BENGALURU MAR 1
ಮಂಗಳವಾರ ಮುಂಜಾನೆ ಉಕ್ರೇನ್ ನ Kharkiv ನಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತ ಪಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ.
ರಾಜ್ಯದ ಹಾವೇರಿ ಮೂಲದವರಾದ ನವೀನ್ ಉಕ್ರೇನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬೆಳಿಗ್ಗೆ ಅಂಗಡಿಗೆ ಹೋಗಲೆಂದು ಹೊರಗೆ ಬಂದಾಗ ಈ ದುರಂತ ಸಂಭವಿಸಿದೆ. ತಮ್ಮ ಮಗನ ಬಗ್ಗೆ ದುಃಖದಿಂದ ಮಾತನಾಡಿದ ತಂದೆ ಶೇಖರಗೌಡ ಗ್ಯಾನ ಗೌಡರ್ ಇಂದು ಮುಂಜಾನೆಯಷ್ಟೆ ತಮ್ಮ ಮಗ ದೂರವಾಣಿ ಕರೆ ಮಾಡಿದ್ದ. ಪ್ರತಿ ದಿನ ಎರಡು ಮೂರು ಬಾರಿ ದೂರವಾಣಿ ಮೂಲಕ ಮಾತಾಡುತ್ತಿದ್ದ ಎಂದು ವಿವರಿಸಿದರು.
ವಿಷಯ ಗೊತ್ತಾದ ಕೂಡಲೆ ನವೀನ್ ಅವರ ತಂದೆ ಶೇಖರಗೌಡ ಅವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದರು. ಇದು ನಿಜಕ್ಕೂ ದೊಡ್ಡ ದುರಂತ. ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ.ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.