26.3 C
Karnataka
Saturday, November 23, 2024

    ಮಹಿಳಾ ವಿವಿ ಮುಚ್ಚಲ್ಲ, ಸಂಸ್ಕೃತ ವಿವಿ ಹೊಸ ಕ್ಯಾಂಪಸ್ ನಿರ್ಮಾಣ ಕೈ ಬಿಡಲ್ಲ ಎಂದ ಸಚಿವರು

    Must read

    BENGALURU JAN 24

    ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮತ್ತಷ್ಟು ವಿಸ್ತರಿಸುವ ಆಲೋಚನೆ ಸರಕಾರಕ್ಕಿದೆಯೇ ವಿನಾ ಅದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಇದರ ಜತೆಗೆ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂತನ ಕ್ಯಾಂಪಸ್ ನಿರ್ಮಾಣ ಮಾಡುವುದರಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

    ಸೋಮವಾರ ಇಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, `ಸಮಕಾಲೀನ ಜಗತ್ತಿನಲ್ಲಿ ಮಹಿಳೆಯರನ್ನು ಕುರಿತ ಅಧ್ಯಯನ ವಿಸ್ತೃತವಾಗಿ ನಡೆಯಬೇಕಾಗಿದೆ. ಇದಕ್ಕೆ ತಕ್ಕಂತೆ ಮಹಿಳಾ ವಿ.ವಿ.ಯ ಚಟುವಟಿಕೆಗಳನ್ನು ಹೇಗೆ ವಿಸ್ತರಿಸಬೇಕು ಎನ್ನುವ ಕುರಿತು ಸಮಾಲೋಚಿಸಲಾಗುತ್ತಿದೆ. ಆದರೆ ಕೆಲವರು ವಿನಾ ಕಾರಣ ಗುಲ್ಲೆಬ್ಬಿಸುತ್ತಿರುವುದು ವಿಷಾದನೀಯ’ ಎಂದರು.

    ಸಂಸ್ಕೃತ ವಿವಿ ಕ್ಯಾಂಪಸ್ ನಿರ್ಮಾಣ ಕುರಿತಂತೆ ಕೇಳಿದ ಪ್ರಶ್ನೆಗೆ ಅವರು, `ಈ ವಿವಿ 13 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಇದುವರೆಗೂ ಇದಕ್ಕೊಂದು ಸ್ವತಂತ್ರ ಮತ್ತು ಸುಸಜ್ಜಿತ ಕ್ಯಾಂಪಸ್ ಇರಲಿಲ್ಲ. ನಮ್ಮ ಸರಕಾರ ಅದನ್ನು ಮಾಡುತ್ತಿದೆ ಅಷ್ಟೆ. ಮ್ಯಾಕ್ಸ್ ಮುಲ್ಲರ್ ಭವನಕ್ಕೆ ಹೋಗಿ ನೋಡಿದರೆ ಸಂಸ್ಕೃತ ಅಧ್ಯಯನವನ್ನು ನಾವು ಏಕೆ ಮಾಡಬೇಕೆನ್ನುವುದು ಗೊತ್ತಾಗುತ್ತದೆ’ ಎಂದು ಚಾಟಿ ಬೀಸಿದರು.

    ಸ್ವಾಗತಿಸಲೂ ಇಲ್ಲ:`ಕನ್ನಡಕ್ಕೆ ನಮ್ಮ ಸರಕಾರ ಕೊಟ್ಟಿರುವಷ್ಟು ಆದ್ಯತೆಯನ್ನು ಯಾರೂ ಕೊಟ್ಟಿರಲಿಲ್ಲ. ಪದವಿಯಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿದಾಗ ನಮ್ಮ ಕನ್ನಡ ಹೋರಾಟಗಾರರು ಕನಿಷ್ಠಪಕ್ಷ ಅದನ್ನು ಸ್ವಾಗತಿಸಲೂ ಇಲ್ಲ. ಈಗ ಹೈಕೋರ್ಟ್ ಇದಕ್ಕೆ ತಡೆ ನೀಡಿದ್ದು, ಮಧ್ಯಂತರ ಆಜ್ಞೆ ನೀಡಿದೆ. ಅದನ್ನು ಪುರಸ್ಕರಿಸಿ ನಾವು ಕನ್ನಡ ಕಲಿಕೆಯನ್ನು ಸದ್ಯಕ್ಕೆ ತಡೆ ಹಿಡಿದಿದ್ದೇವಷ್ಟೆ’ ಎಂದು ಅವರು ನುಡಿದರು.

    `ಹಾಗೆಯೇ ಹಂಪಿ ಕನ್ನಡ ವಿ.ವಿ.ಯಲ್ಲಿ ಕೋವಿಡ್ ಸಮಸ್ಯೆಯ ಹಿನ್ನೆಲೆಯಲ್ಲಿ ಪ್ರಸಾರಾಂಗ ಸ್ಥಗಿತವಾಗಿದೆ. ಇದರಿಂದಾಗಿ, ಅವರಿಗೆ ವರ್ಷಕ್ಕೆ ಬರುತ್ತಿದ್ದ 4 ಕೋಟಿ ರೂ.ಗಳಷ್ಟು ಆದಾಯ ನಿಂತುಹೋಗಿದೆ. ಆ ವಿ.ವಿ.ಗೆ ಅನುದಾನ ಕೊಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಏನನ್ನೇ ಮಾಡುವುದಕ್ಕೂ ಮೊದಲು ಆರ್ಥಿಕ ಪರಿಸ್ಥಿತಿಯನ್ನೂ ಅವಲೋಕಿಸಬೇಕಾಗುತ್ತದೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

    ಅತಿಥಿ ಉಪನ್ಯಾಸಕರ ನೇಮಕಾತಿ ಚುರುಕು:ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 60 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಪ್ರಕ್ರಿಯೆಯ ಮುಂದಿನ ಹೆಜ್ಜೆಗಳನ್ನು ಇನ್ನು ಎರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಸಚಿವರು ವಿವರಿಸಿದರು.

    ಸರಕಾರವು ಅತಿಥಿ ಉಪನ್ಯಾಸಕರ ವೇತನವನ್ನು ಎರಡೂವರೆ ಪಟ್ಟಿಗಿಂತಲೂ ಹೆಚ್ಚಿಸಿದೆ. ಈ ಹಂತದಲ್ಲಿ ಅವರ ಸಂಘಟನೆಗಳು ಮತ್ತು ವಿಧಾನ ಪರಿಷತ್ತಿನ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೂ ಅತಿಥಿ ಉಪನ್ಯಾಸಕರು ಮುಷ್ಕರ ಮುಂದುವರಿಸುತ್ತಿರುವುದು ಸರಿಯಲ್ಲ ಎಂದು ಅವರ ಬೇಸರ ವ್ಯಕ್ತಪಡಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!