19.5 C
Karnataka
Thursday, November 21, 2024

    ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಗೆ ಕೇಂದ್ರ ಸರ್ಕಾರ ಅನುಮೋದನೆ

    Must read

    CHITRADURGA FEB 16
    ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ಕೇಂದ್ರ ಸರ್ಕಾರ ನಿನ್ನೆ ನಡೆದ ಹೈಪವರ್ ಕಮಿಟಿಯಲ್ಲಿ ಅನುಮೋದನೆ ನೀಡಿದೆ. ರಾಷ್ಟ್ರೀಯ ಯೋಜನೆಯ ನೆರವಿನಿಂದ ರಾಜ್ಯಕ್ಕೆ ಸುಮಾರು ರೂ.12,500 (ಹನ್ನೇರೆಡುವರೆ) ಸಾವಿರ ಕೋಟಿಯ ನೆರವು ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ತರಳುಬಾಳು ಬೃಹನ್ಮಠದ ವತಿಯಿಂದ ಬುಧವಾರ ಗುರುಶಾಂತೇಶ್ವರ ದಾಸೋಹ ಭವನದಲ್ಲಿವ ಆಯೋಜಿಸಿದ್ದ ತರಳುಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾದ ಏಕೈಕ ಯೋಜನೆ ಇದಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಮಧ್ಯಕರ್ನಾಟಕದ ನೀರಾವರಿ ಯೋಜನೆಗೆ ತುಂಬಾ ಸಹಕಾರಿಯಾಗಿದ್ದು, ಇದರಿಂದ ಅಂತರ್ಜಲ ಹೆಚ್ಚಳದ ಜೊತೆಗೆ ನೀರನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

    ಭದ್ರಾ ಮೇಲ್ದಂಡೆ ಯೋಜನೆಗೆ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಜೊತೆಗೆ ಕೆರೆಗಳ ತುಂಬಿಸುವ ಯೋಜನೆಗೆ ಕ್ರಮಕೈಗೊಂಡಿದ್ದೇವೆ. ಹಿಂದಿನ ಸರ್ಕಾರ ಕೆರೆಗಳಿಗೆ ನೀರು ಭರ್ತಿ ಮಾಡುವ ವಿದ್ಯುತ್ ಶುಲ್ಕವನ್ನು ರೈತರೇ ಪಾವತಿಸಬೇಕು ಎಂದು ತಿಳಿಸಲಾಗಿತ್ತು. ಸಿರಿಗೆರೆ ಗುರುಗಳು ಹೇಳಿ ಈ ಹಣವನ್ನು ಸರ್ಕಾರದಿಂದಲೇ ಭರಿಸಬೇಕು ಎಂದು ಹೇಳಿದ ತಕ್ಷಣವೇ ಆ ಆದೇಶವನ್ನು ಬದಲಿಸಲಾಗಿದೆ ಎಂದರು.

    ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಎದುರಾಗಿದ್ದ ಅನೇಕ ಅಡ್ಡಿ ಆತಂಕಗಳನ್ನು ಎಲ್ಲ ನಿವಾರಣೆ ಮಾಡಲಾಗಿದೆ. ಅಜ್ಜಂಪುರ ಟನಲ್‍ನಿಂದ ವಿವಿಸಾಗರಕ್ಕೆ ನೀರು ಹರಿಸಲಾಗಿದ್ದು, ವಿವಿಸಾಗರ ನಿರ್ಮಾಣ ಮಾಡಿದಾಗಿನಿಂದ ಎರಡು-ಮೂರು ಬಾರಿ ತುಂಬಿದೆ. ಭೂಮಿ ತಾಯಿಗೆ ಹಸಿರು ಸೀರೆ ಉಡಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಪ್ರಧಾನಿ ಮೋದಿ ಅವರು ಈಗಾಗಲೇ ಕೃಷಿ ಸಿಂಚಾಯಿ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಿದರು. ನಾವುಗಳು ಜನಪರವಾಗಿದ್ದು, ದುಡಿಯುವ ವರ್ಗವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ದುಡಿಮೆಯೇ ದೊಡ್ಡಪ್ಪ, ಕಾಯಕ ಸಮಾಜ ದೇಶ, ನಾಡು ನಿರ್ಮಾಣ ಮಾಡಿದಾಗ ಅಭಿವೃದ್ಧಿ ಸಾಧ್ಯ. ನವಕರ್ನಾಟಕದಿಂದ ನವಭಾರತ ನಿರ್ಮಾಣ ನಮ್ಮ ಘೋಷಣೆಯಾಗಿದೆ ಎಂದು ಹೇಳಿದರು.

    ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಸನ್ಮಾನ: ಸೈನಿಕರು ವೀರ ಮರಣ ಹೊಂದಿದ ಬಗ್ಗೆ ವಿವರಣೆ ನೀಡಲಾಗುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು.
    ವೀರ ಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಶ್ರೀಮಠದಿಂದ ಸನ್ಮಾನಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭಾವುಕರಾದರು. ವೀರಮರಣ ಹೊಂದಿದ ಸೈನಿಕರ ಪತ್ನಿಯರಿಗೆ ಸಿರಿಗೆರೆ ತರಳುಬಾಳು ಬೃಹನ್ಮಠದಿಂದ ಸನ್ಮಾನ ಮಾಡಲಾಯಿತು. ತಲಾ ರೂ.50 ಸಾವಿರ ರೂಪಾಯಿಗಳಂತೆ ಒಟ್ಟು ಒಂಭತ್ತು ಮಂದಿಗೆ ಶ್ರೀಮಠದ ವತಿಯಿಂದ ಚೆಕ್ ವಿತರಿಸಲಾಯಿತು.
    ಈ ಸಂದರ್ಭದಲ್ಲಿ ವೀರ ಮರಣ ಹೊಂದಿದ ಸೈನಿಕರ ಪತ್ನಿಯರು ಕುಂದುಕೊರತೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳಿಗೆ ನೀಡಿದರು. ಈ ಮನವಿ ಪತ್ರವನ್ನು ಸಿರಿಗೆರೆ ಶ್ರೀಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದರು.
    ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್, ರೈತರಿಗಾಗಿ ಕೆಲಸ ಮಾಡುವ ಉದ್ದೇಶದಿಂದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೇ ಕೇಳಿ ಅರಣ್ಯ ಬದಲಾಗಿ ಕೃಷಿ ಇಲಾಖೆಯನ್ನು ಪಡೆದು ರೈತರ ಸೇವೆ ಮಾಡಲು ಅವಕಾಶ ಪಡೆದೆ. ರೈತರ ಸಮಸ್ಯೆಯನ್ನು ಆಲಿಸಿ, ರೈತರ ಕಣ್ಣೀರು ಒರೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

    ರೈತರ ಮಕ್ಕಳ ಬಿ.ಎಸ್.ಸಿ ಕೃಷಿ ಪದವಿ ವ್ಯಾಸಂಗಕ್ಕಾಗಿ ಶೇ.40 ರಿಂದ ಶೇ.50ಕ್ಕೆ ಸೀಟು ಹೆಚ್ಚಳ ಮಾಡಲಾಗಿದೆ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಮುಖ್ಯಮಂತ್ರಿ ರೈತವಿದ್ಯಾನಿಧಿ ಯೋಜನೆ ಸ್ಥಾಪನೆ ಮಾಡಿ ರೈತರ ಮಕ್ಕಳಿಗೆ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.

    ಜಲ ಸಂರಕ್ಷಣವಾದಿ ಮತ್ತು ಪರಿಸರವಾದಿ ರಾಜೇಂದ್ರ ಸಿಂಗ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಹೇರಳವಾದ ಸಂಪನ್ಮೂಲವಿದ್ದು, ಅದು ಸಂಪೂರ್ಣವಾಗಿ ಸದುಪಯೋಗವಾಗಬೇಕು. ಕರ್ನಾಟಕ ಒಂದು ಸುಂದರವಾದ ರಾಜ್ಯ. ಇಲ್ಲಿ ವಿಶೇಷವಾಗಿ ಪ್ರಕೃತಿಯನ್ನು ಸಂರಕ್ಷಣೆ ಮಾಡುವಂತಹ ವಿಶ್ವವಿದ್ಯಾಲಯಗಳನ್ನು ತೆರೆಯಬೇಕು. ಅದರಲ್ಲೂ ನೀರಿನ ಸಂರಕ್ಷಣೆ ಮತ್ತು ಅದರ ಉಪಯೋಗದ ಕುರಿತು ಮಾಹಿತಿಯನ್ನು ಒಳಗೊಂಡ ಪರಿಣಿತರನ್ನು ತಯಾರು ಮಾಡುವ ಕೆಲಸ ರಾಜ್ಯದ ಮುಖ್ಯಮಂತ್ರಿಗಳಿಂದ ಆರಂಭವಾಗಬೇಕು. ಇದೊಂದು ಅದ್ಭುತವಾದ ಕೆಲಸವಾಗಿದ್ದು, ಇದರು ಬೇರೆ ರಾಜ್ಯದ ಮುಖ್ಯಮಂತ್ರಿಗಳಿಗೆ ಇದು ಮಾದರಿಯಾಗಬೇಕು. ಈ ಹಿಂದೆ ಚನ್ನಗಿರಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಮಾರಂಭದಲ್ಲಿ ಕೆರೆಯಿಂದ ಕೆರೆಗೆ ನೀರು ತುಂಬಿಸುವ ಯೋಜನೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು, ಅದು ಅತ್ಯುತ್ತಮವಾದ ಕೆಲಸವಾಗಿದ್ದು, ರಾಜ್ಯ ಸರ್ಕಾರವೇ ಜಲ ವಿಶ್ವವಿದ್ಯಾಲಯವನ್ನು ಆರಂಭ ಮಾಡಬೇಕು ಎಂದು ಮನವಿ ಮಾಡಿದರು.

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ನೇತೃತ್ವದ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಮುರುಗೇಶ್‍ನಿರಾಣಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಹೊನ್ನಳಿ ಮಾಜಿ ಶಾಸಕ ಶಾಂತನಗೌಡ, ನೀರಾವರಿ ನಿಗಮ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಸಪ್ಪ ಗುಂಗೆ, ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಸೇರಿದಂತೆ ಮತ್ತಿತರರು ಇದ್ದರು.

    spot_img

    More articles

    1 COMMENT

    1. ಕರ್ನಾಟಕದ ಜನತೆಗೆ, ಅದರಲ್ಲೂ ಮಧ್ಯ ಕರ್ನಾಟಕದ ಜನತೆಗೆ ಅತೀ ಸಂತಸದ ವರದಿಯನ್ನು ಬಿತ್ತರಿಸಿದ ಆತ್ಮೀಯ ಗೆಳೆಯ ಶ್ರೀ ವತ್ಸನಾಡಿಗ್ ರವರಿಗೆ ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!