BENGALURU JAN 16
2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರಕಾರವು ಅರ್ಜಿ ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜ.17ರ ಸೋಮವಾರದಿಂದ https://dec.karnataka.gov.in ಮೂಲಕ ಆನ್-ಲೈನ್ ಅರ್ಜಿ ಹಾಕಿಕೊಳ್ಳಬಹುದಾಗಿದ್ದು, ಅರ್ಜಿ ಸಲ್ಲಿಸಲು ಜ.21 ಕೊನೆಯ ದಿನವಾಗಿರಲಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು ಅರ್ಜಿಯಲ್ಲಿ ತಮ್ಮ ಇಷ್ಟದ ಆಯ್ದ 10 ಸರಕಾರಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಆಯ್ಕೆಯಾದವರಿಗೆ ಈ ಕಾಲೇಜುಗಳಲ್ಲೇ ಕಾರ್ಯನಿರ್ವಹಿಸಲು ಆದಷ್ಟು ಮಟ್ಟಿಗೆ ಅವಕಾಶ ಕೊಡಲಾಗುವುದು. ಒಂದು ವೇಳೆ, ಅಭ್ಯರ್ಥಿಗಳ ಆಯ್ಕೆಯ ಕಾಲೇಜುಗಳಲ್ಲಿ ವಾರಕ್ಕೆ 15 ಗಂಟೆಗಳ ಕಾರ್ಯಭಾರ ಇಲ್ಲದಿದ್ದ ಪಕ್ಷದಲ್ಲಿ ಮಾತ್ರ ಬೇರೆ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಅವರು ಹೇಳಿದ್ದಾರೆ.
ಅತಿಥಿ ಉಪನ್ಯಾಸಕರಾಗಿ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿರುವವರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು. ಅಲ್ಲದೆ, ವಿದ್ಯಾರ್ಹತೆ ಮತ್ತು ಸೇವಾ ವಿವರಗಳ ಆಧಾರದ ಮೇಲೆ, ನಾನಾ ಮಾನದಂಡಗಳ ಅನ್ವಯ ರಾಜ್ಯವ್ಯಾಪ್ತಿಯ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಹತೆ ಮತ್ತು ಅಂಕಗಳ ವಿವರ
ಅತಿಥಿ ಉಪನ್ಯಾಸಕರ ನೇಮಕಾತಿಗೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯ ಎರಡು ವರ್ಷಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಪೈಕಿ ಶೇ.15ರಷ್ಟನ್ನು ಪರಿಗಣನೆಗೆ ತೆಗೆದುಕೊಂಡು, ಇದಕ್ಕೆ ಗರಿಷ್ಠ 25 ಅಂಕಗಳನ್ನು ಕೊಡಲಾಗುವುದು ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳಿದಂತೆ, ಪಿಎಚ್.ಡಿ., ಎನ್ಇಟಿ/ಕೆ-ಸೆಟ್/ಸ್ಲೆಟ್ ಮತ್ತು ಎಂ.ಫಿಲ್ ಪದವಿಗಳನ್ನು ಹೆಚ್ಚುವರಿ ವಿದ್ಯಾರ್ಹತೆ ಎಂದು ಪರಿಗಣಿಸಿದ್ದು, ಇವುಗಳಿಗೆ ಕ್ರಮವಾಗಿ ಗರಿಷ್ಠ 12, 9 ಮತ್ತು 6 ಅಂಕಗಳನ್ನು ನೀಡಲಾಗುವುದು. ಜತೆಗೆ, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾತ್ರ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಒಂದು ವರ್ಷಕ್ಕೆ (ಗರಿಷ್ಠ 16 ವರ್ಷಗಳಿಗೆ ಮಾತ್ರ ಅನ್ವಯವಾಗುವಂತೆ 48 ಅಂಕಗಳು) 3 ಅಂಕಗಳನ್ನು ಕೊಡಲಾಗುವುದು. ಈ ಅವಧಿಯಲ್ಲಿ ಶೈಕ್ಷಣಿಕ ವರ್ಷದ ಒಂದು ಸೆಮಿಸ್ಟರ್ ನಲ್ಲಿ ಮಾತ್ರ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಲ್ಲಿ 1.5 ಅಂಕಗಳನ್ನು ಮಾತ್ರ ನೀಡಲಾಗುವುದು. ನೇಮಕಾತಿಯಲ್ಲಿ ವಿಕಲಚೇತನ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 10 ಅಂಕಗಳನ್ನು ಕೊಡಲಾಗುವುದು ಎಂದು ಅವರು ವಿವರಿಸಿದ್ದಾರೆ.