16.7 C
Karnataka
Sunday, November 24, 2024

    ಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ ಪಡೆಯಲು ಕ್ರಮ

    Must read

    BENGALURU MAR 18

    ಮೇಕೆದಾಟು ಯೋಜನೆಗೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಕೇಂದ್ರ ಪರಿಸರ ಸಚಿವಾಲಯದಿಂದ ತ್ವರಿತವಾಗಿ ಅನುಮೋದನೆ ಪಡೆದುಕೊಂಡು ಯೋಜನೆಗೆ ಚಾಲನೆ ನೀಡಲು ಕ್ರಮ ವಹಿಸಲು ಇಂದಿನ ವಿಧಾನ‌ ಮಂಡಲ ಉಭಯ ಸದನಗಳ ಸಭಾ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.

    ಅವರು ಅಂತರ ರಾಜ್ಯ ಜಲವಿವಾದಗಳ ಕುರಿತಂತೆ ಉಭಯ ಸದನಗಳ ಸಭಾ ನಾಯಕರ ಜೊತೆ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

    ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಸಭೆಗಳಲ್ಲಿ ಮೇಕೆದಾಟು ಯೋಜನೆಯ ಕುರಿತು ವಿಸ್ತೃತ ಚರ್ಚೆಯಾಗಿದೆ. ಈ ಕುರಿತು ನಡಾವಳಿಗಳಲ್ಲಿ ದಾಖಲಿಸದೆ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಡಲೇ ಜಲಶಕ್ತಿ ಸಚಿವರು ಹಾಗೂ ಪ್ರಾಧಿಕಾರದವರೊಂದಿಗೆ ಚರ್ಚಿಸಿ, ನಡಾವಳಿಗಳಲ್ಲಿ ಚರ್ಚೆಯ ಅಂಶಗಳನ್ನು ದಾಖಲಿಸುವ ಕುರಿತು ಕ್ರಮ ವಹಿಸಲಾಗುವುದು. ಹಾಗೂ ಮುಂದಿನ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲು ಹಾಗೂ ಪರಿಸರ ಸಚಿವಾಲಯದ ತೀರುವಳಿ ಪಡೆಯಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಮುಂದಿನ ವಾರ ಜಲಸಂಪನ್ಮೂಲ ಸಚಿವರು ದೆಹಲಿಗೆ ತೆರಳಲಿದ್ದು, ಅಧಿವೇಶನ ಮುಗಿದ ತಕ್ಷಣ ತಾವು ಸ್ವತಃ ದೆಹಲಿಗೆ ತೆರಳಿ ಕೇಂದ್ರ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆ. ಮತ್ತೆ ಅಗತ್ಯವಿದ್ದರೆ ಸರ್ವಪಕ್ಷಗಳ ನಿಯೋಗವನ್ನು‌ ನವದೆಹಲಿಗೆ ಕರೆದೊಯ್ಯಲಾಗುವುದು ಎಂದು ಅವರು ಹೇಳಿದರು.

    ಮಹಾದಾಯಿ ಯೋಜನೆಯಲ್ಲಿ ಈಗಾಗಲೇ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರಿನ ಬಳಕೆಗಾಗಿ ಯೋಜನೆ ಅನುಷ್ಠಾನಕ್ಕೆ ಪರಿಸರ ಇಲಾಖೆಯ ತೀರುವಳಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದುರ.

    ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಕುರಿತು ಕೇಂದ್ರ ಸರ್ಕಾರ ಇನ್ನೂ ಗಜೆಟ್ ಅಧಿಸೂಚನೆ ಹೊರಡಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ ಮಧ್ಯಂತರ ಅರ್ಜಿ ವಿಚಾರಣೆಯ ಪೀಠದಿಂದ ಇಬ್ಬರು ನ್ಯಾಯಾಧೀಶರು ಹಿಂದೆ ಸರಿದಿದ್ದಾರೆ. ಹೊಸ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು

    ಭಾರತ ಸರ್ಕಾರದ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ, ರಾಜ್ಯಕ್ಕೆ ಹಂಚಿಕೆಯಾಗುವ ನೀರಿನ ಪ್ರಮಾಣವನ್ನು ಸ್ಪಷ್ಟ ಪಡಿಸುವಂತೆ ಕೇಂದ್ರವನ್ನು ಕೋರಲಾಗಿದೆ. ಅಲ್ಲದೆ ಈ ಯೋಜನೆಯ ತಾಂತ್ರಿಕ ವರದಿಯ ಮಾಹಿತಿಯನ್ನು ಒದಗಿಸುವಂತೆ ವಿರೋಧ ಪಕ್ಷಗಳು ಕೋರಿದ್ದು, ವರದಿ ಲಭ್ಯವಾದ ಕೂಡಲೇ ಒದಗಿಸಲಾಗುವುದು ಎಂದು ತಿಳಿಸಿದರು.

    ಈ ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ, ಕಾಂಗ್ರೆಸ್ ಮುಖಂಡರಾದ ಎಚ್ ಕೆ ಪಾಟೀಲ್, ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್, ಜೆಡಿ ಎಸ್ ಪಕ್ಷದ ಮುಖಂಡರಾದ ಬಂಡೆಪ್ಪ ಕಾಶೆಂಪೂರ, ಕಾನೂನು ತಜ್ಞರು ಮತ್ತು ಇತರರು ಭಾಗವಹಿಸಿದ್ದರು.
    ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ರಾಜ್ಯ ವಕೀಲರ ತಂಡದ ಮೋಹನ ಎಂ. ಕಾತರಕಿ ಮೊದಲಾದವರು ಉಪಸ್ಥಿತರಿದ್ದರು

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!