತದೆ ಎಮಬುದು ಈ ಮಾತಿನಿಂದ ತಿಳಿಯುತ್ತದೆ. ಸದಾ ಒಳ್ಳೆಯ ಆಲೋಚನೆ ಒಳ್ಳೆಯ ಕೆಲಸವನ್ನೆ ಮಾಡಬೇಕು ಎಂಬುದು ಇದರ ಗೂಡಾರ್ಥ.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.