BENGALURU FEB 11
ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರುತ್ತಾರೆ ಎನ್ನುವುದು ಸುಳ್ಳು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರು ಶುಕ್ರವಾರದಂದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, `ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸದಂತೆ ನಿರ್ಬಂಧಿಸಲಾಗುವುದು ಎಂದು ಕೆಲವರು ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ. ಬೋಧನಾ ವ್ಯವಸ್ಥೆಯು ಆನ್ ಲೈನ್ ರೂಪ ಪಡೆದಿರುವುದರಿಂದ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಮುಂತಾದ ಆಧುನಿಕ ತಾಂತ್ರಿಕ ಸಾಧನಗಳು ವಿದ್ಯಾರ್ಥಿಗಳ ಕಲಿಕೆಯ ಅವಿಭಾಜ್ಯ ಅಂಗವೇ ಆಗಿಹೋಗಿವೆ. ಹೀಗಿರುವುದಾಗ ನಿಷೇಧದ ಮಾತು ಎಲ್ಲಿಂದ ಬರುತ್ತದೆ’ ಎಂದು ಅವರು ಪ್ರಶ್ನಿಸಿದರು.
ಇಂತಹ ಗಾಳಿಮಾತುಗಳನ್ನು ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ ನಂಬಬಾರದು. ಆಧುನಿಕ ಸಾಧನಗಳನ್ನು ಬಳಸಿಕೊಂಡು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಮತ್ತು ಶಿಕ್ಷಣ ಪೂರೈಸುವುದು ಸರಕಾರದ ಆದ್ಯತೆಯಾಗಿದೆ. ಮೊಬೈಲ್ ಬಳಕೆ ಎಂದಿನಂತೆ ಮುಂದುವರಿಯಲಿದೆ’ ಎಂದು ಸಚಿವರು ನುಡಿದರು.