ಸುಮಾ ವೀಣಾ
ಬಸುರ ಹೆಂಡತಿಯೂಟ ಶಿಶುವ ದಣಿಸುವವೊಲು– ಚಾಮರಸನ ‘ಪ್ರಭುಲಿಂಗ ಲೀಲೆ’ಯಿಂದ ಪ್ರಸ್ತುತ ಸಾಲನ್ನು ಆರಿಸಿದೆ. ಪ್ರಸ್ತುತ ಚಾಮರಸನ ದೇಸಿ ಶೈಲಿಯ ತತ್ವವನ್ನು ಹೇಳುತ್ತದೆ.ಬಸುರಿ ಹೆಂಗಸು ಅಗತ್ಯವಿದ್ದಷ್ಟು ಮಾತ್ರ ಊಟವನ್ನು ಸೇವಿಸಬೇಕು ಇಲ್ಲದಿದ್ದರೆ ಬೆಳೆಯುವ ಭ್ರೂಣದ ಮೇಲೆ ಅಡ್ಡಪರಿಣಾಮ ಬೀರುತ್ತದೆ ಎಂಬ ಅರ್ಥವನ್ನು ಕೊಡುತ್ತದೆ.
ವಾಚ್ಯಾರ್ಥದಲ್ಲಿ ಇದು ಅನ್ನಾಹಾರಾದಿ ವಿಚಾರಗಳಿಗೆ ಸಂಬಂಧಿಸಿದ್ದು ಎಂದಾದರೆ ಲಕ್ಷ್ಯಾರ್ಥದಲ್ಲಿ ಮನುಷ್ಯನ ಲೋಕವ್ಯಾಪಾರಕ್ಕೂ ಅನ್ವಯವಾಗುತ್ತದೆ. ಅತಿಯಾದರೆ ‘ಅಮೃತವೂ ವಿಷ’ ಎಂಬಂತೆ ಎಂಬ ಮಾತನ್ನು ಇಲ್ಲಿ ಸಂವಾದಿಯಾಗಿ ತೆಗೆದುಕೊಳ್ಳಬಹುದು.
ಉದಾಹರಣೆಗೆ ಯಾರೋ ಕಷ್ಟದಲ್ಲಿದ್ದಾರೆ ಎಂದರೆ ಅವರಿಗೆ ಸಹಾಯ ಮಾಡುವುದು ಸರಿ ಆದರೆ ಅತಿರೇಕಕ್ಕೆ ಹೋಗಿ ಸಹಾನುಭೂತಿ ತೋರಿದರೆ ಹಾಗೆಯೇ ಸಹಾಯ ಮಾಡುವ ವ್ಯಕ್ತಿ ತಾನು ಮುನ್ನೆಲೆಗೆ ಬರಬೇಕೆಂದು ಅತಿರೇಕದ ವರ್ತನೆ ತೋರಿದರೆ ಕಷ್ಟದಲ್ಲಿರುವವರ ಖಾಸಗಿತನಕ್ಕೆ ಧಕ್ಕೆ ಬರುತ್ತದೆ. ಬಸುರಿ ಸೇವಿಸುವ ಆಹಾರ ಆಕೆ ಹಾಗು ಆಕೆಗೆ ಜನಿಸಲಿರುವ ಮಗುವಿನ ಆರೋಗ್ಯವನ್ನು ಕಾಪಾಡಬೇಕು. ಆದರೆ ಬಸುರಿ ಆಹಾರ ರುಚಿಯಾಗಿದೆ ನನಗಿಷ್ಟ ಎಂದು ಅತಿಯಾಗಿ ಸೇವಿಸಿದರೆ ಮಗುವಿಗೆ ಅದನ್ನು ಸಹಿಸಲಾಗುವುದಿಲ್ಲ.
‘ಬಸುರ ಹೆಂಡತಿಯೂಟ ಶಿಶುವ ದಣಿಸುವವೊಲು’ ಈ ಮಾತನ್ನು ಶಿಕ್ಷಕ ಹಾಗು ವಿಜ್ಞಾನಿಯ ಹಿನ್ನೆಲೆಯಿಂದಲೂ ತೆಗೆದುಕೊಳ್ಳಬಹುದು. ಅಧ್ಯಯನ ಶೀಲ ಶಿಕ್ಷಕ ತನ್ನ ತಿಳಿವಳಿಕೆಯನ್ನೆಲ್ಲಾ ತನ್ನ ವಿದ್ಯಾರ್ಥಿಗಳಿಗೆ ತಿಳಿಸಬೇಕೆಂಬ ಆಸೆ ಇರಿಸಿಕೊಳ್ಳುವುದು ಸರಿ ಆದರೆ ಅದನ್ನು ವಿದ್ಯಾರ್ಥಿ ಎಷ್ಟರಮಟ್ಟಿಗೆ ಅರ್ಜಿಸಿಕೊಳ್ಳುತ್ತಾನೆ ಎಂಬುದು ಮುಖ್ಯವಾಗುತ್ತದೆ. ಶಿಕ್ಷಕ ವಿದ್ಯಾರ್ಥಿಯ ವಯೋಮಾನಕ್ಕನ್ನುಗುಣವಾಗಿ ಅವನ ತಿಳಿವಳಿಕೆಗೆ ತಕ್ಕಂತೆ ಬೋಧನೆ ಮಾಡಿದರೆ ಸಹಾಯವಾಗುತ್ತದೆ.
ಇನ್ನೊಂದು ಮಗ್ಗುಲಲ್ಲಿ ನೋಡುವುದಾದರೆ ವಿಜ್ಞಾನಿ ತನ್ನ ಸಂಶೋಧನೆಗಳನ್ನು ಪ್ರಯೋಗಾರ್ಥಿಗಳ ಮೇಲೆ ಅನ್ವಯಿಸಹೋದರೆ ಎಡವಟ್ಟುಗಳಾಗುತ್ತವೆ. ‘ಗುಬ್ಬಿಮೇಲೆ ಬ್ರಹ್ಮಾಸ್ತ್ರ’ವನ್ನು ಪ್ರಯೋಗಿಸಲಾಗದು ಎಂಬಂತೆ ತಮ್ಮ ಆಸೆ, ಸಹಾನುಭೂತಿ, ತಿಳಿವಳಿಕೆ.ಪರಿಣತಿಗಳನ್ನು ಬಲವಂತವಾಗಿ ಈಡೇರಿಸಿಕೊಳ್ಳುವುದು, ಪ್ರಯೋಗಿಸ ಹೋದರೆ ಖಂಡಿತಾ ಅನಾನುಕೂಲವಾಗುತ್ತದೆ .
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.