16.2 C
Karnataka
Wednesday, December 18, 2024

    Co Operative Movement: ರಾಷ್ಟ್ರದ ಆರ್ಥಿಕತೆಗೆ ಪೋಷಕವಾಗಿರುವ ವ್ಯವಸ್ಥೆಯನ್ನು ದುರ್ಬಲಗೊಳಿಸಬಾರದು – ಜಿ.ಟಿ. ದೇವೇಗೌಡ

    Must read


    BENGALURU FEB 25
    ರಾಷ್ಟ್ರದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಸಹಕಾರ ಚಳವಳಿಯ ಬಗ್ಗೆ ಅಪಪ್ರಚಾರ ಸಲ್ಲದು. ರಾಷ್ಟ್ರದ ಅರ್ಥವ್ಯವಸ್ಥೆಗೆ ಪೋಷಕವಾಗಿರುವ ಸಹಕಾರಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಮಾಡಬಾರದೆಂದು ಶಾಸಕರು, ಮಾಜಿ ಸಚಿವರು, ಸಹಕಾರಿ ಮುಖಂಡರೂ ಆದ ಜಿ.ಟಿ. ದೇವೇಗೌಡರು ಮನವಿ ಮಾಡಿಕೊಂಡಿದ್ದಾರೆ.

    ಅವರು ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬಗ್ಗೆ ಭಾರವಾದ ಹೃದಯದಿಂದ ಪ್ರತಿಕ್ರಿಯಿಸಿದ್ದಾರೆ. ಅವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ತಮಗಿರುವ ಕಳಕಳಿಯನ್ನು ವ್ಯಕ್ತ ಮಾಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸಹಕಾರ ಸಂಘಗಳ ಬಗೆಗಿನ ವರದಿ ಬಗ್ಗೆ ತುಂಬಾ ಚಿಂತಿತನಾಗಿದ್ದೇನೆ. ವರದಿಗಳ ಬಗ್ಗೆ ಮಾಧ್ಯಮಗಳನ್ನು ನಾನು ಖಂಡಿತ ಆಕ್ಷೇಪಿಸುತ್ತಿಲ್ಲ. ಅವರ ಕೆಲಸ, ದಕ್ಷತೆ ಬಗ್ಗೆ ತುಂಬಾ ಮೆಚ್ಚುಗೆ ಇದೆ. ಆದರೆ ಪ್ರಮುಖ ದೈನಿಕವೊಂದರಲ್ಲಿ ಪ್ರಕಟವಾದ ವರದಿ ನನಗೆ ನೋವು ತಂದಿದೆ ಎಂದು ಅವರು ಹೇಳಿದ್ದಾರೆ.

    ವಿಶ್ವ ಮನ್ನಣೆಗಳಿಸಿದ ಸಹಕಾರ

    ಭಾರತದಲ್ಲಿ ಸಹಕಾರಿ ಚಳವಳಿ ಆರ್ಥಿಕ ವ್ಯವಸ್ಥೆಯ ಆಶ್ರಯದ ಬಂಡೆಯಂತಿದೆ. ಸಮತಾವಾದ, ಬಂಡವಾಳಶಾಹಿ ನಡುವಿನ ಸುವರ್ಣ ಮಾಧ್ಯಮ ಎನಿಸಿಕೊಂಡಿದೆ. ಕೃಷಿ ಕ್ರಾಂತಿ, ಶ್ರೇತ ಕ್ರಾಂತಿಯ ಶಿಲ್ಪಿ ಆಗಿದೆ. ಅಮೂಲ್, ಇಫ್ಕೋ, ಕ್ರಿಬ್ಕೋ ಸಂಸ್ಥೆಗಳು ವಿಶ್ವ ಮನ್ನಣೆ ಗಳಿಸಲು ಕಾರಣವೆನಿಸಿದೆ.

    ಅಪಪ್ರಚಾರದ ಪ್ರಭಾವ ಎಷ್ಟೇ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಸಹಕಾರ ವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚುತ್ತಿರುವುದನ್ನು, ಹಾಗೆಯೇ ಜನತೆ ಜಾಗೃತರಾಗುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಹಕಾರ ಕ್ಷೇತ್ರದ ಬೆಳವಣಿಗೆ, ಸಾಧನೆ ಬಗ್ಗೆ ಹೊಟ್ಟೆಕಿಚ್ಚಿನಿಂದ ತಪ್ಪು ಮಾಹಿತಿಗಳ ಮೂಲಕ ಮಾಧ್ಯಮಗಳನ್ನು ಸೇರಿದಂತೆ ಸಾರ್ವಜನಿಕರನ್ನು ದಾರಿ ತಪ್ಪಿಸಿ, ಜನಸಮುದಾಯ ಸಹಕಾರಿ ವ್ಯವಸ್ಥೆಯನ್ನು ಅನುಮಾನದಿಂದ ನೋಡುವಂತೆ ಮಾಡುವ ಪ್ರಯತ್ನ ರಾಷ್ಟ್ರದ ದೃಷ್ಠಿಯಿಂದ, ಸಮಾಜದ ದೃಷ್ಠಿಯಿಂದ ಒಳ್ಳೆಯದಲ್ಲ.

    ಸಹಕಾರ ಚಳವಳಿ ವಿಶ್ವಮಾನ್ಯತೆ ಗಳಿಸಿದೆ. ಭಾರತದಲ್ಲಿ ಬೃಹತ್ ಸಹಕಾರಿ ವ್ಯವಸ್ಥೆಯ ಜಾಲವಿದೆ. 8 ಲಕ್ಷ ಸಹಕಾರ ಸಂಸ್ಥೆಗಳು 30 ಕೋಟಿ ಸದಸ್ಯರು ಇದ್ದು ರಾಷ್ಟ್ರದ ಅರ್ಥ ವ್ಯವಸ್ಥೆಗೆ ಪೋಷಕವಾಗಿದೆ.ಕರ್ನಾಟಕದಲ್ಲಿ 45 ಸಾವಿರ ಸಹಕಾರ ಸಂಘಗಳಿದ್ದು, 2 ಕೋಟಿ 45 ಲಕ್ಷ ಸದಸ್ಯರಿದ್ದಾರೆ. “ಆಡು ಮುಟ್ಟದ ಸೊಪ್ಪಿಲ್ಲ’’ ಎನ್ನುವಂತೆ ಸಹಕಾರಿ ವ್ಯವಸ್ಥೆ ಜೀವನದ ಎಲ್ಲ ಪ್ರಾಕಾರಗಳನ್ನು ಆವರಿಸಿಕೊಂಡಿದೆ. ಬಡತನ ನಿವಾರಣೆ, ಉದ್ಯೋಗಸೃಷ್ಠಿಗೆ ಆದ್ಯತೆ ನೀಡಿದೆ.

    ಯಾವುದೇ ಚಳವಳಿ, ಯಾವುದೇ ವ್ಯವಸ್ಥೆ ಬೃಹತ್ ಪ್ರಮಾಣದಲ್ಲಿ ಬೆಳೆಯಲಾರಂಭಿಸಿದಾಗ ಸಣ್ಣಪುಟ್ಟ ಲೋಪಗಳು ಸಹಜವಾಗಿ ಕಂಡುಬರುತ್ತವೆ. ಅವು ಮಾರಕವಾಗುವಷ್ಟು ಬಲಿಷ್ಠವಾಗೇನೂ ಇರುವುದಿಲ್ಲ. ಇಂತಹ ಪರಿಸ್ಥಿತಿಯನ್ನೇ ಸಹಕಾರ ವ್ಯವಸ್ಥೆ ಎದುರಿಸುತ್ತಿದೆ. ಸಹಕಾರ ಚಳವಳಿ ಪ್ರಜಾಸತ್ತಾತ್ಮಕ ವಿಧಿವಿಧಾನಗಳ ಅಡಿ ಕೆಲಸ ಮಾಡುವುದರಿಂದ ಮಾನವ ಸಹಜ ದೌರ್ಬಲ್ಯ ಇಣಿಕಿ ಹಾಕುವ ಸಂಭವವಿರುತ್ತದೆ. ಆ ಬಗ್ಗೆ ಕಳವಳಪಡಬೇಕಾದ ಅಗತ್ಯವಿಲ್ಲ.

    ವಿಶ್ವದ ಅರ್ಥತಜ್ಞರ ಮೆಚ್ಚುಗೆ

    ಅಮೇರಿಕಾ ಸೇರಿದಂತೆ ವಿಶ್ವದ ಅರ್ಥ ವ್ಯವಸ್ಥೆ ಕುಸಿದಾಗ, ಬ್ಯಾಂಕುಗಳು ದಿವಾಳಿ ಹಂತ ತಲುಪಿದಾಗ ಭಾರತದ ಸಹಕಾರಿ ಬ್ಯಾಂಕುಗಳು ಅಂಜದೆ, ಅಳುಕದೆ ದಿಟ್ಟತನದಿಂದ ಪ್ರಗತಿಯತ್ತ ಸಾಗಿದುದು ವಿಶ್ವದ ಅರ್ಥತಜ್ಞರ ಮೆಚ್ಚುಗೆಗೆ ಪಾತ್ರವಾಯಿತು.
    ಇಂದಿಗೂ ಭಾರತದಲ್ಲಿ ರೈತರ, ಗ್ರಾಮೀಣ ಜನರ ಬದುಕನ್ನು ಹಸನು ಮಾಡಲು ಸಹಕಾರಿ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆ ಇಲ್ಲದಿರುವುದು ಕಣ್ಣಿಗೆ ಕಟ್ಟಿದಂತಿದೆ.

    ಭಾರತದಲ್ಲಿ 1500ಕ್ಕೂ ಹೆಚ್ಚು, ಕರ್ನಾಟಕದಲ್ಲಿ 260ಕ್ಕೂ ಹೆಚ್ಚು ಪಟ್ಟಣ ಸಹಕಾರಿ ಬ್ಯಾಂಕುಗಳಿವೆ. ಲಕ್ಷಾಂತರ ಕೋಟಿ ರೂ. ಠೇವಣಿಗಳಿವೆ, ಲಕ್ಷಾಂತರ ಕೋಟಿ ರೂ. ಸಾಲ ವಿತರಣೆಯಾಗುತ್ತಿದೆ. ಅಂತ ಸಂದರ್ಭದಲ್ಲಿ ಅಲ್ಲೊಂದು, ಇಲ್ಲೊಂದು ಬ್ಯಾಂಕಿನಲ್ಲಿ ಆಗಬಹುದಾದ ಲೋಪವನ್ನು ಸಾರ್ವತ್ರೀಕರಣಗೊಳಿಸಲಾಗದು. ಸಹಕಾರಿ ಬ್ಯಾಂಕುಗಳು ರಿಜರ್ವ್ ಬ್ಯಾಂಕ್ ಮತ್ತು ರಾಷ್ಟ್ರದ ಎಲ್ಲ ಕಾನೂನು, ನಿಯಮಗಳ ಅಡಿ ಕೆಲಸ ಮಾಡುತ್ತಿವೆ. ಸ್ವೇಚ್ಛೆಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ತಪ್ಪು ಮಾಡಿದ ಸಂಘಗಳು ಹಾಗೂ ವ್ಯಕ್ತಿಗಳು ಶಿಕ್ಷೆಗೆ ಒಳಗಾಗಿದ್ದು, ವ್ಯವಸ್ಥೆ ಪಾರದರ್ಶಕವಾಗಿದೆ. ಹಾಗೆಯೇ ಕೃಷಿ, ಹೈನುಗಾರಿಕೆ, ಸಹಕಾರ ಸಂಘಗಳೂ ಸಹ ಜನಪರ ಧೋರಣೆಯೊಂದಿಗೆ ಕೆಲಸ ಮಾಡುತ್ತಿವೆ. ದೊಡ್ಡ ಪ್ರಮಾಣದ ಪ್ರಯತ್ನದಲ್ಲಿ ಸಣ್ಣ ಪ್ರಮಾಣದ ಲೋಪವನ್ನು ದೊಡ್ಡದು ಮಾಡಿ ಅಪಪ್ರಚಾರಕ್ಕೆ ಅವಕಾಶ ಕೊಡುವುದು ಬೇಡ.

    ಮಾಧ್ಯಮಗಳು ಜನರ ಭಾವನೆಗಳ ಮೇಲೆ, ನಂಬಿಕೆಗಳ ಮೇಲೆ ಅಪಾರ ಪರಿಣಾಮ ಬೀರುತ್ತವೆ. ಮಾಧ್ಯಮಗಳ ಮೂಲಕ ಪಟ್ಟಭದ್ರರು ಸಹಕಾರ ಕ್ಷೇತ್ರದ ಮೇಲೆ ಅಪಪ್ರಚಾರ ನಡೆಸಿದಾಗ ಜನತೆ ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಇದು ರಾಷ್ಟ್ರದ ಹಿತದೃಷ್ಠಿಯಿಂದ ಒಳ್ಳೆಯದಲ್ಲ. ಅದು ಕಳವಳಕ್ಕೆ ಕಾರಣವಾಗಿದೆ. ಕರ್ನಾಟಕದ ಜನತೆ ಪ್ರಬುದ್ಧರಾಗಿದ್ದಾರೆ. ಸಹಕಾರ ತತ್ವದಲ್ಲಿ, ವ್ಯವಸ್ಥೆಯಲ್ಲಿ ನಂಬಿಕೆ, ವಿಶ್ವಾಸವನ್ನು ಇರಿಸಿಕೊಂಡವರಿದ್ದಾರೆ.

    ಆತಂಕದ ಅಗತ್ಯವಿಲ್ಲ

    ಕರ್ನಾಟಕದಲ್ಲಿ ಕಾರ್ಯನಿರತವಾಗಿರುವ 36532 ಸಹಕಾರ ಸಂಘಗಳಲ್ಲಿ 2460ಸಂಘಗಳು ನಿಷ್ಕ್ರಿಯವಾಗಿವೆ ಎಂದರೆ ಅದು ಹಲವು ದಶಕಗಳ ಕಾಲದ ಕೂಡಿಬಂದಿರುವ ಪ್ರಕ್ರಿಯೆ ಹಾಗೂ 50 ವಿಭಾಗಗಳಲ್ಲಿ ಕ್ರೋಢೀಕೃತವಾದ ಸಂಖ್ಯೆಯಾಗಿದೆ. ಇದು ಗಾಬರಿಯಾಗುವಂತಹುದಲ್ಲ. ಒಂದೆರಡು ಬ್ಯಾಂಕುಗಳು ಮಾಡಿರಬಹುದಾದ ತಪ್ಪುಗಳ ತನಿಖೆ ನಡೆಯುತ್ತಿದ್ದು, ಯಾವ ಠೇವಣಿದಾರರೂ ಆತಂಕಪಡಬೇಕಾದ ಅಗತ್ಯವಿಲ್ಲವೆಂಬ ಭರವಸೆ ಇದೆ.

    ನಮ್ಮ ರಾಜ್ಯದ ಸಹಕಾರ ಸಂಘಗಳಲ್ಲಿನ ಠೇವಣಿ ಮೊತ್ತ, ಲಾಭ ಗಳಿಸುತ್ತಿರುವ ಸಂಘಗಳ ಸಂಖ್ಯೆ, ಸದಸ್ಯರ ಸಂಖ್ಯೆಗಳು ವ್ಯವಸ್ಥೆಯ ಭದ್ರತೆಗೆ ಸಾಕ್ಷಿ ಎನಿಸಿವೆ. ಸಹಕಾರ ಸಂಘಗಳಲ್ಲಿನ ಲೋಪಕ್ಕೆ ತಕ್ಕ ಶಿಕ್ಷೆ ನೀಡುವ ಬಗ್ಗೆ ಸಹಕಾರಿ ಕಾನೂನು ತಿದ್ದುಪಡಿಗೆ ಪ್ರಯತ್ನಗಳು ನಡೆದಿವೆ.ಸಹಕಾರ ಸಂಘಗಳು ತಮ್ಮ ನೋಂದಣಿಯನ್ನು ಪ್ರತಿ ವರ್ಷ ನವೀಕರಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ.ಹೀಗಾಗಿ ನಮ್ಮ ರಾಜ್ಯದ ಸಹಕಾರ ಸಂಘಗಳು, ಸಹಕಾರಿ ವ್ಯವಸ್ಥೆ ಕೆಲವೇ ಕೆಲವು ದೌರ್ಬಲ್ಯಗಳ ನಡುವೆಯೂ ಸಶಕ್ತವಾಗಿದ್ದು ಯಾರೂ ಯಾವುದೇ ಸಂದರ್ಭದಲ್ಲೂ ಕಳವಳಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲವೆಂದು ತಿಳಿಸುತ್ತಿದ್ದೇನೆ ಎಂದು ಜಿ ಟಿ ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!