ನಮ್ಮ ಭಾರತೀಯ ಪರಂಪರೆಯಲ್ಲಿ ಶಿವನಿಗೆ ಬಹಳ ಮಹತ್ವದ ಸ್ಥಾನವಿದೆ. ಹಿಂದೂ ಪಂಚಾಂಗದ ಪ್ರಕಾರ ಒಂದು ವರ್ಷದಲ್ಲಿ ಹನ್ನೆರಡು ಶಿವರಾತ್ರಿಗಳು ಬರುತ್ತವೆ. ಸಾಮಾನ್ಯವಾಗಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯನ್ನು ಮಾಸ ಶಿವರಾತ್ರಿ ಎನ್ನುತ್ತೇವೆ. ಆದರೆ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿಯು ಮಹಾಶಿವರಾತ್ರಿ ಎಂದು ಹೆಸರಾಗಿದ್ದು, ಶಿವನ ಭಕ್ತರ ಪಾಲಿಗೆ ಮಂಗಳಕರ ರಾತ್ರಿಯಾಗಿದೆ.
ಇದು ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆಯಾಗಿದ್ದು (ಅಂದರೆ ನಿದ್ರಿಸದೆ ಎಚ್ಚರವಾಗಿದ್ದು) ಶಿವನ ಧ್ಯಾನವನ್ನು ಮಾಡಿ, ಶಿವನ ಕೃಪೆಗೆ ಪಾತ್ರರಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲ ಪರಿಹಾರವಾಗಿ, ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಮದುವೆಯಾಗದ ಹೆಣ್ಣು ಮಕ್ಕಳು ಶಿವಗುಣರೂಪಿಯಾದ ಅನುರೂಪದ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ.
ಮಹಾಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ ಸುಖ, ಶಾಂತಿ, ಸಮೃದ್ಧಿ ದೊರೆಯುತ್ತದೆ ಎಂಬುದು ಆಸ್ತಿಕರ ನಂಬಿಕೆ. ತನ್ನನ್ನು ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯನೆಂದೇ ಹೆಸರಾದ ಶಿವನಿಗೆ ಈ ದಿನ ವಿಶೇಷ ಪೂಜೆಗಳು ನಡೆಯುತ್ತವೆ.
ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ
ಕೈಲಾಸವಾಸಿ ಎಂದೇ ಖ್ಯಾತನಾದ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾದ ಅನುಗ್ರಹವನ್ನು ನೀಡುವುದಾಗಿ ಸ್ವತಃ ಶಿವನೇ ಪಾರ್ವತಿಗೆ ಹೇಳಿದ್ದಾನೆ ಎನ್ನುತ್ತದೆ ಶಿವಪುರಾಣ. ಹಾಗೆಯೇ ಪುರಾಣಗಳ ಪ್ರಕಾರ ಈ ದಿನ ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನ ಎಂಬುದು ವಿಶೇಷ. ಪರ್ವತರಾಜ ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡೀ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಆದ್ದರಿಂದಲೇ ಈ ದಿನ ಮದುವೆಯಾಗದ ಹೆಣ್ಣು ಮಕ್ಕಳು ಶಿವನನ್ನು ಪೂಜಿಸುತ್ತಾ ಧ್ಯಾನಿಸಿದರೆ ಅವರಿಗೆ ಸೂಕ್ತವಾದ ವರ ದೊರಕುತ್ತಾನೆ ಎನ್ನುವ ನಂಬಿಕೆ ಇದೆ.
ಜೊತೆಗೆ ಶಿವನು ರುದ್ರತಾಂಡವವನ್ನಾಡಿದ ರಾತ್ರಿಯೂ ಇದೇ ಎನ್ನಲಾಗುತ್ತದೆ. ದೇವತೆಗಳು ಮತ್ತು ಅಸುರರು ಒಟ್ಟಾಗಿ ಸಮುದ್ರ ಮಂಥನ ನಡೆಸುತ್ತಿದ್ದಾಗ, ಭಯಂಕರವಾದ ಕಾಲಕೂಟ ವಿಷವು ಉದ್ಭವವಾಯಿತು. ಅದನ್ನು ಶಿವನು ಕುಡಿದಾಗ, ವಿಷ ಗಂಟಲೊಳಗಿಂದ ಕೆಳಗೆ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣ. ಹಾಗಾಗಿ ಭಕ್ತರು ಇಡೀ ರಾತ್ರಿ ಎಚ್ಚರವಾಗಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ.
ಮತ್ತೊಂದು ಕಥೆಯ ಪ್ರಕಾರ ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಧುಮುಕಿದ್ದ ಗಂಗೆಯನ್ನು ಕೆಳಗೆ ಬೀಳದಂತೆ ಶಿವನು ತನ್ನ ಜಟೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ.
ಅನುಗ್ರಹ ನೀಡಿದ ದಿನವಿದು
ಲಿಂಗಪುರಾಣದ ಪ್ರಕಾರ ಶಿವನು ಲಿಂಗರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು ಎಂದೂ ಹೇಳುತ್ತಾರೆ. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮರಿಗೆ ಶಿವನು ಈ ದಿನದಂದು ಲಿಂಗರೂಪದಲ್ಲಿ ದರ್ಶನ ನೀಡಿದ ಎಂದು ಪ್ರತೀತಿಯಿದೆ. ಒಮ್ಮೆ ಬ್ರಹ್ಮ ಹಾಗು ವಿಷ್ಣುವಿನ ನಡುವೆ ತಮ್ಮಲ್ಲಿ ಯಾರು ಶ್ರೇಷ್ಠರು ಎಂಬ ವಾದವಿವಾದ ಏರ್ಪಡುತ್ತದಂತೆ. ಅವರಿಬ್ಬರನ್ನು ಸಮಾಧಾನಪಡಿಸುವುದು ಕಷ್ಟವಾದಾಗ ಇತರ ದೇವತೆಗಳು ಶಿವನನ್ನು ಪ್ರಾರ್ಥಿಸುತ್ತಾರಂತೆ. ಆಗ ಶಿವನು ವಿಷ್ಣು ಮತ್ತು ಬ್ರಹ್ಮರ ನಡುವೆ ಅಗ್ನಿ ಕಂಭದ ರೂಪದಲ್ಲಿ ನಿಂತು ತನ್ನ ಆದಿ, ಅಂತ್ಯವನ್ನು ಕಂಡು ಹಿಡಿದವರೇ ಶ್ರೇಷ್ಠರು ಎಂದು ಹೇಳುತ್ತಾನಂತೆ. ಆಗ ಹಂಸದ ರೂಪ ತಾಳಿದ ಬ್ರಹ್ಮ ಶಿವನ ಆದಿ ತುದಿಯನ್ನು ಹುಡುಕಲು ಮೇಲ್ಮುಖವಾಗಿ ಹೊರಟರೆ, ವಿಷ್ಣು ಶಿವನ ಅಂತ್ಯ ತುದಿಯನ್ನು ಕಾಣಲು ವರಾಹ ರೂಪ ತಾಳಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ದೂರ ಸಾಗಿದರೂ ಅವರಿಬ್ಬರಿಗೂ ಆ ಶಿವನ ಅಗ್ನಿಕಂಭದ ಮೂಲವೇ ತಿಳಿಯಲಾಗುವುದಿಲ್ಲ. ಆಗ ಬ್ರಹ್ಮನು ಅಗ್ನಿ ಕಂಭದ ತಲೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಪವನ್ನು ಸಾಕ್ಷಿಯಾಗಿರಿಸಿಕೊಂಡು ಬಂದು ತಾನು ಶಿವನ ತಲೆಯನ್ನು ಮುಟ್ಟಿ ಅಲ್ಲಿಂದ ಈ ಕೇತಕಿ ಹೂವನ್ನು ತಂದೆನೆಂದು ಸುಳ್ಳು ಹೇಳುತ್ತಾನಂತೆ. ಅದು ಹೌದೆನ್ನುತ್ತದೆ. ವಿಷ್ಣು ತನ್ನಿಂದ ಅಗ್ನಿ ಕಂಭದ ಮೂಲವನ್ನು ಕಂಡು ಹಿಡಿಯಲಾಗಲಿಲ್ಲ ಎಂದು ನಿಜವನ್ನು ಹೇಳುತ್ತಾನಂತೆ. ಆಗ ಶಿವನು ಕೋಪಗೊಂಡು ಬ್ರಹ್ಮನಿಗೆ ಭೂಲೋಕದಲ್ಲಿ ಪೂಜೆಯಿಲ್ಲದಂತೆಯೂ, ಕೇತಕೀ ಹೂವನ್ನು ಪೂಜೆಗೆ ಬಳಸದಿರುವಂತೆಯೂ ಶಾಪವನ್ನು ನೀಡಿ ಲಿಂಗರೂಪ ತಾಳುತ್ತಾನೆ. ಆ ದಿನವೇ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯ ಶಿವರಾತ್ರಿಯಾಗಿರುತ್ತದೆ ಎನ್ನುತ್ತಾರೆ.
ಬೇಡರ ಕಣ್ಣಪ್ಪ
ಶಿವರಾತ್ರಿ ಆಚರಣೆ ಕುರಿತಾಗಿ ಪ್ರಚಲಿತವಿರುವ ಮತ್ತೊಂದು ಕಥೆಯೊಂದು ಹೀಗಿದೆ: ಬಹಳ ಕಾಲದ ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ಹೋಗಿದ್ದ. ದಾರಿ ತಪ್ಪಿದ ಆತ ಅರಣ್ಯದಲ್ಲೇ ಅಲೆದಾಡತೊಡಗಿದ. ಸಂಜೆಯಾಗುತ್ತಾ ಬಂದರೂ ಆತನಿಗೆ ಯಾವುದೇ ಬೇಟೆಯೂ ಸಿಗಲಿಲ್ಲ ಜೊತೆಗೆ ಕಾಡಿನಿಂದ ಹೊರ ಬರುವ ದಾರಿಯೂ ಕಾಣಲಿಲ್ಲ. ನಿಧಾನವಾಗಿ ಕತ್ತಲು ಆವರಿಸಿಕೊಳ್ಳತೊಡಗಿತು. ಇನ್ನು ನೆಲದ ಮೇಲಿದ್ದರೆ ಕ್ರೂರ ಪ್ರಾಣಿಗಳಿಂದ ಅಪಾಯ ತಪ್ಪಿದ್ದಲ್ಲವೆಂದು ತಿಳಿದ ಆ ಬೇಡ ಹತ್ತಿರದಲ್ಲಿ ಕಂಡ ಮರವನ್ನು ಹತ್ತಿ ಕುಳಿತ. ರಾತ್ರಿ ಮರದ ಮೇಲೆ ನಿದ್ರೆ ಮಾಡಿದರೆ ಕೆಳಗೆ ಬೀಳುವ ಅಪಾಯವಿದೆ ಎಂದು ಭಾವಿಸಿ, ರಾತ್ರಿಯಿಡೀ ಎಚ್ಚರನಾಗಿ ಕುಳಿತ. ಹೊತ್ತು ಕಳೆಯಲು, ಬೇಸರ ನೀಗಲು ತಾನು ಕುಳಿತ ಮರದ ಎಲೆ, ಚಿಗುರುಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಮರದ ಕೆಳಗೆ ಇದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಅವನು ಏರಿ ಕುಳಿತಿದ್ದ ಮರ ಬಿಲ್ವಪತ್ರೆಯ ಮರವಾಗಿತ್ತು. ಹಾಗೂ ಆ ದಿನ ರಾತ್ರಿಯು ಮಹಾ ಶಿವರಾತ್ರಿಯಾಗಿತ್ತು.
ಹಗಲೆಲ್ಲಾ ಯಾವುದೇ ಬೇಟೆ ಸಿಗದೆ, ಉಪವಾಸವಿದ್ದು, ರಾತ್ರಿಯೆಲ್ಲಾ ಜಾಗರಣೆಯಾಗಿದ್ದು ಶಿವನಿಗೆ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಆ ಬೇಡನು ಅಲ್ಲಿವರೆಗೆ ಮಾಡಿದ್ದ ಪಾಪಗಳೆಲ್ಲಾ ಪರಿಹಾರವಾಗಿ ಅವನಿಗೆ ಶಿವನ ಅಭಯ ಸಿಕ್ಕಿತು. ಶಿವನು ಅವನನ್ನು ರಕ್ಷಿಸಿ, ಅವನಿಗೆ ಮನೆಗೆ ಹೋಗುವ ದಾರಿಯನ್ನು ತೋರಿಸಿಕೊಟ್ಟನು. ಆ ಬೇಡ ಮುಂದಿನ ಜನ್ಮದಲ್ಲಿ ರಾಜ ಚಿತ್ರಭಾನುವಾಗಿ ಜನ್ಮ ತಾಳಿದ. ಅಂದಿನಿಂದ ಭಕ್ತರು ಶಿವನನ್ನು ಶಿವರಾತ್ರಿಯಂದು ಜಾಗರಣೆಯಾಗಿದ್ದು, ಬಿಲ್ವ ಪತ್ರೆಗಳಿಂದ ಪೂಜಿಸಲು ಆರಂಭಿಸಿದರು. ಮಹಾಭಾರತದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನು ಈ ಕಥೆಯನ್ನು ಧರ್ಮರಾಯನಿಗೆ ಹೇಳುತ್ತಾನೆ.
ರಾತ್ರಿ ಪೂಜೆಯೇ ವಿಶೇಷ
ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿ ಹೊತ್ತು ಪೂಜೆ, ಭಜನೆ ನಡೆಯುವ ಹಬ್ಬ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಈ ದಿನ ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನದೀವಿಗೆಯನ್ನು ಬೆಳಗಿಸುತ್ತಾನೆ ಎಂಬ ನಂಬಿಕೆ ಇದೆ.
ಕಾಶಿ ವಿಶ್ವನಾಥನೂ ಸೇರಿದಂತೆ ಹನ್ನೆರಡು ಜ್ಯೋತಿರ್ಲಿಂಗಗಳ, ರಾಜ್ಯ, ದೇಶ-ವಿದೇಶಗಳ ಶಿವನ ದೇವಾಲಯಗಳಲ್ಲಿ ಮಹಾಶಿವರಾತ್ರಿಯ ದಿನ ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಧಿಸಲಾಗುತ್ತದೆ. ಇಡೀ ರಾತ್ರಿ ಶಿವನ ದೇವಾಲಯಗಳಲ್ಲಿ ರುದ್ರ ಪಠಣದ ಜೊತೆಗೆ ಜಾಗರಣೆ ನಡೆಯುತ್ತದೆ.
ಶಿವರಾತ್ರಿಯಂದು ಬೆಳಿಗ್ಗೆ ಬೇಗನೆ ಏಳುವ ಭಕ್ತರು ಸ್ನಾನಾದಿಗಳನ್ನು ಮಾಡಿ ಶುಚಿರ್ಭೂತರಾಗಿ, ಶಿವನ ದೇವಾಲಯಕ್ಕೆ ತೆರಳುತ್ತಾರೆ. ಕೆಲವರು ಕೈಲಾಸಯಂತ್ರ ರಚಿಸಿ ಮನೆಯಲ್ಲೇ ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಗಂಗಾ, ಯಮುನಾ, ಬ್ರಹ್ಮಪುತ್ರ, ಕೃಷ್ಣ, ಕಾವೇರಿ, ತ್ರಿವೇಣಿ ಸಂಗಮ ಸೇರಿದಂತೆ ಪುಣ್ಯನದಿಗಳಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಕೆಲವರು ಹಾಲು, ಹಣ್ಣು ಸೇರಿದಂತೆ ಲಘು ಉಪಾಹಾರವನ್ನು ಸೇವಿಸಿದರೆ, ಇನ್ನೂ ಕೆಲವರು ದಿನವಿಡೀ ಏನನ್ನೂ ತಿನ್ನದೆ, ನೀರನ್ನೂ ಕುಡಿಯದೇ ಉಪವಾಸ ಇರುತ್ತಾರೆ. ಹಣೆಗೆ ವಿಭೂತಿ ಭಸ್ಮವನ್ನು ಲೇಪಿಸಿಕೊಂಡು ದಿನವಿಡೀ ಬಿಲ್ವಾರ್ಚನೆಯ ಮೂಲಕ ರುದ್ರ ಪಠಣ ನಡೆಸುತ್ತಾರೆ.
ಅಭಿಷೇಕ ಪ್ರಿಯ ಎಂದೇ ಪ್ರಖ್ಯಾತನಾದ ಶಿವನಿಗೆ ದಿನವಿಡೀ, ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯುತ್ತದೆ. ಪ್ರತಿ ಮೂರು ಗಂಟೆಗಳಿಗೊಮ್ಮೆ ಶಿವನಿಗೆ ಅಭಿಷೇಕ ಮಾಡಲಾಗುತ್ತದೆ. ಬಿಲ್ವಪತ್ರೆ, ತುಳಸಿ, ಶ್ರೀಗಂಧ, ಹಾಲು, ಜೇನುತುಪ್ಪಗಳಿಂದ ಅಭಿಷೇಕ ನಡೆಯುತ್ತದೆ.ಓಂ ನಮಃ ಶಿವಾಯ’ ಎಂಬ ಶಿವ ಪಂಚಾಕ್ಷರಿ ಮಂತ್ರ,
ಹರ, ಹರ ಮಹಾದೇವ’ ಎಂಬ ಸ್ತೋತ್ರಗಳಿಂದ ದೇವಾಲಯಗಳೆಲ್ಲಾ ಮಾರ್ದನಿಗೊಳ್ಳುತ್ತವೆ. ನಾಲ್ಕು ಆಯಾಮಗಳ ರುದ್ರ ಪಠಣ ಶಿವರಾತ್ರಿಯ ವಿಶೇಷ. ಶಿವಪುರಾಣದ ಪ್ರಕಾರ ರುದ್ರ ಹಾಗೂ ಚಮಕಗಳ ಪಠಣ ಶಿವನಿಗೆ ಬಹಳ ಅಚ್ಚುಮೆಚ್ಚು. ದೇವಾಲಯಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿ ಮರುದಿನದ ಮುಂಜಾನೆ 6 ಗಂಟೆಯವರೆಗೂ ರುದ್ರ ಪಠಣದ ಮೂಲಕ ಶಿವಸ್ತುತಿ ಜಾಗರಣೆ ನಡೆಯುತ್ತದೆ. ಪ್ರತಿ ಮೂರು ಗಂಟೆಗಳಿಗೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಮರುದಿನದ ಬೆಳಿಗ್ಗೆ 6 ಗಂಟೆಗೆ ಮಹಾ ಮಂಗಳಾರತಿ ಮೂಲಕ ಜಾಗರಣೆ ಕೊನೆಗೊಳ್ಳುತ್ತದೆ. ಮೊದಲನೇ ಆಯಾಮದಲ್ಲಿ ಹಾಲು, ಎರಡನೇ ಆಯಾಮದಲ್ಲಿ ಮೊಸರು ಮೂರನೇ ಆಯಾಮದಲ್ಲಿ ತುಪ್ಪ, ನಾಲ್ಕನೇ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯು ಕೆಲವೆಡೆ ಇದೆ.
ಪಂಚಾಕ್ಷರಿ ಮಂತ್ರ
ನಮಃ ಶಿವಾಯ-ಇದು ಶಿವ ಪಂಚಾಕ್ಷರಿ ಮಂತ್ರವಾಗಿದೆ. ಯಜುರ್ವೇದದಲ್ಲಿನ ರುದ್ರಾಧ್ಯಾಯದಲ್ಲಿ ನಮಃ ಶಿವಾಯ ಈ ಶಬ್ದದಿಂದ ಒಂದು ಉಪ ಭಾಗ ಪ್ರಾರಂಭವಾಗುತ್ತದೆ. ಈ ಮಂತ್ರವನ್ನು ಅಲ್ಲಿಂದಲೇ ತೆಗೆದುಕೊಳ್ಳಲಾಗಿದೆ. ಇದರ ಪ್ರಾರಂಭದಲ್ಲಿ ಪ್ರಣವವನ್ನು ಸೇರಿಸಿದರೆ, ಅದು ಓಂ ನಮಃ ಶಿವಾಯ ಎಂಬ ಷಡಕ್ಷರಿ ಮಂತ್ರವಾಗುತ್ತದೆ.
“ನಮಃ ಶಿವಾಯ’’ ಮಂತ್ರದಲ್ಲಿನ ಪ್ರತಿಯೊಂದು ಅಕ್ಷರದ ಆಧ್ಯಾತ್ಮಿಕ ಅರ್ಥ ಹೀಗಿದೆ:
ನ: – ಸಮಸ್ತ ಲೋಕಗಳ ಆದಿದೇವ
ಮಃ:- ಪರಮಪದವನ್ನು ಕೊಡುವವನು ಮತ್ತು ಮಹಾಪಾತಕಗಳನ್ನು ನಾಶಗೊಳಿಸುವವನು
ಶಿ:- ಕಲ್ಯಾಣ ಕಾರಕ, ಶಾಂತ ಮತ್ತು ಶಿವನ ಅನುಗ್ರಹಕ್ಕೆ ಕಾರಣನಾದವನು
ವಾ:- ವೃಷಭ ವಾಹನ, ವಾಸುಕಿ ಮತ್ತು ವಾಮಾಂಗಿ ಶಕ್ತಿಗಳ ಸೂಚಕ
ಯ:- ಪರಮಾನಂದ ರೂಪ ಮತ್ತು ಶಿವನ ನಿವಾಸಸ್ಥಾನ. ಆದುದರಿಂದ ಈ ಐದು ಅಕ್ಷರಗಳಿಗೆ ನಮಸ್ಕಾರ.
ಎಲ್ಲ ಆಡಂಬರಗಳಿಂದ ಮುಕ್ತರಾಗಿ ಸರಳ ಮನಸ್ಸಿನಿಂದ ಪರಶಿವನ ನೆನೆದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ. ಶಿವನು ಸರಳತೆ, ಪ್ರಾಮಾಣಿಕತೆ, ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲ ಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಷ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ, ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿಯಂದು ಧ್ಯಾನಿಸಿದರೆ ಆತ ಪ್ರಸನ್ನನಾಗುತ್ತಾನೆ ಎಂದು ಹಿರಿಯರು ಹೇಳುತ್ತಾರೆ.
ಶ್ರೀಶಂಕರಾಚಾರ್ಯರು ಶಿವಾನಂದ ಲಹರಿಯಲ್ಲಿ ಶಿವನನ್ನು ಸ್ತುತಿಸಿದ್ದಾರೆ. ಅದನ್ನು ಈ ವಿಡಿಯೋದಲ್ಲಿ ಆಲಿಸಿ.
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.