23 C
Karnataka
Saturday, September 21, 2024

    Russia attacks Ukraine:ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭ

    Must read

    ಬೆಳ್ಳಂಬೆಳಗ್ಗೆ ಆದೇಶ ನೀಡಿದ ವ್ಲಾದಿಮೀರ್‌ ಪುಟಿನ್; ಅಮೆರಿಕ ಸೇರಿ ಜಾಗತಿಕ ಸಮುದಾಯ ಖಂಡನೆ, ಯುದ್ಧ ನಿಲ್ಲಿಸುವಂತೆ ಆಗ್ರಹ

    MOSCOW FEB 24

    ಜಾಗತಿಕ ಸಮುದಾಯ ಆತಂಕ ನಿಜವಾಗಿದ್ದು, ನಿರೀಕ್ಷೆಯಂತೆ ರಷ್ಯಾ ತನ್ನ ನೆರೆಯ ಉಕ್ರೇನ್‌ ಮೇಲೆ ಯುದ್ಧ ಆರಂಭಿಸಿದೆ. ಎರಡೂ ಕಡೆಯಿಂದಲೂ ಸಾವು ನೋವಿನ ವರದಿಗಳು ಬರುತ್ತಿವೆ. ಜಾಗತಿಕ ಮಟ್ಟದಲ್ಲಿ ಈ ಯುದ್ಧಕ್ಕೆ ವಿರೋಧ ವ್ಯಕ್ತವಾಗಿದೆ.

    ಭಾರತೀಯ ಕಾಲಮಾನದಂತೆ ಇಂದು ಬೆಳಗ್ಗೆ ಹೊತ್ತಿಗೆ ಮಾಸ್ಕೋದಲ್ಲಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ರಷ್ಯಾ ಅಧ್ಯಕ್ಷ ವ್ಲಾದಿಮೀರ್‌ ಪುಟಿನ್‌‌, ಉಕ್ರೇನ್‌ ಮೇಲೆ ರಷ್ಯಾ ದಾಳಿಗೆ ಆದೇಶ ನೀಡಿರುವುದಾಗಿ ಘೋಷಣೆ ಮಾಡಿದರು. ಬೆಳಗ್ಗೆ ಸುಮಾರು ಆರು ಗಂಟೆ ಹೊತ್ತಿಗೆ ರಷ್ಯಾ ಪಡೆಗಳು ದಾಳಿ ಶುರು ಮಾಡಿವೆ ಎಂದು ಗೊತ್ತಾಗಿದೆ.

    ರಷ್ಯಾ ನಡೆಸಿರುವ ಶೆಲ್‌ ದಾಳಿಯಲ್ಲಿ ಉಕ್ರೇನ್‌ʼನ ಕೆಲ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ಕೆಲ ಜನರಿಗೆ ಗಾಯಗಳಾಗಿವೆ. ಸಾವು ನೋವಿನ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ಇದೇ ವೇಳೆ ರಷ್ಯಾಕ್ಕೆ ತಿರುಗೇಟು ನೀಡಲು ಉಕ್ರೇನ್‌ ಕೂಡ ಸಿದ್ಧತೆ ಮಾಡಿಕೊಂಡಿದೆ. ಕೆಲವು ರಷ್ಯಾ ಸೈನಿಕರನ್ನು ಸೆರೆ ಹಿಡಿದಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ. 14 ಜನರಿದ್ದ ಉಕ್ರೇನ್ ವಿಮಾನವನ್ನು ಪತನಗೊಂಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಉಕ್ರೇನ್‌ ಸೇನೆಗೆ ಕರೆ ನೀಡಿರುವ ಪುಟಿನ್‌, ರಷ್ಯಾ ಸಾರ್ವಭೌಮತೆ ರಕ್ಷಿಸಿಕೊಳ್ಳಲು ಹಾಗೂ ಯುರೋಪ್‌ ಖಂಡದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಎಲ್ಲ ರೀತಿ ಕ್ರಮಗಳನ್ನು ಕೈಗೊಳ್ಳಲು ಮುಕ್ತ ಅಧಿಕಾರ ಹೊಂದಿದೆ ಎಂದು ಪುಟಿನ್‌ ಹೇಳಿದ್ದಾರೆ.

    ಈ ವಿಷಯದಲ್ಲಿ ಯಾರೇ ಮೂರನೇ ಶಕ್ತಿ ಮಧ್ಯಪ್ರವೇಶ ಮಾಡಿದರೆ ಅವರಿಗೂ ತಕ್ಕ ಉತ್ತರ ನೀಡಲಾಗುವುದು ಎಂದು ಪುಟಿನ್‌ ಇದೇ ವೇಳೆ ಅಮೆರಿಕ ಹಾಗೂ ನ್ಯಾಟೋ ಪಡೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಚ್ಚರಿಕೆ ನೀಡಿದ್ದಾರೆ.

    ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ರಷ್ಯಾ ದಾಳಿಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದು, ಇದು ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಅಪ್ರಚೋದಿತ ದಾಳಿ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಈ ದಾಳಿಗೆ ರಷ್ಯ ತಕ್ಕ ಬೆಲೆ ತೆರಲಿದೆ ಎಂದು ಬೈಡನ್‌ ಎಚ್ಚರಿಕೆ ನೀಡಿದ್ದಾರೆ. ಜತೆಯಲ್ಲಿ ಜರ್ಮನಿ, ಬ್ರಿಟನ್‌ ಸೇರಿದಂತೆ ಯುರೋಪ್‌,ನ ಬಹುತೇಕ ದೇಶಗಳು ದಾಳಿಯನ್ನು ಖಂಡಿಸಿವೆ.

    ಇದರ ಬೆನ್ನಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಸೇರಿದ್ದು, ರಷ್ಯಾ ದಾಳಿಯನ್ನು ಖಂಡಿಸಿದೆ. ಆದರೆ, ಜಾಗತಿಕ ಸಮುದಾಯದ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿರುವ ಪುಟಿನ್‌, ರಷ್ಯದ ಹಿತವನ್ನು ಬಲಿಗೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

    ಭಾರತದ ಆತಂಕ :

    ಉಕ್ರೇನ್ ನಲ್ಲಿನ ಸ್ಥಿಗತಿಗಳ ಬಗ್ಗೆ ಭಾರತದ ಆತಂಕವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಬಗ್ಗೆ ಭಾರತ ಸರಕಾರ ಎಲ್ಲಾ ರೀತಿಯ ಪ್ರಯತ್ನ ಮಾ್ಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸುಭದ್ರತೆಯನ್ನು ಭಾರತ ಬಯಸುತ್ತದೆ ಎಂದು ಅವರು ಹೇಳಿದ್ದಾರೆ.

    ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

    ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸುಮಾರು ಭಾರತದ ವಿದ್ಯಾರ್ಥಿಗಳು ವಿಮಾನ ನಿಲ್ದಾಣಕ್ಕೆ ತಲುಪುವಾಗ ಯುದ್ಧ ಪ್ರಾರಂಭವಾಗಿದ್ದರಿಂದ ೧೦೦ ವಿದ್ಯಾರ್ಥಿಗಳು ಎರಡು ಬಸ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ ೧೦ ಕ್ಕಿಂತ ಹೆಚ್ಚು ಕನ್ನಡಿಗರಿದ್ದು, ಅವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೂ ನಿರಂತರ ಸಂಪರ್ಕದಲ್ಲಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

    ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತವಾಗಿರಲು ಭಾರತೀಯ ರಾಯಭಾರ ಕಚೇರಿ ಸೂಕ್ತ ಮಾರ್ಗದರ್ಶನವನ್ನು ನೀಡಿದೆ. ವಿಮಾನಗಳು ಪುನ: ಪ್ರಾರಂಭವಾದಾಗ ವಿದ್ಯಾರ್ಥಿಗಳನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೇಂದ್ರ ವಿದೇಶಾಂಗ ಸಚಿವರೊಂದಿಗೂ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಉಕ್ರೇನ್‌ನಲ್ಲಿ ಯುದ್ಧದ ಛಾಯೆಯಿಂದಾಗಿ ಕಳೆದ ವಾರವೇ 200 ಭಾರತೀಯರು ಮರಳಿದ್ದರು. ಆಗ ವಿದ್ಯಾರ್ಥಿಗಳಿಗೆ ಮಾಹಿತಿ ಇರಲಿಲ್ಲವೇ ಎಂಬುದಕ್ಕೆ ಪ್ರತಿಕ್ರಯಿಸಿ, ವಿದ್ಯಾರ್ಥಿಗಳು ಬ್ಯಾಚ್‌ಗಳಲ್ಲಿ ಭಾರತಕ್ಕೆ ಮರಳುತ್ತಿದ್ದು, ಈ ಬ್ಯಾಚ್ ಕಡೆಯದಾಗಿತ್ತು. ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗುವುದು ಎಂದು ತಿಳಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!