18 C
Karnataka
Sunday, November 24, 2024

    ಆಯ್ದಕ್ಕಿ ಲಕ್ಕಮ್ಮನ ಕಾಯಕ ನಿಷ್ಠೆ

    Must read

    ಸುಮಾ ವೀಣಾ

    ಸಮಾಜ ಸುಧಾರಣ ಚಳವಳಿಯಲ್ಲಿ ಸಕ್ರಿಯವಾಗಿದ್ದ ಶ್ರೇಷ್ಠ ವಚನಕಾರ್ತಿಯರಲ್ಲಿ ಆಯ್ದಕ್ಕಿಲಕ್ಕಮ್ಮ ಕೂಡ ಒಬ್ಬರು. ವಚನಕಾರ ಆಯ್ದಕ್ಕಿ ಮಾರಯ್ಯನ ಮಡದಿ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಡೋಣಿ ಗ್ರಾಮದವರು. ಈಕೆಯ ಅಂಕಿತ “ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ”.

    ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
    ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
    ಸದ್ಭಕ್ತರಿಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
    ಮಾರಯ್ಯಪ್ರಿಯ ಅಮಲೇಶ್ವರ ಲಿಂಗದ ಸೇವೆಯುನ್ನಳ್ಳನ್ನಕ್ಕರ

    ಮನಸ್ಸು ಬಿಳಿಯರಳೆಯಂತೆ ಸದಾಶುಭ್ರವಾಗಿರಬೇಕು. ಮನಸ್ಸು ಗೊಂದಲ ಸಂಶಯಗಳಲ್ಲಿ ತುಂಬಿಕೊಂಡರೆ ಆತನದ್ದು ಕೊರತೆಯ ಬದುಕೇ ಸರಿ ಅರ್ಥಾತ್ ಬಡತನದ ಬದುಕು ಎನ್ನುತ್ತಾರೆ.

    ಇನ್ನಷ್ಟು ಮತ್ತಷ್ಟು ಬೇಕೆಂಬ ಬಯಕೆಗಳ ಪಟ್ಟಿ ಮತ್ತಷ್ಟು ಮಗದಷ್ಟು ಬೆಳೆಯುತ್ತಲೇ ಇರುತ್ತವೆ. ನಶ್ವರವಾದ ಸಂಪತ್ತಿನ ಭ್ರಮೆಯಲ್ಲಿ ಇರುವ ಅತ್ಯಲ್ಪ ಜೀವನದ ಸಂತೋಷ ಕಳೆದುಕೊಳ್ಳುವಂತೆ ಮಾಡುತ್ತದೆ. ಮನಶುದ್ಧಿ ಹೊಂದಿರುವಂತೆ ತಾನು ಯಾವ ಕೆಲಸ ಮಾಡುತ್ತಾನೆಯೋ ಅದರಲ್ಲೇ ಸಂತೃಪ್ತಿಯನ್ನು ಹೊಂದುತ್ತಾನೆ. ಅತೀನಿರೀಕ್ಷೆ ಅತ್ಯಂತ ಲಾಭದ ಬಗ್ಗೆ ತಲೆಕೆಡಿಸಿಕೊಳ್ಳದೆ ಚಿತ್ತಶುದ್ಧಿಯಿಂದ ಮಾಡುವ ಕಾಯಕ ಅತ್ಯಂತ ಸಾರ್ಥಕವಾದುದು.

    ಸದ್ಭಕ್ತ ಎಂದು ಕರೆಸಿಕೊಳ್ಳುವವನು ತನಗಾಗಿ ತನ್ನ ಮನಸ್ಸಿನ ಸಂತೋಷಕ್ಕಾಗಿ ತನಗೊಪ್ಪಿತ ಅಥವಾ ಒದಗಿಬಂದ ಕಾಯಕವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಆಗ ಲಕ್ಷ್ಮಿ ತಾನಾಗಿಯೇ ಒಲಿಯುತ್ತಾಳೆ. “ಮನಸ್ಸಿದ್ದರೆ ಮಾರ್ಗವೆಂಬಂತೆ” ಚಿತ್ತದಲ್ಲಿ ಒಳ್ಳೆಯ ಆಲೋಚನೆಯನ್ನು ಹೊಂದಿ ಕಾಯಕವನ್ನು ನಿರೀಕ್ಷೆಗಳಿಲ್ಲದಂತೆ ಮಾಡಬೇಕು. ಆಯ್ದಕ್ಕಿ ಲಕ್ಕಮ್ಮನವರ ಪ್ರಕಾರ ಕಾಯಕ ನಿಷ್ಠೆ ಬದುಕಿನ ಒಂದು ಆದರ್ಶತತ್ವವಾಗಿದೆ. ತಾನೂ ಅದನ್ನೇ ಆಚರಿಸಿ ಗಂಡನಿಗೂ ಅದನ್ನೇ ಹೇಳಿದವಳು ಆಯ್ದಕ್ಕಿ ಲಕ್ಕಮ್ಮ.

    ಅತಿಆಸೆ,ಆಡಂಬರದ ಆಛರಣೆ ಅಪರಿಗೃಹವೃತ್ತಿ ಇರಬಾರದೆಂದು ಹೇಳಿದ್ದಾರೆ. ಇವುಗಳಿಂದ ಹೊರತಾದ ಕಾಯಕನಿಷ್ಠೆ ಶ್ರದ್ಧಾ, ಪ್ರಾಮಾಮಾಣಿಕತೆಗಳಿಂದಲೂ ದಾಸೋಹವೆಂಬ ತತ್ತ್ವದ ಬದುಕು ರೂಪಿತವಾಗುತ್ತದೆ. ಕಾಯಕದಲ್ಲಯೇ ಕೈಲಾಸವನ್ನು ಕಾಣುವ ಆಕೆಯ ನಿಲುವು ಸಮಾಜಕ್ಕೆ ಮಾದರಿಯಾಗಿದೆ. ಆಕೆಯ ಈ ಪ್ರಸ್ತುತ ವಚನವು ಸಾಮಾಜಿಕ ಮೌಲ್ಯಗಳ ಪ್ರತೀಕವಾಗಿ ರೂಪುಗೊಂಡಿದೆ . ಆದರ್ಶ ಸಮಾಜದ ನಿರ್ಮಾಣಕ್ಕೆ ಕಾಯಕ ನಿಷ್ಠೆ ಅತ್ಯಂತ ಅಗತ್ಯ ಬುನಾದಿ ಎಂದು ಈ ವಚನ ಹೇಳುತ್ತದೆ.

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!