ಪ್ರೀತಿಯಿಲ್ಲದೆ/ ನಾನು ಏನನ್ನೂ ಮಾಡಲಾರೆ;/ ದ್ವೇಷವನ್ನು ಕೂಡ-ಚಂದ್ರಶೇಖರ ಪಾಟೀಲರು ಜಗಳಗಂಟಿ. ಯಾರೊಂದಿಗೂ ಅವರ ಸ್ನೇಹ ದೀರ್ಘವಾಗಿ ಉಳಿದಿಲ್ಲ ಎಂಬ ಅಭಿಪ್ರಾಯವೊಂದಿದೆ.ಸಂಕ್ರಮಣ ಪತ್ರಿಕೆಯ ಆರಂಭದಲ್ಲಿದ್ದ ಮೂವರು ಸಂಪಾದಕರಲ್ಲೊಬ್ಬರಾದ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಚಂಪಾ ಹೇಗೆ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಸಂಕ್ರಮಣ(416)ದಲ್ಲಿಯೇ ವರ್ಣಿಸಿದ್ದಾರೆ.
ಚಂಪಾನದು ಒಮ್ಮೊಮ್ಮೆ ಸ್ವಲ್ಪ ಹರುಕು ಸ್ವಭಾವ: ತಟ್ಟನೆ ಏನಾದರೂ ಅಂದುಬಿಡುವುದು ಅಥವಾ ಬರೆದುಬಿಡುವುದು. ನನಗೂ ಕೆಟ್ಟ ಕೆಟ್ಟ ಪತ್ರಗಳನ್ನು ಬರೆದಿದ್ದಾನೆ. ಹಾಗೆ ಬರೆದದ್ದು ಅವನಿಗೆ ನೆನಪಿರಲಿಕ್ಕೂ ಇಲ್ಲ. ಅಷ್ಟರಮಟ್ಟಿಗೆ ಮತ್ತೆ ನಿರಾಳವಾಗಿ ಸ್ವಚ್ಛವಾಗಿ ಮುಂದೆ ಹೊರಟಿರುತ್ತಾನೆ. ಅವನ ಇಂಥ ಸ್ವಭಾವ ನನಗೆ ತಿಳಿದಿದೆ. ಹೀಗಾಗಿ ಅವನು ಮಾಡಿದಂಥದ್ದನ್ನೇ ನಾನೇಕೆ ಮಾಡಬೇಕು. ಈ ಕಾರಣದಿಂದಾಗಿ ಅವನು ನನಗೆ ಅಪ್ರಿಯನಾಗಿ ಕಾಣುವುದೇ ಇಲ್ಲ. ಆದರೆ ಅಂಥ ಸ್ವಭಾವದಿಂದಾಗಿ ಅವನು ಕೆಲವು ಗೆಳೆಯರನ್ನು, ಸಂಬಂಧಗಳನ್ನು, ಗೌರವಗಳನ್ನು, ಅವಕಾಶಗಳನ್ನು, ಸಂಸ್ಥೆಗಳನ್ನು ಕಳೆದುಕೊಂಡಿದ್ದಾನೆ. ಮತ್ತೆ ಮತ್ತೆ ಹೊಸತು ಕಟ್ಟಿದ್ದಾನೆ. ಬಿಟ್ಟಿದ್ದಾನೆ. ಇಂಥ ನಡವಳಿಕೆಯಿಂದಾಗಿ ಅವನ ವ್ಯಕ್ತಿತ್ವದ ಕೆಲವು ಆರೋಗ್ಯಪೂರ್ಣ ಅಂಶಗಳು ಕಳಚಿಹೋಗಿವೆ.
ಪ್ರತಿ ಸಂಕ್ರಮಣ ಬಂದಾಗಲೂ ಐದು ಗೆಳೆತನಗಳು ತಪ್ಪುತ್ತವೆ, ಹತ್ತು ಹೊಸ ಪರಿಚಯವಾಗುತ್ತದೆ ಎಂದು ಚಂಪಾ ಅವರೇ ಹೇಳಿದ್ದಾರೆ. ಅವರಿಬ್ಬರೂ ಒಳ್ಳೆಯ ಸ್ನೇಹಿತರಾಗಿರುವ ಕಾರಣ ಇದಕ್ಕೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ ಎಂಬುದು ನನ್ನ ಭಾವನೆ.
’’ ಪ್ರೀತಿ ದ್ವೇಷದ ಕುರಿತಾದ ಸಂಗತಿಯಲ್ಲಿ ನನ್ನ ಅಭಿಪ್ರಾಯವೆಂದರೆ ಪ್ರೀತಿ ಪ್ರೀತಿಯಾಗಿಯೇ ಇರಬೇಕು, ದ್ವೇಷ ಕೂಡ ಅಪ್ಪಟ ದ್ವೇಷವಾಗಿಯೇ ಇರಬೇಕು. ಇವೆರಡರ ನಡುವಣ ಗೆರೆಯ ಬಗ್ಗೆ ಖಚಿತತೆ ಇರಬೇಕು. ನಾಜೂಕಯ್ಯ ಶತ್ರುವಿಗಿಂತಲೂ ಅಪಾಯಕಾರಿ. ಚಂಪಾ ಎಂದೂ ನಾಜೂಕಯ್ಯ ಅಲ್ಲ’’ ಎಂದು ಮೋಹನ ನಾಗಮ್ಮನವರ ಚಂಪಾಯಣದಲ್ಲಿ ಬರೆದಿರುವರು.
ಚಂಪಾ ತಮ್ಮನ್ನು ತಾವೇ ನಿರೀಕ್ಷಣೆ ಮಾಡಿಕೊಂಡಿರುವುದೂ ಸಂಕ್ರಮಣದಲ್ಲಿಯೇ ದಾಖಲಾಗಿದೆ.ಒಂದು ದೃಷ್ಟಿಯಿಂದ ನಾನು ಇಲ್ಲಿಗೆ ನಾನಾಗಿ, ಒಬ್ಬ ವ್ಯಕ್ತಿಯಾಗಿ ಬಂದಿಲ್ಲ. ಒಂದು ಹೋರಾಟದ, ಆದರ್ಶದ, ಮೌಲ್ಯದ ಸಂಕೇತವಾಗಿ ಬಂದಿದ್ದೇನೆ. ಮೊದಲಿನಿಂದಲೂ ನಿಷ್ಠುರ ವ್ಯಕ್ತಿವಾದಿಯಾಗಿ, ಎಡಸೊಕ್ಕಿನವನಾಗಿ ಬೆಳೆದುಬಂದ ನನಗೆ ಈ ಹೊಸ ಬಗೆಯ ವ್ಯಕ್ತಿತ್ವದ ಆವರಣ ಇನ್ನೂ ಸರಿಯಾಗಿ ಹೊಂದಿಕೊಳ್ಳಲೊಲ್ಲದು. ದೊಡ್ಡವರೆನ್ನಿಸಿಕೊಂಡವರ ಭಾನಗಡಿ ಕಣ್ಣಿಗೆ ಬಿದ್ದಾಗ ನನಗೆ ಸಿಟ್ಟು ನೆತ್ತಿಗೇರುತ್ತದೆ. ನಾಲಗೆ ಕೊಂಕಾಗುತ್ತದೆ. ಪರಿಣಾಮವೇನಾದೀತೆಂಬ ಅರಿವು ಇಲ್ಲದೆ ಏನಾದರೂ ಮಾತು ಆಡಿಯೇಬಿಡುತ್ತೇನೆ. ಇತ್ತೀಚಿನ ಎರಡು ವರ್ಷಗಳಲ್ಲಿ ಪಬ್ಲಿಕ್ಕಿನಲ್ಲಿ ನಾನಾಡಿದ ಕೊಂಕಿಗೆ ಮಿತಿಯೇ ಇಲ್ಲ. ಆದರೆ ನಾನು ನಿಜವಾಗಿಯೂ ‘ವ್ಯಕ್ತಿ’ಯಿಂದ ಸಾಮಾಜಿಕನಾಗುತ್ತಿದ್ದೇನೆಯೇ ಎಂಬ ಪ್ರಶ್ನೆ ಪ್ರತಿಯೊಂದು ಸಂದರ್ಭದಲ್ಲಿ ನನ್ನೆದುರು ಹೆಡೆಯೆತ್ತಿ ಕೆಣಕುತ್ತದೆ. ಅದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಊರು ಉಪಕಾರ ಹೆಣ ಸಿಂಗಾರ ಇತ್ಯಾದಿ ಗೊತ್ತಿದ್ದರೂ ಹೀಗೇಕೆ ನಾನು ನನ್ನನ್ನೇ ಹೊಸ (ಹಾಗೂ ಅನಾವಶ್ಯಕ) ಅನುಭವಗಳಿಗೆ ಒಡ್ಡಿಕೊಳ್ಳುತ್ತೇನೋ ನನಗೆ ತಿಳಿಯದಾಗಿದೆ…’’ ಇದೊಂದು ಪ್ರಾಮಾಣಿಕವಾದ ದಾಖಲೆ.
ನಾನು ನಂಬಿದ ಮೌಲ್ಯಗಳಿಗೆ ಕ್ರಿಯಾತ್ಮಕ ಆಯಾಮ ಕೊಟ್ಟಾಗ ಮಾತ್ರ ಆ ಹೋರಾಟ ಕೇವಲ ವ್ಯಕ್ತಿ ಪ್ರತಿಷ್ಠೆಗಳ ಮೇಲಾಗಲಿ, ಪತ್ರಿಕಾಹೇಳಿಕೆಗಳ ಮೇಲಾಗಲಿ ಅವಲಂಬಿಸದೆ ಜನತೆಯ ನಿರಂತರ ಹೋರಾಟವಾಗಲು ಸಾಧ್ಯ. ಈ ದಿಸೆಯಲ್ಲಿ ನಮ್ಮೆಲ್ಲರ ಹೋರಾಟಗಳೂ ಗಟ್ಟಿಗೊಳ್ಳುತ್ತ ಹೋಗಬೇಕಾಗಿದೆ.‘ವಿಚಾರವಾದಿ’ಗಳನ್ನೂ ವಿಚಾರವಾದದ ಒರೆಗಲ್ಲಿಗೆ ತಿಕ್ಕುತ್ತಲೇ.’’ ಇದು ಒಂದು ಮಾಗಿದ ವ್ಯಕ್ತಿತ್ವದ ಅನುದಿನದ ಧ್ಯಾನದಿಂದ ಮೂಡಿದ ಹೇಳಿಕೆ. ಚಂಪಾ ಅವರ ವ್ಯಕ್ತಿತ್ವ ಹೊಸ ರೀತಿಯಲ್ಲಿ ವಿಕಸನಗೊಂಡಿದ್ದು ಇಂಗ್ಲೆಂಡಿನಲ್ಲಿಯೇ ಎಂಬುದನ್ನು ಅವರ ಇನ್ನೊಬ್ಬ ಸ್ನೇಹಿತರಾದ ಮಾಧವ ಕುಲಕರ್ಣಿಯವರು ಹೇಳಿದ್ದಾರೆ. ಪಾಟೀಲರು ಇಂಗ್ಲಂಡಿನಲ್ಲಿ ಇನ್ನಿತರ ಎಷ್ಟೋ ವಿಷಯಗಳ ಜೊತೆಗೆ ಭಾರತವನ್ನು ಲೋಹಿಯಾ ಮತ್ತು ಗಾಂಧಿಯ ಕಣ್ಣುಗಳಿಂದ ನೋಡಿದರು. ಅವರು ಸಮಾಜಮುಖಿ ಸಾಹಿತ್ಯ ಸೃಷ್ಟಿಗೆ ಒತ್ತು ಕೊಡುತ್ತ ಮುಂದುವರಿದ ಧೋರಣೆಯ ಬೀಜಗಳು ಅಲ್ಲಿವೆ. ನವ್ಯದ ದಾರಿಯನ್ನು ಬಿಟ್ಟು ಬೇರೆ ದಾರಿಗಳನ್ನು ಹುಡುಕುತ್ತಲೇ ಅವರು ಭಾರತಕ್ಕೆ ಮರಳಿದರು ಎಂದಿದ್ದಾರೆ.
ಸಂಕ್ರಮಣದ ಸಂಪಾದಕ ಟಿಪ್ಪಣಿಗಳಲ್ಲಿ ಅವರು ವಿಶ್ಲೇಷಿಸುವ ಪುಟ್ಟಪುಟ್ಟ ಪದ್ಯಗಳನ್ನು ನೋಡಬೇಕು. ಆ ವಿಶ್ಲೇಷಣೆಗಳಿಂದ ಕರ್ನಾಟಕ ಕಾಲೇಜಿನಲ್ಲಿ ಪಾಠಮಾಡುತ್ತಿದ್ದ ಆ ಹಳೆಯ ಪ್ರಾಧ್ಯಾಪಕ ಚಂಪಾ ಎದ್ದುಬರುತ್ತಾರೆ. ಹೀಗೆ ಹಳೆಯ ಸೂಕ್ಷ್ಮತೆಗಳನ್ನು ಬಿಡದೆ ಸೃಜನಶೀಲತೆಯ ಕಾಳಜಿಗಳನ್ನು ಬಿಟ್ಟುಕೊಡದೆ ಮತ್ತು ಸಾಮಾಜಿಕ ಕಾಳಜಿಗಳ ಮಧ್ಯದಲ್ಲಿಯೂ ಆತ್ಮಗತವಾದ ಕಾವ್ಯವನ್ನೂ ರಚಿಸುತ್ತ ಬದುಕಿದವರು ಚಂಪಾ. ಅವರು ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ತಮ್ಮ ವ್ಯಕ್ತಿತ್ವದ ಮೂಲಕ ಮತ್ತು ತಮ್ಮ ಸಂಕ್ರಮಣ ಪತ್ರಿಕೆಯ ಮೂಲಕ ನೀಡಿದ ಕೊಡುಗೆ ಅನನ್ಯವಾದುದು ಎಂದು ಮಾಧವ ಕುನಕರ್ಣಿ ಚಂಪಾಯಣದಲ್ಲಿ ಬರೆದಿರುವರು.
`ಸಂಕ್ರಮಣ’ದ ಮೂಲಕವೇ ಚಂಪಾ ಅವರನ್ನು ಮೂರ್ತೀಕರಿಸುವ ಹರಿಹರಪ್ರಿಯ ಅವರು, ಕಳೆದ 25 ವರ್ಷಗಳ ಕರ್ನಾಟಕದ ಎಲ್ಲ ಜನಪರ ಚಳುವಳಿಗಳಿಗೆ ಬಲಿಯಾಗಿ ವ್ಯಕ್ತಿತ್ವ ನಾಶಮಾಡಿಕೊಳ್ಳದ, ಅಪ್ಟಟ ಲೋಹಿಯಾವಾದಿಯಾಗಿ ಭಾಷೆ, ಬದುಕು, ವೃತ್ತಿ, ಬರವಣಿಗೆ, ಚಿಂತನೆಗಳಲ್ಲಿ ಜೀವಂತಿಕೆ ಕಾಪಾಡಿಕೊಂಡು ಬಂದ ಚಂಪಾ, ಇವತ್ತಿಗೂ ದಲಿತ, ಬಂಡಾಯ ಚಳವಳಿಗಳೊಂದಿಗೆ ಸಂಬಂಧವಿಟ್ಟುಕೊಂಡಿದ್ದಾರೆ. ತಮ್ಮ ಸಂಕ್ರಮಣದವನ್ನು ಅದಕ್ಕಾಗಿ ತೊಡಗಿಸಿಕೊಂಡಿದ್ದಾರೆ. ಅವರ ಈ ವರೆಗಿನ ನೆಲೆ ಇವತ್ತಿನ ನಮ್ಮ ತಲೆಮಾರಿನವಿರೆಗೆ ಒಂದು ಪಾಠವಾಗಿ, ಮುಂದಿನ ಹಾದಿಯ ನಿರ್ಮಾಣಕ್ಕೆ ಚಾರಿತ್ರೆಕ ಮಹತ್ವ ತಂದುಕೊಡುವುದರಲ್ಲಿ ಯಾವ ಸಂದೇಹವೂ ಇಲ್ಲ……….’’ ಎಂದು ಹೇಳಿದ್ದಾರೆ. (ಚಂಪಾಯಣ)
1979ರಲ್ಲಿ ಬಂಡಾಯ ಸಾಹಿತ್ಯ ಚಳವಳಿಯನ್ನು ಹುಟ್ಟುಹಾಕಿದ್ದಲ್ಲದೆ, ಬ್ರಾಹ್ಮಣ ಅಭವಗಳನ್ನು ಪ್ರತಿಭಟಿಸುವ ಹೋರಾಟಗಾರರಲ್ಲಿ ಒಬ್ಬರಾಗಿ ಸಾಹಿತ್ಯದ ಹೊಸ ತಿರುವಿಗೆ ಕಾರಣರಾದದ್ದು ಅವರ ಸಾಹಿತ್ಯಿಕ ಕಾಳಜಿಯ ನೈಜ ನಿಲುವಿಗೆ ಪ್ರತೀಕ. ದಟ್ಟವಾದ ಸಾಮಾಜಿಕ ಪ್ರಜ್ಞೆಯಿಂದ ಶೋಷಿತ ಜನತೆಯ ಪರವಾದ ನಿಲುವು, ಅಸ್ಪ್ರಶ್ಯತೆ, ಜಾತಿಪದ್ಧತಿ, ಲಿಂಗಭೇದ, ವರ್ಣ, ವರ್ಗ ಭೇದ ನೀತಿಯ ವಿರುದ್ಧ ಹೋರಾಟ ಮಾಡುತ್ತ, ಜನಪರ ನಿಲುವುಗಳಿಗೆ ಬೆಂಬಲಿಸುತ್ತ, ಚರ್ಚೆಗಳಿಂದ ಪರಿಹಾರ ಮಾರ್ಗ ತೋರುತ್ತ, ಸಾಂಸ್ಕೃತಿಕ ಹೋರಾಟದ ಮುಖ್ಯ ನೆಲೆಯಲ್ಲಿ, ಇಂತಹ ಒಲವುಳ್ಳ ಸಾಹಿತ್ಯವನ್ನು ಸೃಷ್ಟಿಸುತ್ತ, ಹೋರಾಟದ, ಅಂತೆಯೇ ಸಾಹಿತ್ಯದ ಗತಿಗಳನ್ನು ಅವಸ್ಥಾಂತರಗಳನ್ನೂ ತಮ್ಮ ಸಾಹಿತ್ಯದಲ್ಲಿ ಹಾಗೂ ಸಂಕ್ರಮಣ ಪತ್ರಿಕೆಯ ಮೂಲಕ ದಾಖಲುಗೊಳಿಸುತ್ತ ನಿರಾಯಾಸರಾಗಿ ಸಾಗಿರುವ ಚಂಪಾ ಬಂಡಾಯ ಸಾಹಿತ್ಯ ಚಳವಳಿಯ ಅಂತಃಸತ್ವವೇ ಆಗಿ ಬೆಳೆದಿದ್ದಾರೆ.
ಕಳೆದ ನಲವತ್ತು ವರ್ಷಗಳಿಂದ ನಿತ್ಯ ಹೋರಾಟದ ಮೂಲಕ ನಾಡಿನ ಜನರ ಬದುಕನ್ನು ಹಸನುಗೊಳಿಸುವ ಆಕಾಂಕ್ಷೆಯುಳ್ಳ ಚಂದ್ರಶೇಖರ ಪಾಟೀಲರು ಸಂಕ್ರಮಣ ಪತ್ರಿಕೆಯನ್ನು ಆರಂಭಿಸಿ ವೈಚಾರಿಕ, ಸಾಹಿತ್ಯಿಕ, ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತ ಪ್ರಜ್ಞಾವಂತಿಯ ಸತ್ಯದ ದಂಡನ್ನು ಕಟ್ಟುತ್ತಾ, ಬಂಡಾಯದ ಗಟ್ಟಿ ದನಿಗಳ ಒಂದು ಪರಂಪರೆಯ ಕೊಂಡಿಯಾಗಿ ಸೃಜನಶೀಲ ಲೇಖಕರನ್ನು ಹೊಸ ಯುಗದ ಸಾಹಿತ್ಯ ಸೃಷ್ಟಿಗೆ ಸಿದ್ಧಪಡಿಸಿದ್ದು ಅವರ ವೈಯಕ್ತಿಕ ಸಾಹಿತ್ಯ ಸೃಷ್ಟಿಯನ್ನು ಮೀರಿದ ಅಪೂರ್ವ ಸಾಧನೆ ಎಂದು ಕೆ.ಎಸ್.ರತ್ನಮ್ಮ ಹೇಳಿದ್ದಾರೆ.
ಸಾಮಾಜಿಕ ಹೋರಾಟಗಳಲ್ಲಿ ಸದಾ ತೊಡಗಿಸಿಕೊಂಡಿರುವ ಚಂಪಾ ಸಾಹಿತ್ಯ ಎಂಬುದು ಸಾರ್ವಜನಿಕವಾದುದು ಮತ್ತು ಸಾರ್ವಜನಿಕವಾಗಿಯೇ ಇರಬೇಕು ಎಂದು ನಂಬಿದವರು.
ನನ್ನ ಕಾವ್ಯ
ನನ್ನ ಒಳಗೇ
ನಾನು ಮಾತ್ರ
ನನ್ನ ಕಾವ್ಯದ ಹೊರಗೆ ಹೀಗೆಂದು ಚಂಪಾ ತಮ್ಮ ಬಗೆಗೆ ಹೇಳಿಕೊಂಡಿರುವುದು ಸಂಕ್ರಮಣದಲ್ಲಿ ದಾಖಲಾಗಿದೆ.
ಕಾವ್ಯಮೀಮಾಂಸೆಗೆ ಸಂಬಂಧಿಸಿದ ಮಾತೊಂದನ್ನು ಚಂಪಾ ಸಂಕ್ರಮಣದ 400ನೆ ಸಂಚಿಕೆಯ ತಮ್ಮ ಕಾಲಂನಲ್ಲಿ ದಾಖಲಿಸಿದ್ದಾರೆ. ಅಂದಿಗೆ ಸುಮಾರು 50 ವರ್ಷಗಳ ಹಿಂದೆ ದೀಪಾವಳಿಯ ಸಂದರ್ಭದಲ್ಲಿಈ ಮಣ್ಣ ಪಣತೆ ಎಂಬ ಕವಿತೆಯನ್ನು ಬರೆದಿದ್ದರು. “ಈ ಮಣ್ಣ ಪಣತೆಯ ಸಾಲುಗಳು ನನ್ನೊಳಗೆ ಸದಾ ಗುಂಯ್‌ಗುಡಲು ಕಾರಣವಿದೆ. ಡಾ.ಹನುಮಣ್ಣನಾಯಕ ದೊರೆ- (ಮೈಸೂರಿನ ಸಂಗೀತ ವಿಶ್ವವಿದ್ಯಾನಿಲಯದ ಹಾಲಿ ಕುಲಪತಿ)- ನನ್ನ ಪ್ರೀತಿಯ ಪುರಾತನ ಶಿಷ್ಯ. ಹಾಡು ಹೇಳುವಾಗ ತಾನೇ ಹಾಡಾಗಿ-ಬಿಡುವ ಹುಡುಗ, ಈ ಕವನ ಅವನಿಗೆ ಮೆಚ್ಚುಗೆ. ಹೋದಲ್ಲೆಲ್ಲ ಹಾಡುತ್ತಿದ್ದ. ಜೊತೆಗೊಬ್ಬ ಕಲಾವಿದೆ. ಮೊದಲ ಸಾಲು ಅವನದು; ನಂತರದ್ದು ಇವಳದು; ಮತ್ತೆ ಅವನು, ಮತ್ತೆ ಇವಳು. ಬರಬರುತ್ತ ಇಬ್ಬರಿಗೂ ಕವನ ಗುಂಗಾದಾಗ ಇಂದು ಹಬ್ಬ ಮಾಡೋಣ ಬಾ’ ಅನ್ನಿಸಿತಂತೆ. ಹಬ್ಬ ಮಾಡಿಯೇಬಿಟ್ಟರು. ಅವರಿಗೀಗ ಇಬ್ಬರು ಮಕ್ಕಳು.
ಕವನ ಬರೆದವನ ಫಜೀತಿ ನೋಡಿರಿ. ಮೂಲದ ’ ನಾನು’ ಮತ್ತು
’ ನೀನು’ ಎಲ್ಲಿಯೋ ಮಾಯವಾಗಿ ನಮ್ಮ ’ ದೊರೆ’ ಮತ್ತು ಅವನ
’ ದೊರೆಸಾನಿ’ ಕವನವನ್ನು ಹೈಜಾಕ್ ಮಾಡಿಬಿಟ್ಟಿದ್ದಾರೆ! ಕಾವ್ಯ ಇರುವುದೇ ಹಾಗೆ- ದೀಪಾವಳಿಯ ಕತ್ತಲೆಯಂತೆ: ದೀಪಾವಳಿಯ ಬೆಳಕಿನಂತೆ. ಅದರ ಕಾಯಂ ಯಜಮಾನಿಕೆ ಯಾರದೂ ಅಲ್ಲ.’’ ವೈಯಕ್ತಿಕ ನೆಲೆಯಲ್ಲಿ ಸಾರ್ವತ್ರಿಕವಾಗುವ ವಿಸ್ಮಯವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಇಲ್ಲಿ ಹೇಳಿದ್ದಾರೆ.
👌👌
Bhashe balasuvana sottu. Abhipraaya barahagaarana sottu. Innobbarannu halidare adu barahagarana sankuchate Yee Mahaan saahitiya bhavanegalu vishaalavagirabekittu yennuva Satyanna.
Melina baraha odiri