BENGALURU FEB 18
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ ಎರಡು ಮತ್ತು ಮೂರನೇ ವರದಿಗಳನ್ನು ಆಯೋಗದ ಅಧ್ಯಕ್ಷರಾದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಸಲ್ಲಿಸಿದರು.
ವರದಿಯ ಮುಖ್ಯಾಂಶಗಳ ಮಾಹಿತಿ ಪಡೆದ ಮುಖ್ಯಮಂತ್ರಿಗಳು ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಪರಿಶೀಲಿಸಿ, ಕೂಡಲೇ ಜಾರಿಗೊಳಿಸಲು ಸಾಧ್ಯವಿರುವ ಅಂಶಗಳನ್ನು ಅನುಷ್ಠಾನಕ್ಕೆ ತರಲು ಕ್ರಮ ವಹಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಇಂದು ಸಲ್ಲಿಸಿದ ವರದಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಇಂಧನ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಒಳಾಡಳಿತ ಇಲಾಖೆಗಳಿಗೆ ಸಂಬಂಧಿಸಿದ ಶಿಫಾರಸುಗಳನ್ನು ಒಳಗೊಂಡಿದೆ.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಮುಖ ಶಿಫಾರಸುಗಳು
- ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ, ನಿಗಮ ಮಂಡಳಿ ಇತ್ಯಾದಿಗಳಲ್ಲಿ ಆಗುವ ಅನುಪಯುಕ್ತ ವೆಚ್ಚಗಳನ್ನು ತಡೆಯುವ ಕುರಿತು ಸಲಹೆ ನೀಡಲು ಅನುಪಯುಕ್ತ ವೆಚ್ಚ ತಡೆ ಕಾರ್ಯಪಡೆಯನ್ನು ರಚಿಸಬಹುದು.
- ಭಾರತ ಸರ್ಕಾರವು ತನ್ನ ಸಚಿವಾಲಯಗಳಲ್ಲಿ ಯಾವುದೇ ಕಡತವು ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದು ಎಂದು ನಿರ್ಧರಿಸಿರುವಂತೆ ರಾಜ್ಯ ಸರ್ಕಾರವು ಸಹ ಸಚಿವಾಲಯದಲ್ಲಿ ಯಾವುದೇ ಇಲಾಖೆಯ ಕಡತಗಳು ಮೂರು ಅಥವಾ ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದೆಂದು ನಿರ್ಧಾರ ತೆಗೆದುಕೊಳ್ಳಬಹುದು. ಪ್ರಸ್ತುತ ರಾಜ್ಯದಲ್ಲಿ ಕಡತಗಳು 5-10 ಹಂತಗಳಲ್ಲಿ ಚಲಾವಣೆಯಾಗುತ್ತಿವೆ.
- ಎಲ್ಲ ಇಲಾಖೆಗಳ ಸೂಚಿಸಿದ ಗ್ರೂಪ್-ಸಿ ಮತ್ತು ಡಿ ನೌಕರರ ವರ್ಗಾವಣೆಯನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಮಾಡಲು ಕಾಯ್ದೆ ಜಾರಿಗೆ ತರಬಹುದು.
- ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಎಲ್ಲ ಅಂಚೆ ಕಚೇರಿಗಳಲ್ಲಿ ರಾಜ್ಯ ಸರ್ಕಾರದ ಸೇವೆಗಳನ್ನು ಒದಗಿಸಲು ಬಳಸಿಕೊಳ್ಳಬಹುದು. ಪ್ರಸ್ತುತ ಅಂಚೆ ಕಚೇರಿಗಳು ಭಾರತ ಸರ್ಕಾರದ ಸೇವೆಗಳನ್ನು ಒದಗಿಸುತ್ತಿವೆ.
- ಗ್ರಾಮ ಮಟ್ಟದ ಉದ್ಯಮಿಗಳಿಂದ(VLE) ಸ್ಥಾಪಿಸಲಾದ ಸಾಮಾನ್ಯ ಸೇವಾ ಕೇಂದ್ರಗಳನ್ನು (CSC) ರಾಜ್ಯವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವುದರ ಮೂಲಕ ಸರ್ಕಾರಿ ಮತ್ತು ಸರ್ಕಾರೇತರ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲು VLE ಗಳನ್ನು ʼಜನಸೇವಕರಾಗಿʼ ಬಳಸಿಕೊಳ್ಳಬಹುದು.
- ಜಿಲ್ಲಾಧಿಕಾರಿಯವರಿಗೆ ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರದ ಇಲಾಖೆಗಳಿಗೆ ನಾಲ್ಕು ಹೆಕ್ಟೇರ್‌ವರೆಗೆ ಮತ್ತು ಜಮೀನಿನ ಮೌಲ್ಯವು ರೂ.5 ಕೋಟಿ ಮೀರದ ಸರ್ಕಾರಿ ಜಮೀನನ್ನು ಪರಿವರ್ತನಾ ಶುಲ್ಕದ ವಿನಾಯಿತಿ ನೀಡಿ ಉಚಿತವಾಗಿ ಮಂಜೂರು ಮಾಡುವ ಹೆಚ್ಚಿನ ಅಧಿಕಾರವನ್ನು ಪ್ರತ್ಯಾಯೋಜಿಸಬಹುದು.
- ಸಾರ್ವಜನಿಕ ಉದ್ಯಮಗಳ ಇಲಾಖೆಯನ್ನು(DPE) ಆರ್ಥಿಕ ಇಲಾಖೆಯಲ್ಲಿ ವಿಲೀನಗೊಳಿಸಬಹುದು.
- ಭೂಸ್ವಾಧೀನಕ್ಕೆ ಪರಿಹಾರ ಧನದ ಪಾವತಿಯು ಕಾಲಮಿತಿಯದ್ದಾಗಿರಬೇಕು. ಕಾಲಮಿತಿಯಲ್ಲಿ ಪಾವತಿಸದಿದ್ದರೆ ವಿಳಂಬವಾದ ಅವಧಿಗೆ ಅನವಶ್ಯಕಾಗಿ ಹೆಚ್ಚುವರಿ ಪರಿಹಾರ ಧನವನ್ನು ಪಾವತಿಸಬೇಕಾಗುತ್ತದೆ ಹಾಗಾಗಿ ಇದನ್ನು ಭೂ ಕೋರಿಕೆ ಸಂಸ್ಥೆಗಳು ಮತ್ತು ಕಂದಾಯ ಇಲಾಖೆಯು ಸಕಾಲ ಸೇವೆಯಾಗಿ ಅಧಿಸೂಚಿಸಬೇಕು ಮತ್ತು ಪರಿಹಾರ ಧನವನ್ನು ಆಧಾರ್ ಬೇಸ್ಡ್ ಪಾವತಿ ಮಾಡುವಂತೆ ಪ್ರಕ್ರಿಯೆಗೊಳಿಸಬೇಕು ಇದರಿಂದ ಚೆಕ್ ಮೂಲಕ ಪರಿಹಾರ ಧನ ಪಾವತಿಯಲ್ಲಾಗುವ ವಂಚನೆಯನ್ನು ತಡೆಗಟ್ಟಬಹುದು.
- ಅಧಿಕಾರಿಗಳ ಮತ್ತು ಸಿಬ್ಬಂದಿವರ್ಗದವರ ಕಾರ್ಯನಿರ್ವಹಣೆಯನ್ನುಮೌಲ್ಯಮಾಪನ ಮಾಡುವ ನಮೂನೆಯನ್ನು ಪರಿಷ್ಕರಿಸಿದ್ದು ಅದರಂತೆ ಕ್ರಮವಹಿಸಬಹುದು.
- ಸಾಧನೆ (ಕಾರ್ಯಕ್ಷಮತೆ ನಿರ್ವಹಣೆ ಮತ್ತು ಮೌಲ್ಯಮಾಪನ ಪದ್ದತಿ) ಇಲಾಖೆಗಳ ಕಾರ್ಯಕ್ಷಮತೆ ನಿರ್ವಹಣೆ ಮತ್ತು ಮೌಲ್ಯಮಾಪನ ಪದ್ದತಿಯನ್ನು ಜಾರಿಗೊಳಿಸಿ ಇಲಾಖೆಗಳ ಮೌಲ್ಯಮಾಪನ ಮಾಡಬಹುದು.
- ರಾಷ್ಟ್ರಮಟ್ಟದಲ್ಲಿ ರಾಜ್ಯದ ಸೂಚ್ಯಾಂಕವನ್ನು ಸುಧಾರಿಸಲು ಬಹು ವಲಯ, ವಲಯ ಸೂಚ್ಯಂಕಗಳ ವಿಶ್ಲೇಷಣೆ, ಸುಧಾರಣೆ, ಮೇಲ್ವಿಚಾರಣೆ ಮಾಡಲು ಸಮಿತಿ ರಚಿಸಲು ಕ್ರಮ ತೆಗೆದುಕೊಳ್ಳಬಹಬುದು ಮತ್ತು ಇವೇ ಸೂಚ್ಯಂಕಗಳ ಆಧಾರದ ಮೇಲೆ ಜಿಲ್ಲಾ ಮತ್ತು ತಾಲ್ಲೂಕುಗಳ ಶ್ರೇಣಿಗಳನ್ನು ಪ್ರಕಟಿಸುವುದು.
- ಅತಿ ಹೆಚ್ಚಿನ ಮೌಲ್ಯದ ಟೆಂಡರ್‌ಗಳನ್ನು ಕರೆಯುವ ಮೊದಲು ಕರಡು ಬಿಡ್ ಡ್ಯಾಕ್ಯುಮೆಂಟ್‌ನ್ನು ಇ-ಪ್ರೊಕ್ಯುರ್‌ಮೆಂಟ್ ವೆಬ್‌ಸೈಟ್ ಮೂಲಕ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬಹುದು. ಆಕ್ಷೇಪಣೆಗಳಿಗೆ ಇಲಾಖೆಗಳು ತಮ್ಮ ನಿರ್ಧಾರಗಳನ್ನು ದಾಖಲಿಸಬೇಕು ನಂತರವೇ ಬಿಡ್ ಡ್ಯಾಕ್ಯುಮೆಂಟ್‌ನ್ನು ಅಂತಿಮಗೊಳಿಸಬೇಕು.
- ಎಲ್ಲ ಇಲಾಖೆಗಳು ಸಿಬ್ಬಂದಿಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನಿಯೋಜಿಸಿಕೊಳ್ಳುತ್ತಿದ್ದು, ನಿಯೋಜಿಸಿಕೊಳ್ಳುವಾಗ ಯಾವುದೇ ರೀತಿಯ ಮೀಸಲಾತಿ ಪದ್ದತಿಯನ್ನು ಅಳವಡಿಸಿಕೊಳ್ಳದೆ ಇರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಅನಾನುಕೂಲವಾಗುತ್ತಿರುವುದು ಕಂಡುಬಂದಿರುತ್ತದೆ. ಸರ್ಕಾರವು ಹೊರ ಗುತ್ತಿಗೆ ಮೇಲೆ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಅಗತ್ಯ ಪ್ರಾತಿನಿಧ್ಯ ನೀಡಿ ನಿಯೋಜಿಸುವಂತೆ ಸೂಕ್ತ ಆದೇಶವನ್ನು ಹೊರಡಿಸಬಹುದು.
- ವಿವಿಧ ಕಚೇರಿಗಳಲ್ಲಿ ಕಾರ್ಯಭಾರದ ಆದಾರದ ಮೇಲೆ ಹುದ್ದೆಗಳ ಸ್ಥಳಾಂತರ ಮಾಡಬಹುದು. ಉದಾ: ತಹಶೀಲ್ದಾರ್ ಕಚೇರಿಗಳಲ್ಲಿನ ಗ್ರೂಪ್-ಸಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಹಾಗೂ ಪೋಲೀಸ್ ಕಾನ್ಸ್‌ಟೇಬಲ್‌ಗಳು ಇತ್ಯಾದಿ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಶಿಫಾರಸ್ಸುಗಳು
- ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಮತ್ತು ಕರ್ನಾಟಕ ಗ್ರಾಮೀಣಾಭಿವೃದ್ಧಿ ರಸ್ತೆ ಅಭಿವೃದ್ಧಿ ಸಂಸ್ಥಯನ್ನು ವಿಲೀನಗೊಳಿಸಬಹುದು.
- ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು ಇಂಧನ ಇಲಾಖೆಗೆ ವರ್ಗಾಯಿಸುವುದು ನಂತರ ಇಂಧನ ಇಲಾಖೆಯ ಆಡಳಿತದ ನಿಯಂತ್ರಣದಲ್ಲಿರಿಸಿ ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮದ ಜೊತೆ ವಿಲೀನ ಮಾಡಬಹುದು.
- ಬಿಬಿಎಂಪಿಯಲ್ಲಿ ಅನಧಿಕೃತ, ಅಕ್ರಮ ನಿವೇಶನಗಳು ಮತ್ತು ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡುಪಟ್ಟು ದಂಡವನ್ನು ಸಂಗ್ರಹಿಸುವಂತೆ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಗ್ರಾಮ ಪಂಚಾಯತ್‌ಗಳು ಅಕ್ರಮ ನಿವೇಶನ ಹಾಗೂ ಕಟ್ಟಡಗಳಿಗೆ ಆಸ್ತಿ ತೆರಿಗೆಯ ಎರಡು ಪಟ್ಟು ದಂಡವನ್ನು ವಿಧಿಸಲು ಅನೂಕೂಲವಾಗುವಂತೆ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993, ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ ಬಜೆಟ್ ಮತ್ತು ಲೆಕ್ಕ ಪತ್ರ ನಿಯಮಗಳು) 2006 ಗೆ ತಿದ್ದುಪಡಿ ಮಾಡಬಹುದು.
- ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಮತ್ತು ನಗರ ಸ್ಥಳೀಯ ಸಂಸ್ಥಗಳ ಮುಖ್ಯಾಧಿಕಾರಿಗಳನ್ನು ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ನೋಂದಣಿ ಪ್ರಾಧಿಕಾರಗಳನ್ನಾಗಿ ಅಧಿಸೂಚಿಸಬೇಕು. ಗ್ರಾಮ ಪಂಚಾಯತ್‌ಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಮಾಜಿಕ ಬದ್ರತಾ ಪಿಂಚಣಿಗಳ ಅರ್ಜಿ ಪಡೆದು ಶಿಫಾರಸು ಮಾಡುವ ಅಧಿಕಾರ ನೀಡಬಹುದು.
- ಬಿಡಿಎ, ನಗರಾಭಿವೃದ್ಧಿ ಪ್ರಾಧಿಕಾರಗಳು, ಕೆಹೆಚ್‌ಬಿ ಮತ್ತು ಕೆಐಎಡಿಬಿಯಂತಹ ಸಂಸ್ಥೆಗಳು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸದರಿ ಪ್ರಾಧಿಕಾರಗಳು ಮಂಜೂರು ಮಾಡಿದ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ಆಸ್ತಿ ತೆರಿಗೆಯನ್ನು ಸಂಗ್ರಹಿಸುವದು ಗ್ರಾಮ ಪಂಚಾಯತ್‌ಗಳ ಬದಲಾಗಿ ಸದರಿ ಪ್ರಾಧಿಕಾರಗಳು ಮಾಡುತ್ತಿದ್ದು ಇದರಿಂದ ಗ್ರಾ ಪಂ ಗಳು ಆಸ್ತಿ ತೆರಿಗೆ ಆದಾಯದಿಂದ ವಂಚಿತರಾಗುತ್ತಿವೆ ಆದುದರಿಂದ ಖಾತಾ ನಿರ್ವಹಣೆ, ತೆರಿಗೆ ಸಂಗ್ರಹವನ್ನು ಆಯಾ ಗ್ರಾಮ ಪಂಚಾಯತ್ ಗಳು ಮಾಡಬಹುದು.
- ಗ್ರಾಮ ಪಂಚಾಯತ್‌ಗಳ ವಿದ್ಯುತ್ ಬಿಲ್ ಮತ್ತು ಬಾಕಿಗಳನ್ನು ನಿರ್ವಹಿಸುವುದರ ಕುರಿತಂತೆ ಶಿಫಾರಸುಗಳು. 2021-22 ರಲ್ಲಿ ವಿದ್ಯುತ್ ಶುಲ್ಕಕ್ಕಾಗಿ ಎಲ್ಲಾ ಗ್ರಾಮ ಪಂಚಾಯತಿಗಳ ಒಟ್ಟು ವೆಚ್ಚ ರೂ.1725 ಕೋಟಿ ಹಾಗೂ ಎಸ್ಕಾಮ್ಸ್‌ಗಳಿಗೆ ಬರಬೇಕಾದ ಒಟ್ಟು ವಿದ್ಯತ್ ಬಿಲ್ ಬಾಕಿ ರೂ. 3993 ಕೋಟಿ.
ನಗರಾಭಿವೃದ್ಧಿ ಇಲಾಖೆ, ಮುಖ್ಯ ಶಿಫಾರಸ್ಸುಗಳು
- ಅಪರಾಧಗಳ ಸಂಯೋಜನೆಗಾಗಿ ಕೆಟಿಸಿಪಿ ಕಾಯಿದೆಯ ಸೆಕ್ಷನ್ 76 ಎಫ್ ಅಡಿಯಲ್ಲಿ ವಿಶೇಷ ಆದೇಶ ನಿಡುವುದರ ಮೂಲಕ ಬಿ-ಖಾತಾ ನಿವೇಶನಗಳನ್ನು ಭೂ ಪರಿವರ್ತನೆ ಶುಲ್ಕ ಹಾಗೂ ದಂಡ, ಯೋಜನಾ ಪ್ರಾಧಿಕಾರಕ್ಕೆ ಕಾಂಪೌಂಡಿಂಗ್ ಶುಲ್ಕ, ಕಟ್ಟಡ ಯೋಜನಾ ಮಂಜೂರಾತಿ ಶುಲ್ಕ ಹಾಗೂ ದಂಡ ಇತ್ಯಾದಿಗಳನ್ನು ಪಾವತಿಸಿಕೊಂಡು ಎ-ಖಾತಾಗಳಾಗಿ ಪರಿವರ್ತಿಸಬಹುದು.
- ಬಿಎಂಆರ್‌ಡಿಎ ಮತ್ತು ಬಿಡಿಎ ವಿಲೀನಗೊಳಿಸಲು ಬಿಡಿಎ ಕಾಯ್ದೆ ತಿದ್ದುಪಡಿ ಮಾಡಿ ಬಿಡಿಎ ಅನ್ನು ಬಿಎಂಅರ್‌ಡಿಎ ಆಗಿ ಪರಿವರ್ತಿಸಿ ಬಿಡಿಎ ಕಛೇರಿಗೆ ಸ್ಥಳಾಂತರಿಸಬಹುದು.
- 2400 ಚದರ ಅಡಿವರೆಗಿನ ನಿವೇಶನಗಳಲ್ಲಿ ಭೂ ಮಾಲೀಕರ ಸ್ವಯಂ ಘೋಷಣೆ ಮತ್ತು ಪ್ರಮಾಣೀಕರಣದ ಆದಾರದ ಮೇಲೆ ಆನ್‌ಲೈನ್‌ನಲ್ಲಿಯೇ ಶುಲ್ಕವನ್ನು ಪಾವತಿಸಿಕೊಂಡು ಕಟ್ಟಡ ಯೋಜನೆಗೆ ತಕ್ಷಣದಲ್ಲಿ ಮಂಜೂರಾತಿ ನೀಡಬಹುದು.
- ಬಿಬಿಎಂಪಿ ವ್ಯಾಪ್ತಿಯಲ್ಲಿ, ವಲಯಗಳಲ್ಲಿ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ, ಸಿಟಿ ಕಾರ್ಪೋರೇಷನ್‌ಗಳಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಬಹುದು.
- ಬಿಬಿಎಂಪಿಯಲ್ಲಿ ಬಿ-ಖಾತಾ, ಗ್ರಾಮ ಪಂಚಾಯತ್‌ಗಳಲ್ಲಿ 11-B ಇರುವಂತೆ ಸ್ಥಳೀಯ ನಗರ ಸಂಸ್ಥೆಗಳಲ್ಲಿ ಬಿ-ಖಾತಾಗಳನ್ನು ತೆರೆಯಲು ಬಿಬಿಎಂಪಿ ಕಾಯಿದೆಯ ಮಾದರಿಯಲ್ಲಿ ಕೆಎಂಸಿ ಕಾಯಿದೆ, ಕೆಎಂ ಕಾಯಿದೆಗಳಿಗೆ ಸೂಕ್ತ ತಿದ್ದುಪಡಿಗಳನ್ನು ಮಾಡಬಹುದು.
- ಕೆಎಂಸಿ ಕಾಯಿದೆ 1976 ಮತ್ತು ಕೆಎಂ ಕಾಯಿದೆ 1964 ರ ಅಡಿಯಲ್ಲಿ ವಿಧಿಸುವ ವಿವಿಧ ತೆರಿಗೆಗಳು ಮತ್ತು ದಂಡಗಳನ್ನು ಪ್ರಸಕ್ತ ಸಾಲಿಗೆ ಹಣದುಬ್ಬರ ಸೂಚ್ಯಂಕಕ್ಕೆ ಪರಿಷ್ಕರಿಸಬಹುದು. ಉದಾ: ಕೆಲವು ದರಗಳು 5 ರೂಪಾಯಿಯಿಂದ ವಿಧಿಸಲಾಗುತ್ತಿದೆ.
- 74 ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆಯನ್ವಯ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗ/ಾವಿ ಮುಂತಾದ ಮಹಾನಗರಗಳಿಗೆ ಮಹಾನಗರ ಯೋಜನಾ ಸಮಿತಿ ರಚನೆ ಮಾಡಬಹುದು.
- ಬಿಬಿಎಂಪಿಯ ಮುಖ್ಯ ಆಯುಕ್ತರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಮುಖ್ಯ ಆಯುಕ್ತರ ಕೆಲವು ಅಧಿಕಾರಗಳನ್ನು ಉದಾ: 2 ಕೋಟಿವರೆಗಿನ ಬಜೆಟ್ ಕಾಮಗಾರಿಗಳ ಅನುಮೋದನೆ, ವಲಯ ವ್ಯಾಪ್ತಿಯಲ್ಲಿ ಅಭಿಯಂತರರುಗಳ, ಸಿಬ್ಬಂದಿಗಳ ಹಾಗೂ ಗ್ರೂಪ್-ಸಿ ನೌಕರರ ವರ್ಗಾವಣೆ ಮುಂತಾದ ಅಧಿಕಾರಗಳನ್ನು ಪ್ರತ್ಯಾಯೋಜಿಸಿ ವಲಯ ಆಯುಕ್ತರುಗಳಿಗೆ ನೀಡಬಹುದು.
- ಅದೇ ರೀತಿಯಾಗಿ, ಆಯುಕ್ತರು ಬಿಡಿಎ ರವರ ಭೂ ಸ್ವಾಧೀನದ ಅಧಿಕಾರಗಳನ್ನು ಡೆಪ್ಯೂಟಿ ಕಮಿಷನರ್‌ರವರಿಗೆ, ನಿವೇಶನ ಸಂಬಂಧಿತ ಅಧಿಕಾರಗಳನ್ನು ಕಾರ್ಯದರ್ಶಿ, ಉಪಕಾರ್ಯದರ್ಶಿಗಳಿಗೆ, ರಜೆ ನಗದೀಕರಣ, ರಜೆ ಮಂಜೂರಾತಿ, ವೈದ್ಯಕೀಯ ಬಿಲ್ ಮಂಜೂರಾತಿ ಇತ್ಯಾದಿಗಳನ್ನು ಕಾರ್ಯದರ್ಶಿಗೆ, 1 ಲಕ್ಷದವರೆಗಿನ ಯುಟಿಲಿಟಿ ಬಿಲ್, ಆಕಸ್ಮಿಕ, ಜಾಹೀರಾತು ಬಿಲ್‌ಗಳ ಪಾವತಿಯನ್ನು ವಿಭಾಗ ಮುಖ್ಯಸ್ಥರಿಗೆ ಮುಂತಾದ ಅಧಿಕಾರಗಳ ಪ್ರತ್ಯಾಯೋಜನೆ ಮಾಡಬಹುದು.
ಇಂಧನ ಇಲಾಖೆಯ ಮುಖ್ಯ ಶಿಫಾರಸುಗಳು
- ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಬೋರ್‌ವೆಲ್‌ಗಳಿಗೆ ವಿದ್ಯುತ್ ಶಕ್ತಿ ಸಂಪರ್ಕಕ್ಕೆ ವಾಸ್ತವಿಕ ವೆಚ್ಚ ಸುಮಾರು 1.50 ಲಕ್ಷದಿಂದ ರೂ. 3.5 ಲಕ್ಷಗಳಾಗಿದ್ದು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ಕೇವಲ ರೂ.50,000 ಗಳನ್ನು ಪಾವತಿಸಲಾಗುತ್ತಿದೆ ಎಂದು ವರದಿಯಾಗಿದೆ. ವಿದ್ಯುತ್ ಶಕ್ತಿ ಸಂಪರ್ಕದ ನೈಜ ವೆಚ್ಚವನ್ನು ಮರುಪಾವತಿಸಲು ಅಥವಾ ನಿರ್ದಿಷ್ಟ ಮೊತ್ತವನ್ನು ಹೆಚ್ಚಿಸಲು ಕ್ರಮವನ್ನು ಪ್ರಾರಂಭಿಸಬಹುದು.
- ಸುಮಾರು 75% ರಿಂದ 80% ಹೊಸ ಸಂಪರ್ಕಗಳು 5 KW ಗಿಂತ ಕಡಿಮೆಯಿವೆ. ಅಂತಹ ಸಂಪರ್ಕಗಳಿಗೆ ವಿದ್ಯುತ್ ಮಂಜೂರಾತಿ ನೀಡುವ ಅಧಿಕಾರವನ್ನು ಸಂಬಂಧಪಟ್ಟ ಶಾಖಾಧಿಕಾರಿಗಳಿಗೆ ಪ್ರತ್ಯಾಯೋಜಿಸಬಹುದು.
- ಹೆಚ್ಚಿನ ಸಂಖ್ಯೆಯ ಅನುಸ್ಥಾಪನೆಗಳು CEI ಯ ವ್ಯಾಪ್ತಿಯಲ್ಲಿವೆ. ಸಕಾಲ ಅಡಿಯಲ್ಲಿ 18 ಸೇವೆಗಳನ್ನು ಒದಗಿಸುವುದರ ಜೊತೆಗೆ, ಇದು ನಿಯಮಿತವಾಗಿ ವಿದ್ಯುತ್ ಸ್ಥಾಪನೆಗಳನ್ನು ಪರಿಶೀಲಿಸಬೇಕು, ಲಭ್ಯವಿರುವ ಎಲ್ಲಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಂಸ್ಥೆಗೆ ಸಾಧ್ಯವಾಗದಿರಬಹುದು ಹಾಗಾಗಿ ಹೊಸ ಹುದ್ದೆಗಳನ್ನು ಮಂಜೂರು ಮಾಡುವುದಕ್ಕಿಂತ ಬದಲಾಗಿ, CEI ಯ ಮೇಲ್ವಿಚಾರಣೆಯ ಅಡಿಯಲ್ಲಿ Chartered Electrical Safety Engineer ಗಳನ್ನು Central Electrical Authority ಮಾರ್ಗಸೂಚಿ ಪ್ರಕಾರ ಅಧಿಕೃತಗೊಳಿಸಲು ಅಧಿಸೂಚನೆ ಹೊರಡಿಸಬಹುದು.
ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಮುಖ್ಯ ಶಿಫಾರಸ್ಸುಗಳು
- ಅರಣ್ಯ ಹಕ್ಕು ಕಾಯಿದೆ, 2006 ರ ನಿಬಂಧನೆಗಳ ಪ್ರಕಾರ, ಬಳಕೆಯ ಹಕ್ಕುಗಳನ್ನು ST, SC, OBC ಮತ್ತು ಇತರರಿಗೆ ಸೇರಿದ ಅರ್ಹ ವ್ಯಕ್ತಿಗಳಿಗೆ ದೃಢಪಡಿಸಲಾಗಿದೆ. ಅವರಿಗೆ ಹಕ್ಕು ಪತ್ರ(ಹಕ್ಕುಗಳ ಪ್ರಮಾಣಪತ್ರ) ಗಳನ್ನು ಸಹ ನೀಡಲಾಗುತ್ತದೆ. ಈ ಹಕ್ಕುಗಳ ವಿವರಗಳನ್ನು RTC ಯ ಇತರ ಹಕ್ಕುಗಳ ಕಾಲಂನಲ್ಲಿ ನಮೂದಿಸಬೇಕು. ಇದಲ್ಲದೆ, ಈ ರೈತರನ್ನು ಬೆಳೆ ಪರಿಹಾರ, ಬೀಜ ಮತ್ತು ಗೊಬ್ಬರ ಸಬ್ಸಿಡಿ, ಬ್ಯಾಂಕ್ ಸಾಲ ಇತ್ಯಾದಿ ಪ್ರೋತ್ಸಾಹಕಗಳಿಗೆ ಅರ್ಹರು ಎಂದು ಘೋಷಿಸಲಾಗಿಲ್ಲ. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳು ಜಂಟಿಯಾಗಿ ಸರ್ಕಾರಿ ಆದೇಶವನ್ನು ಹೊರಡಿಸಿ, ರಾಜ್ಯ ಸರ್ಕಾರ ರೈತರಿಗೆ ನೀಡುವಂತಹ ಎಲ್ಲ ಪ್ರೋತ್ಸಾಹಕಗಳಿಗೆ ಅವರು ಸಹ ಅರ್ಹರು ಎಂದು ಪರಿಗಣಿಸುವಂತೆ ಅನುಷ್ಠಾನ ಅಧಿಕಾರಿಗಳಿಗೆ ನಿರ್ದೇಶನ ನೀಡಬಹುದು.
- ವಿದ್ಯಾರ್ಥಿನಿಲಯಗಳಲ್ಲಿ ಮಂಜೂರಾದ ಸಾಮರ್ಥ್ಯಕ್ಕಿಂತ ಶೇ. 50 ಕ್ಕಿಂತ ಕಡಿಮೆ ದಾಖಲಾತಿ ಇರುವ ಸುಮಾರು 103 ವಿದ್ಯಾರ್ಥಿನಿಲಯಗಳನ್ನು ವಿಲೀನಗೊಳಿಸಬಹುದು ಮತ್ತು ಆ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳನ್ನು ಹತ್ತಿರದ 93 ವಿದ್ಯಾರ್ಥಿನಿಲಯಗಳಿಗೆ ಸ್ಥಳಾಂತರಿಸಬಹುದು.
- ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ತಾಲೂಕಾ ಕಛೇರಿಗಳನ್ನು ಒಟ್ಟಿಗೆ ಕಾರ್ಯನಿರ್ವಹಿಸುವಂತೆ ಆದೇಶ ಮಾಡಬಹುದು ಅದೇ ರೀತಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆಗಳ ತಾಲೂಕಾ ಕಛೇರಿಗಳನ್ನು ಒಟ್ಟಿಗೆ ಕಾರ್ಯನಿರ್ವಹಿಸುವಂತೆಯೂ ಸಹ ಆದೇಶ ಮಾಡಬಹುದು.
ಒಳಾಡಳಿತ ಇಲಾಖೆಯ ಮುಖ್ಯ ಶಿಫಾರಸ್ಸುಗಳು
- ನಾಗರಿಕರು ಪೊಲೀಸ್ ಠಾಣೆಗಳಿಗೆ ಬರಲು ತುಂಬಾ ಸಂಕೋಚ ಪಡುತ್ತಾರೆ ಎಂಬುದು ಸಾಮಾನ್ಯ ಸಂಗತಿಯಾಗಿದೆ. ಇಲಾಖೆಯು 32 ಕ್ಕೂ ಹೆಚ್ಚು ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸುತ್ತಿದೆ ಹಾಗಾಗಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಾಗರಿಕ ಸೇವೆಗಳ ಸಹಾಯ ಕೇಂದ್ರ ಸ್ಥಾಪಿಸುವುದು ಹಾಗೂ ಪೋಲೀಸ್ ಕೈಪಿಡಿಯಲ್ಲಿ ಇದನ್ನು ಸೇರಿಸಬಹುದು.
- ಕರ್ನಾಟಕದಲ್ಲಿ ಗೆಜೆಟೆಡ್ ಅಲ್ಲದ ಪೊಲೀಸ್ ಸಿಬ್ಬಂದಿಗಳಲ್ಲಿ ಶೇಕಡಾವಾರು ಮಹಿಳಾ ಪ್ರಾತಿನಿಧ್ಯವು 8.3% ಆಗಿದೆ (2020 ರಲ್ಲಿ). ಕಾನ್‌ಸ್ಟೆಬಲ್‌ಗಳು ಇತ್ಯಾದಿ ಹುದ್ದೆಗಳ ನೇಮಕಾತಿಯಲ್ಲಿ ಮಹಿಳೆಯರಿಗೆ 25% ಹುದ್ದೆಗಳನ್ನು ಮೀಸಲಿಡಲು ರಾಜ್ಯವು ಆದೇಶಿಸಿದೆ. ಆದರೆ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ದಿನಾಂಕ:12.05.2015 ರಂದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮಹಿಳೆಯರಿಗೆ 33% ಮೀಸಲಾತಿಯನ್ನು ನೀಡಲು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಹ ಪೊಲೀಸ್ ಪಡೆಗಳಲ್ಲಿ ಕಾನ್ಸ್‌ಟೇಬಲ್‌ನಿಂದ ಸಬ್-ಇನ್‌ಸ್ಪೆಕ್ಟರ್‌ವರೆಗಿನ ಗೆಜೆಟೆಡ್ ಅಲ್ಲದ ಹುದ್ದೆಗಳಲ್ಲಿ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ, ಸಮತಳವಾಗಿ ಮತ್ತು ಪ್ರತಿ ವರ್ಗದಲ್ಲಿ (ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರರು) 33% ಮೀಸಲಾತಿಯನ್ನು ಅನುಮೋದಿಸಬಹುದು.