ಬಳಕೂರ. ವಿ.ಎಸ್.ನಾಯಕ
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಅಡಿ ಇಟ್ಟವರಿಗೆ ಒಂದು ಅಚ್ಚರಿಯ ಕಲಾ ಲೋಕಕ್ಕೆ ಬಂದಂತಹ ಅನುಭವವಾಗಿತ್ತು. ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಶೈಲಿಯ ಕಲಾಕೃತಿಗಳು ಕಲಾಸಕ್ತರ ಗಮನಸೆಳೆದಿದ್ದು.ಇದಕ್ಕೆ ಕಾರಣ ಬೆಂಗಳೂರಿನಲ್ಲಿ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮುದ್ರಣ ಬಿ ನಾಲೆಯನ್ನು ಕೇಂದ್ರ ಲಲಿತ ಕಲಾ ಅಕಾಡೆಮಿ ಏರ್ಪಡಿಸಿದೆ.
ಜನವರಿ 10 ರಿಂದ ಆರಂಭವಾಗಿ 23 ರವರೆಗೆ ನಡೆಯುವ ಈ ಪ್ರದರ್ಶನವನ್ನು ಲಲಿತಕಲಾ ಅಕಾಡೆಮಿ ಯು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಹಯೋಗದೊಂದಿಗೆ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ನಡೆಸುತ್ತಿರುವುದು ವಿಶೇಷವಾಗಿದೆ.
ಲಲಿತ ಕಲೆಯು ಒಂದು ಪ್ರಮುಖ ಮಾಧ್ಯಮವಾಗಿರುವ ಪ್ರಿಂಟ್ ಮೇಕಿಂಗ್ ನ ಈ ಪ್ರದರ್ಶನದಲ್ಲಿ ಭಾರತವೂ ಸೇರಿದಂತೆ ಜರ್ಮನಿ, ರಷ್ಯಾ, ನೆದರ್ಲ್ಯಾಂಡ್, ಮೆಕ್ಸಿಕೋ, ಬಾಂಗ್ಲಾದೇಶ, ಅಮೆರಿಕ, ಪ್ರಾನ್ಸ್, ಅರ್ಜೆಂಟೈನಾ, ಪೋಲಂಡ್, ಕ್ರೋ ಏಶಿಯ, ಇಸ್ರೇಲ್ ಪೆರು ಮತ್ತು ನೇಪಾಳ ಇತ್ಯಾದಿ14 ದೇಶಗಳ ವಿಭಿನ್ನ ಕಲಾಕೃತಿಗಳನ್ನು ಪ್ರದರ್ಶಿಸಿರುವುದು ವಿಶೇಷವಾಗಿದೆ.
ಎಲ್ಲಾ ದೇಶಗಳ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲಾಸಕ್ತರಿಗೆ ಇದೆ. ಇದರಲ್ಲಿ ಅಂತರಾಷ್ಟ್ರೀಯ ವಿಭಾಗದಲ್ಲಿ 28, ಆಹ್ವಾನಿತ ಕಲಾವಿದರಲ್ಲಿ 33, ಮತ್ತು ರಾಷ್ಟ್ರಮಟ್ಟದ 121 ಕಲಾಕೃತಿಗಳನ್ನು ಪ್ರದರ್ಶಿಸಿರುವುದು ವಿಶೇಷವಾಗಿದೆ. ನಮ್ಮ ದೇಶದ ಅತ್ಯಂತ ಪ್ರಸಿದ್ಧ ಮುದ್ರಣ ಕಲಾವಿದರಾಗಿದ್ದ ಶಾಂತಿನಿಕೇತನದ ಸೋಮನಾಥ ಹೋರೆ ಅವರ ಜನ್ಮಶತಾಬ್ದಿಯ ನೆನಪಿನಲ್ಲಿ ವಿಶೇಷವಾದ ಒಂದು ವಿಭಾಗವನ್ನು ತೆರೆಯಲಾಗಿದೆ.14 ದಿನಗಳಕಾಲ ನಡೆಯುವ ಕಲಾ ಪ್ರದರ್ಶನದ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಮುದ್ರಣ ಶಿಬಿರವೊಂದನ್ನು ಕೂಡ ಲಲಿತಕಲಾ ಅಕಾಡೆಮಿ ಆಯೋಜಿಸುತ್ತಿದೆ.
ಈ ಅದ್ವಿತೀಯ ಕಲಾಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ, ಬಿಎಲ್ ಶಂಕರ್ ಅವರು ಕೇಂದ್ರ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಡಾ, ನಂದಲಾಲ್ ಠಾಕೂರ್ ಅವರ ಸಮ್ಮುಖದಲ್ಲಿ ಜನವರಿ 10ರಂದು ನೆರವೇರಿಸಿದ್ದಾರೆ.ಅತ್ಯಂತ ಅಪರೂಪದ ವಿಶಿಷ್ಟ ಕಲಾಕೃತಿಗಳ ಪ್ರದರ್ಶನವನ್ನು ಕಲಾವಿದರು ಹಾಗೂ ಕಲಾಸಕ್ತರು ಕೋವಿಡ್ ನಿಯಮವನ್ನು ಪಾಲಿಸುವುದರ ಮೂಲಕ ವೀಕ್ಷಿಸ ಬೇಕಾಗಿ ಈ ಅಂತರಾಷ್ಟ್ರೀಯ ಮುದ್ರಣ ಬಿ ನಾಲೆಯ ಸಂಯೋಜಕರು ಹಾಗೂ ಕೇಂದ್ರ ಲಲಿತಕಲಾ ಅಕಾಡೆಮಿ ನಿಕಟಪೂರ್ವ ಆಡಳಿತಾಧಿಕಾರಿ ಚಿ. ಸು. ಕೃಷ್ಣ ಸೆಟ್ಟಿ ವಿನಂತಿಸಿಕೊಂಡಿದ್ದಾರೆ.
ಒಂದೇ ಸೂರಿನಡಿ ಇಂತಹ ಅದ್ಭುತ ಕಲಾಕೃತಿಗಳನ್ನು ನೋಡುವ ಸೌಭಾಗ್ಯ ನಿಮ್ಮದಾಗಲಿದೆ.
ಸ್ಥಳ:ಕರ್ನಾಟಕ ಚಿತ್ರಕಲಾ ಪರಿಷತ್
ಕಲಾ ಗ್ಯಾಲರಿ,ಕುಮಾರಕೃಪಾ ರಸ್ತೆ ಶಿವಾನಂದ ವೃತ್ತದ ಬಳಿ ಬೆಂಗಳೂರು
ದಿನಾಂಕ ಜನವರಿ 23ರವರೆಗೆ ಈ ಕಲಾ ಪ್ರದರ್ಶನ ನಡೆಯಲಿದೆ.ಪ್ರವೇಶ ಉಚಿತ.
ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.