20.6 C
Karnataka
Friday, November 22, 2024

    ಪ್ರಭಾವಗಳಿಗೆ  ಸಿಕ್ಕಿ ದುಷ್ಟರೆ ಮುಂಬರುತ್ತಾರೆ,   ಸಹಜ ಪ್ರತಿಭೆಗಳು ಅರಳಲಾರದೆ ನರಳುತ್ತವೆ

    Must read

    ಕಾಕಸಂಘಾತದೊಳ್ ಸಿಕ್ಕಿರ್ದ  ಕೋಗಿಲೆಯ ಮರಿಯಂತೆ- ನಡುಗನ್ನಡ ಸಾಹಿತ್ಯದ ಮಹತ್ವದ ಕವಿ ಲಕ್ಷ್ಮೀಶನ ಜೈಮಿನಿಭಾರತದ ಇಪ್ಪತ್ತೆಂಟನೆಯ ಸಂಧಿಯ  ಮೂವತ್ತೊಂದನೆಯ ಪದ್ಯದಲ್ಲಿ  ಪ್ರಸ್ತುತ ಮಾತು  ಉಲ್ಲೇಖವಾಗಿದೆ.

    ಪಾಂಡವರ  ಅಶ್ವಮೇಧದ ಕುದುರೆ ಚಂದ್ರಹಾಸನ ರಾಜ್ಯಕ್ಕೆ ಪ್ರವೇಶಿಸುತ್ತದೆ.  ಆ ವಿಚಾರವನ್ನು ನಾರದರು  ಚಂದ್ರಹಾಸ ಕುದುರೆಯನ್ನು ತಡೆದಿರುವುದಾಗಿ ಹೇಳಿ ಅವನ ಪೂರ್ವ ವೃತ್ತಾಂತವನ್ನು  ಹೇಳುತ್ತಾನೆ. ಚಂದ್ರಹಾಸ  ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡು ದುಷ್ಟ ಮಂತ್ರಿಯ ಕೈಗೆ ಸಿಲುಕುತ್ತಾನೆ  ಮಂತ್ರಿ ಅತ್ಯಂತ ಕ್ರೌರ್ಯದಿಂದ  ಮಗು ಚಂದ್ರಹಾಸನನ್ನು  ಹೇಗೆ ನಡೆಸಿಕೊಂಡ ಎನ್ನುವಲ್ಲಿ “ಕಾಕಸಂಘಾತದೊಳ್ ಸಿಕ್ಕಿರ್ದ  ಕೋಗಿಲೆಯ ಮರಿಯಂತೆ” ಎಂಬ ಮಾತು ಬರುತ್ತದೆ.

     ಮಂತ್ರಿ ದುಷ್ಟಬುದ್ಧಿ  ಬಾಲಕನನ್ನು ಕೊಂದು  ಕುರುಹನ್ನು ತೋರಿಸಿ ಎಂದು ಆದೇಶಿಸಿದಾಗ ಭಟರು  ಚಂದ್ರಹಾಸನನ್ನು  ಹೊತ್ತುಕೊಂಡು ಹೋಗುವಾಗ  ಬಾಲಕ ಪಾತಕಿಗಳ  ಇರುವುದನ್ನು ‘’ಕಾಗೆಗಳ ಗುಂಪಿನ ಮಧ್ಯೆ  ಸಿಕ್ಕಿ  ನಲುಗಿದ ಕೋಗಿಲೆಯ  ಮರಿಗೆ ಹೋಲಿಸುತ್ತಾನೆ.  ಲೋಕಾಭಿರಾಮವಾಗಿ ಕಾಗೆಗಳು  ಸ್ನೇಹಪರವಾದರೂ ಹಂಚಿತಿನ್ನುವ ಸ್ವಭಾವದವಾಗಿವೆ. ಆದರೆ ಅವುಗಳು ಅರಚುವ ಬಗೆ ಕಿವಿಗೆ ಇಂಪನ್ನು ಕೊಡುವುದಿಲ್ಲ ಆ ಸದ್ದು  ಕರ್ಕಶವಾಗಿಯೇ ಇರುತ್ತದೆ.  ಇವುಗಳ ನಡುವೆ ಕೇಳಲು  ಉತ್ತಮ ಸ್ವರವಿರುವ ಕೋಗಿಲೆ ಸದಾ ಕೇಳುಗರನ್ನು  ಆಕರ್ಷಿಸುತ್ತದೆ.

    ಇದನ್ನು ಒತ್ತಟ್ಟಿಗೆ ಇಟ್ಟರೆ  ನಮ್ಮಲ್ಲಿ  ನಿಜವಾದ ಪ್ರತಿಭೆಗೆ   ನ್ಯಾಯ ಸಲ್ಲುತ್ತಿಲ್ಲ.  ಪ್ರಭಾವಗಳಿಗೆ, ದಾಕ್ಷಿಣ್ಯಗಳಿಗೆ ಒಳಗಾಗಿ ಅಪ್ರತಿಭರು ಇಲ್ಲವೆ ಅನರ್ಹರು, ಖಳರು, ದುಷ್ಟರು  ಸಮಾಜದಲ್ಲಿ ಮೆರೆಯುತ್ತಿದ್ದಾರೆ ಇದರಿಂದ ಸಹಜ ಪ್ರತಿಭೆಗಳು  ಮರೆಯಾಗಿ ಹೋಗುತ್ತಿವೆ. ಖಳರ ಕೂಟದಿಂದ ಮುಂಬರಲಾರದೆ  ಪ್ರತಿಭೆಗಳು ನೇಪಥ್ಯಕ್ಕೆ ಸರಿಯುತ್ತಿವೆ.  ಇದು ಸಾಮಾಜಿಕ ಅಪಸವ್ಯ. ಇದನ್ನು  ಉಪಮಾಲೋಲ ಲಕ್ಷ್ಮೀಶ ಸಾರ್ವಕಾಲಿಕವಾಗಿ ನಿಲ್ಲುವಂಥ   ಚಂದ್ರಹಾಸನ ಹಿನ್ನೆಲೆಯ ಉಪಮೆಯೊಂದಿಗೆ ಹೇಳಿರುವುದು  ಅನನ್ಯವಾಗಿದೆ. ಪ್ರಭಾವಗಳಿಗೆ  ಸಿಕ್ಕಿ ದುಷ್ಟರೆ ಮುಂಬರುತ್ತಾರೆ   ಸಹಜ ಪ್ರತಿಭೆಗಳು ಅರಳಲಾರದೆ ನರಳುತ್ತವೆ ಎಂಬ ಭಾವ  ಇಲ್ಲಿದೆ.

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!