BENGALURU MAR 5
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 410 ಪ್ರಾಂಶುಪಾಲರ ಹುದ್ದೆಗಳಿಗೆ ಹಿರಿಯ ಉಪನ್ಯಾಸಕರನ್ನು ಪ್ರಭಾರಿ ಪ್ರಾಂಶುಪಾಲರಾಗಿ ಕೌನ್ಸೆಲಿಂಗ್ ಮೂಲಕ ನೇಮಕ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹುದ್ದೆಗಳಲ್ಲಿ ಗ್ರೇಡ್-1 ದರ್ಜೆಯ 327 ಹುದ್ದೆಗಳು ಪದವಿ ಕಾಲೇಜುಗಳಲ್ಲಿ ಮತ್ತು ಗ್ರೇಡ್-2 ದರ್ಜೆಯ 38 ಹುದ್ದೆಗಳು ಸ್ನಾತಕೋತ್ತರ ಕೋರ್ಸ್ ಇರುವ ಪದವಿ ಕಾಲೇಜುಗಳಲ್ಲಿ ಲಭ್ಯವಿವೆ. ಈ ಹುದ್ದೆಗಳಲ್ಲಿ ಇದುವರೆಗೂ ಕಾರ್ಯ ನಿರ್ವಹಿಸುತ್ತಿದ್ದವರು ಫೆಬ್ರವರಿ ತಿಂಗಳಲ್ಲಿ ನಿವೃತ್ತರಾಗಿದ್ದಾರೆ. ಹೀಗಾಗಿ, ಕಾಲೇಜುಗಳಲ್ಲಿ ನಾಯಕತ್ವದ ಕೊರತೆ ಉಂಟಾಗಬಾರದೆಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಪ್ರಾಂಶುಪಾಲರ ಹುದ್ದೆ ಖಾಲಿ ಇರುವ ಕಾಲೇಜುಗಳ ವಿವರಗಳನ್ನು ಕೌನ್ಸೆಲಿಂಗ್ ಆರಂಭಿಸುವುದಕ್ಕೂ 15 ದಿನಗಳ ಮೊದಲೇ ಕಾಲೇಜು ಶಿಕ್ಷಣ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಪ್ರಭಾರಿ ನೇಮಕ ಪ್ರಕ್ರಿಯೆಯಲ್ಲೂ ಸೇವಾಜ್ಯೇಷ್ಠತೆಯ ಆಧಾರದ ಮೇಲೆಯೇ ಆಯ್ಕೆ ಶ್ರೇಣಿ ಉಪನ್ಯಾಸಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರನ್ನು ಮಾತ್ರವೇ ಕೌನ್ಸಿಲಿಂಗಿಗೆ ಕರೆಯಲಾಗುವುದು. ಜತೆಗೆ, ಈ ಹುದ್ದೆಗೆ ಆಯ್ಕೆಯಾಗುವವರು ಬೋಧಿಸುವಂತಹ ವಿಷಯವು ಆಯಾ ಕಾಲೇಜಿನಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಕಾಲೇಜುಗಳಿಗೆ ಕಾಯಂ ಪ್ರಾಂಶುಪಾಲರ ನೇಮಕ ಪ್ರಕ್ತಿಯೆಗೆ ಚಾಲನೆ ಸಿಕ್ಕಿದೆ. ಸದ್ಯದಲ್ಲೇ ಅದು ಕೂಡ ನಡೆಯಲಿದೆ. ಅಲ್ಲಿಯವರೆಗೆ ಪ್ರಭಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಕೌನ್ಸೆಲಿಂಗ್:ಸರಕಾರಿ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಯನ್ನು ಕೂಡ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲೇ ನಡೆಸಲು ತೀರ್ಮಾನಿಸಲಾಗಿದ್ದು, ಈ ಪ್ರಕ್ರಿಯೆ ಕೂಡ ಕೌನ್ಸೆಲಿಂಗ್ ಮೂಲಕವೇ ನಡೆಯಲಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಗೆ ಕೆಎಟಿ ತಡೆಯಾಜ್ಞೆ ನೀಡಿದ್ದರಿಂದ, ಇದು ನನೆಗುದಿಗೆ ಬಿದ್ದಿತ್ತು. ಈಗ ಈ ತಡೆಯಾಜ್ಞೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ ಎಂದು ಅವರು ವಿವರಿಸಿದ್ದಾರೆ.