ಸುಮಾವೀಣಾ
ಬಯಕೆಗೆ ಬಡವರಿಲ್ಲ- ರುದ್ರಭಟ್ಟನ ‘ಜಗನ್ನಾಥ ವಿಜಯ’ದಲ್ಲಿ ಬರುವ ಮಾತಿದು. ಬಯಕೆ ಎಂದರೆ ಬೇಡಿಕೆಗಳು,ಆವಶ್ಯಕತೆಗಳು ಎಂದಾಗುತ್ತವೆ. ಬಯಸಿದ್ದೆಲ್ಲಾ ಸಿಗುವುದು ಸಿಗದೆ ಇರುವುದು ಬೇರೆಯ ವಿಚಾರ ಆದರೆ ಬಯಸುವುದರಲ್ಲಿ ತಪ್ಪಿಲ್ಲ.
ತೊಟ್ಟಿಲ ಮಗುವಿನಿಂದ ಮುಪ್ಪಿನವರವರೆಗೆ ಬಯಕೆಗಳು ನಿರೀಕ್ಷೆಗಳು ಇದ್ದೇ ಇರುತ್ತವೆ.ಸಹಜವಾದ ಬಯಕೆಗಳು ಬದುಕನ್ನು ಸುಂದರವಾಗಿಸುತ್ತವೆ ಅಸಹಜ ಬಯಕೆಗಳು ಮುಗ್ಗರಿಸುವಂತೆ ಮಾಡುತ್ತವೆ.
ಬಯಕೆಗೆ ಬಡವರಿಲ್ಲ ಎಂಬುದೊಂದು ಬಡತನಕ್ಕೆ ಸಂಬಂಧಿಸಿದ ನಾಣ್ಣುಡಿ ಎನ್ನಬಹುದು. ಆಕಾಶವನ್ನು ನೋಡಲು ನೂಕು ನುಗ್ಗಲೇ ? ನಾವು ಎಲ್ಲಿ ನಿಂತರೂ ಆಕಾಶವನ್ನು ವೀಕ್ಷಿಸಬಹುದು. ಹಾಗೆಯೇ ಬಯಕೆಯನ್ನು ಹೊಂದಲು ಶ್ರೀಮಂತರಾಗಿರಬೇಕು ಬಡವರಾಗಿರಬೇಕು ಎನ್ನುವ ಕಟ್ಟುಪಾಡಿಲ್ಲ. ಈ ಬಯಕೆಗಳು ಸೀಮಾತೀತ,ವರ್ಗಾತೀತ.
‘ಬಯಕೆ’ ಎನ್ನುವುದು ಧನಾತ್ಮಕತೆಯ ಸಂಕೇತ ಎನ್ನಬಹುದು. ಉದಾಹರಣೆಗೆ ವಿದ್ಯಾರ್ಥಿಯೊಬ್ಬ ಉತ್ತಮ ಅಂಕಗಳನ್ನು ಪಡೆದು ಉತ್ತಮ ಗಳಿಕೆಹೊಂದಬೇಕು ಎಂದಾದಲ್ಲಿ ಅದಕ್ಕೆ ಪೂರಕವಾಗಿ ಆತ ಪ್ರಯತ್ನ ಮಾಡಲೇಬೇಕಾಗುತ್ತದೆ. ಅಂದರೆ ಬಯಕೆ ಈಡೇರಲು ಶ್ರಮವನ್ನು ಅಪೇಕ್ಷಿಸುತ್ತದೆ ಎಂದಾಯಿತು ಅಲ್ಲವೆ. ಅರ್ಥಾತ್ ಶ್ರಮ ನಮಗೆ ಬಯಸಿಒದ್ದನ್ನು ಕೊಡಬಹುದು ಎಂದಾಯಿತಲ್ಲವೆ?
ಬಯಕೆಯೇ ಬದುಕು ಎಂಬಂತೆ ಬಯಕೆಗಳು ಬದುಕುವ ಆಸೆಯನ್ನು ಜೀವಂತವಾಗಿರಿಸುತ್ತವೆ. ಈ ಆಸೆಗಳು ನಮ್ಮನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿಸಬಹುದು. ಬಯಕೆ ಹೊಂದಲು ನಿರ್ಬಂಧಗಳೆನ್ನುವ ಟ್ರಾಫಿಕ್ ಜಾಮನ್ನು ಧಾಟಬೇಕಿಲ್ಲ, ಮುಂಗಡ ಚೀಟಿಯನ್ನೇನು ನಾವು ಪಡೆಯಬೇಕಿಲ್ಲ. ಬಯಕೆಗಳಿಲ್ಲದ ಬದುಕು ಬರಡೇ ಸರಿ! ನಮಗನ್ನಿಸಿದ್ದನ್ನು ಆಶಿಸಿ ಈಡೇರಿಸಿಕೊಳ್ಳಬಹುದಾದ ಬಯಕೆಗಳು ಬದುಕಿಗೆ ಅಮೃತ ಸಿಂಚನಗಳು.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.