ಅನಿವರಂ ತಂದಪೆವೇ( ಅಳಿದವರನ್ನು ಮತ್ತೆ ತರುತ್ತೇವೆಯೇ?)– ಜಗತ್ತು ಇಂದಿಗೆ ಸಂಘರ್ಷದೊಂದಿಗೆ ಹೆಜ್ಜೆಯಿಡುತ್ತಿದೆ . ರಷ್ಯಾ ಮತ್ತು ಉಕ್ರೇನಿಗೆ ಇಂದು ಯುದ್ಧಕಾಲವಾಗಿದೆ. ನಿಜ ಅರ್ಥದಲ್ಲಿ ಅವರೆ ಕಷ್ಟಕ್ಕೆ ನೇರ ಭಾಗಿಗಳು.
ಬೆಂಕಿ ದೂರವಿದ್ದರೂ ಆದರ ಕರಿನೆರಳು ಬಹುದೂರದವರೆಗೂ ಆವರಿಸುವಂತೆ ಪರೋಕ್ಷವಾಗಿ ನಾವೂ ಕೂಡ ಭಾಗಿಗಳಾಗುತ್ತಿದ್ದೇವೆ (ಪೆಟ್ರೋಲ್,ಚಿನ್ನದ ದರದ ಏರಿಕೆ ಇತ್ಯಾದಿಗಳನ್ನು ಗಮನಿಸಿ) ಅನ್ನಿಸುತ್ತಿದೆ.
ಯುದ್ಧಗಳು ಮಾನವ ಲೋಕದ ಮಾಯದ ಗಾಯಗಳು. ಅಹಮಿಕೆಯ ಕಾರಣಕ್ಕೆ ನಡೆದ ಒಂದೊಂದು ಯುದ್ಧಗಳೂ ಒಂದೊಂದು ಬೃಹತ್ ವೃಣವೇ. ಪ್ರಸ್ತುತ ಮಹಾಭಾರತ ಯುದ್ಧದ ಸಂದರ್ಭದಲ್ಲಿ ತೊಂಬತ್ತೊಂಬತ್ತು ಮಕ್ಕಳನ್ನು ಕಳೆದುಕೊಂಡು ಉಳಿದ ಒಬ್ಬ ಮಗ ದುರ್ಯೋಧನನ್ನು ನಮ್ಮ ಪಾಲಿಗೆ ನೀನಾದರೂ ಉಳಿದುಕೋ ಎನ್ನುವ ಗಾಂಧಾರಿ ಇಂದಿಗೆ ಅತ್ಯಂತ ಪ್ರಸ್ತುತ.
‘ಸತ್ತ ಮಗಂದಿರ್ ಸತ್ತರ್ ನೀನೆಮಗುಳ್ಳೊಡೆ ಸಾಲ್ವುದವರನಿಂ ತಂದಪೆವೇ’ ‘ಶಕ್ತಿಕವಿ’ ರನ್ನನ ‘ಸಾಹಸ ಭೀಮ ವಿಜಯಂ’ ನ ‘ಧೃತರಾಷ್ಟ್ರ ವಚನಂ’ ನಲ್ಲಿ ಗಾಂಧಾರಿ ಹೇಳುವ ಮಾತುಗಳಿವು. ಸತ್ತ ಮಕ್ಕಳು ಸತ್ತರು! ಹೋಗಲಿ ಬಿಡು! ನೀನೊಬ್ಬ ನಮ್ಮ ಪಾಲಿಗೆ ಉಳಿದರೆ ಅಷ್ಟು ಮಕ್ಕಳ ದುಃಖವನ್ನು ನಿನ್ನನ್ನು ನೋಡಿಯೇ ಮರೆಯುವೆ ಎನ್ನುವ ತಾಯಿಯ ಮಾತು ಎಂಥವರ ಮನಸ್ಸನ್ನೂ ಕಲಕುತ್ತದೆ. ಹೆತ್ತೊಡಲಿನ ಸಂಕಟವನ್ನು ವಿವರಿಸಲು ಪದಗಳಿಲ್ಲ. ಇಂಥ ಎಷ್ಟು ತಾಯಿಹೃದಯಗಳು ರಷ್ಯಾ- ಉಕ್ರೇನ್ ಯುದ್ಧದಲ್ಲಿ ಕಳೆದುಕೊಂಡ ಜೀವಗಳಿಗಾಗಿ ಪರತಪಿಸುತ್ತಿವೆಯೋ ತಿಳಿದಿಲ್ಲ. ಈ ಯುದ್ಧ ಇಲ್ಲಿಗೆ ಸಾಕು ಅನ್ನಿಸುತ್ತಿದೆ.
ಯುದ್ಧದ ಪರಿಣಾಮ ಇದು. ಯುದ್ಧಗಳು ಪ್ರಚೋದನೆಗಾಗಿ, ಪ್ರತಿಷ್ಟೆಗಾಗಿ, ಸೇಡಿಗಾಗಿ. ಮಣ್ಣು-ಹೊನ್ನಿಗಾಗಿ ನಡೆದಿರಬಹುದು ಆದರೆ ಅದರ ಕೆಡುಕು ಮನುಕುಲವನ್ನೇ ಕಾಡುತ್ತದೆ. ಅಣುಬಾಂಬ್ ಸ್ಫೋಟದಿಂದಾದ ದುಷ್ಪರಿಣಾಮ ಇನ್ನೂ ಜೀವಂತವಾಗಿರುವಾಗಲೆ ಇಂಥ ಯುದ್ಧಗಳು ಬೇಕೇ ಎನ್ನಿಸುತ್ತದೆ. ಇಂದಿಗೆ ರಷ್ಯಾ -ಉಕ್ರೇನ್ ಯುದ್ಧ ಪ್ರಾರಂಭವಾಗಿ 11 ದಿನಗಳು. ಯಾರದು ಮೇಲುಗೈ? ಯಾರಿಗೆ ಹಿನ್ನಡೆ? ನಮಗದು ಅನವಶ್ಯಕ. ಸದ್ಯ ಆಗಿರುವ ಹಾನಿಯನ್ನು ಭರಿಸಿಕೊಳ್ಳಲು ಇನ್ನೆಷ್ಟು ದಿನಗಳು ಬೇಕೋ ? ತಿಳಿದಿಲ್ಲ . ಇನ್ನು ಜೀವಹಾನಿ ತರಿಸುವ ನೋವು ಸಂಕಟ ಯಾವುದರಿಂದಲೂ ಭರಿಸಲಾಗದ್ದು ಈ ಕ್ಷಣಕ್ಕಾದರೂ ಯುದ್ಧ ಕೊನೆಗೊಂಡು ಉಭಯರಾಷ್ಟ್ರಗಳಲ್ಲಿ ಶಾಂತಿ ನೆಲಸಲಿ ಎಂಬ ಸದಾಶಯ ಅಷ್ಟೇ.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.