ಸುಮಾ ವೀಣಾ
ಮುಳ್ಳಿಡಿದ ಮರನೇರಿದಂತೆ- ನಡುಗನ್ನಡ ಸಾಹಿತ್ಯದ ಮಹತ್ವದ ಕವಿ ಲಕ್ಷ್ಮೀಶನ ‘ಜೈಮಿನಿಭಾರತ’ದ ಹತ್ತೊಂಬತ್ತನೆಯ ಸಂಧಿ ಇಪ್ಪತ್ತನಾಲ್ಕನೆ ಪದ್ಯದಲ್ಲಿ ಪ್ರಸ್ತುತ ಮಾತು ಉಲ್ಲೇಖವಾಗಿದೆ.
ಉಪಮಾಲೋಲ ಲಕ್ಷ್ಮೀಶನ ಉಪಮೆಗಳಲ್ಲಿ ಮಹತ್ವದ್ದಾಗಿರುವ ಉಪಮೆ. ಮುಳ್ಳಿಡಿದ ಮರನೇರಿದಂತೆ ಎಂಬುದು ಉದ್ಧಾಲಕ ಹೇಳುವ ಮಾತು . ಮುಳ್ಳಿನ ಮರ ಹತ್ತಿದಂತೆ ಆಯಿತು ಎಂದರೆ ಕಷ್ಟಗಳನ್ನು ಒಡಲಿನಲ್ಲಿ ಸಂಚಯನ ಮಾಡಿಕೊಂಡಂತೆ ಎಂಬ ಅರ್ಥವನ್ನು ಸೂಚಿಸುತ್ತದೆ.
ಉದ್ಧಾಲಕನ ಹೆಂಡತಿ ಚಂಡಿಕೆ ಪತಿಯ ಜಪ ತಪಕ್ಕೆ ಸಹಾಯ ಮಾಡುತ್ತಿರುತ್ತಾಳೆ. ಹೆಂಡತಿಯ ಸಹಕಾರಕ್ಕೆ ಮೆಚ್ಚಿ ಮನೆಯ ಕೆಲಸಗಳನ್ನು ನೋಡಿಕೊ ಎಂದು ಉದ್ಧಾಲಕ ಹೇಳಿದಾಗ ಆಕೆ ನನ್ನಿಂದಾಗದು ನಾನು ಮನೆಕೆಲಸದ ಹೆಂಗಸಲ್ಲ ಎಂದು ಕಟುವಾಗಿಯೇ ಹೇಳುತ್ತಾಳೆ. ಆ ಮಾತನ್ನು ಕೇಳಿದ ಉದ್ದಾಲಕ ಈ ಪರಿಸ್ಥಿತಿಯನ್ನು ಬಿಸಿ ತುಪ್ಪಕ್ಕೆ ಹೋಲಿಸಿಕೊಳ್ಳುತ್ತಾನೆ. ಉಗುಳಿದರೆ ನಷ್ಟ ನುಂಗಿದರೆ ದೇಹ ಭಾದೆ ಎಂದು ತನಗಾದ ಸಂದಿಗ್ಧ ಪರಿಸ್ಥಿತಿಯನ್ನು ವಿವರಿಸುತ್ತಾನೆ.
ಈ ರೀತಿಯ ಉಭಯಸಂಕಟದ ಪರಿಸ್ಥಿತಿ ಆಧುನಿಕ ದಿನ ಮಾನಗಳಲ್ಲಿಯೂ ಆಗುವುದಿದೆ. ಹಬ್ಬ ಹುಣ್ಣಿಮೆಯ ಸಂದರ್ಭದಲ್ಲಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಧಿಡೀರ್ ಏರಿಕೆ ಆದಾಗಲೂ ಕೊಳ್ಳಲೂ ಆಗದು ಕೊಳ್ಳದೆ ಇರಲೂ ಆಗದ ಸಂದರ್ಭ. ಉದ್ಧಾಲಕನಿಗೂ ಹೆಂಡತಿಯ ವಿಚಾರದಲ್ಲಿ ಹೀಗೆ ಆಗುತ್ತದೆ.
ಮುಳ್ಳಿಡಿದ ಮರ ಹೆಸರೇ ಹೇಳುವಂತೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮುಳ್ಳಿರುವ ಮರವನ್ನು ಏರಿ ಮತ್ತೆ ಇಳಿಯುತ್ತೇನೆ ಎಂದರೆ ಭಾದೆ ಇದ್ದೇ ಇರುತ್ತದೆ. ಅತ್ತ ದರಿ ಇತ್ತ ಪುಲಿ ಎಂಬ ಮಾತನ್ನು ಇಲ್ಲಿ ಸಾಮಯಿಕವಾಗಿ ತೆಗೆದುಕೊಳ್ಳಬಹುದು.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.