ಸುಮಾ ವೀಣಾ
ಕಾವರೆ ಕಣೆಗೊಂಡರ್ – ಅಭಿನವಪಂಪನೆಂದು ಬಿರುದಾಂಕಿತನಾಗಿರುವ ನಾಗಚಂದ್ರ ಕವಿಯ ರಾಮಚಂದ್ರ ಚರಿತಪುರಾಣದಲ್ಲಿ ಈ ಮಾತು ಉಲ್ಲೇಖವಾಗಿದೆ.
ರಾವಣ ವಿಧಿಯ ಅಟ್ಟಹಾಸಕ್ಕೆ ಸಿಕ್ಕು ‘ಪದ್ಮಪತ್ರದ ಜಲಬಿಂದುವಿನಂತೆ ಚಲಿತಮಾದುದು ಚಿತ್ತಂ’ ಎಂಬ ನಾಗಚಂದ್ರನ ಮಾತುಗಳನ್ವಯವೇ ಚಿತ್ತಚಾಂಚಲ್ಯಕ್ಕೊಳಗಾಗಿ ಸೀತೆಯನ್ನು ಅಪಹರಿಸಿಕೊಂಡು ಹೋಗಿ ಪ್ರಮದ ವನದಲ್ಲಿ ಇರಿಸಿರುತ್ತಾನೆ. ಹೇಗಾದರೂ ಸರಿ ಆಕೆಯನ್ನು ನಾನು ಕೈವಶಮಾಡಿಕೊಳ್ಳಬೇಕು ಅದಕ್ಕೆ ನೀನು ಸಹಾಯಮಾಡಬೇಕೆಂದು ತಾನು ಒಲಿಸಿಕೊಂಡಿದ್ದ ಅವಲೋಕಿನಿ ವಿದ್ಯೆಯಲ್ಲಿ ರಾವಣ ಕೇಳಿಕೊಳ್ಳುತ್ತಾನೆ.
ಅದಕ್ಕೆ ಆಕೆ ಉತ್ತರವಾಗಿ ‘ನಿಷ್ಕಾರಣಮಿವರೊಳ್ ವಿರೋಧಮಂ ಮಾಡುವುದೇ? ಎನ್ನುತ್ತಾ ರಾಮ ಕಾರಣಪುರುಷ ಆತನ ಹೆಂಡತಿಯನ್ನು ವಿನಾಕಾರಣ ಅಪಹರಿಸಿ ವಿರೋಧ ಕಟ್ಟಿಕೊಳ್ಳುವುದು ಸರಿಯಲ್ಲ . ಅಧರ್ಮವನ್ನು ನಿಯಂತ್ರಿಸುವುದು ರಾಜನ ಕೆಲಸ ಆದರೆ ಅದನ್ನು ಮೀರಿ ದುರ್ವಿಷಯಕ್ಕೆ ನೀನೇ ಮನಸ್ಸು ಮಾಡುತ್ತಿರುವುದು ಸರಿಯಲ್ಲ. ನಿನ್ನ ಈ ಕೆಟ್ಟನಡತೆ ಕಾಯುವ ಕೈಗಳೆ ಕತ್ತಿಹಿಡಿವರೆಂಬ ನಾಣ್ಣುಡಿಗೆ ಸಮ ಎಂದು ಅವಲೋಕಿನಿ ವಿದ್ಯೆ ಬುದ್ಧಿ ಹೇಳುವ ಪ್ರಯತ್ನವನ್ನು ಮಾಡುತ್ತದೆ.
‘ಕಾವರೆ ಕಣೆಗೊಂಡರ್’ ಎಂಬ ಮಾತು ಬೇಲಿಯೇ ಎದ್ದು ಹೊಲಮೇಯ್ದಂತೆ,ರಕ್ಷಕರೆ ಭಕ್ಷಕರಾದಂತೆ. ತಾಯಿಯ ಹಾಲೆ ನಂಜಾದಂತೆ ಮುಂತಾದ ನುಡಿಗಳಿಗೆ ಸಮವಾಗಿದೆ. ಜವಾಬ್ದಾರಿಯಿಲ್ಲದೆ, ತನಗಿರುವ ಸ್ಥಾನಕ್ಕೆ ಘನತೆಗೆ ಧಕ್ಕೆ ತಂದುಕೊಳ್ಳುವ ಕೆಲಸವನ್ನು ಕೆಲವರು ಮಾಡಿಕೊಳ್ಳುತ್ತಾರೆ. ಅಧಿಕಾರದ ಮದವಾವರಿಸಿರುವವರು, ದುಶ್ಚಟಗಳನ್ನು ಹೊಂದಿರುವವರು ಎಂಥ ನೀಚ ಕೃತ್ಯಕ್ಕೂ ಇಳಿಯಬಲ್ಲರು ಎಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ.
ನಾಗಚಂದ್ರ ಕೇವಲ ಒಂದು ಅಪಸವ್ಯವನ್ನಷ್ಟೇ ಅವಲೋಕಿನಿ ವಿದ್ಯೆಯ ಮೂಲಕ ಹೇಳಿಸಿದ್ದಾನೆ ಆದರೆ ಇಂಥ ಅನೇಕ ವೈರುಧ್ಯಗಳು ನಮ್ಮ ನಡುವಿವೆ. ಇಂದಿನ ದಿನಮಾನಗಳಲ್ಲಿ ಕರ್ತವ್ಯ ಮತ್ತು ಜವಾಬ್ದಾರಿಗಳ ಮಹತ್ವವನ್ನು ಯಾರೂ ಅರಿಯುತ್ತಿಲ್ಲ ತಮಗೆ ಹೇಗೆ ಬೇಕೋ ಹಾಗೆ ಸಾಮಾಜಿಕ, ನೈತಿಕ ಇತಿಮಿತಿಗಳನ್ನು ಮೀರಿ ಸ್ವೇಚ್ಛೆಗೆ ಮನವನ್ನು ಒಪ್ಪಿಸುತ್ತಿದ್ದಾರೆ ಈ ಕಾರಣದಿಂದಲೇ ಕೆಲವೊಮ್ಮೆ ಸಾಮಾಜಿಕ ರಕ್ಷಣೆ ಸವಾಲಾಗುತ್ತಿದೆ. ತನ್ನ ಸ್ಥಾನ,ಕಾರ್ಯ,ಜವಾಬ್ದಾರಿಯನ್ನು ಅರಿತು ಸಾಮಾಜಿಕರು ಮುನ್ನಡೆಯಬೇಕಾಗುತ್ತದೆ.
ಕಾಯುವವರೆ ಕತ್ತಿ ಹಿಡಿದರು,ಕಾಯುವ ಕೈಗಳೆ ಕೊಡಲಿ ಕಾವುಗಳಾದವು ಎಂಬ ಮಾತುಗಳು ವಿನಾಶತ್ವವನ್ನು ಎಚ್ಚರಿಸುವ ಮಾತುಗಳು . ಸಾಮಾಜಿಕ ವ್ಯವಸ್ಥೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರೆಲ್ಲಾ ಇದನ್ನು ಅರಿಯಬೇಕಿದೆ…. ಪಾಲಿಸಬೇಕಿದೆ!
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.