ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಹೆಗ್ಗುರುತಾದ ಸೆನ್ಸೆಕ್ಸ್ ದಿನನಿತ್ಯವೂ ಏರಿಳಿತಗಳನ್ನು ಪ್ರದರ್ಶಿಸುತ್ತಿದ್ದು, ಸೆನ್ಸೆಕ್ಸ್ ನಲ್ಲಿರುವ 30 ಕಂಪನಿಗಳು ಚಕ್ರಾಕರಾದಲ್ಲಿ ಚಲಿಸಿ ಎರಡು ದಿನ ಏರಿಕೆ ಕಂಡರೆ, ಮತ್ತೆರಡು/ ಮೂರು ದಿನ ಇಳಿಕೆ ಕಾಣುವ ರೀತಿ ಮ್ಯೂಸಿಕಲ್ ಚೇರ್ ಆಟದಂತೆ ಏರಿಳಿತಗಳನ್ನು ಪ್ರದರ್ಶಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ವಲಯದ ಕಂಪನಿಗಳು, ಅವುಗಳಲ್ಲಿ ಕೆಲವು ಉತ್ತಮವಾದ, ಆಕರ್ಷಣೀಯ ಫಲಿತಾಂಶಗಳನ್ನು ಪ್ರಕಟಿಸಿದರೂ ಸಹ ಏರಿಕೆಯ ಹಂತವನ್ನು ಸ್ಥಿರಗೊಳಿಸಿಕೊಳ್ಳಲು ಅಸಮರ್ಥವಾಗಿದ್ದು ಪೇಟೆಯಲ್ಲಿ ನಡೆಯುತ್ತಿರುವ ವ್ಯವಹಾರಿಕ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ.
ಹಿಂದಿನವಾರದಲ್ಲಿ ಅಮೇರಿಕಾದ ಫೇಸ್ ಬುಕ್ ಕಂಪನಿಯ ಕಳಪೆ ಸಾಧನೆಯ ಕಾರಣ ಭಾರಿ ಮಾರಾಟದ ಒತ್ತಡಕ್ಕೊಳಗಾಗಿ ಷೇರಿನಬೆಲೆ ಭರ್ಜರಿ ದಾಖಲೆಯ ಕುಸಿತ ಕಂಡಿದೆ. ಇದಕ್ಕೆ ಆ ಕಂಪನಿಯು ನೀಡಿದ ಸಮಜಾಯಿಶಿ ಎಂದರೆ ʼ ಭಾರತದಲ್ಲಿ ಬಳಕೆದಾರರ ಬೆಂಬಲದ ಕೊರತೆಯ ಕಾರಣ ಕಂಪನಿ ಏಳ್ಗೆ ಕಾಣಲು ವಿಫಲವಾಗಿದೆʼ ಎಂದಿದೆ. ಅಂದರೆ ಒಂದು ವಿದೇಶಿ ಕಂಪನಿಯ ಏಳ್ಗೆಗೆ ಭಾರತೀಯರ ಕೊಡುಗೆ ಯಾವ ಮಟ್ಟದಲ್ಲಿದೆ ಎಂಬುದರ ಅರಿವಾಗುತ್ತದೆ.
ಭಾರತೀಯ ಷೇರುಪೇಟೆಗಳಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಜನವರಿ 12 ರಿಂದಲೂ ನಿರಂತರವಾಗಿ ಮಾರಾಟಮಾಡುತ್ತಿವೆ. ಜನವರಿ 12 ರಿಂದಲೂ ಏಕಮುಖವಾಗಿ ಮಾರಾಟದ ಹಾದಿಯಲ್ಲಿ ರೂ.46,498 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೂ, ಸೆನ್ಸೆಕ್ಸ್ ಮಾತ್ರ 3,184 ಪಾಯಿಂಟುಗಳಷ್ಠು ಮಾತ್ರ ಕುಸಿದಿದೆ. ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.277.22 ಲಕ್ಷ ಕೋಟಿಯಿಂದ ರೂ.267.71 ಲಕ್ಷ ಕೋಟಿಗೆ ಇಳಿದಿದೆ. ಆದರೆ 2020 ರ ಫೆಬ್ರವರಿ 20 ರಿಂದ ಮಾರ್ಚ್ 26 ರವರೆಗೂ ವಿದೇಶಿ ವಿತ್ತೀಯ ಸಂಸ್ಥೆಗಳು ಸುಮಾರು ರೂ.70 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ ಸೆನ್ಸೆಕ್ಸ್ ನಲ್ಲಿ 11,354 ಪಾಯಿಂಟುಗಳ ಇಳಿಕೆಯನ್ನುಂಟುಮಾಡಿದ್ದವು. ಆದರೆ ಈ ಬಾರಿ ರೂ.46,498 ಕೋಟಿ ಮೌಲ್ಯದ ಷೇರು ಮಾರಾಟಮಾಡಿದರೂ ಕೇವಲ 3,184 ಪಾಯಿಂಟುಗಳ ಕುಸಿತ ಕಂಡಿದೆ.
ಈ ರೀತಿಯ ತಾರಾತಮ್ಯಕ್ಕೆ ಮುಖ್ಯ ಕಾರಣ ನಮ್ಮ ದೇಶದ ಆಂತರಿಕ ಶಕ್ತಿ. ಅದು ಜನಸಾಮಾನ್ಯರು ಷೇರುಪೇಟೆಯತ್ತ ಗಮನಹರಿಸಿರುವುದಾಗಿದೆ. ಹಿಂದಿನ ವರ್ಷ ಅಂದರೆ 08 ನೇ ಫೆಬ್ರವರಿ 2021 ರಂದು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ನೋಂದಾಯಿಸಿಕೊಂಡಿದ್ದ ಗ್ರಾಹಕರ ಸಂಖ್ಯೆಯು 5.92 ಕೋಟಿ ಇತ್ತು. ಈ ವರ್ಷ ಫೆಬ್ರವರಿ 4 ರಂದು ಈ ಸಂಖ್ಯೆಯು 9.59 ಕೋಟಿಗೆ ಏರಿಕೆ ಕಂಡಿದೆ. ಸುಮಾರು ಶೇ.64ರಷ್ಠು ಭಾಗವಹಿಸುವವರ ಸಂಖ್ಯೆಯು ಹೆಚ್ಚಾಗಿದೆ. ಈ ಹೊಸ ಹೂಡಿಕೆದಾರರ ಪ್ರವೇಶದಿಂದ ಪೇಟೆಯತ್ತ ಹರಿದುಬರುತ್ತಿರುವ ಹಣದ ಹೊಳೆಯೊಂದಿಗೆ ಮ್ಯೂಚುಯಲ್ ಫಂಡ್ ಗಳ ಮೂಲಕ ಪ್ರತಿ ತಿಂಗಳೂ, ಈಕ್ವಿಟಿ ಆಧಾರಿತ ಎಸ್ ಐ ಪಿ ಹೂಡಿಕೆಯ ಸುಮಾರು ರೂ.25,000 ಕೋಟಿ ಸಂಗ್ರಹವಾಗುತ್ತಿರುವ ಹಣವೂ ಸಹ ಪೇಟೆಯತ್ತ ಹರಿದುಬರುತ್ತಿರುವುದು, ಉತ್ತಮ, ಅಗ್ರಮಾನ್ಯ ಕಂಪನಿಗಳಿಗೆ ಭಾರಿ ಬೇಡಿಕೆಯನ್ನು ಸೃಷ್ಟಿಸಿದೆ.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ ವಿದೇಶಿ ವಿತ್ತೀಯ ಸಂಸ್ಥೆಗಳು ಹೆಚ್ಚು ಮಾರಾಟಮಾಡುತ್ತಿದ್ದರೂ ಸಹ ಆಂತರಿಕವಾಗಿ ಬರುತ್ತಿರುವ ಹಣದ ಹೊಳೆಯು ಎಲ್ಲವನ್ನೂ ಹೀರಿಕೊಳ್ಳುತ್ತಿರುವುದರಿಂದ ಷೇರುಪೇಟೆಯ ಮೇಲೆ ಹೆಚ್ಚು ಪ್ರಭಾವಿಯಾಗುತ್ತಿಲ್ಲ. ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶ ಎಂದರೆ 141 ದೇಶಗಳ ಗ್ಲೋಬಲ್ ಕಾಂಪಿಟೇಟಿವ್ ಇಂಡೆಕ್ಸ್ ನಲ್ಲಿ ಭಾರತದ ಮಾರ್ಕೆಟ್ ಸೈಜ್ – 3, ಇದು ಇಂದು ಸಕಾರಾತ್ಮಕವಾಗಿ ಪರಿಣಮಿಸಿದೆ. ದೇಶದ ಜನಸಂಖ್ಯೆ 140 ಕೋಟಿಯಲ್ಲಿ ಕೇವಲ 9.59 ಕೋಟಿ ಜನರು ಮಾತ್ರ ಷೇರುಪೇಟೆಯ ಚಟುವಟಿಕೆಯಲ್ಲಿ ಭಾಗವಹಿಸುವ ಕಾರಣ ಈ ರೀತಿಯ ಸ್ಥಿರತೆ ಕಾಣುತ್ತಿದ್ದೇವೆ. ಇದು ದ್ವಿಗುಣಗೊಂಡಲ್ಲಿ ಯಾವ ಪ್ರಮಾಣದ ಬೇಡಿಕೆ ಉಂಟಾಗಿ ಅಸ್ಥಿರತೆಗೆ ಕಾರಣವಾಗಬಹುದೇ, ಕಾದು ನೋಡಬೇಕಾಗಿದೆ.
ಈ ವಾತಾವರಣವನ್ನು ಇತ್ತೀಚೆಗೆ ಬರುತ್ತಿರುವ ಹೊಸಪೀಳಿಗೆ ಸ್ಟಾರ್ಟ್ ಅಪ್ ಗಳು ಜನಸಾಮಾನ್ಯರನ್ನು ಆಕರ್ಷಿಸಿ ಅವರಿಗೆ ತಮ್ಮ ಷೇರುಗಳನ್ನು ಅತ್ಯಧಿಕ ಪ್ರೀಮಿಯಂನಲ್ಲಿ ವಿತರಿಸಿ, ಅವರಲ್ಲಿ ಐಪಿಒ ಎಂದರೆ ತಾತ್ಸಾರ ಭಾವನೆಯನ್ನು ಬಿತ್ತುತ್ತಿವೆ.
ಈ ದಿಶೆಯಲ್ಲಿ ಐ ಪಿ ಒ ಗಳು ತೇಲಿಬಿಟ್ಟಾಗ ಗಮನಿಸಲೇಬೇಕಾದಂತಹ ಹಲವು ಅಂಶಗಳು ಇಂತಿವೆ.
- ಐ ಪಿ ಒ ಮೂಲಕ ವಿತರಿಸಲಾಗುತ್ತಿರುವ ಷೇರುಗಳ ಮುಖಬೆಲೆ ಏನು? ಅದು ರೂ.1 ಅಥವಾ 2 ಆದರೆ ವಿತರಣಾ ಸಂದರ್ಭಕ್ಕೂ ಮುಂಚಿನ ದಿನಗಳಲ್ಲಿ ಮುಖಬೆಲೆ ಸೀಳಲಾಗಿದೆಯೇ? ಹೌದೆಂದಾದರೆ ಆ ಕಂಪನಿಯ ಉದ್ದೇಶವೇನೆಂಬುದರ ಅರಿವಾಗುತ್ತದೆ.
- ಆ ಕಂಪನಿಯು ಐಪಿಒ ಗೂ ಮುಂಚಿನ ದಿನಗಳಲ್ಲಿ ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿದೆಯೇ? ಹೌದೆಂದಾದರೆ ಕಂಪನಿ ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಂದ ಹಣ ಸಂಗ್ರಹಣೆಯ ದೃಷ್ಟಿಯಿಂದಲೇ ಈ ಕ್ರಮಕ್ಕೆ ಮುಂದಾಗಿದೆ ಎಂದಾಗುವುದು.
- ಐ ಪಿ ಒ ಗೂ ಮುಂಚೆ ಕಂಪನಿಯು ಯಾವ ರೀತಿಯ ಕಾರ್ಪೊರೇಟ್ ಫಲಗಳನ್ನು ವಿತರಿಸಿಕೊಂಡಿದೆ, ವಿಶೇಷವಾಗಿ ಅದು ವಿತರಿಸಿದ ಬೋನಸ್ ಷೇರಿನ ಪ್ರಮಾಣವೇನು? ಕಾರಣ ಆಗಸ್ಟ್ 2021 ರಲ್ಲಿ ವಿತರಿಸಿದ ವಿಜಯ್ ಡಯಾಗ್ನಾಸ್ಟಿಕ್ಸ್ ಕಂಪನಿಯು ಮೇ 2021 ರಲ್ಲಿ ಪ್ರತಿ 4 ಷೇರುಗಳಿಗೆ 5 ರಂತೆ ಬೋನಸ್ ಷೇರು ವಿತರಿಸಿ, ಇರುವ ಮೀಸಲು ನಿಧಿಯನ್ನು ಕರಗಿಸಿ, ನಂತರ ರೂ.531 ರಂತೆ ಐಪಿಒ ನಲ್ಲಿ ಷೇರು ವಿತರಿಸಿದೆ. ಝೊಮಾಟೋ ಕಂಪನಿಯು ಜುಲೈ 2021 ರಲ್ಲಿ ಪ್ರತಿ 1 ಷೇರಿಗೆ 6,691 ಷೇರುಗಳ ಅನುಪಾತದಲ್ಲಿ ಬೋನಸ್ ಷೇರು ವಿತರಿಸಿ, ಇರುವ ಮೀಸಲು ನಿಧಿಯನ್ನು ಕರಗಿಸಿ, ನಂತರ ರೂ.76 ರಂತೆ ಷೇರು ವಿತರಿಸಿದೆ. ಅಂದರೆ ಕಂಪನಿಯ ಖಜಾನೆಯಲ್ಲಿರುವ ʼರಸʼವನ್ನು ಹೀರಿಕೊಂಡು ನಂತರ ಸಿಪ್ಪೆಯಂತಹ ಸಪ್ಪೆಯ ಭಾಗವನ್ನು ಸಾರ್ವಜನಿಕರಿಗೆ ಹಂಚುವುದು ಯಾವ ನ್ಯಾಯ?
- ಕಂಪನಿಯ ಪ್ರವರ್ತಕರಿಗೆ ಬಿದ್ದ ಷೇರಿನ ಬೆಲೆ ಏನು? ಮತ್ತು ಆ ಷೇರುಗಳನ್ನು ವಿತರಿಸುತ್ತಿರುವ ಪ್ರೀಮಿಯಂ ಏನು? ಇವುಗಳ ವ್ಯತ್ಯಾಸ ಭಾರಿ ಪ್ರಮಾಣದಲ್ಲಿದ್ದಲ್ಲಿ ಅಂತಹ ಕಂಪನಿಗಳಿಂದ ದೂರ ಉಳಿವುದೇ ಲೇಸು.
- ಕಂಪನಿಗಳು ಹೊಸ ಷೇರುಗಳನ್ನು ಮತ್ತು ಪ್ರವರ್ತಕರಾದಿಯಾಗಿರುವವರ ಷೇರುಗಳನ್ನು ಮಾರಾಟಮಾಡುತ್ತಿರುವ ಪ್ರಮಾಣವನ್ನೂ ಸಹ ಗಮನಿಸಬೇಕು. ಕೆಲವು ಕಂಪನಿಗಳು ಕೇವಲ ಆಫರ್ ಫಾರ್ ಸೇಲ್ ಮೂಲಕ ಮಾತ್ರ ಷೇರು ವಿತರಿಸುವುವು. ವಿತರಿಸುವ ಪ್ರೀಮಿಯಂ ಸಹ ಅತಿ ಹೆಚ್ಚಾಗಿದ್ದು ಸಂಗ್ರಹವಾದ ಸಂಪೂರ್ಣ ಸಂಪನ್ಮೂಲವು ಪ್ರವರ್ತಕರ ಕಿಸೆಗೆ ಸೇರಿಕೊಳ್ಳುವುದು. ಇದರಿಂದ ಕಂಪನಿಗೆ ಯಾವ ರೀತಿಯ ಪ್ರಯೋಜನವಿರಲಾರದು. ಹಾಗಾಗಿ ಇಂತಹ ಕಂಪನಿಗಳಿಗೆ ಐಪಿಒ ಮೂಲಕ ಚಂದಾದಾರರಾಗುವುದಕ್ಕಿಂತ, ಆ ಕಂಪನಿಯ ಷೇರುಗಳು ಲೀಸ್ಟಿಂಗ್ ಆದ ಮೇಲೆ ಆಕರ್ಷಕ ಹೂಡಿಕೆ ಎನಿಸಿದಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲದಿದ್ದಲ್ಲಿ ಪೇಟೆಯಲ್ಲಿ ಪರ್ಯಾಯ ಹೂಡಿಕೆ ಆನ್ವೇಷಣೆ ಮಾಡಬಹುದು. ಉದಾಹರಣೆಗೆ ವೇದಾಂತ ಫ್ಯಾಶನ್ಸ್ ಕಂಪನಿ ವಿತರಿಸುತ್ತಿರುವ ರೂ.1 ರ ಮುಖಬೆಲೆಯ ಷೇರಿಗೆ ರೂ.866 ಎಂದು ನಿಗದಿಪಡಿಸಿದ್ದು, ಸಂಗ್ರಹಣೆಯಾದ ಸಂಪೂರ್ಣ ರೂ.3,149 ಕೋಟಿ ಹಣವೂ ಪ್ರವರ್ತಕರ ಕಿಟ್ಟಿಗೆ ಸೇರಿಕೊಳ್ಳುವುದು. ಇದರಿಂದ ಕಂಪನಿಗೆ ಯಾವ ಪ್ರಯೋಜನವೂ ಇರುವುದಿಲ್ಲ.
ಈ ಅಂಶಗಳು ಕೇವಲ ಮಾರ್ಗದರ್ಶನಕ್ಕಾಗಿ, ಹೊಸ ಹೂಡಿಕೆದಾರರ ಮಾಹಿತಿಗಾಗಿ ನೀಡಲಾಗಿದ್ದು, ಅಂತಿಮವಾಗಿ ಹೂಡಿಕೆದಾರರೇ ನಿರ್ಧರಿಸಬೇಕು. ಅರಿತು ಹೂಡಿಕೆ ಮಾಡಿ – ಅನುಸರಿಸಬೇಡಿ.
ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.