ಕಿಡ್ನಿ ಫೇಲ್ ಕುರಿತು ಜನರು ಭಯಪಡುವ ಅಗತ್ಯವಿಲ್ಲ, ಇದಕ್ಕೆ ಸೂಕ್ತವಾದ ಚಿಕಿತ್ಸೆಯಿದೆ ಎಂದು ಮೂತ್ರಪಿಂಡ ತಜ್ಞರಾದ ಡಾ. ಸಂದೀಪ ಹುಯಿಲಗೋಳ ಹೇಳಿದ್ದಾರೆ. ಇವರು ಬಾಗಲಕೋಟೆಯ ಜನಪ್ರಿಯ ವೈದ್ಯರು ಮತ್ತು Prepare Edutech ಎಂಬ ದೇಶದ ಮೊದಲ ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಲಿಕಾ ತಾಣವಾದ preped.in ನ ಸಿಇಒ ಮತ್ತು ಸಹ-ಸ್ಥಾಪಕರು. ವಿಶ್ವ ಮೂತ್ರಪಿಂಡ ದಿನಾಚರಣೆ ಪ್ರಯುಕ್ತ (World Kidney Day ) ನಮ್ಮ ವೆಬ್ ತಾಣದ ಓದುಗರಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ, ಕಿಡ್ನಿ ತೊಂದರೆಗಳ ಕುರಿತು ಜನರಲ್ಲಿರುವ ಸಾಕಷ್ಟು ತಪ್ಪುಕಲ್ಪನೆಗಳನ್ನೂ ಈ ಲೇಖನದಲ್ಲಿ ಹೋಗಲಾಡಿಸಲು ಪ್ರಯತ್ನಿಸಿದ್ದಾರೆ.
ಕಿಡ್ನಿ ಅಥವಾ ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗ. ಶರೀರದೊಳಗಿನ ಕಲ್ಮಶಗಳನ್ನು ಬೇರ್ಪಡಿಸಿ ಹೊರಗೆ ಹಾಕುವುದು ಇದರ ಕೆಲಸ. ಸಾಮಾನ್ಯವಾಗಿ ಕಿಡ್ನಿ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿವಳಿಕೆಗಿಂತ ತಪ್ಪು ತಿಳಿವಳಿಕೆಯೇ ಹೆಚ್ಚಾಗಿವೆ. ಒಮ್ಮೆ ಕಿಡ್ನಿ ಸಮಸ್ಯೆ ಬಂದರೆ ಅದನ್ನು ಪರಿಹರಿಸಲು ಸಾಧ್ಯವಿಲ್ಲ. ಡಯಾಲಿಸಿಸ್ ಚಿಕಿತ್ಸೆ ಶುರುವಾದರೆ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಇದು ಭಯಕ್ಕೂ ಕಾರಣವಾಗಿದೆ. ಆದರೆ, ಕಿಡ್ನಿ ಸಮಸ್ಯೆಯ ಕುರಿತು ಇಂತಹ ತಪ್ಪು ಕಲ್ಪನೆಯ ಅಗತ್ಯವಿಲ್ಲ ಎಂದು ಕನ್ನಡದ ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಇಂಗ್ಲಿಷ್ ಮತ್ತು ಕನ್ನಡ ಮಿಶ್ರಿತ ಪಾಠದ ಮೂಲಕ ಸರಳವಾಗಿ ವಿದ್ಯಾರ್ಥಿಗಳಿಗೆ ಹೇಳಿಕೊಡುವಂತಹ ವಿನೂತನ ಮೊಬೈಲ್ ಅಪ್ಲಿಕೇಷನ್ ಮತ್ತು ವೆಬ್ಸೈಟ್ ನೀಡಿದ ಡಾ. ಸಂದೀಪ ಹುಯಿಲಗೋಳ ಅಭಿಪ್ರಾಯಪಟ್ಟಿದ್ದಾರೆ.
ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಇದೆ, ಭಯ ಬೇಡ
“ಕಿಡ್ನಿ ಸಮಸ್ಯೆ ಉಂಟಾಗುವ ಎಲ್ಲರೂ ಅನಗತ್ಯ ಭಯಪಡಬೇಕಾಗಿಲ್ಲ. ಕಿಡ್ನಿಗೆ ಸಂಬಂಧಿಸಿದ ಶೇಕಡ 90-95 ಸಮಸ್ಯೆಗಳು ತಾತ್ಕಾಲಿಕವಾಗಿರುತ್ತವೆ. ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಕೊಮಡು ಚಿಕಿತ್ಸೆ ಪಡೆದರೆ ಎಲ್ಲವೂ ಸರಿಯಾಗಿ ಮತ್ತೆ ಮೊದಲಿನಂತೆ ಆರೋಗ್ಯಕರ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ಡಾ. ಸಂದೀಪ್ ಹೇಳಿದ್ದಾರೆ.
ಕಿಡ್ನಿ ಸಮಸ್ಯೆ ತಿಳಿದುಕೊಳ್ಳುವುದು ಹೇಗೆ?
“ಕಿಡ್ನಿ ತೊಂದರೆಗಳ ಬಗ್ಗೆ ಏಕೆ ತಿಳಿದುಕೊಳ್ಳಬೇಕು? ಸಮಸ್ಯೆ ಬಂದಾಗ ನೋಡೋಣ ಎಂಬ ಭಾವನೆ ಕೆಲವರಲ್ಲಿದೆ. ಇದು ದೊಡ್ಡ ತಪ್ಪು. ಏಕೆಂದರೆ, ಈ ಸಮಸ್ಯೆ ವ್ಯಕ್ತಿಗೆ ಅರ್ಥವಾಗುವುದೇ ತುಂಬಾ ತಡವಾಗಿ. ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಮೊದಮೊದಲು ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ತುಂಬಾ ತಡವಾದಗ ಕಿಡ್ನಿ ಸಮಸ್ಯೆಯ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತಿಲ್ಲ. ಕೈಕಾಲು ಮುಖ ಊದಿಕೊಂಡಿವೆ, ಸುಸ್ತಾಗುತ್ತಿದೆ, ಕಿಡ್ನಿ ಸಮಸ್ಯೆ ಉಂಟಾಗಿರಬಹುದು ಎಂದು ವೈದ್ಯರ ಬಳಿಗೆ ಹೋಗುವ ಹೊತ್ತಿಗೆ ಸಮಸ್ಯೆ ಸಾಕಷ್ಟು ಉಲ್ಬಣವಾಗಿರುತ್ತದೆ. ಮೊದಲೇ ತಿಳಿದಿದ್ದರೆ ಚಿಕಿತ್ಸೆ ಪಡೆಯುತ್ತಿದ್ದೇವು ಎಂದು ನಂತರ ಕೊರಗುತ್ತಾರೆ. ರೋಗ ಕೊನೆಯ ಹಂತ ತಲುಪಿದ ನಂತರ ಚಿಂತಿಸುವ ಬದಲು ಮೊದಲೇ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಉತ್ತಮ” ಎಂದು ರಾಜ್ಯದ ಪ್ರಮುಖ ಕಿಡ್ನಿ ತಜ್ಞರಾದ ಡಾ. ಸಂದೀಪ ಹುಯಿಲಗೋಳ ಸಲಹೆ ನೀಡಿದ್ದಾರೆ.
India’s 1st study app for Paramedical & Nursing students in Kannada
World Kidney Day- ತಪಾಸಣೆ ಮಾಡಿಸಿಕೊಳ್ಳುವುದು ಯಾಕೆ ಅಗತ್ಯ?
ಸುಮ್ಮನೆ ಏಕೆ ತಪಾಸಣೆ ಮಾಡಿಸಿಕೊಳ್ಳಬೇಕು ಅಥವಾ ಯಾರು ತಪಾಸಣೆ ಮಾಡಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಅದಕ್ಕೂ ಉತ್ತರವಿದೆ. ಅನುವಂಶಕವಾಗಿ ಮಧುಮೇಹ ಅಥವಾ ಕಿಡ್ನಿ ಸಮಸ್ಯೆಗಳು ಇದ್ದವರು, ಅಧಿಕ ರಕ್ತದೊತ್ತಡ ಇರುವವರು, ಹರೆಯದಲ್ಲೇ ಅತ್ಯಂತ ರಕ್ತದೊತ್ತಡದಿಂದ ಬಳಲುತ್ತಿರುವವರು ಹಾಗೂ ಕೈ ಕಾಲು ಮುಖದಲ್ಲಿ ಬಾವು ಕಾಣಿಸಿಕೊಂಡವರು ಕೂಡಲೇ, ತಡಮಾಡದೆ ತಪಾಸಣೆ ಮಾಡಿಸಿಕೊಳ್ಳಬೇಕು. ನಲವತ್ತು ವರ್ಷ ಮೇಲ್ಪಟ್ಟವರೂ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇನ್ನು ಸಣ್ಣಪುಟ್ಟ ಕಾರಣಗಳಿಗೆ ಮೇಲಿಂದ ಮೇಲೆ ನೋವು ನಿವಾರಕ ಮಾತ್ರೆ ನುಂಗುವವರು, ಧೂಮಪಾನ ಮಾಡುವವರು ಕೂಡ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಡಾ. ಸಂದೀಪ ಹುಯಿಲಗೋಳ ಹೇಳಿದ್ದಾರೆ.
World Kidney Day- ತಪಾಸಣೆ ದುಬಾರಿಯಲ್ಲ
ರಕ್ತ, ಮೂತ್ರ ಅಥವಾ ರಕ್ತದೊತ್ತಡ ತಪಾಸಣೆ ಮಾಡಿಸಿಕೊಂಡರೆ ಸಾಕು. ಇದಕ್ಕೆ ತಗಲುವ ವೆಚ್ಚ ೩೦೦ರಿಂದ ೫೦೦ ರೂ. ಅಷ್ಟೇ. ಇಷ್ಟು ಹಣವನ್ನು ಏಕೆ ಖರ್ಚು ಮಾಡುವುದು ಎಂದು ಕೆಲವರು ಅಂದುಕೊಳ್ಳಬಹುದು. ಪ್ರತಿದಿನ ನಾವು ಇದಕ್ಕಿಂತ ಹೆಚ್ಚು ಖರ್ಚು ಮಾಡುವಾಗ ನಮ್ಮ ಬದುಕಿನ ಪ್ರಶ್ನೆಯಾಗಿರುವ ಕಿಡ್ನಿ ತಪಾಸಣೆ ಅತ್ಯಂತ ಅಗತ್ಯ. ತಪಾಸಣೆ ನಂತರ ಸಮಸ್ಯೆ ಇಲ್ಲದಿದ್ದರೆ ನಿಶ್ಚಿಂತೆಯಿಂದ ಮನೆಗೆ ಮರಳಬಹುದು. ಅಕಸ್ಮಾತ್ ಸಮಸ್ಯೆ ಇದ್ದರೆ ಮೊದಲ ಹಂತದಲ್ಲೇ ತಿಳಿಯಿತು ಎಂದುಕೊಂಡು ಸಕಾಲದಲ್ಲೇ ಅಗತ್ಯ ಚಿಕಿತ್ಸೆ ಪಡೆಯಬಹುದು. ಇದರಿಂದ ಕಡಿಮೆ ಸಮಯದಲ್ಲಿ ಮೊದಲಿನಂತೆ ಆರೋಗ್ಯಕರ ಬದುಕು ಸಾಧಿಸುವ ಅವಕಾಶ ಹೆಚ್ಚಿರುತ್ತದೆ. ಆರ್ಥಿಕ ಹೊರೆಯೂ ತಪ್ಪುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಆಲ್ಟ್ರಾ ಸೌಂಡ್ ಅಥವಾ ಕಿಡ್ನಿ ಬಯಾಪ್ಸಿ ಎಂಬ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಇವು ಎಲ್ಲರಿಗೂ ಅಗತ್ಯವಿರುವುದಿಲ್ಲ.
World Kidney Day- ಕಿಡ್ನಿ ಸಮಸ್ಯೆಗೆ ಕಾರಣವೇನು?
ದೀರ್ಘಕಾಲಿಕ ಕಿಡ್ನಿ ಸಮಸ್ಯೆಗಳು ಉಂಟಾಗಲು ಶೇ. ೩೦ರಿಂದ ಶೇ. ೪೦ರಷ್ಟು ಮಧುಮೇಹವೇ ಕಾರಣ. ಮಧುಮೇಹ ಅಥವಾ ಅಧಿಕ ರಕ್ತದೊತ್ತಡವು ಕಿಡ್ನಿ ಸಮಸ್ಯೆಗೆ ಶೇ. ೫೦ರಷ್ಟು ಕಾರಣವಾಗುತ್ತದೆ ಅಧಿಕ ರಕ್ತದೊತ್ತಡವೇ ಕಿಡ್ನಿ ಸಮಸ್ಯೆಗಳಿಗೆ ಕಾರಣ ಎಂಬುದು ಜಾಗತಿಕವಾಗಿ ಸಾಬೀತಾಗಿದೆ. ಆದರೆ, ಭಾರತದಲ್ಲಿ ಮಾತ್ರ ಸಮಸ್ಯೆಗಳಿಗೆ ನಿಖರ ಕಾರಣ ತಿಳಿದಿಲ್ಲ. ಏಕೆಂದರೆ ವೈದ್ಯರ ಸಲಹೆ ಇಲ್ಲದೆ ಅನವಶ್ಯಕವಾಗಿ ಔಷಧ ಸೇವಿಸುವ ರೂಢಿ ಭಾರತದಲ್ಲಿ ಹೆಚ್ಚಾಗಿದೆ. ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದು ಮತ್ತೊಂದು ಪ್ರಮುಖ ಕಾರಣ. ಇನ್ನು ಸೋಂಕು ಹಾಗೂ ರಕ್ತದೊತ್ತಡಗಳಿಂದ ತಾತ್ಕಾಲಿಕವಾಗಿ ಕಿಡ್ನಿ ವೈಫಲ್ಯ ಆಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಕೊರೊನಾ ಭಯದಿಂದ ಎಲ್ಲರೂ ಸ್ವಯಂ ಚಿಕಿತ್ಸೆ ಮಾಡುತ್ತಿದ್ದು, ಅತಿಯಾಗಿ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ. ಇದರಿಂದಲೂ ತೊಂದರೆ ಉಂಟಾಗಬಹುದು.
ಸಮಸ್ಯೆಯ ಲಕ್ಷಣ
ವಿಪರೀತ ದಣಿವು, ಮೂತ್ರ ವಿಸರ್ಜನೆ ಸಂದರ್ಭದಲ್ಲಿ ಸಹಿಸಲು ಸಾಧ್ಯವಾಗದಷ್ಟು ನೋವು, ಮೂತ್ರದಲ್ಲಿ ರಕ್ತ ಬರುವುದು, ಅತಿ ಕಡಿಮೆ ಅಥವಾರ್ಝನಿ ವೈಫಲ್ಯದ ಲ ಅತಿ ಹೆಚ್ಚು ಮೂತ್ರ ವಿಸರ್ಜನೆ, ಮೂತ್ರದಲ್ಲಿ ನೊರೆ ಬರುವುದು, ಕೈಕಾಲು ಮುಖ ಕಣ್ಣು ಊದಿಕೊಳ್ಳುವುದು, ಊಟ ರುಚಿಸದೆ ಇರುವುದು ಹಾಗೂ ಅಧಿಕ ರಕ್ತದೊತ್ತಡವು ಕಿಡ್ನಿ ವೈಫಲ್ಯದ ಲಕ್ಷಣಗಳಾಗಿವೆ.
ಕಿಡ್ನಿ ಕಾರ್ಯವೇನು? ಕಿಡ್ನಿ ಹೇಗಿರುತ್ತದೆ?
ನಮ್ಮ ದೇಹದೊಳಗಿನ ನೀರಿನ ಅಂಶದಲ್ಲಿ ಸಮತೋಲನ ಕಾಯ್ದುಕೊಳ್ಳುವುದು, ಕಲ್ಮಶಗಳನ್ನು ಹೊರಗೆ ಹಾಕುವುದು ಹಾಗೂ ರಕ್ತದೊತ್ತಡ ನಿಯಂತ್ರಿಸುವುದು ಕಿಡ್ನಿಯ ಪ್ರಮುಖ ಕಾರ್ಯಗಳಾಗಿವೆ. ಇದರ ಜೊತೆಗೆ ರಕ್ತ ಉತ್ಪಾದನೆಗೂ ಕಿಡ್ನಿ ಕಾರಣವಾಗುತ್ತದೆ. ಏಕೆಂದರೆ, ರಕ್ತ ಉತ್ಪಾದನೆಯಾಗುವುದು ಎಲುಬಿನಲ್ಲ. ಅದಕ್ಕೆ ಬೇಕಾದ ಎರಿಥ್ರೋಪಾಯೊಟಿನ್ ಎಂಬ ಹಾರ್ಮೋನ್ ಕಿಡ್ನಿಯಿಂದ ಉತ್ಪಾದನೆಯಾಗುತ್ತದೆ. ಇನ್ನು ಎಲುಬುಗಳು ಮತ್ತು ಹಲ್ಲುಗಳಿಗೆ ಅಗತ್ಯವಿರುವ ಕಾಲ್ಷಿಯಂ ಹಾಗೂ ಪಾಸ್ಪರಸ್ ಕೂಡ ದೇಹದಲ್ಲಿ ಸಮತೋಲವಾಗಿದೆ ಎಂದರೆ ಅದಕ್ಕೆ ಕಿಡ್ನಿಯೇ ಕಾರಣವಾಗಿದೆ.
ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ಒಂದು ಕಿಡ್ನಿಯು ಹತ್ತರಿಂದ ಹನ್ನೆರಡು ಸೆಂ.ಮೀ. ಉದ್ದ ಹಾಗೂ ನಾಲ್ಕರಿಂದ ಐದು ಸೆಂ.ಮೀ. ಅಗಲವಿರುತ್ತದೆ. ಇದರ ತೂಕ 150-200 ಗ್ರಾಂ ಇರುತ್ತವೆ. ಇವುಗಳಿಂದ ಕಲ್ಮಶ ಹೊರಗೆ ಹಾಕುವ ಕೆಲಸ ನಡೆಯುತ್ತದೆ.
ಕಿಡ್ನಿಗಳ ಮುಖ್ಯ ಕೆಲಸವೇನು?
ಕಿಡ್ನಿ (ಸಂಖ್ಯೆಯಲ್ಲಿ ಎರಡು ಇರುತ್ತದೆ) ದೇಹದ ಬಹುಮುಖ್ಯ ಅಂಗಗಳು. ಇವು ಮುಖ್ಯವಾಗಿ ನಾಲ್ಕು ಮುಖ್ಯ ಕೆಲಸಗಳನ್ನು ನಿರ್ವಹಿಸುತ್ತವೆ.
• ದೇಹದಲ್ಲಿ ನೀರಿನ ಸಮತೋಲನ ಕಾಯ್ದುಕೊಳ್ಳುವಿಕೆ ಹಾಗೂ ದೇಹದ ಚಯಾಪಚಯ ಕ್ರಿಯೆಯ ಕಲ್ಮಶಗಳನ್ನು ಹೊರಹಾಕುವಿಕೆ (ಮೂತ್ರ ಉತ್ಪತ್ತಿ ಮಾಡುವುದು).
• ರಕ್ತ ಶುದ್ಧೀಕರಣ
• ಮೂಳೆಗಳಿಗೆ ಕ್ಯಾಲ್ಸಿಯಂ ಸಮತೋಲನ
• ಹಿಮಗ್ಲೋಬಿನ್ ಉತ್ಪತ್ತಿ, ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವುದು.
ಕಿಡ್ನಿ ಫೈಲೂರ್ ಎಂದರೇನು?
ಮೇಲೆ ತಿಳಿಸಿದ ನಾಲ್ಕು ಕೆಲಸಗಳಲ್ಲಿ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿ ಇವುಗಳಲ್ಲಿ ಯಾವುದಾದರೊಂದು ಕೆಲಸಗಳಲ್ಲಿ ಏರುಪೇರಾದರೆ ಅದು ಮೂತ್ರಪಿಂಡ ವೈಫಲ್ಯ ಎನಿಸುವುದು.
2022 World Kidney Day Theme- ೨೦೨೨ರ ಕಿಡ್ನಿ ದಿನದ ಘೋಷವಾಕ್ಯ
ಪ್ರತಿವರ್ಷ ಕಿಡ್ನಿದಿನಕ್ಕೆ ವಿಶೇಷ ಥೀಮ್ ಅಥವಾ ಘೋಷವಾಕ್ಯ ಇರುತ್ತದೆ. ಈ ವರ್ಷ Bridge the knowledge gap to better kidney care ಎನ್ನುವುದು ಘೋಷವಾಕ್ಯವಾಗಿದೆ. ಅಂದರೆ, ಅತ್ಯುತ್ತಮ ಕಿಡ್ನಿ ಕಾಳಜಿಗಾಗಿ ಜ್ಞಾನದ ಕೊರತೆಯನ್ನು ನಿವಾರಿಸುವ ಉದ್ದೇಶವನ್ನು ಈ ವರ್ಷ ಹೊಂದಲಾಗಿದೆ.
- ಡಾ. ಸಂದೀಪ ಜ ಹುಯಿಲಗೋಳ
ಕಿಡ್ನಿ ತಜ್ಞರು ಮತ್ತು ಪ್ರಿಪೇರ್ ಎಜುಟೆಕ್ ಸಿಇಒ, ಸಹ-ಸ್ಥಾಪಕರು
ಬಾಗಲಕೋಟೆ
ಪ್ರಿಪೇರ್ ಎಜುಟೆಕ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ಪ್ರಿಪೇರ್ ಎಜುಟೆಕ್ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.