BENGALURU MAR 26
ಸ್ವಯಂ ಸೇವಾ ಸಂಸ್ಥೆಗಳು ಸುಳ್ಳಿನ ಮೂಟೆ ನೀಡುವ ಸಂಸ್ಥೆಗಳಾಗದೇ ಸತ್ಯದ ಹಾದಿಯಲ್ಲಿ ನಡೆದು ಜನರಿಗೆ ಒಳಿತನ್ನು ಮಾಡುವ ಕೆಲಸಗಳನ್ನು ಮಾಡಬೇಕು ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ ಕೆ ಶಿವರಾಮ್ ಅಭಿಪ್ರಾಯ ಪಟ್ಟರು.
ಮಲ್ಲೇಶ್ವರಂನ ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣಿ ದೇವಸ್ಥಾನದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸ್ವಯಂ ಸೇವಾ ಸಂಸ್ಥೆ ಭಾರತ ವಿಕಾಸ ಪ್ರತಿಷ್ಠಾನವನ್ನು ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮಾಡುವ ಅಭಿವೃದ್ಧಿ ಕಾರ್ಯಗಳು ಶಾಶ್ವತವಾಗಿರುತ್ತವೆ. ಯಾವುದೇ ಸಮಾಜ ಮುಖಿ ಕೆಲಸವನ್ನು ಮಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡಿ ಇಡಬೇಕು ಎಂದು ಸಲಹೆ ಮಾಡಿದರು.
ಪರಭಾರೆಯಾಗುತ್ತಿದ್ದ ಮಲ್ಲೇಶ್ವರದ ದಕ್ಷಿಣ ಮುಖಿ ನಂದಿ ತೀರ್ಥ ಕಲ್ಯಾಣಿ ದೇವಾಲಯವನ್ನು ಕಾನೂನು ಸಮರದಲ್ಲಿ ಗೆದ್ದು ಸ್ಥಳೀಕರ ಸಹಾಯದಿಂದ ಅಭಿವೃದ್ಧಿ ಪಡಿಸಿದ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಾಧನೆಯನ್ನು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು. ಜೊತೆಗೆ ಕಾಡು ಮಲ್ಲೇಶ್ವರ ದೇವಾಲಯದ ಇತಿಹಾಸವನ್ನು ಮತ್ತಷ್ಟು ಆಳಕ್ಕೆ ಇಳಿದು ಸಂಶೋಧನೆ ಮಾಡಬೇಕಾದ ಅಗತ್ಯ ಇದೆ. ಇದಕ್ಕೆ ತಮ್ಮ ಸಂಘ ಎಲ್ಲಾ ರೀತಿಯ ಸಹಕಾರ ನೀಡುವುದು ಎಂದರು.
ಇದೇ ಸಂದರ್ಭದಲ್ಲಿ ಪ್ರಾಚೀನ ದೇವಾಲಯಗಳ ಪರಿಚಯ ಮತ್ತು ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದ ದೇವಾಲಯ ಇತಿಹಾಸ ಸಂಶೋಧಕ ಕೆಂಗೇರಿ ಚಕ್ರಪಾಣಿ ಅವರು ಕರ್ನಾಟಕದ ಪ್ರಾಚೀನ ದೇವಾಲಯಗಳು ಹೇಗೆ ಆಗಿನ ಕಾಲದಲ್ಲೇ ಎಷ್ಟು ಸುವ್ಯವಸ್ಥಿತವಾಗಿದ್ದವು ಎಂಬುದನ್ನು ವಿವರಿಸಿದರು. ದೇಗುಲಗಳು ಕೇವಲ ದೇಗುಲಗಳಾಗಿರಲ್ಲಿಲ್ಲ. ಸಾಮಾಜಿಕ ಜೀವನದಲ್ಲಿ ಸಾವಿರಾರು ಜನರಿಗೆ ಆಶ್ರಯ ನೀಡಿದ್ದವು. ಊರಿನ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರ ಬಿಂದುವಾಗಿದ್ದವು ಎಂದು ಇತಿಹಾಸದ ಹಲವು ಉದಾಹರಣೆಗಳನ್ನು ನೀಡಿದರು. ಮತ್ತೊಬ್ಬ ಇತಿಹಾಸ ಸಂಶೋಧಕ ಟಿ ಎಸ್ ಗೋಪಾಲ್ ಮತ್ತು ಹಿರಿಯ ಪತ್ರಕರ್ತ ಸತ್ಯನಾರಾಯಣ ನಾಡಿಗ್, ನಿವೃತ್ತ ಉಪನ್ಯಾಸಕ ಡಾ. ಮಲ್ಲಿಕಾರ್ಜುನ್, ರಮೇಶ್ ಮತ್ತು ಶಬರೀಶ್ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಪ್ರವರ್ತಕರಲ್ಲಿ ಒಬ್ಬರಾದ ಉನ್ನತ ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಡಾ. ಎಂ ಜಯಪ್ಪ ಸ್ವಾಗತಿಸಿದರು. ಮತ್ತೊಬ್ಬ ಪ್ರವರ್ತಕ ಹಿರಿಯ ಪತ್ರಕರ್ತ ಶ್ರೀವತ್ಸ ನಾಡಿಗ್ ವಂದಿಸಿದರು. ಮಾಯಾ ಜಯಪ್ಪ ಕಾರ್ಯಕ್ರಮ ನಿರೂಪಿಸಿದರು.
ಶುಭವಾಗಲಿ ಜಯಪ್ಪ ಮತ್ತು ವತ್ಸ..
Superb initiative
ನಿಮ್ಮ ಸಮಾಜಮುಖಿ ಕಾರ್ಯಗಳಿ ಗೆ ಶುಭವಾಗಲಿ.