ಚಂದ್ರಮಾನ ಯುಗಾದಿಗೆ -ugadhi-ಇನ್ನೊಂದೆ ವಾರ ಬಾಕಿ. ಹಾಗೆ ನೋಡಿದರೆ ಪೇಟೆಯಲ್ಲಿ ಮಾವಿನ ಕಾಯಿಯ ರಾಶಿಯೇ ಬೀಳಬೇಕಿತ್ತು. ಪೌಡರ್ ಹಾಕಿ ಹೊಂಬಣ್ಣಕ್ಕೆ ತಿರುಗಿಸಿದ ಮಾವಿನ ಹಣ್ಣು ಅಲ್ಲಿ ಇಲ್ಲಿ ಕಾಣಿಸಬೇಕಿತ್ತು.ಕಳೆದ ನವೆಂಬರ್ ನಲ್ಲಿ ಸುರಿದ ಅಕಾಲಿಕ ಮಳೆ ಈ ಬಾರಿ ಮಾವಿನ ಫಸಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಚಿನ್ನದ ಬಣ್ಣದ ಮಾವಿಗೆ ಈ ವರ್ಷ ಚಿನ್ನದ ಬೆಲೆಯೇ ಆದರೂ ಅಚ್ಚರಿ ಪಡಬೇಕಿಲ್ಲ.
ಮಾವು ಬೆಳೆಯುವ ಪ್ರದೇಶಗಳು ಸೇರಿದಂತೆ ಇಡೀ ರಾಜ್ಯದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಭಾರಿ ಮಳೆ ಸುರಿಯಿತು. ಇದರಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಯಿತು. ಹೀಗಾಗಿ ಜನವರಿಯಲ್ಲಿ ಭರ್ಜರಿ ಹೂವೇನೋ ಕಾಣಿಸಿತು. ಆಸೆ ಹುಟ್ಟಿಸಿತು. ಆದರೆೆ ದಿನಕಳೆದಂತೆ ಹೂವು ಬಾಡಿದವು. ಭರ್ಜರಿ ಹೂ-ಗುಚ್ಛಗಳಿಂದ ರಾರಾಜಿಸಿದ್ದ ಮಾವಿನ ತೋಪುಗಳಲ್ಲಿ ಹೂವು ಗುಚ್ಛಗಳು ಒಣಗಿ ಕರಕಲಾಗಿವೆ. ಬಹುತೇಕ ತೋಟಗಳಲ್ಲಿ ಮಾರ್ಚ್ ತಿಂಗಳ ಅಂತ್ಯದಲ್ಲಿಯೂ ಭರ್ಜರಿ ಚಿಗುರು ಕಾಣಿಸಿದೆ. ಅಚ್ಚರಿಯ ನೈಸರ್ಗಿಕ ವೈಪರೀತ್ಯದಿಂದ ಮಾವು ಬೆಳೆಗಾರರು, ವರ್ತಕರಿಗೆ ಈ ಬಾರಿಯೂ ಮಾವು ಫಸಲು ಮರೀಚಿಕೆಯೇ ಸೈ.
ರಾಜ್ಯದ 16 ಜಿಲ್ಲೆಗಳಲ್ಲಿ ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಮತ್ತು ರಾಮನಗರ ಜಿಲ್ಲೆಗಳಲ್ಲಿ 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುವ ಮೂಲಕ ಕರ್ನಾಟಕವು ದೇಶದ ಮಾವು ಬೆಳೆಯುವ ರಾಜ್ಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು 10 ಲಕ್ಷ ಟನ್ ಉತ್ಪಾದನೆಯಾಗುತ್ತದೆ. 2020ರಲ್ಲಿ ಇದು 15 ಲಕ್ಷ ಟನ್‌ಗಳಷ್ಟಿತ್ತು. ಆದರೆ ಈ ವರ್ಷ ಈ ಪ್ರಮಾಣದ ಫಸಲು ಸಿಗುವುದು ತುಂಬಾ ಕಷ್ಟ.
ಮಾವು ಬೆಳೆ ಚಳಿಗಾಲದ ಆರಂಭದಲ್ಲಿ ಚಿಗುರಿ ಅಂತ್ಯದ ವೇಳೆಗೆ ಹೂವು-ಈಚು ಪ್ರಕ್ರಿಯೆ ಸ್ವಾಭಾವಿಕ. ಈ ಬಾರಿ ಒಂದೂವರೆ ತಿಂಗಳು ತಡವಾಗಿ ಮಾವಿನ ಮರಗಳಲ್ಲಿ ರಾಶಿ-ರಾಶಿ ಹೂವು ಕಾಣಿಸಿದ್ದವು. ಕೆಲವೇ ದಿನಗಳಲ್ಲಿ ಹೂವು ಒಣಗಿವೆ. ಖಾಲಿ ಟಿಸಿಲುಗಳು ಒಣಗಿ ನಿಂತಿವೆ. ಕೇವಲ ಶೇ 10 ರಿಂದ 15 ಇಳುವರಿಗೆ ಕುಸಿದಿದೆ. ಸತತ ಮೂರನೇ ವರ್ಷವೂ ಮಾವು ಬೆಳೆ ರೈತನ ಜೇಬು ತುಂಬಿಸುವಲ್ಲಿ ವಿಫಲವಾಗಿದೆ. ಕಡಿಮೆ ಇಳುವರಿ ಕಾರಣ ಗ್ರಾಹಕ ಮಾವಿಗೆ ದುಬಾರಿ ಬೆಲೆ ತೆರೆಬೇಕಾದುದು ಅನಿವಾರ್ಯವಾಗಲಿದೆ.
ಉದಾಹರಣೆಗೆ ಮಾವು ಬೆಳೆಯುವ ದಾವಣಗೆರೆ ಜಿಲ್ಲೆ ಸಂತೇಬೆನ್ನೂರು ಹೋಬಳಿಯಲ್ಲಿ ಆಲ್ಪನ್ಸೋ, ಸಿಂಧೂರ ಉತ್ಕೃಷ್ಟ ರುಚಿಯ ಮಾವಿನ ಬೆಳೆ ಸಿಂಹಪಾಲು ಪಡೆದಿದೆ. ಮಳೆ ದೀರ್ಘಾವಧಿ ಮುಂದುವರೆದ ಕಾರಣ ಹೂವು ಬಿಡುವ ಪ್ರಕ್ರಿಯೆ ಮುಂದೂಡಿತು. ಹೂಬಿಟ್ಟ ನಂತರ ಬೇಸಿಗೆ ಬಿರುಬಿಸಿಲಿಗೆ ಸೂಕ್ಷ್ಮ ತಳಿಯ ಮಾವಿನ ಹೂವು ಒಣಗಿವೆ. ತೋತಾಪರಿ, ಮಲ್ಲಿಕಾ, ರಸಪೂರಿಯ ಸ್ಥಳೀಯ ತಳಿಗಳಲ್ಲಿ ಸ್ವಲ್ಪ ಮಟ್ಟಿನ ಇಳುವರಿ ಕಾಣಸಿಗುತ್ತಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ನಮಗೆ ಈ ಬಾರಿ ನಿರಾಸೆಯಾಗಿದೆ ಎಂದು ಮಾವು ಬೆಳೆಗಾರ ವಿಜಯ ಕುಮಾರ್ ಹೇಳುತ್ತಾರೆ.
ಕಳೆದ ಬಾರಿ ಏಪ್ರಿಲ್ ಆರಂಭದಿಂದಲೇ ಆಲ್ಪೊನ್ಸೊ ಮಾವನ್ನು ಸಾವಯವ ರೀತಿ ಹಣ್ಣಾಗಿಸಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ನಗರಗಳಲ್ಲಿ ಸ್ವ ಮಾರುಕಟ್ಟೆ ಕಂಡುಕೊಂಡಿದ್ದೆ. 5 ಎಕರೆಯಲ್ಲಿ ರೂ.7 ರಿಂದ 8 ಲಕ್ಷ ಆದಾಯ ಗಳಿಸಿದ್ದೆ. ಈ ಬಾರಿ ಪೂರ್ವ ತಯಾರಿ ನಡೆಸಿದರೂ ಬೆಳೆನಷ್ಟವಾಗಿದೆ. ಕೇವಲ ಶೇ.15ರಷ್ಟು ಇಳುವರಿ ಸಿಗಲಿದೆ ಎನ್ನುತ್ತಾರೆ ಮತ್ತೊಬ್ಬ ಕೃಷಿಕ ದೊಡ್ಡಬ್ಬಿಗೆರೆಯ ತಿಪ್ಪೇಸ್ವಾಮಿ.
ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರ ತೋಟಗಳನ್ನು ಗೇಣಿ ಮಾಡಲಾಗಿತ್ತು. ದಿಢೀರ್ ಹೂವು ಉದುರಿ ತೀವ್ರ ಕುಸಿತ ಉಂಟಾಗಿದೆ. ಹೂ ಹಂತದಲ್ಲಿ ಸಿಂಪಡಿಸಿದ ಔಷಧಿಯ ಹಣವೂ ಸಿಗುವುದಿಲ್ಲ. ಹಲವರು ಮಾವು ತೋಟಗಳಿಂದ ಬೇರೆ ಬೆಳೆಗೆ ಕಳೆದ ವರ್ಷ ಪರಿವರ್ತನೆಗೊಂಡರು. ಮಾವಿನ ಬೆಳೆಯಲ್ಲಿ ಭರವಸೆಯೇ ಇಲ್ಲ ಎನ್ನುತ್ತಾರೆ ಗೇಣಿದಾರ ಲಾಲ್ ಖಾನ್.
ದಶಕಗಳಿಂದ ಸ್ಥಿರವಾಗಿದ್ದ ಮಾವು ಬೆಳೆ ಕಳೆದ ಮೂರು ವರ್ಷಗಳಿಂದ ವಿವಿಧ ಕಾರಣಗಳಿಂದ ರೈತರಿಗೆ ನಿರಾಶೆ ಮೂಡಿಸಿದೆ. ಸುಮಾರು500 ಹೆಕ್ಟೇರ್ ಗಿಂತ ಹೆಚ್ಚು ಮಾವು ಬೆಳೆ ತೆರವುಗೊಳಿಸಲಾಗಿದೆ. ಸದ್ಯ 1280ಹೆಕ್ಟೇರ್ ನಲ್ಲಿ ಮಾವು ಬೆಳೆ ಇದೆ. ಸಂತೇಬೆನ್ನೂರು, ದೊಡ್ಡಬ್ಬಿಗೆರೆ, ಸಿದ್ಧನಮಠ, ಚಿಕ್ಕಬ್ಬಿಗೆರೆ, ಕುಳೇನೂರು, ಚಿಕ್ಕಬೆನ್ನೂರು, ದೊಡ್ಡೇರಿಕಟ್ಟೆ ಭಾಗಗಳಲ್ಲಿ ಮಾವಿಲ್ಲದೆ ದಟ್ಟ ಹಸಿರಿನಿಂದ ಮಾವಿನ ಮರಗಳು ಕಂಗೊಳಿಸುತ್ತಿವೆ ಎನ್ನುತ್ತಾರೆ ರೈತರು.
ಅತ್ಯಧಿಕ ಮಾವು ಬೆಳೆ ಇದ್ದ ಕಾರಣ ಹಲವು ಅಂತರರಾಜ್ಯ ಖರೀದಿ ಕೇಂದ್ರಗಳು, ಉಗ್ರಾಣಗಳು ತಲೆ ಎತ್ತಿದ್ದವು. ಈ ಮೂರು ವರ್ಷದ ಮಾವು ಬೆಳೆ ವೈಪರಿತ್ಯದಿಂದ ಇಳುವರಿ ಕುಸಿದಿದೆ. ಈ ಬಾರಿ ಬಿರುಸಿನ ವ್ಯವಹಾರವಿಲ್ಲದ ಭಣಗುಡುವ ಸಾಧ್ಯತೆ ಇದೆ ಎನ್ನುತ್ತಾರೆ ಮಹಬೂಬ್ ಅಲಿ.
ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಮಾವು ರಫ್ತಾಗುವುದು ಕುಂಠಿತವಾಗಿತ್ತು. ಈ ಬಾರಿ ಅದನ್ನು ಪುನರಾರಂಭಿಸಲಾಗವುದು ಎಂದು ಕೇಂದ್ರ ವಾಣಿಜ್ಯ ಇಲಾಖೆ ಕಳೆದ ಜನವರಿಯಲ್ಲಿ ತಿಳಿಸಿತ್ತು. ಫಲಸಲಿನ ಕೊರತೆ ರಫ್ತಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
It is a high time we all do something about climate change