23 C
Karnataka
Saturday, September 21, 2024

    Indian Stock Market : start upಗಳು ಸಾರ್ವಜನಿಕ ಹೂಡಿಕೆದಾರರನ್ನು ಮರೆಯದಿರಲಿ

    Must read

    ಷೇರುಪೇಟೆಯು ಸಧ್ಯಕ್ಕೆ ಎರಡು ವಿಧಗಳ ಚಟುವಟಿಕೆಗೆ ವೇದಿಕೆಯಾಗುತ್ತಿದೆ. ಅದೆಂದರೆ ಒಂದು ವರ್ಗದಿಂದ ಷೇರುಗಳನ್ನು ವಿತರಣೆ ಮಾಡುವುದು, ಮತ್ತೊಂದು ವರ್ಗದಿಂದ ಷೇರುಗಳನ್ನು ಹಿಂಪಡೆಯುವ ಅಥವಾ ಹಿಂಕೊಳ್ಳುವ ಪ್ರಕ್ರಿಯೆಗಳಾಗಿವೆ.

    ಒಂದೆಡೆ ಕಂಪನಿಯ ಪ್ರವರ್ತಕರು ತಮ್ಮ ಷೇರುಗಳನ್ನು ಸಾರ್ವಜನಿಕವಾಗಿ ವಿತರಿಸಿ ಷೇರುದಾರರ ಜಾಲವನ್ನು ವಿಸ್ತರಿಸುವ ಪ್ರಯತ್ನದಲ್ಲಿ, ಕಂಪನಿಯು ಹಾನಿಗೊಳಗಾಗಿದ್ದರೂ, ತಮ್ಮ ಖರೀದಿಯ ಬೆಲೆ ಒಂದಂಕಿಯಲ್ಲಿದ್ದರೂ, ಷೇರಿನ ಮುಖಬೆಲೆಯನ್ನು ರೂ.1 ಕ್ಕೆ ಸೀಳಿ ಆರಂಭಿಕ ಷೇರು ವಿತರಣೆಯ ಮೂಲಕ ಸಾರ್ವಜನಿಕರಿಂದ ಅಧಿಕ ಪ್ರೀಮಿಯಂನೊಂದಿಗೆ ಸಂಪನ್ಮೂಲ ಸಂಗ್ರಹಣೆ ಮಾಡುತ್ತಾರೆ. ಈ ಪ್ರಕ್ರಿಯೆಯಿಂದ ಕಂಪನಿಯಲ್ಲಿರುವ ಹಾನಿಯನ್ನು ಜನಸಾಮಾನ್ಯರ ಹೆಗಲಿಗೆ ಹಸ್ತಾಂತರಿಸುತ್ತಾರೆ. ವರ್ಣರಂಜಿತ, ವಿಶ್ಲೇಷಣೆಗಳು, ಭವಿಷ್ಯದಲ್ಲಿ ಸಾಧಿಸಬಹುದಾದ ಅಂಕಿ ಅಂಶಗಳ ಮೂಲಕ ಮೂಗಿನ ತುದಿಗೆ ತುಪ್ಪ ಸವರಿ, ತಮ್ಮ ಸಂಪನ್ಮೂಲ ಸಂಗ್ರಹಣೆಯನ್ನು ಯಶಸ್ವಿಗೊಳಿಸಿಕೊಳ್ಳುತ್ತಾರೆ. ಈ ದಿನಗಳಲ್ಲಿ ಸ್ಟಾರ್ಟ್‌ ಅಪ್‌ ಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.

    ಮತ್ತೊಂದೆಡೆ ಕಂಪನಿಗಳು ತಮ್ಮಲ್ಲಿರುವ ಮೀಸಲು ನಿಧಿ, ಇತರೆ ಚಟುವಟಿಕೆಗಳಿಂದ ಸಂಗ್ರಹವಾದ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಕಂಪನಿಯ ಷೇರುಗಳನ್ನು ಪೇಟೆಯ ಬೆಲೆಗಿಂತ ಹೆಚ್ಚಿನ ಬೆಲೆಗಳಿಗೆ ಹಿಂಕೊಳ್ಳುವ ಮೂಲಕ ಷೇರುದಾರರಿಗೆ ಉತ್ತಮ ಫಲ ನೀಡುವ ಕಾರ್ಪೊರೇಟ್‌ ಸಂಪ್ರದಾಯಗಳನ್ನು
    ಮುಂದುವರೆಸಿಕೊಂಡು ಹೋಗುವ ಹವ್ಯಾಸ. ಈ ಮೂಲಕ ಷೇರುದಾರರ- ಕಂಪನಿಗಳ ನಡುವೆ ಮೂಡಬಹುದಾದ ಬಾಂಧವ್ಯದ ಬೆಸುಗೆ ದೀರ್ಘಕಾಲೀನವಾಗಿ ಪ್ರಭಾವಿಯಾಗುವಂತೆ ಮಾಡುವುದು.

    ಸ್ಟಾರ್ಟ್‌ ಅಪ್‌ ಯೋಜನೆ

    ಸ್ಟಾರ್ಟ್‌ ಅಪ್‌ ಯೋಜನೆಯು 2015 ರಲ್ಲೇ ಪ್ರಕಟಿಸಲಾಯಿತು. ಲೈಸೆನ್ಸ್‌ ರಾಜ್‌ ಅಗತ್ಯವಿರುವ, ಪ್ರದೇಶ ಸ್ವಾದೀನ, ಸಂಪನ್ಮೂಲ ಒದಗಿಸುವ, ವಿದೇಶೀ ಹೂಡಿಕೆಯ ಯೋಜನೆಗಳ ವಲಯಗಳಲ್ಲಿ ಸ್ಟಾರ್ಟ್‌ ಅಪ್‌ ಉದ್ಧಿಮೆ ಆರಂಭಿಸಲು ಅನುವು ಮಾಡಿಕೊಡುವುದು ಯೋಜನೆಯ ಮೂಲ ಉದ್ದೇಶವಾಗಿದ್ದು, ಇದರಿಂದ ಯುವಶಕ್ತಿಯು ತಮ್ಮ ಕೌಶಲ್ಯಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಉದ್ಯೋಗ ಸೃಷ್ಠಿ ಮಾಡುವುದರೊಂದಿಗೆ ಸ್ವಯಂ ಉದ್ಯೋಗಪತಿಗಳಾಗಿ ದೇಶದ ಆರ್ಥಿಕ ಉನ್ನತಿಗೆ ಕೊಡುಗೆ ನೀಡಲು ಪ್ರೋತ್ಸಾಹಿಸಿದಂತಾಗುತ್ತದೆ.

    ಹತ್ತು ವರ್ಷಗಳೊಳಗೆ ಸ್ಥಾಪನೆಯಾದ, ಒಂದು ನೂರು ಕೋಟಿ ರೂಪಾಯಿಗಳೊಳಗೆ ವಾರ್ಷಿಕ ವಹಿವಾಟು ಹೊಂದಿರುವ ಕಂಪನಿಗಳು ಸ್ಟಾರ್ಟ್‌ ಅಪ್‌ ಪಟ್ಟಕ್ಕೆ ಅರ್ಹವಾಗಿದ್ದು, ಪೇಟೆಂಟ್‌ ನೋಂದಾವಣಿ, ಮೂರು ವರ್ಷಗಳ ಕಾಲ ತನಿಖೆಗಳಿಂದ, ಬಂಡವಾಳ ತೆರಿಗೆ ರಿಯಾಯಿತಿ, ತೆರಿಗೆ ರಿಯಾಯಿತಿ, ಸ್ವಯಂ ದೃಡೀಕರಣ ಪತ್ರಕ್ಕೆ ಅವಕಾಶ ಮುಂತಾದ ಸವಲತ್ತುಗಳನ್ನುಈ ಯೋಜನೆ ಒದಗಿಸುತ್ತದೆ.

    ಹಿಂದಿನ ವರ್ಷ ಪ್ರಧಾನ ಮಂತ್ರಿಗಳು ರೂ.1,000 ಕೋಟಿ ಗಾತ್ರದ ಸೀಡ್‌ ಫಂಡ್‌ ಯೋಜನೆಯನ್ನು ಸಹ ಪ್ರಕಟಿಸಿದರು. ಈ ಎಲ್ಲಾ ವಿವಿಧ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಅನೇಕ ಕಂಪನಿಗಳು ಕಾರ್ಯೋನ್ಮುಖವಾಗಿವೆ. ಸಧ್ಯ ಕರ್ನಾಟಕವು ಟಾಪ್‌ ಪರ್ಫಾರ್ಮರ್‌ ಎಂದು ಗುರುತಿಸಲ್ಪಟ್ಟಿದೆ.

    ಸಧ್ಯ ಷೇರುಪೇಟೆಗಳು ಉತ್ತುಂಗದಲ್ಲಿರುವ ಕಾರಣ, ಇತ್ತೀಚೆಗೆ ಝೊಮೆಟೋ, ಪೇಟಿಎಂ, ಪಾಲಿಸಿ ಬಜಾರ್‌, ಗಳಂತಹ ಕಂಪನಿಗಳು ಆರಂಭಿಕ ಷೇರು ವಿತರಣೆ ಮಾಡಿ ಷೇರುವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕಂಪನಿಗಳು ಆರಂಭಿಕ ಷೇರು ವಿತರಣೆಗೆ ಸಜ್ಜಾಗುತ್ತಿವೆ. ಸ್ಟಾರ್ಟ್‌ಅಪ್‌ ನೆಪದಲ್ಲಿ ತಮ್ಮ ಬುನಾದಿಯನ್ನು ಹಾಕಿ, ಸರ್ಕಾರದ ಅಂದರೆ ಸಾರ್ವಜನಿಕ ಸವಲತ್ತುಗಳನ್ನು ಪಡೆದುಕೊಂಡು ಸಮೃದ್ಧವಾಗಿ ಬೆಳೆದು ನಂತರ ತಮ್ಮ ಮತ್ತು ತಮಗೆ ಪೂರ್ವಶ್ರಮದಲ್ಲಿ ಬೆಂಬಲಿಸಿದ ಖಾಸಗಿ ಹೂಡಿಕೆದಾರರಿಗೆ ಲಾಭ ಗಳಿಸಿವ ಚಿಂತನೆಯನ್ನೇ ಮೂಲವಾಗಿಸಿಕೊಂಡು ಆರಂಭಿಕ ದಿನಗಳಲ್ಲಿ ಆಲಿಂಗಿಸಿಕೊಂಡಿರುವ ಸಾರ್ವಜನಿಕರನ್ನೇ ಬಲಿಪಶುಗಳನ್ನಾಗಿಸುವ ರೀತಿಯು ಒಳ್ಳೆಯ ಸಂಪ್ರದಾಯವಲ್ಲ.

    ಆರಂಭಿಕ ಷೇರು ವಿತರಣೆಗಳನ್ನು ಅಧಿಕ ಪ್ರೀಮಿಯಂಗಳಲ್ಲಿ ವಿತರಿಸುವುದೊಂದೇ ಅಲ್ಲ, ವಿತರಣೆಗೆ ಮುನ್ನವೇ ಆ ಕಂಪನಿಗಳ ಆಡಳಿತ ಮಂಡಳಿಗಳು ಕಂಪನಿಯಲ್ಲಿರುವ ವಿವಿಧ ಮೀಸಲು ನಿಧಿಗಳನ್ನು ಕರಗಿಸುವ ಪ್ರಕ್ರಿಯೆಯು ನಿಜಕ್ಕೂ ಬೇಸರದ ಸಂಗತಿ. ಒಂದೆಡೆ ಹೆಚ್ಚಿನ ಪ್ರೀಮಿಯಂ ಮತ್ತೊಂದೆಡೆ ಕಂಪನಿಯಲ್ಲಿರುವ ಆಂತರಿಕ ಆರ್ಥಿಕ ಸಂಪತ್ತನ್ನು ಕರಗಿಸುವ ವಿಧಾನಗಳು ಇಂದು ಸಾಮಾನ್ಯವಾಗಿವೆ. ಕಂಪನಿಗಳು ತಮ್ಮ ಆರಂಭಿಕ ಷೇರು ವಿತರಣೆಗೂ ಮುನ್ನ ಷೇರಿನ ಮುಖಬೆಲೆಯನ್ನು ಸೀಳುವುದು, ಅಸಹಜ ಪ್ರಮಾಣದ ಬೋನಸ್‌ಷೇರುಗಳನ್ನು ವಿತರಿಸುವುದು ನಂತರ ಅಸಹಜ ಗಾತ್ರದ ಪ್ರೀಮಿಯಂನಲ್ಲಿ ವಿತರಣೆ ಮಾಡುವುದು ಇಂದಿನ ವಾಡಿಕೆಯಾಗಿದೆ. ಇಂತಹ ಅಂಶಗಳು ಹೊಸದಾಗಿ ಪೇಟೆ ಪ್ರವೇಶಿಸುವ ಹೂಡಿಕೆದಾರರಿರಲಿ, ಅನುಭವಸ್ಥ ಹೂಡಿಕೆದಾರರ ಗಮನಕ್ಕೂ ಬಾರದೆ, ಕೇವಲ ಅಲಂಕಾರಿಕ ಪ್ರಚಾರಗಳಿಗೆ ವಿಶ್ಲೇಷಣೆಗಳಿಗೆ ಒಲವು ಮೂಡಿಸಿಕೊಂಡು ಹೂಡಿಕೆ ಹಣವನ್ನು ಕರಗಿಸಿಕೊಂಡವರ ಸಂಖ್ಯೆ ಹೆಚ್ಚಾಗಿದೆ. ಲೀಸ್ಟಿಂಗ್‌ಆದ ಮೇಲೆಯೂ ಕೆಲವು ಕಂಪನಿಗಳಲ್ಲಿನ ಷೇರಿನ ದರದಲ್ಲಿ ಭಾರಿ ಇಳಿಕೆಯಾದಾಗ ಮಾರಾಟಮಾಡಲು ಮನಸಾಗದು, ಏರಿಕೆಯಾದಲ್ಲಿ ಇನ್ನೂ ಹೆಚ್ಚಬಹುದೆಂಬ ನಿರೀಕ್ಷೆಯಿಂದ ಲಾಭದ ನಗದೀಕರಣಕ್ಕೆ ಮುಂದಾಗದ ಪರಿಸ್ಥಿತಿಯಲ್ಲಿರುವುದು ಅನೇಕ ಹೂಡಿಕೆದಾರರಿಗೆ ಚಿಂತನೆಯಾಗಿರುತ್ತದೆ. ಶೇ. 27 ರಷ್ಟು ಆರ್ಥಿಕ ಸಾಕ್ಷರತೆ ಹೊಂದಿರುವ ನಮ್ಮ ದೇಶದಲ್ಲಿ ಇಂತಹ ಅಸಹಜ ರೀತಿಯ ಬೆಳವಣಿಗೆಗಳಿಗೆ ಕಡಿವಾಣ ಅಗತ್ಯ.

    ಇತ್ತೀಚೆಗೆ ಪ್ರಮುಖ ಕಂಪನಿಗಳಾದ ಅಜಂತಾ ಫಾರ್ಮ, ಗ್ರೇಟ್‌ ಈಸ್ಟರ್ನ್‌ ಶಿಪ್ಪಿಂಗ್‌, ಟಿಸಿಎಸ್‌ ಕಂಪನಿಗಳು ತಮ್ಮಲ್ಲಿರುವ ಹೆಚ್ಚುವರಿ ಮೀಸಲು ನಿಧಿಯನ್ನು ಹೂಡಿಕೆದಾರರಿಗೆ ಹಂಚಲು, ಷೇರು ಹಿಂಕೊಳ್ಳುವ ಯೋಜನೆ ಮೂಲಕ ಮುಂದಾಗಿವೆ. ಇದು ಹೂಡಿಕೆದಾರರಿಗೆ ಯಾವ ರೀತಿ ಅನುಕೂಲ ಅಥವಾ ಲಾಭದಾಯಕ ಕ್ರಮ ಎಂಬ ಅನುಮಾನ ಹಲವರಲ್ಲಿ ಮೂಡಬಹುದು. ಹಿಂಕೊಳ್ಳುವಿಕೆಯು ಪೇಟೆಯ ದರಗಳಿಗಿಂತ ಹೆಚ್ಚಿನ ದರದಲ್ಲಿ ನಡೆಯುವುದರಿಂದ ಲಭ್ಯವಿರುವ ಮೀಸಲು ನಿಧಿಯು ಷೇರುದಾರರಿಗೆ
    ಹಂಚಿದಂತಾಗುತ್ತದೆ.

    ಉದಾಹರಣೆಗೆ ಒಂದು ವಾರದ ಕೆಳಗೆ ರೂ.2,200 ರ ಸಮೀಪವಿದ್ದ ಅಜಂತಾ ಫಾರ್ಮ ಷೇರು, ಹಿಂಕೊಳ್ಳುವಿಕೆ ದರ ರೂ.2,550 ಎಂದು ಪ್ರಕಟವಾದ ಮೇಲೆ ಷೇರಿನ ಬೆಲೆ ರೂ.2,330 ರ ವರೆಗೂ ತಲುಪಿದೆ. ಈ ಮೂಲಕ ಹೂಡಿಕೆ ಮಾಡಿದವರಿಗೆ ಪೇಟೆಯಲ್ಲಿಯೂ ಲಾಭ ಗಳಿಕೆಗೆ ಅವಕಾಶ ಕಲ್ಪಿತವಾಗುವುದಲ್ಲದೆ, ಷೇರುಗಳನ್ನು ಹಿಂದಿರುಗಿಸಿದವರಿಗೆ ರೂ.2,550 ರಂತೆ ನಿಗದಿತ ಪ್ರಮಾಣದಲ್ಲಿ, ಆಂಗೀಕರಿಸಲಾದ ಷೇರುಗಳಿಗೆ ನೀಡಲಾಗುವುದು.

    ಇನ್ನು ಟಿಸಿಎಸ್‌ ಷೇರಿನ ಬೆಲೆ ರೂ.3,840 ರ ಸಮೀಪವಿದ್ದಾಗ ಪ್ರತಿ ಷೇರಿಗೆ ರೂ.4,500 ರಂತೆ ಹಿಂಕೊಳ್ಳುವ ಯೋಜನೆ ಪ್ರಕಟಿಸಿದೆ. ಈ ಕಾರಣ ಷೇರಿನ ದರಗಳಲ್ಲಿ ಭಾರಿ ಏರಿಕೆ ಕಂಡು ರೂ.3,970 ರ ಸಮೀಪಕ್ಕೆ ಏರಿಕೆಯಾಗಿದೆ. ಇಲ್ಲಿ ಪೇಟೆಯ ವಹಿವಾಟಿನಲ್ಲಿಯೂ ಲಾಭ ಗಳಿಕೆಗೆ ಅವಕಾಶ ಅಲ್ಲದೆ, ಷೇರನ್ನು ಹಿಂಕೊಳ್ಳುವ ಯೋಜನೆಯಲ್ಲಿ ಹಿಂದಿರುಗಿಸಿದ ಅನುಪಾತಕ್ಕೆ ತಕ್ಕಂತೆ ರೂ.4,500 ರಂತೆ ಮಾರಾಟಮಾಡಿ ಲಾಭ ಗಳಿಕೆಗೆ ಅವಕಾಶ.

    ಹೀಗೆ ಎರಡು ವಿಭಿನ್ನ ರೀತಿಯ ಚಟುವಟಿಕೆಗಳು ವಿರುದ್ಧ ಚಿಂತನೆಗಳ ಆಧಾರದ ಮೇಲೆ ನಡೆಯುತ್ತಿವೆ. ನಮಗೆ ಯಾವುದು ಅನುಕೂಲಕರ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾದ
    ಮಾಡಿಕೊಳ್ಳಬೇಕಾದ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕಾಗಿರುವುದು ನಮ್ಮಗಳಿಗೆ ಸವಾಲಾಗಿದೆ.

    ಬಜೆಟ್‌ ಮಂಡಣೆಯು ಫೆಬ್ರವರಿ ಒಂದರಂದು ನಡೆಯಲಿದ್ದು, ಮುಂದಿನ ದಿನಗಳಲ್ಲಿ ಪೇಟೆಯು ಯಾವ ರೀತಿ ಸ್ಪಂಧಿಸುವುದೆಂದು ನಿರ್ಧರಿಸುವುದು ಸಾಧ್ಯವಾಗದ ಪರಿಸ್ಥಿತಿ, ಕಾರಣ ಪೇಟೆಯಲ್ಲಿ ಹರಿದುಬರುತ್ತಿರುವ ಹಣದ ಹೊಳೆ, ಹೂಡಿಕೆದಾರರ ಆಸಕ್ತಿಗಳು ಎತ್ತ ಬೇಕಿದ್ದರೂ ತಿರುಗಿಸಬಹುದು. ಈ ಸಂದರ್ಭದಲ್ಲಿ ಕಳೆದ ಒಂದು ವರ್ಷದಲ್ಲಿ ಷೇರುಪೇಟೆ ಪ್ರವೇಶಿಸಿದವರ ಸಂಖ್ಯೆ ಶೇ.55 ರಿಂದ 60 ರಷ್ಟು ಹೆಚ್ಚಿದೆ. ಇವರನ್ನು ಸಾಧ್ಯವಾದಷ್ಠು ಸುರಕ್ಷಿತವಾಗಿ ಉಳಿಸಿಕೊಂಡಲ್ಲಿ, ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯ ಪ್ರಭಾವವನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದಾಗಿದೆ. ಈ ದಿಶೆಯಲ್ಲಿ ಆರಂಭಿಕ ಷೇರು ವಿತರಣೆ ಅಂದರೆ ಐಪಿಒ ವಿಭಾಗದಲ್ಲಿ ಕೆಲವು ಸುಧಾರಣೆಗಳು ಅಗತ್ಯವೆನಿಸುತ್ತದೆ. ಅವುಗಳಲ್ಲಿ ಕೆಲವು ಈ ರೀತಿ ಇರಬಹುದಲ್ಲವೇ?

    ಐಪಿಒ ವಿಭಾಗದಲ್ಲಿ ಕೆಲವು ಸುಧಾರಣೆಗಳು ಅಗತ್ಯ

    1. Safety net method should be introduced to protect the ignorant investors from getting screwed. Minimum 50% of the collections should be in escrew account for a period of one year.

    ಮೊದಲನೆಯದಾಗಿ ಐಪಿಒ ಮೂಲಕ ವಿತರಣೆಯಾದ
    ಷೇರುಗಳಿಗೆ ಒಂದು ವರ್ಷಕಾಲ ಸುರಕ್ಷಾ ಚಕ್ರದ ವ್ಯವಸ್ಠೆ ಜಾರಿಗೊಳಿಸುವುದರಿಂದ, ನ್ಯಾಯಸಮ್ಮತ ಬೆಲೆಯಲ್ಲಿ ವಿತರಣೆಗಳು ಸಾಗುತ್ತವೆ. ಶೇ.50 ರಷ್ಠು, ಭರವಸಾತ್ಮಕ ಖಾತೆಯಲ್ಲಿರಿಸಬೇಕು.

    1. All IPOs should be issued at a facevalue of Rs.10 only to enable public atlarge to handle the issues judiciasly.

    ಎಲ್ಲಾ ಐಪಿಒ ಗಳ ಷೇರಿನ ಮುಖಬೆಲೆಯನ್ನು ರೂ.10 ರಲ್ಲಿಯೇ ವಿತರಿಸಬೇಕು. ಇದು ಸಣ್ಣ ಹೂಡಿಕೆದಾರರು ನ್ಯಾಯಸಮ್ಮತವಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯ.

    1. Companies which converted into public limited Companies should have compleated one year before floating IPOs.

    ಕಂಪನಿಗಳು ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಕಂಪನಿಗಳಾಗಿ ಪರಿವರ್ತಿಸಿದ ನಂತರ ಐಪಿಒ ವಿತರಿಸಲು ಒಂದು ವರ್ಷದ ಕೂಲಿಂಗ್ ಸಮಯವಿರಬೇಕು.

    1. Promotors should be blocked for a peiod of one year from buying and selling their Company shares after one year.

    ಪ್ರವರ್ತಕರು ಒಂದು ವರ್ಷಕಾಲ ಅವರ ಕಂಪನಿಯ ಷೇರುಗಳನ್ನು ಖರೀದಿಸಲಾಗಲಿ ಅಥವಾ ಮಾರಾಟಮಾಡುವುದಾಗಲಿ ನಿರ್ಬಂದಿಸಬೇಕು.

    1. Companies should have compleated one year after issue of bonus / huge dividend before the public issue.

    ಕಂಪನಿಗಳು ಬೋನಸ್ ಷೇರು ಅಥವಾ ಭಾರಿ ಪ್ರಮಾಣದ ಲಾಭಾಂಶ ವಿತರಣೆ ಮಾಡಿದ ನಂತರ ಐಪಿಒ ವಿತರಿಸಲು ಒಂದು ವರ್ಷ ಕಾಯಲೇಬೇಕು.

    1. Anchor Investors lock in should be extended from one month to 6 months, to justify the issue price.

    ಆಂಕರ್ ಇನ್ವೆಸ್ಟರ್ ಗಳು ತಮ್ಮ ಷೇರುಗಳನ್ನು 6 ತಿಂಗಳಕಾಲ ಮಾರಾಟಮಾಡದಿರಲು ನಿರ್ಬಂದಿಸುವುದು ಸಣ್ಣ ಹೂಡಿಕೆದಾರರ ದೃಷ್ಠಿಯಿಂದ ಸೂಕ್ತವೆನಿಸುತ್ತದೆ.

    1. If IPOs are priced at very high level, then they should be given green signal to list it in Secondary Market without IPO route. Markets will decide the fate of it. Thereby innocent investors interest will be protected. This category should be brought under T series ( Trade to trade segment)

    ಐಪಿಒ ಗಳು ಅತಿ ಹೆಚ್ಚಿನ ಬೆಲೆಯಲ್ಲಿ ವಿತರಿಸುವುದಕ್ಕಿಂತ ಅವುಗಳನ್ನು ನೇರವಾಗಿ ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ಲಿಸ್ಟಿಂಗ್ ಮಾಡಿ, ಪೇಟೆಯೇ ಆ ಷೇರುಗಳ ಮೌಲ್ಯಮಾಪನ ಮಾಡುವಂತಾದಲ್ಲಿ ಸಣ್ಣ ಹೂಡಿಕೆದಾರರ ಹಿತದ ನಿರ್ಧಾರವಾಗುವುದು. ಈ ಲೀಸ್ಟಿಂಗ್ ಸಂದರ್ಭದಲ್ಲಿ ಒಂದು ತಿಂಗಳ ಕಾಲ ʼ ಟಿ ʼ ಗುಂಪಿನಲ್ಲಿ ಬಿಡುಗಡೆಯಾಗಬೇಕು.

    ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!