ಕಾಂಗ್ರೆಸ್ ವಿರೋಧ ಪಕ್ಷವಾಗಿ ವಿಫಲವಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
BENGALURU FEB 22
ಆಡಳಿತ ಪಕ್ಷವಾಗಿ ನೀವು ಕೆಲಸ ಮಾಡಲು ಯೋಗ್ಯರಲ್ಲ ಎಂದು ಜನ 2018 ರಲ್ಲಿ ತೀರ್ಮಾನ ಮಾಡಿದರು. ಕನಿಷ್ಠ ವಿರೋಧ ಪಕ್ಷವಾಗಿಯಾದರೂ ಕಾಂಗ್ರೆಸ್ ಪಕ್ಷ ಕೆಲಸ ಮಾಡಬೇಕಿತ್ತು. ವಿರೋಧ ಪಕ್ಷವಾಗಿಯೂ ಕಾಂಗ್ರೆಸ್ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ರಾಜಕಾರಣದ ಮುಸುಕು ಅವರ ಹಾಗೂ ಅವರ ಪಕ್ಷದ ಮೇಲೆ ಬಿದ್ದಿದೆ. ಎಲ್ಲವನ್ನೂ ರಾಜಕೀಯವಾಗಿ ನೋಡುವುದು, ಧ್ವೇಷದಿಂದ ನೋಡುವುದರಿಂದ ಅವರಿಗಾಗಲಿ, ಅವರ ಪಕ್ಷಕ್ಕಾಗಲಿ ರಾಜಕೀಯ ಭವಿಷ್ಯವಿಲ್ಲ. ಸದನ ಶುಕ್ರವಾರದ ವರೆಗೂ ನಡೆಯಬೇಕಿತ್ತು. ಸದನವನ್ನು ಇಂದೇ ಮೊಟಕುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು ಬೇಸರದ ಸಂಗತಿ. ಪ್ರತಿಪಕ್ಷದವರು ಸದನ ಕರೆಯಿರಿ ಚರ್ಚಿಸಬೇಕು ಎನ್ನುತ್ತಾರೆ. ಅಧಿವೇಶನ ನಡೆಯುವಾಗ ಚರ್ಚೆ ಮಾಡಲು ಅವರು ತಯಾರಿಲ್ಲ. ಯಾವುದೇ ವಿಚಾರವನ್ನೇ ಆಗಲಿ ಚರ್ಚೆ ಹಾಗೂ ವಾದ ಮಾಡಬಹುದು. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಸರ್ಕಾರದ ಸಾಧನೆಯನ್ನು ಹೇಳಿಕೊಂಡಾಗ ಅದರ ನ್ಯೂನ್ಯತೆ ಗಳನ್ನು ಹೇಳಬಹುದಾಗಿತ್ತು. ಆ ಕರ್ತವ್ಯವನ್ನೂ ಅವರು ಮಾಡಲಿಲ್ಲ.
ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯ ಬಗ್ಗೆಯೂ ಚರ್ಚೆ ಮಾಡಬಹುದಾಗಿತ್ತು. ಯಾವುದೇ ವಿಚಾರದ ಬಗ್ಗೆ ಚರ್ಚೆ ಮಾಡಲು ಸರ್ಕಾರ ಸಿದ್ಧವಿತ್ತು. ಆದರೆ, ಆ ಹೇಳಿಕೆಯಲ್ಲಿ ಏನೂ ಇಲ್ಲ ಎಂದು ಅವರಿಗೆ ಗೊತ್ತಿದೆ ಎಂದು ಅವರು ಹೇಳಿದರು.
ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ
ಧರಣಿ ಮಾರ್ಗದ ಮುಖಾಂತರ ರಾಜ್ಯದ ಜನತೆ ಹಾಗೂ ಸದನದ ದಾರಿಯನ್ನು ತಪ್ಪಿಸಲು ನೋಡುತ್ತಿದ್ದಾರೆ. ವಸ್ತ್ರ ಸಂಹಿತೆಯ ಬಗ್ಗೆ ಉಚ್ಛ ನ್ಯಾಯಾಲಯದಲ್ಲಿ ಗಂಭೀರವಾದ ಚರ್ಚೆ ನಡೆಯುತ್ತಿದೆ. ಈಗಾಗಲೇ ಮಧ್ಯಂತರ ಆದೇಶ ನೀಡಿದೆ. ಅದರ ಅನುಷ್ಠಾನವಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವು ಗೊಂದಲಗಳನ್ನು ಸೃಷ್ಟಿ ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲರೂ ಒಕ್ಕೊರಲಿನ ಸಂದೇಶವನ್ನು ನೀಡೋಣ, ಅಂತಿಮ ಆದೇಶ ಬರುವವರೆಗೂ ಕಾದು, ಶಾಂತಿಯಿಂದ ಇರಬಹುದಾಗಿತ್ತು. ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ಪರೀಕ್ಷೆಗಳಿವೆ ಎಂಬ ಕನಿಷ್ಠ ಸಂದೇಶವನ್ನು ಕೊಡಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ. ಮಾನವೀಯತೆ ವಿಚಾರವನ್ನೇ ಇಟ್ಟುಕೊಂಡಿಲ್ಲ. ರಾಜಕಾರಣವೇ ಪ್ರಮುಖವಾಗಿದೆ. ರಾಜಕಾರಣದಲ್ಲೂ ಕೂಡ ವಿರೋಧ ಪಕ್ಷದ ನಾಯಕರು, ಕಾಂಗ್ರೆಸ್ ಅಧ್ಯಕ್ಷರು, ಹಿರಿಯರು. ಬಹಳ ವರ್ಷಗಳಿಂದ ರಾಜಕಾರಣದಲ್ಲಿರುವವರು. ಅವರ ಅನುಭವ ಎಲ್ಲಿ ಹೋಯಿತು. ಅವರ ಅನುಭವದಿಂದ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದರೆ, ಜನ ಮೆಚ್ಚಿಕೊಳ್ಳುತ್ತಿದ್ದರು ಎಂದರು.
ಮತಾಂತರ ನಿಷೇಧ ಕಾಯ್ದೆ:
ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ವಿಧಾನಪರಿಷತ್ತಿನಲ್ಲಿ ಮಂಡನೆಯಾಗಲಿಲ್ಲ. ಈಗ ಮಂಡಿಸಲು ಸಾಧ್ಯವಾಗಲಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಸದನ ವ್ಯವಸ್ಥಿತವಾಗಿಲ್ಲ. ಚರ್ಚೆ ಮಾಡಿ ಅಂಗೀಕರಿಸಲಾಗುವುದು ಎಂದರು.
ಸಚಿವರು ಹಾಗೂ ಶಾಸಕರ ವೇತನ ಹೆಚ್ಚಳ:
ರಾಜ್ಯದಲ್ಲಿ ಆರ್ಥಿಕ ಮುಗ್ಗಟ್ಟಿರುವ ಸಂದರ್ಭದಲ್ಲಿ ಸಚಿವರು ಮತ್ತು ಶಾಸಕ ವೇತನವನ್ನು ಹೆಚ್ಚಿಸಿರುವ ಬಗ್ಗೆ ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಹಲವಾರು ವಿಚಾರದಲ್ಲಿ ವೇತನ ಹೆಚ್ಚಾಗಿರಲಿಲ್ಲ. ಎಲ್ಲಾ ಪಕ್ಷದ ಶಾಸಕರ ಅಭಿಪ್ರಾಯ, ದಿನನಿತ್ಯದ ಓಡಾಟ, ಹಣದುಬ್ಬರ ಎಲ್ಲವನ್ನೂ ಪರಿಗಣಿಸಿ ವೇತನವನ್ನು ಹೆಚ್ಚಿಸಲಾಗಿದೆ ಎಂದರು.
ಮಾರ್ಚ್ 4 ರಂದು ಬಜೆಟ್:
ಬಜೆಟ್ ಮಾರ್ಚ್ 04 ರಂದು ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.