28.9 C
Karnataka
Saturday, September 21, 2024

    ಡಿ.ವಿ.ಜಿಯವರ ಅಂತಃಪುರಗೀತೆಗಳಲ್ಲಿ ಬೇಲೂರು ಮದನಿಕೆಯರು

    Must read

    ಸುಮಾ ವೀಣಾ

    ವಿಶ್ವಚೇತನದ ಸ್ಪಂದನವೇ ಸೌಂದರ್ಯಂ. ಅದುವೆ ಜೀವನ, ಮೂಲ ಬಂಧುರತೆ ಬೊಮ್ಮನದು- ಎಂದು ಡಿ.ವಿ.ಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ಹೇಳಿರುವಂತೆ ಸೌಂದರ್ಯ  ಸೃಷ್ಠಿ ಹಾಗು ದೃಷ್ಠಿಯ ಶುಭ ಹೊನಲು. ಸೌಂದರ್ಯವನ್ನು ಹಿಗ್ಗಿಸುವ ಸಾಧನ ಶೃಂಗಾರ. ಆಧುನಿಕ ಸರ್ವಜ್ಞ ಎಂದು ಕರೆಸಿಕೊಂಡಿರುವ ಡಿ.ವಿ.ಜಿ. ಇಲ್ಲಿ ಜಗತ್ತಿನ ರಸಿಕನೇ ಆಗಿ ‘ಆಂತ:ಪುರಗೀತೆ’ ಎಂಬ ಕೃತಿಯನ್ನು  ರಚಿಸಿ ರಸಿಕರ ಕೈಗಿತ್ತಿದ್ದಾರೆ. ಕೇಶವ ಅಂತಃಪುರದ ನಾಯಕನಾದರೆ ಶಿಲಾಬಾಲಿಕೆಯರು ಆತನ ಮನದನ್ನೆಯರು. ನಾಟ್ಯ, ಸಂಗೀತ, ಕಾವ್ಯಗಳ ರಸಾಯನವೇ ಅಂತಃಪುರಗೀತೆಗಳು ಕೃತಿ. ದೇವಾಲಯವನ್ನು ಆಶ್ರಯಿಸಿ ಅದಕ್ಕೆಂದೇ ಪ್ರತ್ಯೇಕ ಕೃತಿ ರಚನೆಯಾದ ಉದಾಹರಣೆ ನಮ್ಮಲಿಲ್ಲ. ಅದಕ್ಕೆ ಅಪವಾದವೆಂಬಂತೆ ನಾಯಕ, ನಾಯಕಿಯರ ಹಾವ, ಭಾವ, ನೃತ್ಯ ವಿಲಾಸಕ್ಕೆ ಪೂರಕವಾಗಿ ಶಿಲ್ಪವನ್ನು ಆಧರಿಸಿದ ವಿಶಿಷ್ಠ ಕೃತಿ ಅಂತಃಪುರಗೀತೆಗಳು. ಕ್ರಿ.ಶ.1117ರಲ್ಲಿ ಹೊಯ್ಸಳ ವಿಷ್ಣುವರ್ಧನ ಈ ದೇವಾಲಯವನ್ನು ನಿರ್ಮಿಸಿದ್ದಾನೆ. ಈತ ಕನ್ನಡದ ಅರಸ, ಈತನ ಪತ್ನಿ ನಾಟ್ಯರಾಣಿ ಶಾಂತಲೆ ಕನ್ನಡದವಳು, ದೇವಾಲಯ ಕನ್ನಡ ನೆಲದ್ದು, ಕವಿ ಕನ್ನಡಿಗ ಕನ್ನಡಿಗರಿಗೆ ಇದಕ್ಕಿಂತ ಹೆಮ್ಮೆ ಬೇಕೇ?.

    ಕೇಶವ ದೇವಾಲಯವೆಂದರೆ ಮದನಿಕೆಯರ ಕಿನ್ನರಲೋಕ, ಕಲ್ಲಲ್ಲಿ ಅರಳಿದ ಸುಂದರ ಶಿಲ್ಪಗಳ ತವನಿಧಿ, ಸೃಷ್ಠಿಯ ಸಚರಾಚರ ವಸ್ತುಗಳು ಇಲ್ಲಿ ಅಸ್ತಿತ್ವವನ್ನು ಪಡೆದುಕೊಂಡಿವೆ. ಕುವೆಂಪು ಅವರು ಹೇಳುವಂತೆ ಇದು ಕೇವಲ “ಶಿಲೆಯಲ್ಲ ಕಲೆಯ ಬಲೆ, ದಿವ್ಯ ಕಲೆಯ ಭವ್ಯಲೋಕ”. ಚನ್ನಕೇಶವನ ಅಂತರಂಗದ ನಾಯಕಿಯ ವಿವಿಧ ಶೃಂಗಾರ ಭಾವಗಳೇ ಈ ಕೃತಿಯ ಹೂರಣ. ಭೂಮಟ್ಟದಿಂದ 12-15 ಅಡಿಗಳ ಎತ್ತರದಲ್ಲಿ ಸುಮಾರು 300 ಕೋನದಲ್ಲಿ ಮುಂಬಾಗಿ ನಿಂತಿರುವ ಈ ವಿಗ್ರಹಗಳನ್ನು ನೋಟಕರ ದೃಷ್ಠಿಕೋನದಿಂದ ಅವುಗಳ ಸೌಂದರ್ಯ ಸಹಜವಾಗಿ ಕಾಣುವಂತೆ ಪ್ರದರ್ಶಿಸಲಾಗಿದೆ. ಮದನಿಕೆಯರ ಮುಖಮುದ್ರೆ ಹಾವ ಭಾವ-ವಿಲಾಸಗಳೆ ಎರಕವಾಗಿರುವ ಇಲ್ಲಿನ ಶಿಲ್ಪಿಗಳು ಪ್ರಮಾಣಬದ್ದ ಸ್ಫುರದ್ರೂಪಿಗಳು, ಅಡಿಯಿಂದ ಮುಡಿಯವರೆಗೆ ಶಿಲಾ ಆಭರಣಗಳನ್ನೇ ತೊಟ್ಟು ಮೆರೆಯುತ್ತಿರುವ ಈ ಶಿಲ್ಪಗಳಿಗೆ ಮುಕರಮಗ್ಧೆ, ಶುಕಭಾಷಣಿ, ಮುರಳೀಧರೆ, ವೀಣಾಪಾಣಿ, ಮುರಜಾಮೋದೆ, ನಾಗವೈಣಿಕೆ, ವಿಕಟನರ್ತಿನಿ, ನೀಲಾಂಬರೆ, ವೀಟೀಧರೆ, ಜಯನಿಷಾದಿ ತಾಂಡವೇಶ್ವರಿ ಎಂದು ಕರೆದಿರುವದು ಉಚಿತವಾಗಿದೆ. ಚನ್ನಕೇಶವನ ಆಸ್ಥಾನದ ನಿತ್ಯ ನರ್ತಕಿಯರ ನಿತ್ಯೋತ್ಸವವೇ ರಸಿಕರನ್ನು ಕೇಶವನ ದಿವ್ಯಸಾನ್ನಿಧ್ಯಕ್ಕೆ ಸೆಳೆಯುತ್ತದೆ.

    ‘ಅಂತಃಪುರ ಗೀತೆ’ಗಳು ಬಿಡಿಕವಿತೆಗಳ ಸಂಗ್ರಹ ಕೃತಿ ಜೀವಂತ ಜವ್ವನೆಯರ ಅನುಪಮ ಪ್ರತಿಕೃತಿಗಳೆಂತೆ ಇರುವ ಇವರುಗಳು ವೇದಾಂತ ರಾಜಕಾರಣಕ್ಕೆ  ಇಲ್ಲಿ  ನಾಂದಿ ಹಾಡಿದ್ದಾರೆ. ಇಡೀ ವಿಶ್ವವನ್ನು ಅಂತಃಪುರವನ್ನಾಗಿಸಿ ಭಕ್ತರನ್ನು ಪ್ರೇಮಿಗಳಾಗಿಸಿಕೊಂಡಿರುವ ಕೇಶವನ ಈ ಧೀಃಶಕ್ತಿಗೆ ನಾವು ಮೌನಿಗಳಾಗಲೇಬೇಕು. ಬೇರೆ ಕಾವ್ಯಗಳಲ್ಲಿರುವಂತೆ ನಾಂದಿ ಮುಕ್ತಾಯ, ದೇವೀಸ್ತುತಿ ಮಂಗಳ ಪದ್ಯ ಅವುಗಳ ನಡುವೆ ಕಾವ್ಯ ವಸ್ತು ಹೂರಣವಾಗಿದೆ. ಸ್ವತಃ ಸಂಗೀತ ವಿದ್ವಾಂಸ ಡಿ.ವಿ.ಜಿ ತಾಳ, ರಾಗ, ಪಲ್ಲವಿ ಅನುಪಲ್ಲವಿಗಳೊಂದಿಗೆ ಸ್ಥಿತವಾಗಿರುವ ಈ ಕೃತಿ ಪ್ರಸ್ತಾವನೆಯಲ್ಲಿ ಮದನಿಕೆಯರನ್ನು ಕೇಶವನ ರಾಣಿಯರ್, ಶುಕವಾಣಿಯರ್, ಫಣಿವೇಣಿಯರ್, ಹಾಸ್ಯ ಸಂಜ್ಞೆಯ ನೀರೆಯರ್, ಸುಶರೀರೆಯರ್ ಸಲೆ  ಪಾಡುವರ್, ಕುಣಿದಾಡುವರ್ ಎಂಬ ವಿಶೇಷಣಗಳೊಂದಿಗೆ ವರ್ಣಿಸಿದ್ದಾರೆ. “ಮನುಷ್ಯ ತಾನೇ ತನ್ನ ಆತ್ಮಶಿಲ್ಪ” ಎಂಬ ಮಾತಿನಂತೆ ಚನ್ನಕೇಶವ ಡಿ.ವಿ.ಜಿಯವರ ಪ್ರಕಾರ  ರಸಿಕಾಗ್ರಗಣ್ಯ. ತನ್ನ ಮನದನ್ನೆಯವರ ಸನ್ನೆಯನರಿತು ಸ್ಪಂದಿಸುವ ಲಾವಣ್ಯಮೂರ್ತಿಯಾಗಿದ್ದಾನೆ. ಅಂದರೆ ಕೇಶವ ಲೋಕದ ಜನರ ಮನೋವಾಂಛೆಯನರಿತು ಸಕಲ ಇಷ್ಟಾರ್ಥ ಕರುಣಿಸುವವನಾಗಿದ್ದಾನೆ.

    ಕೃತಿಯ ಪ್ರಾರಂಭಕ್ಕೆ ಪ್ರಸ್ತಾವನೆ ಎಂಬ ಶೀರ್ಷಿಕೆಯಡಿ 25 ಕಂದ ಪದ್ಯಗಳ ಮೂಲಕ ಕೃತಿಗೆ ಮುಂದಡಿಯಿಡುತ್ತಾರೆ. ಬೇಲೂರ ಶಿಲಾಬಾಲಾಮಣಿಯರ್, ಮದನಿಕೆಯರ್, ಸ್ಮರಗುಣನಿಕೆಯರ್ ಮಧುಕರಣಿಕೆಯರ್, ವಿರಾಡ್ರಾಸಾವೇಶಿತಸತ್ವಶೀಲೆಯರ್ ಸಿರಿಕೇಶವನ ರಸವೈಭವಕ್ಕೆ ಒತ್ತಾಸೆಯಾಗಿದ್ದಾರೆ ಎಂದು ಹೇಳಿದ್ದಾರೆ.ನಿಜಕಾವ್ಯಕನ್ನಿಕೆಯ  ನರ್ತನ ಸೌಂದರ್ಯ  ರಸಿಕರಿಗೆ ಲಭಿಸುವುದು ‘ಮುಕುರದ ಮುಗ್ಧೆ’ ಎಂಬ ಕವಿತೆಯ ಮೂಲಕ  ಅರ್ಥಾತ್ ಅದೇ ಹೆಸರಿನ ಶಿಲ್ಪದಿಂದ “ಮುಗುಧೆಯಾದೆಯಾ ಕನ್ನೇ ಮುಕುರದ ಚೆನ್ನೇ” ಎಂದು ಪ್ರಾರಂಭವಾಗುವ ಈ ಕವಿತೆಯಲ್ಲಿ ಕನ್ನಡಿಯಲ್ಲಿ ತನ್ನ ಸೌಂದರ್ಯ ಸವಿಯುತ್ತಾ ತಿಲಕಧಾರಣೆ ಮಾಡಿಕೊಳ್ಳುವ ಸಲುವಾಗಿ ನಿಂತಿರುವ ಸುರಸುಂದರಿ. ಈಕೆಯೇ ನಾವು ಕರೆಯುವ ದರ್ಪಣಸುಂದರಿ. ತನ್ನ ರೂಪವನ್ನು ಕಂಡು ತಾನೇ ಸೋಲುವ ನೀರೇ, ಪ್ರೇಮಿ ಕೇಶವನಿಗೆ ಕಾಯುತ್ತಾಳೆ. ಆತನ ಆಗಮನ ತುಸು ತಡವಾದರೂ ಈಕೆಗೆ ಭಯವಂತೆ, ದುಃಖವಂತೆ, ಸುಂದರಿಯಾದ ನನ್ನನ್ನು ಬಿಟ್ಟು ಅವನೆಲ್ಲಿಹನೋ? ಎಂದು ಹುಸಿಕೋಪವನ್ನು ತೋರಿಸುತ್ತಾಳೆ. ಹೆಣ್ಣಿನ ಪೂರ್ವಾರ್ಜಿತ ಆಭರಣ ಲಜ್ಜೆ, ಸೃಷ್ಠಿಯ ಈ ಚೆಲುವಿನಲ್ಲಿ ಹೆಣ್ಣಿನ ಸೌಂದರ್ಯ ಇಮ್ಮಡಿಯಾಗುವುದು ಈಕೆಯ ಲಾವಣ್ಯದಿಂದಲೇ. ಅಂತಹ ಸೌಂದರ್ಯ ಭಂಗಿಯಿಂದಲೇ ಕೇಶವನನ್ನು ಕಣ್ಣಲ್ಲೇ ಹುಡುಕುವ ನಿರೀಕ್ಷಿಸುವ ಪ್ರತಿ ಇಲ್ಲಿ ಜೀವಂತವಾಗಿದೆ.

    “ಏನೆ ಶುಕಭಾಷಿಣಿ ಸುದ್ದಿಯೇನೇ ಮನೋಲ್ಲಾಸಿನೀ”  ಎಂದು ಕೇಳುವ ಶಿಲ್ಪವನ್ನು ನಾವು ಮುಂದೆ ಎದುರಾಗುತ್ತೇವೆ. ಈಕೆ ಗಿಳಿಯೊಂದಿಗೆ ಮಾತನಾಡುವ ನರ್ತಕಿ. ತನ್ನ ನಲ್ಲನಿಗೆ ಆ ಕೇಶವನಿಗೆ ಆ ಮುದ್ದುಗಿಳಿಯ ಮೂಲಕ ಸಂದೇಶವನ್ನು ಕಳುಹಿಸುತ್ತಾಳೆ. ಇಲ್ಲೀಕೆಯ ತಳುಕು ಬಳುಕನ್ನು ಬಾಯಲ್ಲೇ ಹೇಳಬೇಕೆ? ಕಿವಿಯಲ್ಲ ಕೇಳಬೇಕೇ? ಇಲ್ಲ ಕಣ್ಣಲ್ಲೇ ನೋಡಿ ತಣಿಯಲಿ ಎಂದೇ ನಿಂತಿದ್ದಾಳೆ ಈಕೆ. ಈ ಬಾಲೆಯ ಸೌಂದರ್ಯಕ್ಕೆ  ಪ್ರಭಾವಳಿಯಾಗಿರುವ ಬಳ್ಳಿಯ ಕೆತ್ತನೆಗೆ, ಸಖಿಯರ ಭಂಗಿಗಳಿಗೆ ಒಂದೆರಡು ಉಳಿ ಪೆಟ್ಟನ್ನು ಹೆಚ್ಚೇ ಕೊಟ್ಟಂತಿದೆ. ಕವಿ ಮಂತ್ರಮುಗ್ಧನಾಗಿ ಆ ಶಿಲ್ಪಕ್ಕೆ ‘ಶುಕಭಾಷಿಣಿ’ ಎಂದು ಕರೆದರೂ “ಗಿಳಿ ಬಿಟ್ಟು ಸೌಂದರ್ಯ  ವರ್ಣಿಸಲು ಇನ್ಯಾರೂ ಸಿಗಲಿಲ್ಲವೇ ?”ಎಂದು ಪ್ರಶ್ನಿಸಿದ್ದಾರೆ.

    ಜೀವನ ಪ್ರೇಮಿಗೆ ಯಾವಾಗಲೂ ವಸಂತೋತ್ಸವವೇ, ವಸಂತೋತ್ಸವ, ವಸಂತಕಾಲ ಎಂದರೆ ಎಲ್ಲರಿಗೂ ಬೇಕಾದುದೇ ಅಂತ ಜೀವನ ಪ್ರೀತಿಯನ್ನು ಸ್ಫುಟಗೊಳಿಸುವ ಶಿಲ್ಪ ಎಂದರೆ ‘ವಾಸಂತೀ’ ಎಂಬ ಶಿಲ್ಪ.  ಎಡಗೈಯ್ಯಲ್ಲಿ ವೀಳ್ಯವನ್ನು, ಬಲಗೈಯಲ್ಲಿ ಜೀರ್ಕೊಳವೆಯನ್ನು ಹಿಡಿದು ಪ್ರಿಯಕರನ ನಿರೀಕ್ಷೇಯಲ್ಲಿದ್ದಾಳೆ ರಾಕೇಂದುಮುಖಿ. ಅವಳಲ್ಲಿ ವಿರಹವೇದನೆ ಮಡುಗಟ್ಟಿದೆ. ಅಂತಹ ಭಗ್ನಹೃದಯಿಗೆ ಸಖಿಯರು ಅರ್ಥಾತ್ ಸಹಶಿಲ್ಪಗಳು, ಸಂತೋಷ ಸಂಜೀವಿನಿ ತುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಕೆಯನ್ನು ಸುತ್ತುವರಿದಿರುವ ಶಿಲ್ಪಗಳೆ ಅವಳನ್ನು ವಸಂತೋತ್ಸವಕ್ಕೆ ಆಹ್ವಾನಿಸುವ ಪರಿ ಎಂಥವರನ್ನು ಬೆರಗು ಗೊಳಿಸುವಂತಹದು.

    ಮುಂದಿನ ಶಿಲ್ಪಿ ‘ಕಪಿಕುಪಿತೆ’ ಈಕೆ ಸುಂದರಿ ಅಷ್ಟೇ ಕೋಪಿಷ್ಠೆಯೂ ಆಕೆಯ ಸೌಂದರ್ಯಕ್ಕೆ ಉನ್ಮಾದಕ್ಕೇರಿದ ತುಂಟಕಪಿ ತರುಣಿಯ ಸೀರೆಯನ್ನು ಎಳೆದುಹಾಕಲು ಪ್ರಯತ್ನಿಸುತ್ತಿದೆ. ಅದರೆ ಈ ತರುಣಿ ಮರದ ರೆಂಬೆಯ ತುಂಡೊಂದರಿಂದ ಮಂಗನನ್ನು ಹೊಡೆದು ಓಡಿಸಲು ಯತ್ನಿಸುವ ಪ್ರಸಂಗ ಬಿಂಬಿಸುವಂಥ ಕಪಿಕುಪಿತೆ  ಎಂಬ ಶಿಲ್ಪ ಆ ಸುಂದರಿ ಕವಿಯ ಪ್ರಕಾರ ಮಾನಭಿಮಾನಿ, ಚೆನ್ನಕೇಶವನ ಜಾಣೆ.

    ನಂತರ ನಮಗೆ ಸಿಗುವ ಶಿಲ್ಪ ‘ಲೀಲಾಕಿರಾತಿ’ ಕೋಪಗೊಂಡ ತರುಣಿ ಚಾಪಹಸ್ತಯಾಗಿ ಪಕ್ಷಿಯುಗಳದ ಚಾಪಲ್ಯ ತಪ್ಪಿಸಲು ಹೊರಟಿರುವಳು. ಆಕರ್ಣಾಂತವಾಗಿ ಬಾಣವನ್ನೆಳೆದು ಲತಾತೋರಣದಲ್ಲಿ ಕುಳಿತ ಪಕ್ಷಿದ್ವಯದತ್ತ ಬಿಡುತ್ತಿರುವ ರಮ್ಯಶಿಲ್ಪ. ಅವುಗಳ ಚಾಪಲ್ಯ ವೀಕ್ಷಣೆಯಿಂದ ತಾಪಕ್ಕೊಳಗಾದ ಈಕೆಯ ದೇಹ ಬಿಲ್ಲಿನಂತೆ ಸೆಟೆದಿರುವುದು, ಮುಖದ ತೋರಿಕೆಯ ರೌದ್ರತೆ ಮನುಷ್ಯ ಸಹಜ  ಈರ್ಷೆಯನ್ನು ಬಿಂಬಿಸುತ್ತದೆ.

    ನಂತರ ರಸಿಕರ ಕಣ್ಣೋಟ ಸೆಳೆಯುವ ಶಿಲ್ಪವೆಂದರೆ ‘ಮಂಜುಕಬರಿ’ ಹೆಣ್ಣಿನ ಅಂದವನ್ನು ಇಮ್ಮಡಿಗೊಳಿಸುವುದು ಕೇಶರಾಶಿ ಅಂತಹ ನೀಳಕೇಶರಾಶಿಯನ್ನು ಹೊಂದಿದ ಶಿಲ್ಪ ಇದು. ಕಾಶ್ಮೀರಾಗರು ತೈಲ ವಾಸನೆಗಳನ್ನು ಹೊಂದಿ, ಕೇಶರಾಶಿಯ ನಾಗಾಪಾಶವ ಸುತ್ತಿ ದೋಷವಿಲ್ಲದೆ ಚನ್ನಕೇಶವನನ್ನು ಅದರಲ್ಲಿ ಬಂಧಿಸಿಡುವ ಪ್ರಯತ್ನ ಮಾಡಿದ್ದಾಳೆ. ಅಂತಹ ಕೇಶಕ್ಕೆ ಕಾಳಿರುಳಿನ ಕಪ್ಪು ಇದೆಯಂತೆ. “ನೋಳ್ಪರ ಕಣ್ಮನಕಹುದು ಮೋಹದ ಕಪ್ಪು” ಎಂದು ಕೇಶವನಡಿಗಳನು  ನೀನಪ್ಪು ಎಂದು ಕವಿ ವರ್ಣಿಸಿದ್ದಾನೆ.

    ಮಂಜುಕಬರಿಯ ನಂತರ “ಏನೀ ಮಹಾನಂದವೇ ಓ ಭಾಮಿನಿ ಏನೀ ಸಂಭ್ರಮದಂದವೇ ಬಲ್ಚಂದವೇ” ಎಂದು ಪ್ರಾರಂಭವಾಗುವ ಈ ಕವಿತೆಯಲ್ಲಿ ಢಕ್ಕೆ ಹಿಡಿದುಕೊಂಡು ನರ್ತನ ಮಾಡುತ್ತಿರುವ  ಉನ್ಮತ್ತ ನರ್ತಕಿಯನ್ನು ಕಾಣಬಹುದು ಇವಳೇ ‘ಮುರಜಾಮೋದೆ.’ ಢಕ್ಕೆ ಹಿಡಿದುಕೊಂಡು ಆನಂದ ಪರವಶಳಾಗಿ ಅಂತಃಪುರದ ಒಡೆಯನೂ, ಗೆಳೆಯನೂ ಆಗಿರುವ ಕೇಶವನಿಗೆ ತನ್ನ ಚೆಲುವನ್ನು ಅರ್ಪಿಸುತ್ತಿದ್ದಾಳೆ ಇಲ್ಲಿ ಕೇಶವನೇ ಕೇಂದ್ರ ಬಿಂದು.

    ನಂತರದ ಶಿಲ್ಪ ‘ಕಪಟಭೈರವಿ’, ನಿಜ ಭೈರವಿಯಲ್ಲ ಕಪಟಭೈರವಿಯಾಗಿ ಕೇಶವನನ್ನೆ ಹೆದರಿಸಲು ನಿಂತ ದಿಟ್ಟೆ. ಕವಿ “ಭೈರವ ವೇಷದಿಂದ ಯಾರನ್ನು ನೀನು ಅಂಜಿಪೆ, ಶೂಲರುಂಡವನ್ನು ಕಪಾಲ, ಪಾತ್ರೆಯಾಗಿ ಹಿಡಿದು ನಿಂತಿರುವ ನಿನ್ನನ್ನು ಯಾರು ಕಂಡು ಭಯಬೀಳುತ್ತಾರೆ?” ಎಂದು ಪ್ರಶ್ನಿಸುತ್ತಾರೆ.

    “ಓ ಯವತಿ ನಿನ್ನಿಂಚರದೊಳಗೇನಿಟ್ಟಿರುವೆ….” ಎಂದು  ನರ್ತನ ಮಾಡುತ್ತಿರುವ ಶಿಲ್ಪತಾಂಡವೆ ಈಶ್ವರಿಯನ್ನು ಪ್ರಶ್ನಿಸುತ್ತಾರೆ. ಚನ್ನಕೇಶವನನ್ನು ಜಾಗೃತಗೊಳಿಸಲು ಈ ನೃತ್ಯವೇ “ಡಂಗುರ ಪೊಯ್ವುದದೇನೇ ಜನ ಜಂಗುಳಿಗೆಲ್ಲ ನೀ ಸಾರ್ವುದದೇನೆ?” ಎಂದು ಕವಿ ತಾಂಡವೇಶ್ವರಿಯನ್ನು ಪ್ರಶ್ನಿಸುತ್ತಾರೆ. ಮುಂದಿನ ಶಿಲ್ಪ ‘ಮುರಳೀಧರೆ” ಭಾವಜೀವಿಗೆ ಮನವೆ ಮಂಗಳದ ನಂದಗೋಕುಲ ಇಲ್ಲಿ ಬಾಲಿಕೆ ಕೃಷ್ಣನ ವೇಷಧಾರಿ. ಗೋಪಿಕೆಯರಲ್ಲಿ ತಾನೇ ಗೋಪಿಕೆಯಾಗಿ ನರ್ತಿಸಿದ ಚಾಪಲೆ. ಯದುವಂಶ ಕುಲತಿಲಕ ವೇಷಧಾರಣೆ ಮಾಡಿ ಮುರಳೀಗಾನ ಹೊರಡಿಸುತ್ತಿದ್ದಾಳೆ.

    ಈ ಅಂತಃಪುರದ ನಲ್ಲೆಯರಲ್ಲಿ ಮುಂದೆ ಎದುರಾಗುವವಳೇ ‘ಗಾನಜೀವನೆ’. ಮನಕ್ಕೆ ಮನವೇ ನೆಲೆ ಅದು ತನ್ನಲ್ಲಿಯೇ ನರಕದಿಂದ ನಾಕವನ್ನು ನಾಶದಿಂದ ನರಕವನ್ನು ನಿರ್ಮಿಸಿವೆ ಎಂಬ ಅಭಿಪ್ರಾಯವನ್ನು ಕವಿ ಹೊಂದಿದ್ದಾರೆ. ತನ್ನ ಜೀವನದ ಎಲ್ಲಾ ಘಟ್ಟಗಳನ್ನು ಗಾನದಲ್ಲಿಯೇ ಕಳೆಯುವ ಈಕೆ ಕಲಹಂಸೆ ಲಲಿತಸ್ವರೇ. ಹಾಲಹಲವನ್ನು ಕುಡಿದ ಶಿವನನ್ನೇ ಸೋಲಿಸಿದ ಶಿಲ್ಪ ‘ಜಗನ್ಮೋಹಿನಿ’, ಈ ಶಿಲ್ಪ ಅತ್ಯಂತ ರಮಣೀಯವಾಗಿದೆ. “ಭೂಲೋಕದ ಮಾಯಾಬ್ಧಿ ಜಗನ್ಮೋಹಿನಿ”. ಶಿಲ್ಪಿಗಳು ಕೆತ್ತಿರುವುದಕ್ಕು ಕವಿ ವಿವರಣೆ ನೀಡಿರುವುದಕ್ಕೂ ಇಲ್ಲಿ ಹಾಲು ಜೇನಿನ ಮಿಳಿತವಿದೆ. ನೃತ್ಯದಲ್ಲಿ ತೊಡಗಿರುವ ಸುಂದರಿಯ ಶರೀರ ಲತೆಯಂತೆ ಇಲ್ಲಿ ನಾಲ್ಕೈದು ಬಾಗು ಬಳಕುಗಳಿಂದ ಕೂಡಿದೆ. ನಾಟ್ಯ ಭಂಗಿಯನ್ನು ತೋರುತ್ತಿರುವ ಬಲಗೈ ತಲೆಯ ಮೇಲೆ ಬರುತ್ತದೆ. ಎಡಗೈ ಹೊರಕ್ಕೆ ತೋರುತ್ತಿದೆ. ಬಲಗಾಲಿನ ಸ್ನಾಯುಗಳು ಬಹಳ ನೈಜವಾಗಿ ಕೆತ್ತಲ್ಪಟ್ಟಿವೆ. ಅವಳ ಜಗನ್ಮೋಹಿನಿ ಅವತಾರಕ್ಕೆ ಸಹ ಶಿಲ್ಪಗಳು ರವಷ್ಟು ಹೆದರಿ ದೂರಸರಿದಂತೆ ಚಿಕ್ಕವಾಗಿ ಕೆತ್ತಲ್ಪಟ್ಟಿವೆ.

    ಕೇಶವನ ಅಂತಃಪುರದ ರಾಣಿಯರ ಮಾಯೆ ಇಲ್ಲಿಗೇ ಮುಗಿಯದು ನಂತರ ನಮಗೆ ದರ್ಶನ ನೀಡುವವಳೇ ವೀಣಾಪಾಣಿ.  ನಾವೆಲ್ಲಾ ಕೇಳಿರುವ ಬಹಳ ಪ್ರಖ್ಯಾತ ಗೀತೆ “ವೀಣಾಪಾಣಿ ವಿಶ್ವಕಲ್ಯಾಣಿ”, ಕಲ್ಯಾಣಿರಾಗ ಆದಿತಾಳದಲ್ಲಿ ಸಂಯೋಜನೆಗೊಂಡಿರುವ ಗೀತೆ. ಸಂಗೀತವನ್ನು ವಿಶ್ವದ ಮಧುರರಮ್ಯ ಭಾಷೆ ಎಂದು ಕರೆಯಬಹುದು. ಅಂತೇಯೇ ಇಲ್ಲಿ ಸ್ವರಸ್ವತಿಯ ಸ್ವರೂಪ ಹೊತ್ತ ಈಕೆ ಸಂಗಿತ ಪಾರಮ್ಯ ಮೆರೆಯುತ್ತಿದ್ದಾಳೆ. ಎಡಗೈಯಲ್ಲಿ ವೀಣೆ ಬಲಗೈಯ್ಯಲ್ಲಿ ಸಂಗೀತದ ಆಲಾಪ ಎತ್ತುತ್ತಿದ್ದಾಳೆ.

    ಕೆದರಿದ ಕೂದಲನ್ನು ದರ್ಪಣ ಹಿಡಿದುಕೊಂಡು ಮತ್ತಮತ್ತೆ ಮುಂಗುರಳನ್ನು ಸಖಿಯರ ಸಲಹೆಯೊಂದಿಗೆ ಸರಿಮಾಡಿಕೊಳ್ಳುತ್ತಿರುವ ಶಿಲ್ಪವೆಂದರೆ ಕುಟಿಲಕುಂತಲೆ. ಪ್ರಿಯಕರ ಚನ್ನಕೇಶವನಿಗೆ ತನ್ನ ಅಲಂಕಾರದಲ್ಲಾಗಲೀ ಕೇಶವಿನ್ಯಾಸದಲ್ಲಾಗಲೀ ಎಳ್ಳಷ್ಟು ದೋಷ ಸಿಗಬಾದೆಂಬುದೇ ಈಕೆಯ ಬಯಕೆ. ಈ ಮನೋಚಾಪಲೆ ರಸಿಕ ಚನ್ನಕೇಶವನಿಗೆ  ಪ್ರೀತಿಯ ರಸಧಾರೆ ಎರೆಯಲು ಸಜ್ಜಾಗುತ್ತಿದ್ದಾಳೆ. ಕವಿ ಈಕೆಯನ್ನು ಕಂಡು “ಇನಿಯನ ನೆನೆದಾರಿವಳೆ ಮಣಿಮುಕುರದಿ ನೋಡುವಳ್ ಪಣೆಯ ತಿಲಕವ ತಿದ್ದುವಳ್ ಮನವನೆ ಸೂರೆಗೊಳ್ಳುವಳ್” ಎಂದಿದ್ದಾರೆ.

    ರಾಮನಿಗೋಸ್ಕರ ಕಾದಂತಹ ಶಬರಿಯ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಅದೇ ರಾಮ ಕೇಶವನಾಗಿ ಅವತಾರ ಎತ್ತಿರುವನು ಅವನಿಗಾಗಿ ಮತ್ತೆ ಶಬರಿ ‘ರಸಿಕ ಶಬರಿ’ಯಾಗಿ ಬಂದಿದ್ದಾಳೆ. ಶುದ್ಧ ಸಾವೇರಿ ರಾಗದಲ್ಲಿ ರೂಪಕ ತಾಳದಲ್ಲಿ ರಚನೆಯಾಗಿರುವ ಈ ಗೀತೆ ಕವಿಯ ಪ್ರಭುದ್ಧತೆಗೆ ಕೈಗನ್ನಡಿ ಹಿಡಿದಂತಿದೆ. ಈ ಲೋಕದಲ್ಲಿ ರಸಿಕ ಶಬರಿಯಾಗಿ ಅವತಾರ ಎತ್ತಿರುವ ಈಕೆ ಚನ್ನಕೇಶವನ ಒಲವನ್ನು ಸ್ವೀಕರಿಸಲು ಕೈಯ್ಯಲ್ಲಿ ರಸರಸಾಲಫಲಗಳನ್ನು ಹಿಡಿದುಕೊಂಡು ಕೇಶವನೆ ರಾಮ, ರಸಿಕನೆಂದು ಬಗೆದು ಮತ್ತೊಮ್ಮೆ ಅಭಿನವಾತಾರಿಯಾಗಿ ಬಂದಿದ್ದಾಳೆ.

    ರೋಷಾವೇಷಕ್ಕೆ ಸಾಕ್ಷಿಣಿಯಾಗಿರುವ ಮುಂದಿನ ಶಿಲ್ಪ ‘ವೀರಯೋಷಿತೆ’ ಇವಳನ್ನು ಕಂಡು ಪ್ರಾಣಿ ಸಂಕುಲ ಸಹಶಿಲ್ಪಗಳು ನಿಬ್ಬೆರಗಾದಂತಿವೆ “ಕ್ಲೇಶವೇನಾಯಿತೇ ಈ ಅವತಾರ ತಳೆದಿದ್ದೀಯಲ್ಲ’ ಹಾಸ್ಯವನಾಡಿದನಾರೇ? ಆಶೆಯ ತೋರಿ ನಿರಾಶೆಯನಾರಾದರೂ ಮಾಡಿದರೆ? ಆ ಕೇಶವನೊಳ್ ಮುನಿದು ಆಕಾಶವನ್ನೇ ಇರಿಯಲು ಹೊರಟಿರುವೆಯಲ್ಲಾ” ಎಂದು ಕವಿ ನೇರ ಸಂಭಾಷಣೆಗೇ ಇಲ್ಲಿ ಇಳಿದಿದ್ದಾರೆ. ಉಗ್ರರೂಪದ ಸೌಮ್ಯನಾಯಕಿಯಾಗಿ ಈ ಶಿಲ್ಪ ಕಡೆಯಲ್ಪಟ್ಟಿದೆ.

    ‘ಪುಂವಿಡಂಬಿನಿ’  ಕೇಶವನನ್ನು ಪರೀಕ್ಷಿಸಲು ಹೊರಟ ಶಿಲ್ಪ, ರಾಗಯೋಗಿ, ನಾಟ್ಯನಿಪುಣೆ, ಸ್ವರ್ಗಹಸ್ತೆ ಕೃತಕ ಶೂಲ, ನಾಟ್ಯಸುಂದರಿ  ಮುಂತಾದ ಅದ್ಭುತ ರಮ್ಯ ಶಿಲ್ಪಗಳು ನೋಡುಗರ ಮನಸೂರೆಗೊಳ್ಳುತ್ತವೆ. ಇವೆಲ್ಲವೂ ತಮ್ಮೊಳಗೆ ತಾ ಮುಂದು ನಾ ಮುಂದು ಎಂಬ ಸೌಂದರ್ಯ, ಶೃಂಗಾರ ಪೈಪೋಟಿ ನಡೆಸುವಂತೆ ಹಿಂದಕ್ಕೂ ಮುಂದಕ್ಕೂ ಓಡಾಡಿಸುತ್ತವೆ.

    ‘ಜಯನಿಷಾದಿ’  ಎಂಬ ಹೆಸರಿನಿಂದ ಕಂಗೊಳಿಸುವ ಸುಂದರಿ ‘ಲೀಲಾನಿಷಾದಿ’, ಸಾಂಗತ್ಯ ಛಂದಸ್ಸಿನಲ್ಲಿ ರಚಿಸಲ್ಪಟ್ಟಿರುವ ಈ ಗೀತೆಯಲ್ಲಿ ಕಾಳಿ ದುರ್ಗೆಯರ ರೂಪ ಚೆಲುವೆತ್ತಂತಿದೆ. “ಕರಾಳಸಾಹಸಿಕವ ಪೋಲುತ  ನಿಂದಿಹೆ ಏಕೆ?” ಎಂಬ ಪ್ರಶ್ನೆಯನ್ನು ಇಲ್ಲಿ ಎತ್ತಿದ್ದಾರೆ. ಇಡೀ ಜಗತ್ತು ನಿನ್ನ ಒಂದು ಓರೆನೋಟಕ್ಕೆ ಸೋತು ಶರಣಾಗುವಾಗ ಈ ಹೋರಾಟ ತೋರಿಸುವ ಅಗತ್ಯ ನಿನಗೆ ಅನಗತ್ಯ ಎಂದು ಆಕೆಯನ್ನು ಕವಿ ಸಂತೈಸುವಂತೆ ಈ ಬಿಡಿ ಕವಿತೆ ಇದೆ.

    ಕಾವ್ಯದ ಮುಖ್ಯಭೂಮಿಕೆ ಇಡೀ ಬೇಲೂರಿನ ಚನ್ನಕೇಶವನ ಅಸ್ತಿತ್ವವನ್ನು ವೇದ್ಯಗೊಳಿಸಿರುವ ಭಾಗವೆಂದೆ ‘ಭಸ್ಮಮೋಹಿನಿ’, ರೂಪಕ ಕೃತಿಯೊಳಗೆ ರೂಪಕವಾಗಿದೆ. ರಾಗಮಾಲಿಕೆಯಲ್ಲಿ ಮೋಹನ, ತೋಡಿ ಮುಂತಾದ ರಾಗಗಳಿಂದ ಸಂಯೋಜನೆಗೊಂಡಿರುವ ಇದು ಚನ್ನಕೇಶವನ ಅಂತರಾಳ ತೆರೆವಲ್ಲಿ ಯಶಸ್ವಿಯಾಗಿದೆ.

    ವಿಷ್ಣು ಮೋಹಿನಿಯ ಅವತಾರ ತಳೆಯುವುದೇ ಭಸ್ಮಾಸುರನನ್ನು ಸಂಹಾರ ಮಾಡಲು. ಬೇಲೂರಿನ    ಶ್ರೀ ಚನ್ನಕೇಶವನ ದೇವಾಲಯದ ಪ್ರವೇಶದ್ವಾರದ ಎಡಕ್ಕೆ ಅಂದರೆ ಆನೆಬಾಗಿಲಿನ ಪಕ್ಕಕ್ಕೆ ಇರುವ ಮೂಲೆಯನ್ನು ಭಸ್ಮಾಸುರ ಮೂಲೆ ಎಂದು ಕರೆಯುವುದಿದೆ. ರಥೋತ್ಸವದ ಸಂದರ್ಭದಲ್ಲಿ ಇಂದಿಗೂ ಗಳಿಗೆತೇರು, ಮಡಿತೇರು ಎಂದು ಕರೆಯಲ್ಪಡುವ ರಥವನ್ನು ಭಸ್ಮಾಸುರ ಮೂಲೆಗೆ ತಂದು ನಿಲ್ಲಿಸಲಾಗುತ್ತದೆ. ಒಂದು ಇರುಳು, ರಥ ಅಲ್ಲಿದ್ದ ಬಳಿಕ ಮರುದಿನ ನಾಡರಥ ಅಥವಾ ದೊಡ್ಡರಥ ಎಳೆಯಲ್ಪಡುತ್ತದೆ. ಈ ಚನ್ನಕೇಶವನ ಅಲಂಕಾರದ ವಿಶೇಷತೆ ಎಂದರೆ ಮುಖಭಾಗ ಹೆಣ್ಣಿನ ಅಲಂಕಾರ ಶರೀರ ಭಾಗ ಗಂಡಿನ ಅಲಂಕಾರ. ಸುರಸುಂದರ ವಿಷ್ಣು ಅನ್ನುವ ಕಾರಣಕ್ಕೆ ಚನ್ನಕೇಶವ ಎಂಬ ಹೆಸರು ಬಂದಿರುವುದು. ‘ಭಸ್ಮಮೋಹಿನಿ’ ಎಂದು ಕರೆಯುವ ಅಂತಃಪುರಗೀತೆಯಲ್ಲಿ ಉಕ್ತವಾಗಿರುವ ಕವಿತೆಯಲ್ಲಿ ನಾಟ್ಯಕಲಿಸುವ ವಿಷ್ಣವನ್ನು ವರ್ಣಿಸುತ್ತದೆ. ಹಾಗೆ ಶಿಲ್ಪದರಲ್ಲಿ ತಲೆಯ ಮೇಲಿರುವ ಬಲಗೈ  ತುದಿ ಮೂಗಿನ ನೇರಕ್ಕೆ ಬಂದಿದೆ. ಎಡಗೈ ಹೆಬ್ಬೆರಳು ಮತ್ತು ನಾಟ್ಯಭಂಗಿಯಲ್ಲಿ ಮೇಲೆದ್ದಿರುವ ಎಡಗಾಲಿನ ಹೆಬ್ಬೆರಳುಗಳು ಇವೆಲ್ಲ ಒಂದೇ ಊರ್ಧ್ವರೇಖೆಯಲ್ಲಿವೆ  ಅರ್ಥಾತ್ ಭಸ್ಮಾಸುರನಿಗೆ ನರ್ತನ ಹೇಳಿಕೊಡುತ್ತಿರುವುದು. ಶಿಲಾಬಾಲಿಕೆಯರು ಅಂದಕೂಡಲೆ ನಮ್ಮ ನೆನಪಿಗೆ ಬರುವ ಶಿಲ್ಪ ಇದು. ಕೇಳುಗರು ಕೇಳಿಸಿಕೊಳ್ಳುವುದಲ್ಲ, ಓದುಗರು ಓದುವುದಲ್ಲ ಈ ನೃತ್ಯ ಚಾಪಲೆಯರನ್ನು ಕೇಶವನ ಸಖಿಯರನ್ನು ಮತ್ತೊಮ್ಮೆ ನೋಡಿ ಕೈಕುಲುಕಿ ಬರಲೇಬೇಕು. ಮೋಹಿನಿ ಮತ್ತು ಭಸ್ಮಾಸುರರ ನಡುವಿನ ಸಂಭಾಷಣೆ ಇಲ್ಲಿದೆ.

    ನಲಿವಿನ ಸುಂದರಿಯರ ವಿಚಾರ ಇಲ್ಲಿಗೇ ಮುಗಿಯದು. ಇನ್ನೂ ಮದನಿಕೆಯರು ಅವರವರ ಹಾವಭಾವ ಭಂಗಿಗಳಲ್ಲಿ ನಮ್ಮನ್ನು ರಂಜಿಸಲು ಯಾವಗಲೂ ಸಿದ್ಧರಿದ್ದಾರೆ. ಇಂತಹ ಕಿನ್ನರಲೋಕ ಹಾಸನ ಜಿಲ್ಲೆಯಲ್ಲಿದೆ. ನೋಡುಗರ ನಿರಂತರ ನೋಟಕ್ಕೆ ಮತ್ತೆ ಸಿಗುವವಳೇ  ‘ನೀಲಾಂಬರಿ’. ‘ನೀಲಾಂಬರಿ’ ರಾಗದಲ್ಲಿಯೇ ರಚಿತವಾಗಿ ಮಿಶ್ರಛಾಪು ತಾಳದಲ್ಲಿರುವ ಈ ಕೃತಿ ಚೇಳಿಗೆ ಹೆದರಿ ಭಯಕ್ಕೊಳಗಾಗಿರುವ ಬಾಲಿಕೆಯನ್ನು ಕುರಿತು ಇದೆ. ಕವಿ ಇವಳನ್ನು ಎದುರಿಸಲಾಗದೆ “ನೀಲಾಂಬರೆ ಏನಂಗ ವಿಭ್ರಾಂತಿಯೇ ಅಶಾಂತಿಯೇ” ಎಂದಿದ್ದಾರೆ. ಬಾಲಿಕೆಯೊಬ್ಬಳು ಧರಿಸುತ್ತಿರುವ ಸೀರೆಯಲ್ಲಿ ಚೇಳನ್ನು ಕಂಡು ಬೆಚ್ಚಿ ನೆಲಕ್ಕೊರಲಿದ  ಅ ಚೇಳನ್ನು ಭಯದಿಂದ ನೋಡುತ್ತಿರುವ ಶಿಲ್ಪ “ಹೆದರಬೇಡ ಕೇಶವನಿದ್ದಾನೆ” ಎಂದು ಕವಿ ಸಮಾಧಾನಿಸುತ್ತಾರೆ ತನ್ನ ಕವಿತೆಯ ಮೂಲಕ.

    ‘ಹಾವಸುಂದರಿ’ಯೂ  ಉತ್ತಮ ಶಿಲ್ಪಗಳಲ್ಲೊಂದಾಗಿದ್ದು  ‘ಶಕುನಶಾರದೆ’  ಎಂಬ ಶಿಲ್ಪದೆಡೆಗೆ ನಮಗೆ ದಾರಿ ತೋರಿಸುತ್ತದೆ. ಶಕುನದ ಮೂಲಕ ಲೋಕದ ವ್ಯಾಪಾರವನ್ನು ತಾಳೆಗರಿಗಳ ಮೂಲಕ ಹೇಳುವ ಸುಂದರಿ ಕೇಶವನ ಉಜ್ವಲ ಸಾಮ್ರಾಜ್ಯದ ಉಜ್ವಲ ಭವಿಷ್ಯ ಹೇಲುವಂತಿದೆ.

    ನಂತರದವಳೆ  ‘ವೀಟೀಧರೆ’  ಶಿಲಾಬಾಲಿಕೆಯರು ಎಂದರೆ ನಟನೆಗೆ ಹೆಸರಾದವರು. ವೀಟೀಧರೆಯಾಗಿ ಚನ್ನಕೇಶವನಿಗೆ ತಾಂಬೂಲ ನೀಡ ಬಯಸುವ ಈಕೆ ಉತ್ಸಾಹದಿಂದ ಚಿಗುರಲೆ ಹಿಡಿದುಕೊಂಡು ಸಖ ಕೇಶವನಿಗಾಗಿ ನಿರೀಕ್ಷಿಸುವಂತಿದೆ.

    ನಾಗವೀಣೆಯನ್ನು ನುಡಿಸುತ್ತ ಎದುರಾಗುವ ಶಿಲ್ಪ  ‘ನಾಗವೈಣಿಕೆ’.  ಈ ತರುಣಿ ನರನಾರಿ ಹೃದಯಂಗಳ ಸುರ ನರ್ತಕಿಯಾಗಿದ್ದಾಳೆ. ಆಸ್ತಿಕ, ನಾಸ್ತಿಕ, ಅನ್ಯಮತೀಯರನ್ನೂ ಬೆಂಬಿಡದೆ ಕಲಾಲೋಕ್ಕೆ ಸೆಳೆಯುವ ಮಿಂಚಿನ ಶಿಲ್ಪ ಭೂಷಣ ಹೆಣ್ಣು ಮಕ್ಕಳ ಸ್ವತ್ತೇ, ಸೌಂದರ್ಯ ವಿಶ್ತತತ್ವ ಆ  ಪರತತ್ವ ಭಾಸವೇ ಸೌಂದರ್ಯಂ ಅದನ್ನು ಹೆಚ್ಚಿಸುವುದ ಆಕೆಯ ಅಭರಣಗಳು ತನ್ನ  ಕೈಗಳಿಗೆ ತೊಡಲು ಹಿಡಿದ ಬಳೆ ಆಕೆಯ ಅತೀ ಸಹಜ ಭಂಗಿ ರಸಿಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಇವಳೇ ‘ಭೂಷಣಪ್ರಿಯೆ’  “ತರಣಿಗೇ ದೀಪೋತ್ಸವವೇ?” ಎಂದು  ವಿಮರ್ಶಕರು ಹೇಳಿದ್ದಾರೆ. ನನ್ನನಗಲಿ ಒಂದಿಂಚೂ ದೂರ ಸರಿಯಬೇಡ ಎಂದು ಹಾಡಿನ ಮೂಲಕ ಕೇಳುವ ಶಿಲ್ಪ  ‘ಕೇಳೀನೀರತೆ’.  ಕೇಶವನ ದಾಸಿ ಕೊರವಂಜಿ.  ಕೊರವಂಜಿ  ವೇಷವನ್ನು ಹಾಕಿ ಪದ್ಮಾವತಿಯನ್ನು ವರಿಸಲು ಬಂದವನು ಶ್ರೀನಿವಾಸ ಅಂತಹ ಕೊರವಂಜಿ ವೇಷಧಾರಿಯನ್ನು ಕವಿ “ನಟನವಾಡಿದಳ್ ತರುಣಿ ನಟನವಾಡಿದಳ್”  ಎಂದು ಪರಿಚಯಿಸಿದ್ದಾರೆ. “ಕೊರವಂಜಿ ವೇಷದಿ ಬಂದೊಡೆಂ ಶರದೈಂದಹಾಸವ ಮುಚ್ಚಿಹಿಯೇಂ” ಎಂದಿದ್ದಾಳೆ. ಆಕೆಯ ಕೈಯ ಹೇಳಿಗೆ, ಕೋಲು, ಸೊಂಟವನ್ನು ತುಸುತಗ್ಗಿಸಿ ನಿಂತಿರುವುದನ್ನು ನೋಡಿದವರು ಭಲೇ!ಬೇಷ್!  ಅನ್ನದೆ ಇರಲಾರರು. ಮುಂದಿನ ಶಿಲ್ಪ “ಕೇಶರುಷ್ಠೆ ರೋಷವಿದೇನೇ ಸಖಿ ಓ ಸುಮುಖೀ”  ಎಂದು ಕವಿತೆಯ ಸಾಲುಗಳಿವೆ. ಕೇಶವನ ಮೇಲೆ ಹುಸಿಕೋಪವ ತೋರಿಸುವ ಹುಡುಗಿ.

    ಗಂ‍ಧರ್ವ ಕನ್ನಿಕೆಯರು ಎನ್ನುವ ಇಲ್ಲಿನ ತರುಣಿಯರಲ್ಲಿ ನಮಗೆ ಮುಂದೆ ದರ್ಶನ ನೀಡುವವಳು  ‘ಪಾದಾಂಗುಳಿಯೇ’  ಕಾಲುಂಗರವನ್ನು ಹಾಕಹೋಗಿ ತುಸು ಎಡವಿದಂತಾಗಿ ಬೀಳುವ ಭಯದಿಂದ ಲತಾಂಗಿಯಾದರೂ ಲತಾಶ್ರಯಿಯಾಗುವ ಪರಿ ಎಲ್ಲರಲ್ಲೂ ಬೆರಗು ತರಿಸುವುದು. ಕೇಶವನ ಕೃಪೆಯೆ ಸಾದಾಕಾಂಕ್ಷಿಯಾದ ಈಕೆಗೆ ಸುಂದರ ಸಹಶಿಲ್ಪಗಳ ಬೆಂಗಾವಲೂ ಇದೆ. ಎಂತಹ ನರ್ತನ ಪ್ರದರ್ಶನ ಮಾಡಿದರೂ ನನ್ನ ಬಳಿ ಕೇಶವ ಸುಳಿಯುತ್ತಿಲ್ಲವೇಕೇ? ಎಂದು ವಿರಹಕ್ಕೆ ಸಿಕ್ಕಿದ ಪಾತ್ರವೇ ವಿರಹಾರ್ತೆ ನನ್ನಿಂದ ಏನಾದರೂ ದೋಷವಾಗಿದ್ದರೆ ಮನ್ನಿಸು ಓ ಪ್ರಾಣನಾಥ “ಅನುರಾಗಾಕಾಂಕ್ಷೆಯಂ ನೀಂ ಕನಲಿರ್ಪುದೆಂತು” ಎಂದು ಕವಿ ಆಕೆಯ ಮನದ ಇಂಗಿತವನ್ನು ಕೇಳಿಸಿಕೊಂಡು ಓದುಗರಿಗೆ ಹೆಳುತ್ತಿದ್ದಾರೆ. ಈ ಕಿನ್ನರಿಯ ಮನದ ಇಂಗಿತವನ್ನು ಕಂಡುಬಂದ ಕೇಶವನ್ನು ಕಂಡ ಕೂಡಲೆ ಈ ಚಾಪಲೆ ಚಿಗರೆಯಂತೆ ಸಿಗಿಯುತ್ತಾಳೆ. ತಾನೊಬ್ಬಳೆ ‘ವಿಶ್ವಸುಂದರಿ’ ಎಂದು ಕೇಶವನನ್ನು ಸಂಧಿಸುವಂತೆ ಕಡೆದಿರುವ ಶಿಲ್ಪ ‘ಚಾರುಹಾಸಿನಿ’. ಮಧ್ಯಮಾವತಿ ರಾಗದಲ್ಲಿ ರಚನೆಯಾಗಿರುವ ಕೃತಿಯ ಹೆಸರು ವಿಕಟರ‍್ತಿನಿ.  ಜಾನಪದ ಶೈಲಿಯಿಂದ ಕೂಡಿದೆ. ಗಂಡಿನ ವೇಷಧಾರಿಯಾಗಿ ನೃತ್ಯೋನ್ಮತ್ತೆಯಾಗಿ ನರ್ತಿಸುತ್ತಿರುವ ಕವಿ ಈಕೆಯನ್ನು ಮದ್ದನು ಸೇವಿಸಿ ಹುಚ್ಚಾದಳೇನೋ ಎಂದು ಕವಿ ಈಕೆಯನ್ನು ರೇಗಿಸುತ್ತಾರೆ. ಹಾಗೆಯೇ ಗಾಂಧರ್ವದೇವಿ, ಲಾಸ್ಯಸುಂದರಿಯರು ನಾಟ್ಯವ ಮೂಲಕ ಸುಂದರ, ಸಂತೃಪ್ತ ಮುಖಮುದ್ರೆಯ ಶಿಲ್ಪಗಳು ನೋಡುಗರನ್ನು ಕಿನ್ನರ ಲೋಕಕ್ಕೆ ಪ್ರಯಾಣಿಸುವಂತೆ ಮಾಡುತ್ತವೆ.

    ದೇವಾಲಯದ ನವರಂಗದ ಕಂಬಗಳ ಮೇಲೆ ಇರುವ ನಾಲ್ಕು ಮದನಿಕೆಯರಲ್ಲಿ ಆಗ್ನೇಯಕಂಬದವಳೇ   ‘ಶುಖಸಖಿ’  ಎಡತೋಳ ಮೇಲೆ ಕೂಳಿತಗಿಳಿ ಅವಳ ಕಂಠೀಹಾರವನ್ನು ಹಿಡಿದೆ. ಹಣ್ಣೊಂದರ ಆಸೆ ತೋರಿಸಿ ತನ್ನಾಭರಣ ಬಿಡಿಸಿಕೊಳ್ಳುತ್ತಿರುವ ಈಕೆಯ ಸೊಗಸು ಕೇಳಬಾರದು ನೋಡಲೇಬೇಕು. ಇವಳ ಬಲಗೈ ಬಳೆ ಹಿಂದೆ-ಮುಂದೆ ಸರಿಸಬಹುದಾಗಿದೆ. ಹೆಣ್ಣಿನ ಮನದಾಸೆಯ ಸ್ಪಷ್ಟತೆಯನ್ನು ಮಂಗಳಕರ ಒಳೆಯ ಮೂಲಕ ತಣಿಸುವಂತಿದೆ.

    ನೈರುತ್ಯ ಕಂಬದ ಮೇಲಿನ ‘ಉಲ್ಲಾಸಿನಿ’ ಹಾವಭಾವ, ಪ್ರಭಾವದಿನಾಳುವ ಸೈನಾಧಿಕಾರಿಯಾಗಿದ್ದರೆ, ‘ಭಾವದೇವಿ’  ಎಂಬ ಶಿಲ್ಪ ಚೈತನ್ಯಕ್ಕೆ ಅಧಿಪತ್ಯೆಯಾಗಿದ್ದಾಳೆ. ದ್ರೌಪದಿಯು ಅವಮಾನಕ್ಕೆ ಸೇಡುತೀರಿಸಿಕೊಳ್ಳಲೇ ಇರುವಂತೆ ಕಡೆದಿರುವ  ಶಿಲ್ಪ  ‘ವೇಣಿ ಸಂಹಾರೆ’.  ಸಖ ಕೇಶವನಿಗೆ ತನ್ನ ಒಡಲಾಳದ ನೋವನ್ನು ನಿವೇದನೆ ಮಾಡಿಕೊಂಡು ಧರೆಯ ಜನರಿಗೆ ಇಂತಹ ಅವಮಾನ, ಕಷ್ಟ, ಚಿಗುಪ್ಸೆ ಕೊಡಲುಬೇಡ ಎಂದು ನಿವೇದಿಸಿಕೊಳ್ಳುವಂತಿದೆ.

    ವಾಯುವ್ಯ ಮೂಲೆಯಲ್ಲಿ ಕಿರೀಟಧಾರಣೆ ಮಾಡಿಕೊಂಡು ನೃತ್ಯಸರಸ್ವತಿಯಾಗಿರುವ ಈ ಶಿಲ್ಪ ಮುಕ್ತಿಗೆ ಸಂಕೇತವೆಂಬಂತೆ ಇದೆ. ಕೇಶವನ ಪ್ರೀತಿಯನ್ನು ಕಾಣದೆ ಕಂಗಾಲಾಗಿ ಹೂವಿನ ಎಸಳುಗಳನ್ನು ಕಲ್ಲಮೇಲೆಸೆದು ಚಿಂತಿಸುವ ಭಾವದ ಶಿಲ್ಪಿ ಪ್ರಣಯ ವಂಚಿತೆಯದ್ದು. ಪ್ರಣಯದ ಹಸಿವಿನಿಂದ ಸಖನನ್ನು ಸಂತೃಪ್ತಗೊಳಿಸಲೆಂದು ಕಡೆದಿರುವ ಶಿಲ್ಪಿ  ‘ಕಲಹಾಂತರಿತೆ’  ರಾಜೇಂದ್ರನರಮನೆಯ ಎಲ್ಲಾ ವಿಲಾಸ ಪಡೆದುಕೊಂಡು ಸಂತೃಪ್ತಳಾಗಿರುವಂತೆ ಕಾಣುವ ಶಿಲ್ಪಿ  ವಿಲಾಸಿಕೆ.

    “ನೃತ್ತಹಾಸಿನೀ ಮತ್ತಕಾಶಿನೀ ಚಿತ್ತಜೋತ್ಸವೆ ಪ್ರತ್ಯವೇಕ್ಷಣಿ”  ಎಂದು ಕವಿಯಿಂದ ಕರೆಸಿಕೊಂಡಿರುವ ಶಿಲ್ಪ  ನೃತ್ಯಹಾಸನಿ.  ಚನ್ನಕೇಶವನಿಗೆ ಪೂರ್ಣ ನೃತ್ಯಸುಖವನ್ನು ಕೊಡುವ ಶಿಲ್ಪ. ಪೂರ್ಣಸಖನಾಗಿ ತೂರ್ಣಕರುಣೆಯಿಂದ ಚನ್ನಕೇಶವನನ್ನು ವರಿಸುತ್ತಾನೆ ಎಂಬ ಆತ್ಮವಿಶ್ವಾಸ ತೋರುವ ಶಿಲ್ಪ. ಚಕ್ರವಾಕಿ  ಎಂಬ ಶಿಲ್ಪ ಪ್ರಣಯ ಕಲ್ಪಿತೆಯಾಗಿ “ನನ್ನಿಂದಾದ ಪ್ರಮಾದವಾದರು ಏನು?” ಎಂದು  ಕೇಶವನ್ನು ಕೇಳುವಂತಿದೆ.

    ‘ಲತಾಂಗಿ’  ಶ್ರೀಲಲಿತೆಯ ಅಂತರಂಗ ಸಾಮ್ರಾಜ್ಯದ ಮಧುರಗಾನ ಎಂಬ ಅಮೃತ ತುಂಬಿ ಕೇಶವನೆ ಅಂತಃಪುರವಾಸಿನಿ ಎಂದು ಬಹುವಿಧವಾಗಿ ಹೆಮ್ಮೆ ಪಡುವ ಶಿಲ್ಪ ‘ಲತಾಂಗಿ’  ಸೌಂದರ್ಯದ ಖನಿಯಂತಿದೆ. ಡಿ.ವಿ.ಜಿ.ಯವರ ಅಂತಃಪುರಗೀತೆಗಳು ಕೃತಿಯ ಮುಂದುವರೆದ ಭಾಗ ಉಪಸಂಹಾರ. ಇಲ್ಲಿ ಪದ್ಯಗಳು ಸೌಂದರ್ಯ  ಎಂಬ ಶೀರ್ಷಿಕೆಯಲ್ಲಿವೆ. ಚಕ್ರವರ್ತಿಯ ಕಣ್ಣು ನಾಡನ್ನು, ಮಂದಿರವನ್ನು ಒಂದುಗೂಡಿಸಿ ನಾಡಗಡಿಯನ್ನು ಹಸನುಮಾಡಿ ಅದರಿಂದ ಪೂರ್ಣದ ಬೆಳೆಯನ್ನು ತೆಗೆಯುವಂತೆ ಕವಿ ತನ್ನ ಕಣ್ಣ ಅನುಭವವನ್ನು ಮಣ್ಣಕಣದಲ್ಲಿ ಹೊನ್ನನಾರಿಸುವಂತೆ ಆತ್ಮಸಂತೋಷ ಎಂಬ ವಜ್ರವನ್ನು ಸೌಂದರ್ಯ ಎಂಬ ಸರದಲ್ಲಿ ಹಿಡಿದಿಟ್ಟಿದ್ದಾರೆ. ಕಲಾಜೀವಿಗಳಿಗೆ ಕೇಳಿದ್ದನ್ನು ಕೊಡುವಂತೆ ಈ ಶಿಲ್ಪಗಳು ಇದೆ ಎಂಬುದನ್ನು ಜಯವಿಶ್ವಮೋಹನ ಎಂಬ ಕೃತಿಯಲ್ಲಿ ವಿವರಿಸಿ ಈ ಕೃತಿಯ ಓದುಗರಿಗೆ ಕೇಶವ ಆಶೀರ್ವದಿಸಲಿ ಎಂದು ಕವಿ ಕಲಾರಧಕರಾಗಿ ಇಲ್ಲಿ ಕೇಳಿಕೊಳ್ಳುತ್ತಾರೆ.

    ಬೇಲೂರಿನ ಚನ್ನಕೇಶವ ದೇವಾಲಯದ ಸುಂದರ ವರ್ಣನೆಗಳುಳ್ಳ ಬಿಡಿಕವಿತೆಗಳ ಸಂಗ್ರಹ ‘ಅಂತಃಪುರಗೀತೆ’ ಶಿಲ್ಪಕನ್ನಿಕೆಯರ ಸೌಂದರ್ಯದ ಆಧಾರದ ಮೇಲೆ ಪಡೆದ ಅಮೃತ ಕೃತಿ ‘ಅಂತಃಪುರಗೀತೆ’ ಸಂಗೀತದ ರಸಪಾಕವನ್ನು ಹದವಾಗಿ ಬೇಯಿಸಿ, ತಣಿಸಿ ಓದುಗರ ಕೈಗಿತ್ತಿದ್ದಾರೆ. ಇಲ್ಲಿ ವೈಷ್ಟವ, ಶೈವ ಎಂಬ ಮಡಿವಂತಿಕೆಯಿಲ್ಲ ಹೊಯ್ಸಳರ ಧರ್ಮಸಮನ್ವಯತೆಗೆ ಇದೊಂದು ಸಾಕ್ಷಿ. ಪ್ರತಿ ಶಿಲ್ಪದ ಪ್ರಭಾವಳಿಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಹೂವಿನಿಂದ ನಾರು ಸ್ವರ್ಗಕ್ಕೆ ಎಂಬ ಗಾದೆಗೆ ಆಪವಾದವೆಂಬಂತೆ ಸಹಶಿಲ್ಪಗಳಿಂದ ಮುಖ್ಯಶಿಲ್ಪಗಳ ಗಾಂಭೀರ್ಯ ಮತ್ತಷ್ಟು ಕಳೆಗಟ್ಟಿದೆ. ಜಕಣಾಚಾರ್ಯ, ಚಿಕ್ಕಹಂಪ, ಬಳ್ಳಿಗಾವೆಯ ದಾಸೋಜ, ಚಾವಣ ಇಲ್ಲಿಯ ಪ್ರಮುಖ ಶಿಲ್ಪಿಗಳು ತಮ್ಮ ಕಾರ್ಯದಲ್ಲಿ ಭೇದತೋರದೆ ಮುಖ್ಯ ಶಿಲ್ಪಗಳಂತೆ ಸಹಶಿಲ್ಪಗಳಿಗೂ ಸಮಾನ ಅಸ್ತೆ ತೋರಿಸಿದ್ದಾರೆ.

    “ಇಂಪಿಲ್ಲದೆ ಕೇದಗೆಯಂ ಕಂಪಿಲ್ಲದ, ಪೆಂಪಿಲ್ಲದ ಕುಲವಧು ಒಪ್ಪಗುವೇಂ”? ಎಂಬ ರನ್ನನ ಮಾತಿನಂತೆ ಈ ಎಲ್ಲಾ ಪರಿಭಾಷೆ ಶಿಲಾಕನ್ನಿಕೆಯರಲ್ಲಿದೆ. ಪ್ರಪಂಚದ ಪಾಪ ವಿಮೋಚನೆಗೆ ಸೌಂದರ್ಯ ಸಿದ್ಧ ಔಷಧ ಎನ್ನುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ ‘ಹಲವು ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳಲ್ಲಿ ಪಾಂಡಿತ್ಯ ಹೊಂದಿದ ಕವಿ’ ಹಾಗೆ ನಮ್ಮ ದೃಷ್ಠಿಯ ಕಲ್ಮಷವನ್ನು ತೊಡೆದುಹಾಲು ಹೃದಯಂತರಾಳದಿಂದ ವೀಕ್ಷಿಸಿ ಪಾವಿತ್ರತೆ ಪಡೆಯ ಬಹುದಾಗಿದೆ. ತನ್ನ ರಾಣಿಯರ ಮೂಲಕ ಜಗತ್ತಿನ ವಿಹಾರಕ ಎಷ್ಟು ಸೌಂದರ್ಯಸಾಗರವನ್ನು ಬೇಲೂರಿನಲ್ಲಿ ತಂದಿರಿಸಿಕೊಂಡಿದ್ದಾನೆ. ದಿವ್ಯ ಕಲೆಯ ಭವ್ಯತೆಯನ್ನು ರಸಿಕರಾಗಿ ನೋಡುಗರು ಆಸ್ವಾದಿಸಬೇಕು. ಡಿ.ವಿ.ಜಿ. ಯವರ ಪ್ರಕಾರ ನೋಡುಗರೂ ಕೂಡ ಅಂತಃಪುರವಾಸಿಗಳೇ ಆಗಿರುವವರು.

    This image has an empty alt attribute; its file name is suma-veena-2-edited.jpg

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!