26.2 C
Karnataka
Thursday, November 21, 2024

    ಅಡಿಗರ  ‘ಸಮಾಜಭೈರವ ಕವಿತೆ’ ಒಂದು ಅನುಸಂಧಾನ

    Must read

    ಸುಮಾ ವೀಣಾ

    ಸಾಹಿತ್ಯದಲ್ಲಿ  ಮಣ್ಣಿನ ವಾಸನೆಯ ಅಗತ್ಯವನ್ನು ಬಲವಾಗಿ  ಪ್ರತಿಪಾದಿಸಿರುವ ಗೋಪಾಲಕೃಷ್ಣ ಅಡಿಗರು ಹೊಸಗನ್ನಡ ಕಾವ್ಯ ಸಂದರ್ಭದ   ಪ್ರಮುಖ ಅಂತಃಶಕ್ತಿಯಾಗಿದ್ದವರು.  ಕಾವ್ಯವಸ್ತು ಮತ್ತು ರೂಪದಲ್ಲಿ ಕನ್ನಡ ಕಾವ್ಯಕ್ಕೆ ನವ್ಯತೆಯ ಹೊಸ ನೆಲೆಯನ್ನು  ತಂದವರು.  ಸ್ವಾತಂತ್ರ್ಯೋತ್ತರ  ಭಾರತದ   ಸಂಕೀರ್ಣ ಅನುಭವಗಳನ್ನು  ಸಂಕೇತ ಮತ್ತು ಪ್ರತಿಮೆಗಳಲ್ಲಿ  ಬಂಧಿಸಿ  ಅನನ್ಯ ಕಾವ್ಯಾನುಭೂತಿ ನೀಡಿದವರು. ಇವರ ಕಾವ್ಯದ ಪ್ರಮುಖ ಗುಣಗಳು ವಸ್ತು ನಿಷ್ಟತೆ ಹಾಗು ವೈಚಾರಿಕತೆ.

    ನವ್ಯದ ಹರಿಕಾರನಾಗಿದ್ದರೂ   ಗೋಪಾಲಕೃಷ್ಣ ಅಡಿಗರು ಪ್ರಗತಿಶೀಲ ಧೋರಣೆಗೆ ಒಳಗಾಗಿ  ಬರೆದ ಕವನಗಳಲ್ಲಿ ‘ಸಮಾಜ ಭೈರವ’  ಸಮಾಜಕೇಂದ್ರಿತವಾಗಿದೆ. ಗೋಪಾಲಕೃಷ್ಣ ಅಡಿಗರು ಬರೆದಿರುವ ‘ಕಟ್ಟುವೆವು ನಾವು’  ಕವನ ಸಂಕಲನದಿಂದ  ‘ಸಮಾಜಭೈರವ’ ಕವಿತೆಯನ್ನು ಆರಿಸಲಾಗಿದೆ. ಸಮಾಧಾನದಿಂದ ಕೂಡಿದ ಸಾಮಯಿಕ ಸಂಕಲ್ಪಗಳು   ಭ್ರಷ್ಟಸಮಾಜಕ್ಕೆ  ಆತ್ಯಂತಿಕ ಮಿತಿಯನ್ನು ತೋರಿಸುವ ಈ ಕವಿತೆಯ  ಪದರೂಪದ ಹೂರಣವಾಗಿದೆ.  ನಾನು, ನನ್ನ ಎಂಬ ಪದಗಳು ಸಾಮಾಜಿಕರನ್ನು ಸಮಷ್ಟಿ ಪ್ರಜ್ಞೆಯಿಂದ ಪ್ರತಿನಿಧಿಸುವ  ಪದಗಳಾಗಿವೆ.   ಪುನರಾವರ್ತಿತವಾಗಿ ಈ ಕವಿತೆಯಲ್ಲಿ ಬರುವ “ನನ್ನ” ಎಂದರೆ ಕೇವಲ ವ್ಯಕ್ತಿಯಲ್ಲ  ಪ್ರತಿಯೊಬ್ಬ  ಸಾಮಾಜಿಕನೂ ಹೌದು!

    ಸಮಾಜ ಭೈರವ

     ‘ಸಮಾಜ ಭೈರವ’  ಪ್ರಸ್ತುತಕ್ಕೂ ಅನ್ವಯವಾಗುವಂಥ ಉತ್ತಮ ಕವಿತೆಗಳಲ್ಲಿ ಒಂದಾಗಿದೆ. ಇಲ್ಲಿ ಅಡಿಗರು ಸಮಾಜವನ್ನು ನಾಶಕರ್ತನಾದ ಭೈರವನಿಗೆ  ಹೋಲಿಸಿರುವುದು ವಿಶಿಷ್ಟವಾಗಿದೆ. ಸಮಾಜ  ಮಾನವನ ಏಳಿಗೆಗೆ ಪೂರಕವಾಗಿರಬೇಕೇ ವಿನಃ ಹೇಳಿಗೆಯಂತೆ ಕೆಲವೊಮ್ಮೆ ಭಯವನ್ನು ತರಿಸಬಾರದು.  ಮನುಷ್ಯ  ಸಾಮಾಜಿಕ ಪ್ರಾಣಿ ಹಾಗು ಸಂಘಜೀವಿ ಅವನ ಸಾಂಘಿಕ ಜೀವನದಲ್ಲಿ  ಅನೂಚಾನವಾಗಿ ರೂಢಿಗೆ ಬಂದ ಕೆಲವು ಸಂಪ್ರದಾಯಗಳು ಕಟ್ಟು ಕಟ್ಟಳೆಗಳು ಇರುವುದು ಸತ್ಯ . ಆದರೆ ಅವುಗಳನ್ನು ಸಾಮಾಜಿಕರ  ಇಚ್ಛೆಯ ವಿರುದ್ಧ ಬಲವಂತವಾಗಿ ಹೇರುವುದು  ತಪ್ಪು . ಆ ಹೇರಿಕೆಯ ಸ್ವರೂಪವನ್ನೇ  ಅಡಿಗರು  ಇಲ್ಲಿ’’ಭೈರವ” ಎಂದಿರುವುದು. ವ್ಯಕ್ತಿ ಸ್ವಾತಂತ್ರ್ಯವನ್ನು , ವ್ಯಕ್ತಿ  ವಿಶಿಷ್ಟತೆಯನ್ನೂ ಪ್ರತಿಪಾದಿಸುವ ಈ ಕವನದ  ಆಶಯವನ್ನು ಸಮಗ್ರವಾಗಿ  ಗ್ರಹಿಸಲು “ಆ ಹೆಸರೇ ಸೇರದೇನು ನಿನ್ನ ಯಶೋಮಾಲೆಗೆ?” ಎಂಬ ಸಾಲಿನೊಡನೆ ಅನ್ವಯಿಸಿಕೊಂಡು   ಅನುಸಂಧಾನಿಸಬೇಕಾಗಿದೆ, ವ್ಯಷ್ಟಿ ವಿಶೇಷಗಳಿಂದ, ಶೇಷಗಳಿಂದಲೇ ಸಮಾಜ ಭೈರವನ   ಅವಿರ್ಭಾವವಾಗಿದೆ. ಸಮಷ್ಟಿ ಅಳಿದರೂ ಸಮಾಜಭೈರವ ಮಾತ್ರ ಶಾಶ್ವತ  ಎಂಬ ಧ್ವನಿ ಇಲ್ಲಿ ಬರುತ್ತದೆ.

     “ನನ್ನ ಮನವ ನನಗೆ ಕೊಡು”   ಇದು ‘ಸಮಾಜಭೈರವ’ ಕವಿತೆಯ ಮೊದಲ ಸಾಲು . “ನನ್ನ”  ಎಂಬ ಪದವನ್ನು ಇಲ್ಲಿ  ಎಲ್ಲಾ ಸಾಮಾಜಿಕರನ್ನು ಒಟ್ಟುಗೂಡಿಸಿಯೇ ಸಮಷ್ಟಿಯ  ಅರ್ಥದಲ್ಲಿ ಸಮಾಜಭೈರವನನ್ನು  ಸಮಷ್ಟಿಯ ವಿನಾಶಕಾರಕ ಶಕ್ತಿ  ಎಂದೇ ಇಲ್ಲಿ  ಅಡಿಗರು ಹೇಳಿದ್ದಾರೆ.    ಆ ಶಕ್ತಿಯಲ್ಲಿ  ಅಂದರೆ ಸಮಾಜಭೈರವನಲ್ಲಿ ಕವಿ ನನಗೆ ಬೇಕಾದದ್ದನ್ನು ನೀನು ಕೊಡು, ನನ್ನ  ಬದುಕಿನ ಹಸೆಯಲ್ಲಿ ನೀನು ಇಣುಕಬೇಡ,  ನನ್ನ  ಈ ಮನೋಭೂಮಿಕೆಯಲ್ಲಿ ಅಂತರ್ಗತವಾಗಿರುವ ನನ್ನ  ಸ್ವಗತಗಳು  ವಾಸ್ತವವಾಗಿಯೂ ಲಹರಿಯಾಗಿಯೂ ಹರಿಯಲಿ ಅದನ್ನು ನಿಯಂತ್ರಿಸಬೇಡ  ನನ್ನ ಅವಕಾಶಗಳಿಗೆ  ನೀನು ನನೆಯಾಗಬೇಡ  ಬಿಟ್ಟುಬಿಡು ದಾರಿಯನ್ನು    ಎಂಬುದನ್ನು,ದೈನ್ಯವಾಗಿ ಹೇಳದೆ ದರ್ಪದಿಂದ  ಆರ್ಭಟಿಸಿಯೂ ಕೇಳದೆ  ನಿಷ್ಟುರವಾಗಿಯೇ ಅದೂ  ಕಟುವಲ್ಲದ ಗಾಂಭೀರ್ಯ ಹಾಗು ಮೃದುಹಾಸದಲ್ಲಿ   ನಗೆ,ಜಗ, ಮನ ಎಂಬ ಮೂರು ಪದಗಳ ಮೂಲಕ ಕೇಳಿರುವುದು ಅವರ ಸೌಧರ್ಮಿಕೆಯನ್ನು ಸೂಚಿಸುತ್ತದೆ.

    ಸಮಾಜದ ಹಿಡಿತ ಇಲ್ಲಿ ಅಡಿಗರಿಗೆ ಬಂಗಾರದ ಸಂಕೋಲೆಯಂತೆ ಕಂಡಿದೆ.  ಆ ಭಾವವನ್ನು   “ತೊಡಿಸ ಬರಲು ಬೇಡ ನಿನ್ನ ಹೊನ್ನ ಸಂಕೋಲೆಯ”  ಎಂಬ ಮಾತಿನ ಮೂಲಕ ಹೇಳಿದ್ದಾರೆ. ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸಿದರು ಎಂಬಂತೆ   ಹೊಗಳಿಯೇ ಬಂಗಾರದ ಸರಪಳಿ ತೊಡಿಸಿ ನನ್ನನ್ನು ಬಂಧಿಯಾಗಿಸಬೇಡ  ನನ್ನ ಭಾವಭಿತ್ತಿಗೆ ನಿನ್ನ  ನಿರ್ಧಾರವನ್ನು  ಹೇರುವುದು ನಿನ್ನ  ಬಟ್ಟೆಯನ್ನು  ನನಗೆ ಬಲವಂತವಾಗಿ ತೊಡಿಸಿದಂತೆ, ಹಾಗಾಗಿ ಬಲವಂತವಾಗಿ  ಯಾವುದನ್ನೂ ಹೇರಿ ನಂತರಾಗುವ ಅವ್ಯವಸ್ಥೆಯನ್ನು ಕಂಡು ಮರುಗುವ ನಿನ್ನ ಮಾತುಗಳು ನನಗೆ ದಯೆ ಎಂಬ ಸಾಲವನ್ನು ಹೊರಿಸಿದಂತೆ.  ನನಗೆ ಆ ಸಾಲದ ಹೊರೆ ಬೇಡ   ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.  ಇಲ್ಲಿ ಅಡಿಗರು ಸಾಮಾಜಿಕರನ್ನು ಸ್ವಹಂ ಇಲ್ಲದ ಸ್ವಾಭಿಮಾನಿಗಳಂತೆ  ಕಂಡಿರುವುದು ವಿಶೇಷ.  ಹಾಡು- ಪಾಡು, ಕತೆ- ವ್ಯಥೆಗಳಲ್ಲಿ  ಮೂಗು ತೂರಿಸುವ  ಸಮಾಜಭೈರವನ  ಅಧಿಕಪ್ರಸಂಗವನ್ನು  ಇಲ್ಲಿ ಧಿಕ್ಕರಿಸಿದ್ದಾರೆ.

    ಸಮಾಜದಲ್ಲಿ ಇರುವ ಮೂಢನಂಬಿಕೆ ಇಲ್ಲಿ ಕವಿಗೆ ಬಿಕ್ಕಟ್ಟು ಅನ್ನಿಸಿದೆ. ಅಂಥ  ಇಕ್ಕಟ್ಟಿನ ಹಂದರವನ್ನು ಆಕರ್ಷಣೀಯವಾಗಿ  ನಯವಾಗಿ ಹೆಣೆಯದಿರು  ಸಾಮಾಜಿಕರನ್ನು ಉಪಾಯದಲ್ಲಿ ಅದರಲ್ಲಿ ಸಿಕ್ಕು ತೊಳಲುವಂತೆ ಮಾಡದಿರು . ಇಹಲೋಕ ಪರಲೋಕವೆಂಬ ಮಾತೇ ಬೇಡ  ನೋಡದ ಪರಲೋಕದ ಆಕಾಂಕ್ಷೆಗೆ  ಇರುವ ಬನದುಕನ್ನು ವ್ಯರ್ಥಮಾಡಬೇಕೆ?  ಇಂಥ ನಯವಾದ  ದಿಗ್ಬಂಧಗಳ ಹೇರಿಕೆಯನ್ನು ನಿಲ್ಲಿಸಿಬಿಡು. ಮೊದಲಿ ಇರುವ ಈ ಲೋಕದ ಬದುಕಲ್ಲಿ ಅವರವರ  ಇಚ್ಛೆಯಂತೆ ಬದುಕಬಿಡು ಎನ್ನುತ್ತಾರೆ.  “ಬಿಟ್ಟು ಬಿಡು ನನ್ನ ಮಾತ್ರ ನನ್ನೆದೆಯ ನಚ್ಚಿಗೆ:”  ಎಂಬಲ್ಲಿ ಸಂಪ್ರದಾಯ ಮತ್ತು ಮೌಢ್ಯತೆಯ ಬಲೆಯಲ್ಲಿ  ಸಮಷ್ಟಿಯನ್ನು ಬಂಧಿಸದಿರು  ಎಂದಿದ್ದಾರೆ. ಈ ಸಾಲುಗಳಲ್ಲಿ ಸ್ವೇಚ್ಛೇ ಇರಬೇಕು ಸ್ಚೇಚ್ಛಾರವಲ್ಲ ಎಂಬ ಸೂಕ್ಷ್ಮವೂ     ಸುಳಿ ಮಿಂಚಿನಂತೆ ಮಾಯವಾಗುತ್ತದೆ.  ಆದ್ದರಿಂದಲೇ “ಎದೆಯ ನಚ್ಚಿಗೆ” ಮೊದಲಾದ ಪದ ಬಳಸುತ್ತಾರೆ.  ಹಾಗೊಂದು ವೇಳೆ ಅವರರಿಗೆ ಸ್ವೇಚ್ಛಾಚಾರದ  ಅಹಂ ಇದ್ದಿದ್ದರೆ  “ಎದೆಯ ಕೆಚ್ಚಿಗೆ” ಎನ್ನುತ್ತಿದ್ದರೇನೋ?….. ಅನುಭವಗಳ  ನೈಜತೆ, ತೀವ್ರತೆ, ಭಾವಗಳ ನಾವೀನ್ಯತೆ,ಶಬ್ದಗಳ ಸೌಂದರ್ಯ ಮತ್ತು ಸಾಮರ್ಥ್ಯದಿಂದ ಅಡಿಗರ ಕವಿತೆಗಳು ಯಾವತ್ತೂ ಕಳೆಗಟ್ಟುತ್ತವೆ.

    ವಿಶ್ವಮಾನವತೆಯೂ ಇಲ್ಲಿದೆ

    ಕುವೆಂಪು ಹೇಳುವ “ವಿಶ್ವಮಾನವತೆಯೂ ಇಲ್ಲಿದೆ. “ಕಟ್ಟುವೆವು ನಾವು ಹೊಸ ನಾಡೊಂದನು” ಎಂಬ ಅವರದೇ ಮಾತಿನಂತೆ ಇಲ್ಲಿ ಮನಸ್ಸು ಅನ್ನುವ ಮಲ್ಲಿಗೆ   ಪಾತಾಳದ ಅಂಚಿನಿಂದ ದಿಗಂತದಾಚೆಗೂ ಮುಳುಗಿ , ತೇಲಿ ವಿಭ್ರಮಿಸಬೇಕು  ತಾರೆಗಳ ಲೋಕವನ್ನೂ ಇಣುಕಾಡಿ   ಸೌಸವ ಬೀರಿ  ಅದರ ಒಳಗುಟ್ಟನ್ನು ಅರಿತುಬರಬೇಕು ಬ  ಎಂಬ ಹಂಬಲವನ್ನು  ಇಲ್ಲಿ ಉತ್ಕಟವಾಗಿ ತೋರಿಸಿದ್ದಾರೆ.   ಅಡಿಗರ ಅಡಿಗಡಿಯ ವಿಶಾಲ ಚಿಂತ ನೆಯನ್ನು ಇಲ್ಲಿ ನೋಡಬಹುದು.  ಆದರ ಇಲ್ಲಿ  ಸಮಾಜಭೈರವ ಅಂಥ ಆಸೆಗಳಿಗೆ  ಆಘಾತವನ್ನು ಉಂಟುಮಾಡುತ್ತಾನೆ ಎಂಬ ವಿಷಾದ ವ್ಯಕ್ತ ಪಡಿಸಿದ್ದಾರೆ. ಇಷ್ಟ್ಟಾದರೂ ಸಮಾಜಭೈರವನ ಬಗ್ಗೆ ಕಿಂಚಿತ್ ದುರಾಲೋಚನೆ ಮಾಡದೆ  ತಾಳ್ಮೆ ವಹಿಸಿ  ಸಮಾಜಿಕರಿಗೂ ವಿವೇಕಯುತರಾಗಬೇಕು ಎನ್ನುತ್ತಾರೆ.  “ನೀರಗುಳ್ಳೆ ಕುಣಿದು ಕುಣಿದು ಒಡೆಯಲಿ” ಎಂಬ ಮಾತು ಓದುಗರನ್ನು ಅರ್ಥಧ್ವನಿಯಲ್ಲಿ ಬಂಧಿಗಳನ್ನಾಗಿಸುತ್ತದೆ.  ಬದುಕು ಮೂರು ನಿಮಿಷವೋ? ನೂರು ವರುಷವೋ ? ಆದರೆ ಬದುಕು ಮಾತ್ರ ಅಮೂಲ್ಯ ಅಂಥ ಬದುಕಿನ  ಸವಿಯನ್ನು ಇಂಚಿಂಚಾಗಿ ಅನುಭವಿಸಬೇಕು. ಬದುಕೆಂಬ ಬಣ್ಣದೋಕುಳಿಯಲ್ಲಿ ನಾನು ಮಿಂದೇಳಬೇಕು ಪ್ರತಿಬಣ್ಣದಲ್ಲೂ  ನಾನು ಹೇಗೆ ಕಾಣಬಲ್ಲೆ ಎಂಬ ಕುತೂಹಲ ಅಡಿಗರಿಗೆ ಇದೆ ಹಾಗಾಗಿ ಅದನ್ನು ನೋಡಿಯೇ ಸಿದ್ಧ ಎಂಬ ಸಂಕಲ್ಪವನ್ನು ಹೊಂದಿದ್ದಾರೆ. . ಅಂದರೆ ಬದುಕಿನ ರಸಘಟ್ಠಗಳನ್ನು  ಅನುಭವಿಸಿಯೇ ಸಿದ್ಧ ಅದಕ್ಕೆ ಸಮಾಜ ಭೈರವ ನೀನು ಕೊಡಲಿ  ಪೆಟ್ಟಾಗದಿರು ಎನ್ನುತ್ತಾರೆ.

      “ಬಂದ ಯಾತ್ರಿ ನಿಲ್ಲಲಾರ”  ಎಂಬ ಪದಗಳ ಮೂಲಕ  ಅಡಿಗರು ಅಧ್ಯಾತ್ಮದ ಹೊಸ್ತಿಲಲ್ಲಿ ನಿಂತು ಇಲ್ಲಿ ಬರುವ ಸಾಮಾಜಿಕರು ಅನ್ನುವ ಬಾವ ಜೀವಿಗಳು ಪ್ರಪಂಚದ ನಿತ್ಯ ವಾಸಿಗಳಲ್ಲ . ತಮ್ಮ ಬಾಳ್ವೆ ಎಂಬ ಯಾತ್ರೆ ಮುಗಿದ ನಂತರ ಇಲ್ಲಿ  ಅರೆಕ್ಷಣವೂ ನಿಲ್ಲರು. ಅಂಥ ನಶ್ವರ ಬದುಕಲ್ಲಿ  ನಿನ್ನದೇನು ತಗಾದೆ ಬುಡು ದಾರಿಬಿಡು ಸಮಾಜ  ಭೈರವ ಮತ್ತೆ ಅಡ್ಡಿ ಮಾಡಬೇಡ ಎನ್ನುತ್ತಾರೆ.ಸಮಾಜ ಶಾಶ್ವತವೇ ವಿನಃ  ಸಾಮಾಜಿಕ  ಅಲ್ಲ ಎನ್ನುತ್ತಾರೆ.

     ಸಾಮಾಜಿಕ ರಾಜಕೀಯ, ಆರ್ಥಿಕ , ಬೌದ್ಧಿಕ, ,  ಕೆಲವೊಮ್ಮೆ ಸಾಂಸ್ಕೃತಿಕ  ಶಕ್ತಿಗಳು  ಮಾನವನನ್ನು  ಶೋಷಣೆಗೆ ಗುರಿ ಮಾಡಬಾರದು.  ಒಂದು ವೇಳೆ ಅದು ಹಿಡಿತಕ್ಕೆ ಬಂದರೆ ಅದು ಸಮಾಜ ಭೈರವನ  ಅಸ್ತ್ತಿತ್ವದ ಪ್ರತೀಕ ಎನ್ನುತ್ತಾರೆ. ನಮ್ಮದು ಹೇಗಿದ್ದರೂ ಪ್ರಜಾಪ್ರಭುತ್ವ ರಾಷ್ಟç ಹಾಗಾಗಿ ವ್ಯಕ್ತಿಗತ ಮಾನ ಸಮ್ಮಾನಕ್ಕೂ ಆದ್ಯತೆ ಇರಲಿ ಎಂಬುದು ಕವಿಯ ಪ್ರಧಾನ ಆಶಯವಾಗಿದೆ

     ಅಣುವಿನಲ್ಲೂ ಆ ಮಹತ್ತು ಬಿತ್ತದಂತೆ ಮಲಗಿದೆ ಅಣುವೆಂದು ನಿರ್ಲಕ್ಷ್ಯ ಬೇಡ  ಅಣುವಿನಲ್ಲೂ ಲೋಕವನ್ನುದ್ಧರಿಸಬಹುದಾದ  ಚೈತನ್ಯ ಶಕ್ತಿ  ಇದ್ದೇ ಇರುತ್ತದೆ. ಅಂಥ ಗೌಣವಾದ ಶಕ್ತಿ  ಗಾಳಿ , ಮಳೆ ಬೆಳಕಿಗೆ ತೆರವಾದರೆ  ಅದರಲ್ಲಿಯೂ ಸಮಷ್ಟಿಗೆ ಉಪಯೋಗವಾದೀತು ಎಂಬ ಸದಾಶಯವನ್ನು ವ್ಯಕ್ತಪಡಿಸಿ  ಅದರ ಶ್ರೇಯಸ್ಸಿನ ಲೆಖ್ಖಣಿಕೆ ನಿನ್ನ ಸಿವುಡಿಗೇ ಬರುತ್ತದೆ  ತತ್ಫಲವಾಗಿ  ಸಮಾಜಭೈರವ ಬಲವಂತ ದಯವಂತ ಅನ್ನುವ ಶ್ರೇಯಸ್ಸು ನಿನಗೇ ಲಭಿಸುತ್ತದೆ  ಎಂಬ ಸಂದೇಶವನ್ನೂ ಕೊಡುತ್ತಾರೆ.

    ಹುಲ್ಲಿಗಿಲ್ಲ, ಕಳ್ಳಿಗಿಲ್ಲ, ಹೂವಿಗೇಕೆ ಸೌಸವ ಎನ್ನಬೇಡ ಭೈರವ   ಎಲ್ಲವನ್ನು ಒಂದೇ ತಕ್ಕಡಿಗಿಟ್ಟು ತೂಗಲೂಬೇಡ  ಮನಸ್ಸು ಅನ್ನುವದು ಅಣುವೂ ಹೌದು ಅನಲವೂ ಹೌದು  ಹಾಗಾಗಿ ತಮಷ್ಟಕ್ಕೆ ತಮ್ಮ ತನವನ್ನು  ತೀರಿಸಿಕೊಂಡೇ ನಯಜವಾಗಿ ಯಾವುದೇ ಕೃತ್ರಿಮತೆ ಇಲ್ಲದಂತೆ ಬದುಕುವ ಅವಕಾಶವಿದೆ ಅದಕ್ಕೆ ಮುಳ್ಳುಗಂಟಿಯಾಗಬೇಡ. ಆ ಮನಸ್ಸೆಂಬ ಹೂವನ್ನು ಪದೇ ಪದೇ ಹಿಂಸಿಸಿ ಕಾಂತಿಯನ್ನು ಮಸುಕು ಮಾಡಬೇಡ ಎಂದು  ಪ್ರತಿಭಟಿಸುತ್ತಾರೆ.

    ಅನುಭವ ಶೂನ್ಯವಾಗಿ ಬಂದ ಮನ ತನುವನ್ನು ಇಲ್ಲಿ ಒಗ್ಗಿಸಿಕೊಂಡು, ಅನುಭವವನ್ನು  ಒಳಗುಮಾಡಿಕೊಂಡು  ಕಡೆಗೊಮ್ಮೆ ಖಾಲಿ ಒಡಲನ್ನು  ಬಿಟ್ಟು ಅನುಭವವನ್ನು ಮಾತ್ರ ಹೊತ್ತು   ನಿರ್ಗಮಿಸುವ ತನಕ ನೀನು ಯಾಜಮಾನ್ಯ ತೋರಿಸಬೇಢ ಸ್ವಚ್ಛಂದಕ್ಕೆ ಬಿಟ್ಟು ಬಿಡು ಎನ್ನುತ್ತಾರೆ. .  ಚಿಂತನಶೀಲತೆ , ಸಂಕೀರ್ಣತೆ ,  ಭ್ರಷ್ಟತೆಯ ಕುರಿತ ಆಕ್ರೋಶ ವಿಡಂಬನೆ,  ಅಡಿಗರ ಈ ಪದ್ಯದ ವಿಶೇಷತೆ. ಕವಿತೆಯನ್ನು ಓದುವಾಗ    ನಿರಾಶೆ ಯಿಂದ  ಅಡಿಗರು ಮೆತ್ತಗಾದರೇನೋ  ಅನ್ನುವಷ್ಟರಲ್ಲಿ ಮರುಸಾಲಿನಲ್ಲಿಯೇ  ಬತ್ತದ ಜೀವನೋತ್ಸಾಹವನ್ನು ತೋರಿಸಿ ಓದುಗನನ್ನೂ ಉತ್ಸಾಹಿಯಾಗಿಸುತ್ತಾರೆ. ಪು.ತಿ.ನರಸಿಂಹಾಚಾರ್  ಅವರು ಅಡಿಗರ  ಕಾವ್ಯವನ್ನು “ಶಬ್ದದೊಳಗಣ ಶಬ್ದದಂತೆ” ಎನ್ನುತ್ತಾರೆ.  ಕಾವ್ಯದ ಆತ್ಮ ಕವನದಲ್ಲಿಯೇ ಹುದುಗಿ ಹೋಗಿರುತ್ತದೆ. ಅರ್ಥಸಹಿತವಾದ  ಪದಸಮೂಹದಿಂದ ಕಾವ್ಯದ ಆತ್ಮವನ್ನು ದರ್ಶಿಸುವ ಕೌಶಲ್ಯ ಮಾಂತ್ರಿಕ ಎನ್ನಬಹುದು.

    ಯಾವುದೇ ಕಟ್ಟು ಪಾಡಿಗೆ ಒಳಗಾಗದೆ  ಬದುಕುವ ಹಂಬಲ ಕವಿಯಲ್ಲಿದೆ.  ಅಪ್ಪಟ ಪ್ರಜಾಪ್ರಭುತ್ವ ವಾದಿಯಾಗಿ ಸ್ವಾತಂತ್ರ್ಯವನ್ನು  ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆಯನ್ನು ಇಲ್ಲಿ   ನಯವಾಗಿಯೇ ಧಿಕ್ಕರಿಸಿದ್ದಾರೆ ಎನ್ನಬಹುದು. ವೈ ಎನ್ಕೇಯವರು  ಅಡಿಗರ ಪದ್ಯವನ್ನು ಒಮ್ಮೆಓದಿ   “ಅಡಿಗ ಫಾರ್ ಆಲ್ ಅಕೇಷನ್ಸ್” ಎಂದಿದ್ದು ಅಕ್ಷರಶಃ ಸತ್ಯವಾಗಿದೆ. ಹೌದು  ಎಲ್ಲಾ ಸಂದರ್ಭಗಳಿಗೂ ಅಡಿಗರು ಅಡಿಗಡಿಗೆ ಇದ್ದಾರೆ.   ಒಟ್ಟಾರೆಯಾಗಿ  ಗೋಪಾಲಕೃಷ್ಣ ಅಡಿಗರು  ಇಲ್ಲಿ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಆಯಾಮಗಳಲ್ಲಿ   ಸಮಾಜವನ್ನು ನೋಡಿ ಜವಾಬ್ದಾರಿಯನ್ನು ಓರ್ವ ಕವಿಯಾಗಿ ನಿಭಾಯಿಸಿದ್ದಾರೆ  ಎಂದರೆ ಅತಿಶಯೋಕ್ತಿಯಲ್ಲ. 

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    spot_img

    More articles

    2 COMMENTS

    1. ಬಹಳ ಸುಂದರವಾದ ಬರಹ ಸುಮಾ ವೀಣಾ ಅವರೆ. ಅಡಿಗರು ಕನ್ನಡದ ವಿಶಿಷ್ಟ ಮತ್ತು ವೈಚಾರಿಕ ಕವಿಗಳು.
      ವಿ ಈ ವಿಶ್ಲೇಷಣಾತ್ಮಕ ಬರಹದೊಂದಿಗೆ ಅವರ ಕೆಲವು ಪೂರ್ಣ ಕವನಗಳನ್ನು ಹಂಚಿಕೊಳ್ಳಬಹುದಿತ್ತೇನೋ.
      ಇಂತಹ ಬರಹಗಳಿಗೆ ಸ್ವಾಗತ.

    LEAVE A REPLY

    Please enter your comment!
    Please enter your name here

    Latest article

    error: Content is protected !!