ಕಂಪನಿಗಳು, ವಿಶೇಷವಾಗಿ ಸ್ಟಾರ್ಟ್ ಅಪ್, ಯೂನಿಕಾರ್ನ್ ಎಂಬ ನಾಮಾಂಕಿತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳಲ್ಲಿ ಪ್ರವರ್ತಕರ ಹೂಡಿಕೆಯಲ್ಲದೆ, ಹೊರಗಡೆಯಿಂದ ಅನೇಕ ಸಂಸ್ಥೆಗಳು ಈ ಸ್ಟಾರ್ಟ್ ಅಪ್ ಕಂಪನಿಗಳಿಗೆ ಫಂಡಿಂಗ್ ಒದಗಿಸುವ ವ್ಯವಸ್ಥೆಯು ಜಾರಿಯಲ್ಲಿದೆ. ಈ ಅಂಶವು ಎಲ್ಲಾ ಹೂಡಿಕೆದಾರರಿಗೂ ತಿಳಿದಿರುವುದಿಲ್ಲ. ಕೇವಲ ಮಾಧ್ಯಮಗಳಲ್ಲಿ ಬಂದಂತಹ ಅಂಶಗಳನ್ನಾಧರಿಸಿ ನಿರ್ಧರಿಸುತ್ತಾರೆ. ಅದೇ ಮಾಧ್ಯಮದಲ್ಲಿ ಅರಿತು ಹೂಡಿಕೆ ಮಾಡಿ ಎಂದು ಹೇಳುವುದನ್ನು ಕಡೆಗಣಿಸುತ್ತಾರೆ.
ಯಾವುದೇ ಕಂಪನಿಯಲ್ಲಿ ಸಾರ್ವಜನಿಕ ವಿತರಣೆಗೆ ಮುನ್ನ ಪ್ರೈವೇಟ್ ಈಕ್ವಿಟಿ ಇನ್ವೆಸ್ಟರ್ ಅಥವಾ ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಹೂಡಿಕೆ ಮಾಡಿದ್ದಲ್ಲಿ ಅಂತಹ ಕಂಪನಿಗಳು ನಿಗದಿ ಪಡಿಸುವ ಐ ಪಿ ಒ-IPO- ಷೇರುಗಳ ಬೆಲೆ ಅತಿ ಹೆಚ್ಚಾಗಿರುತ್ತವೆ. ಹೆಚ್ಚಿನ ಕಂಪನಿಗಳಲ್ಲಿ ವೆಂಚರ್ ಕ್ಯಾಪಿಟಲ್ ಸಂಸ್ಥೆಗಳ ಫಂಡಿಂಗ್ ಇದೆ. ಐ ಪಿ ಒ ಗೂ ಮುನ್ನ ಗ್ರೇ ಮಾರ್ಕೆಟ್ ಎಂಬ ಅನಧಿಕೃತ ಪೇಟೆಯಲ್ಲಿ ಪ್ರೀಮಿಯಂ ಹೆಚ್ಚಿದೆ ಎಂಬ ಪ್ರಚಾರ ಸಹ ನಡೆಯುತ್ತಿರುತ್ತದೆ. ಇಂತಹ ಗ್ರೇ ಮಾರ್ಕೆಟ್ ದರಗಳಿಗೆ ಮಾನ್ಯತೆ ಇರುವುದಿಲ್ಲ. ಇಂತಹವುಗಳಿಂದ ದೂರವಿದ್ದಲ್ಲಿ ಕ್ಷೇಮ. ಏರಿಕೆ ಮತ್ತು ಇಳಿಕೆಗಳಿಗೆ ಇತಿಮಿತಿಗಳಿರುವುದಿಲ್ಲ. ಅಧಿಕೃತವಾಗಿಯೇ ಅನೇಕ ಅವಕಾಶಗಳು ಲಭ್ಯವಿರುವಾಗ, ಅನಧಿಕೃತ ವ್ಯವಹಾರಿಕ ಚಿಂತನೆ ಏಕೆ?
ಸಂಪನ್ಮೂಲ ಅಗತ್ಯತೆ ಯಾರಿಗಾಗಿ:
ಒಟ್ಟಾರೆ ಒಂದು ಕಂಪನಿಯ ಹಿಂದೆ ಅಡಗಿರುವ ಆರ್ಥಿಕ ಸಾಮರ್ಥ್ಯ, ತೊಳಲಾಟ, ಗೊಂದಲ, ಒತ್ತಡಗಳು ಸಂಪೂರ್ಣ ಪಾರದರ್ಶಕವಾಗಿರಲು ಸಾಧ್ಯವಿರಲಾರದು. ಹಿಂದೆ ಇನ್ಫೋಸಿಸ್ ನಂತಹ ಕಂಪನಿಗಳು ಷೇರು ವಿತರಣೆಯ ಸಂದರ್ಭದಲ್ಲಿ ಹೂಡಿಕೆದಾರರ ಹಿತದಿಂದ ನಿಗದಿಪಡಿಸುತ್ತಿದ್ದ ಪ್ರೀಮಿಯಂ ಕಡಿಮೆ ಇರುತ್ತಿತ್ತು. ಆಗ ಆ ಕಂಪನಿಗೆ ಅಭಿವೃದ್ಧಿಯ ದೃಷ್ಠಿಯಿಂದ, ಸಂಪನ್ಮೂಲದ ಅಗತ್ಯತೆ ಇತ್ತು. ಅದರ ಮೂಲಕ ತನ್ನ ಗುರಿ ಸಾಧನೆಯ ಪ್ರಯತ್ನ ನಡೆಯಬೇಕಿತ್ತು. ಆದರೆ ಈಗ ಕಂಪನಿಯ ಚಟುವಟಿಕೆಗೆ, ಅಭಿವೃದ್ಧಿಗೆ ಸಂಪನ್ಮೂಲದ ಅಗತ್ಯವಿಲ್ಲ. ಕಾರಣ ಕಂಪನಿಯ ಪ್ರವರ್ತಕರು ಮತ್ತು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಕಂಪನಿಯ ಅಗತ್ಯವಿರುವ ಸಂಪನ್ಮೂಲವನ್ನು ಪೂರೈಸಿ, ಕಂಪನಿಗೆ ಉತ್ತಮ ಬ್ರಾಂಡ್ ಇಮೇಜನ್ನು ತಂದುಕೊಂಡ ಮೇಲೆ ಮೌಲ್ಯಾಧಾರಿತ ವಿತರಣೆ ಮಾಡುವ ಬದಲು, ಸ್ವಹಿತವನ್ನೇ ಆಧರಿಸಿ ಅವಕಾಶಗಳ ಲಾಭ ದೊರಕಿಸಿಕೊಳ್ಳಲು ಐ ಪಿ ಒ ವಿತರಣೆಗೆ ಮುಂದಾಗುತ್ತಾರೆ.
ಐ ಪಿ ಒ ಮೂಲಕ ಹೂಡಿಕೆದಾರರಿಂದ ಸಂಗ್ರಹಿಸಿದ ಸಂಪನ್ಮೂಲವು ಹಲವ ಭಾರಿ ನೇರವಾಗಿ, ಸಂಪೂರ್ಣವಾಗಿ ಪ್ರವರ್ತಕರು, ಮತ್ತು ಫಂಡಿಂಗ್ ಮಾಡಿರುವವರ ಖಜಾನೆ ತುಂಬಿಸುವ ರೀತಿ ಪ್ರೀಮಿಯಂ ನಿಗದಿಪಡಿಸಲಾಗುತ್ತಿದೆ. ಹಲವು ಕಂಪನಿಗಳಂತೂ ವಿತರಣೆಯನ್ನು ಸಂಪೂರ್ಣವಾಗಿ ಆಫರ್ ಫಾರ್ ಸೇಲ್ ಮೂಲಕ ಪ್ರವರ್ತಕರ ಮತ್ತು ವೆಂಚರ್ ಕ್ಯಾಪಿಟಲ್ ಸಂಸ್ಥೆಗಳ ಖಜಾನೆಗೆ ಸೇರಿ, ಕಂಪನಿಗೆ ಒಂದು ಬಿಡಿಕಾಸು ಸಿಗುವುದಿಲ್ಲ.
ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿ ಪರಿವರ್ತನೆ:
ಕೆಲವು ಕಂಪನಿಗಳು ಐ ಪಿ ಒ ಗಳನ್ನು ಅಧಿಕ ಪ್ರೀಮಿಯಂನಲ್ಲಿ ತೇಲಿಬಿಡುವುದಕ್ಕಾಗಿಯೇ ತಮ್ಮ ಕಂಪನಿಗಳನ್ನು ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಕಂಪನಿಗಳಾಗಿ ಪರಿವರ್ತಿಸಿ, ಕೆಲವೇ ತಿಂಗಳಲ್ಲಿ ಐ ಪಿ ಒ ಮೂಲಕ ವಿತರಣೆ ಮಾಡುವರು.
ಐ ಪಿ ಒ ಗೂ ಮುಂಚೆ ಮುಖಬೆಲೆ ಸೀಳಿಕೆ:
ಈಚಿನ ದಿನಗಳಲ್ಲಿ ಷೇರುಪೇಟೆಯ ಸೂಚ್ಯಂಕಗಳು ಗಗನದತ್ತ ಚಿಮ್ಮುತ್ತಿರುವುದರ ಪ್ರಚಾರದಿಂದ ಪ್ರೇರಿತರಾಗಿ ಐ ಪಿ ಒ ಎಂದರೆ ಸದಾ ಲಾಭದಾಯಕ ಎಂಬ ವಿಶ್ವಾಸದಿಂದ, ಬೇರೆ ಯಾವುದೇ ಚಿಂತನೆ, ವಿಶ್ಲೇಷಣೆಗಳನ್ನು ಮಾಡದೆ ಅರ್ಜಿ ಸಲ್ಲಿಸುತ್ತಾರೆ. ಕೆಲವು ಕಂಪನಿಗಳು ಅಧಿಕ ಪ್ರೀಮಿಯಂ ನಿಗದಿಪಡಿಸುವುಕ್ಕಾಗಿ ಕೆಲವು ತಿಂಗಳುಗಳ ಮುಂಚೆ ತಮ್ಮ ಷೇರಿನ ಮುಖಬೆಲೆಯನ್ನು ಸೀಳಿರುತ್ತವೆ. ಅಂದರೆ ಉದಾಹರಣೆಗೆ ಮುಖಬೆಲೆ ರೂ.10 ರ ಷೇರನ್ನು ಐಪಿಒ ವಿತರಣೆ ಬೆಲೆ ರೂ. 2000 ಎಂದಾದರೆ, ಕೆಲವು ಕಂಪನಿಗಳು ರೂ.10 ರ ಮುಖಬೆಲೆಯ ಷೇರನ್ನು ರೂ.1 ಅಥವಾ 2 ಕ್ಕೆ ಸೀಳಿಕೆ ಮಾಡಿ ಅದನ್ನೇ ರೂ.2,000 ಎಂದು ವಿತರಣೆ ನಿಗದಿಪಡಿಸುವ ಚಿಂತನೆಯು ಆರ್ಥಿಕ ಸಾಕ್ಷರತಾ ಮಟ್ಟವು ಶೇ.27 ರ ಸಮೀಪವಿದ್ದು, ಹೆಚ್ಚಿನವರು ಷೇರುಪೇಟೆಯ ಚಟುವಟಿಕೆಯ ಅರಿವಿಲ್ಲದೆ ಪ್ರವೇಶಿಸಿರುವ ಸಂದರ್ಭದಲ್ಲಿ ಈ ರೀತಿಯ ಚಿಂತನೆ ಸರಿಯಲ್ಲ.
ಕಾರ್ಪರೇಟ್ ಫಲ ವಿತರಣೆ:
ಕಂಪನಿಗಳು ಐ ಪಿ ಒ ವಿತರಣೆಗೂ ಮುಂಚೆ ಭಾರಿ ಗಾತ್ರದ ಲಾಭಾಂಶವನ್ನಾಗಲಿ ಅಥವಾ ಅಸಹಜ ಮಟ್ಟದ ಬೋನಸ್ ಷೇರು ವಿತರಣೆಯನ್ನು ಮಾಡುವ ಮೂಲಕ ಕಂಪನಿಯಲ್ಲಿರುವ ಮೀಸಲು ನಿಧಿಯನ್ನು ಖಾಲಿ ಮಾಡುವ ಚಿಂತನೆಗಳುಳ್ಳವನ್ನೂ ಈಚಿನ ದಿನಗಳಲ್ಲಿ ಕಂಡಿದ್ದೇವೆ. ಐಪಿಒ ಮೂಲಕ ಪ್ರವೇಶ ಪಡೆದ ಹೂಡಿಕೆದಾರರ ಹಿತಕ್ಕೆ ವಿರುದ್ಧವಾದ ಕ್ರಮವಿದಾಗಿದೆ.
ಇಂತಹ ಚಿಂತನೆಗಳಿರುವ ಕಂಪನಿಗಳಲ್ಲಿ ಹೂಡಿಕೆ ಅಂದರೆ ಪ್ರಾಫಿಟಬಲ್ ಅನ್ನುವುದಕ್ಕಿಂತ ಚಾರಿಟಬಲ್ ರೀತಿಯಾಗುತ್ತದೆ. ಸಾಧ್ಯವಾದಷ್ಟು ಮಾಹಿತಿಯನ್ನು ಸಂಗ್ರಹಿಸಿ ನಂತರ ಆ ಕಂಪನಿ ವಿತರಿಸುತ್ತಿರುವ ಬೆಲೆ ಸೂಕ್ತವೆಂದು ದೃಢಪಡಿಸಿಕೊಂಡಲ್ಲಿ, ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
ಐಪಿಓಗಳ ನಿಮ್ಮ ವಿಶ್ಲೇಷಣೆ ಸಾಮಯಿಕ ಮತ್ತು ಸಮಂಜಸವಾಗಿ ಇತ್ತೀಚಿನ ವಿದ್ಯಮಾನಗಳಿಗೆ ಕನ್ನಡಿ ಹಿಡಿದಂತಿದೆ. ನನ್ನ ದೃಷ್ಟಿಯಲ್ಲಿ ಸಣ್ಣ ಹೂಡಿಕೆದಾರರ ಹಿತರಕ್ಷಣೆ ಆಗಬೇಕಿದ್ದರೆ ಒಂದೇ ಮಾರ್ಗ : ಹಿಂದಿನ Controller of Capital Issues ರೀತಿಯಲ್ಲಿ ಮೂರು ವರ್ಷ ಸತತ ಲಾಭ ಹಾಗೂ book value ಆಧರಿಸಿ ಬೆಲೆ ನಿಗದಿ ಮಾಡುವುದು. Paytm ತರಹ ಸಾಲ, ನಷ್ಟದ ಹೊರೆಯನ್ನೇ ಹೊತ್ತು ₹1ರ ಷೇರಿಗೆ ₹2150 ಯನ್ನು ದೋಚಿಕೊಂಡು ಹೋಗುವುದು ತಪ್ಪುತ್ತದೆ. ಸೆಬಿ ಈ ದಿಶೆಯಲ್ಲಿ ಕಾರ್ಯಪ್ರವೃತ್ತವಾಗುತ್ತದೆ ಎಂದು ಆಶಿಸೋಣವೇ?