ಬದಲಾವಣೆ ಸೃಷ್ಠಿಯ ನಿಯಮವಾದರೂ ಬದಲಾವಣೆಗಳ ವೇಗ ನಾವುಗಳು ನಿರ್ಮಿಸಿಕೊಂಡಿರುವುದು. ಹಲವಾರು ಬಾರಿ ನಾವು ಬದಲಾವಣೆಗಳಿಗೆ ಸರಿಯಾಗಿ ಹೊಂದಿಕೊಂಡರೆ ಕೆಲವು ಬಾರಿ ಅದನ್ನು ಕಡೆಗಣಿಸಿ ತೊಂದರೆಗೊಳಗಾಗುತ್ತೇವೆ. ಈಗಿನ ದಿನಗಳಲ್ಲಿ ಪ್ರಚಾರಾತ್ಮಕವಾದ ಶೈಲಿಗಳೇ ಹೆಚ್ಚು. ಈ ವಿಧದಿಂದ ನಾವುಗಳು ಚಿಂತನಾಗುಣಗಳನ್ನು ಕರಗಿಸಿಕೊಳ್ಳುತ್ತಿದ್ದೇವೆ ಎಂದೆನಿಸುತ್ತಿದೆ. ಒಂದು ಉತ್ಪನ್ನದ ಜಾಹಿರಾತನ್ನು ನೋಡಿದಾಗ ಈ ಅಂಶ ದೃಢಪಡುತ್ತದೆ. ಮೊದಲು ಬಂದವರಿಗೆ ಆದ್ಯತೆ, ಶೇ.60 ರ ರಿಯಾಯಿತಿ, ಭಾರಿ ಉಳಿತಾಯ, ಮುಂತಾದ ಆಕರ್ಷಣೀಯ ಪದಬಳಕೆ ಜನಸಾಮಾನ್ಯರನ್ನೂ ಸೆಳೆಯುತ್ತದೆ. ಆದರೆ ಈ ಸಂದರ್ಭದಲ್ಲಿ ನಾವು ಉಳಿತಾಯ ಮತ್ತು ಮಿತವ್ಯಯಗಳ ವ್ಯತ್ಯಾಸವನ್ನೇ ಮರೆತುಬಿಟ್ಟಿದ್ದೇವೆ.
ಉಳಿತಾಯ ಎಂದರೆ ಅದನ್ನು ಗಳಿಸಿದ ಹಣದಲ್ಲಿ ಮಾಡುವ ಪ್ರಕ್ರಿಯೆ. ಇದು ಆಪತ್ಕಾಲದಲ್ಲೂ ಬಳಕೆಗೆ ಲಭ್ಯವಾಗುವ ಸಂಪನ್ಮೂಲ.
ಮಿತವ್ಯಯ ಎಂದರೆ ಅದು ವೆಚ್ಚದಲ್ಲಿ ಮೊಟಕು ಮಾಡುವ ಕ್ರಿಯೆ. ಇದು ಕಾಲ್ಪನಿಕ ಮತ್ತು ಕೈಗೆಟುಕುವಂತಹುದಲ್ಲ.
ಈಗಿನ ಪ್ರಚಾರಗಳಲ್ಲಿ ಈ ಎರಡೂ ಒಂದೇ ಆಗಿದೆಯಲ್ಲವೇ?
ಇಂದಿನ ಅಲ್ಪ ಬಡ್ಡಿ ಯುಗದಲ್ಲಿ ನಾಗರೀಕರಿಗೆ ತಮ್ಮ ಹಣಕಾಸಿನ ನಿರ್ವಹಣೆಯು ಸುಲಭವೇನಲ್ಲ. ಕಾರಣ ಸಂಕೀರ್ಣಮಯ ಜಗತ್ತು. ಸುಮ್ಮನಿದ್ದರೂ ಸಾಕು ಕೈಲಿರುವ ಹಣವು ಕರಗುತ್ತದೆ. ಇದಕ್ಕೆ ಕಾರಣಗಳೇ ಬೇಕಿಲ್ಲ. ಅಲ್ಲದೆ ಕೈಲಿರುವ ಹಣ ಕರಗಿಸಲು ಪ್ರೇರೇಪಿಸುವಂತಹ ಯೋಜನೆಗಳು ಎಲ್ಲೆಡೆ ಹರಿದಾಡುತ್ತಿವೆ. ಸಂಪಾದನೆಗಿಂತ ಕೈಲಿರುವ ಸಂಪತ್ತನ್ನು ಸುರಕ್ಷಿತವಾಗಿರಿಸುವುದೇ ದೊಡ್ಡ ಕೆಲಸವಾಗಿರುತ್ತದೆ. ಇನ್ನು ಹಿರಿಯ ನಾಗರೀಕರಿಗೆ ಸಂಪಾದನೆಯ ಮಟ್ಟ ಇಳಿಮುಖವಾಗಿರುತ್ತದೆ, ಬರುವ ಪಿಂಚಣಿಯನ್ನು, ಅಥವಾ ಬಡ್ಡಿ ಆದಾಯವನ್ನು ಮಾಸಾಂತ್ಯದವರೆಗೂ ಅಗತ್ಯಗಳಿಗೆ ಬಳಸಿಕೊಳ್ಳುವ ಯೋಜನೆ ರೂಪಿಸಿಕೊಳ್ಳುವುದಂತು ಸಾಹಸಮಯವಾಗಿರುವ ಕಾಲ. ಹಾಗಾಗಿ ತಮ್ಮ ಬಿಡುವಿನ ಸಮಯದಲ್ಲಿ ಛಲ, ಚಪಲ, ಚಟಗಳಿಂದ ಹೊರತಾಗಿ, ಹೊಸ ಹವ್ಯಾಸವನ್ನು ಬೆಳೆಸಿಕೊಂಡು, ಆರ್ಥಿಕ ನಿರ್ವಹಣಾ ಕಾರ್ಯವನ್ನು ಮಾಡಿದಲ್ಲಿ, ದೈಹಿಕ ಸ್ವಾಸ್ಥ್ಯವೂ, ಸ್ವಲ್ಪ ಮಟ್ಟಿನ ಆದಾಯವೂ ಕೈಗೆಟುಕುವಂತಾಗುತ್ತದೆ.
ಅದೇ ರೀತಿ ಮಹಿಳೆಯರು, ಗೃಹಿಣಿಯರು, ತಮ್ಮ ಬಿಡುವಿನ ಸಮಯದಲ್ಲಿ ನಿರುಪಯುಕ್ತ, ದಾರಿ ತಪ್ಪಿಸುವ ಕೌಟುಂಬಿಕ ಕಲಹಗಳ ತಿರುವುಗಳನ್ನು ಪ್ರದರ್ಶಿಸುವ ಧಾರಾವಾಹಿಗಳಿಂದ ದೂರವಾಗಿ ಸಕಾರಾತ್ಮಕ ಚಿಂತನೆಯಿಂದ ಆರ್ಥಿಕ ನಿರ್ವಹಣೆಯ ಅಭ್ಯಾಸ ಪಡೆದುಕೊಂಡು ಸ್ವಾವಲಂಬಿಗಳಾಗಲು ಇಂದಿನ ತಾಂತ್ರಿಕತೆ ದಾರಿ ಮಾಡಿಕೊಟ್ಟಿದೆ.
ಬಿಡುವಿನ ಸಮಯವನ್ನು ಷೇರುಪೇಟೆಯ ಚಟುವಟಿಕೆ ಕಡೆ ತಿರುಗಿಸಿಕೊಂಡರೆ ಆ ಚಟುವಟಿಕೆಯಿಂದ ತಮ್ಮ ಮನಸ್ಸು, ಚಿಂತನೆಗಳನ್ನು ವೃದ್ಧಿಸಿಕೊಳ್ಳುವುದರೊಂದಿಗೆ ಅಲ್ಪಮಟ್ಟಿನ ಆದಾಯವನ್ನು ಸಹ ಹೆಚ್ಚಿಸಿಕೊಳ್ಳಲು ಸಾಧ್ಯವಿರುತ್ತದೆ.
ಷೇರುಪೇಟೆಯ ಸಂಕ್ಷಿಪ್ತ ಚಿತ್ರಣ:
*2018 ರ ಮಾರ್ಚ್ 19 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.141.16 ಲಕ್ಷ ಕೋಟಿ : ಸೆನ್ಸೆಕ್ಸ್ :32,923
*2019 ರ ಮಾರ್ಚ್ 19 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.149.64 ಲಕ್ಷ ಕೋಟಿ : ಸೆನ್ಸೆಕ್ಸ್ :38,503
*2020 ರ ಮಾರ್ಚ್ 19 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.109.76 ಲಕ್ಷ ಕೋಟಿ : ಸೆನ್ಸೆಕ್ಸ್: 28,288
- 2021 ರ ಮಾರ್ಚ್ 17 ರಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.260.37ಲಕ್ಷ ಕೋಟಿ ಸೆನ್ಸೆಕ್ಸ್ : 57,863
ಹೂಡಿಕೆದಾರರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ:
ಸುಮಾರು 145 ವರ್ಷಗಳ ಸಮಯದಲ್ಲಿ 5 ಕೋಟಿ ತಲುಪಿದೆ
2020 ರಲ್ಲಿ ನೋಂದಾಯಿತ ಗ್ರಾಹಕರು: 5 ಕೋಟಿ
2022 ರಲ್ಲಿ ಬೆಳೆದು ತಲುಪಿದ ಸಂಖ್ಯೆ : 10 ಕೋಟಿ.
ಆದರೆ ಅದಕ್ಕನುಗುಣವಾಗಿ ಲೀಸ್ಟೆಡ್ ಕಂಪನಿಗಳ ಸಂಖ್ಯೆಯಲ್ಲಿ ಏರಿಕೆ ಕಾಣದಾಗಿದೆ. ಹಾಗಾಗಿ ಉತ್ತಮ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಾಗಿ ಷೇರಿನ ಬೆಲೆಗಳು ಗಗನಕ್ಕೇರುವಂತಾಗಿದೆ. ಇದಲ್ಲದೆ ಕೋವಿಡ್ ನಂತರದ ಸಮಯದಲ್ಲಿ ಕಾರ್ಪೊರೇಟ್ ಸಾಧನೆಗಳು ಮತ್ತು ಸರ್ಕಾರದ ಕ್ರಮಗಳು ಸಹ ಷೇರುಪೇಟೆಯ ವಾತಾವರಣವನ್ನು ಉತ್ತಮಗೊಳಿಸಲು ಕಾರಣವಾಗಿದೆ.
ಸಾಮಾನ್ಯವಾಗಿ ವಯಸ್ಕರು, ಹಿರಿಯ ನಾಗರೀಕರು, ಗೃಹಿಣಿಯರು ಭಾವಿಸುವುದೇನೆಂದರೆ ಬ್ಯಾಂಕ್ ಬಡ್ಡಿ ದರವು ಕ್ಷೀಣಿಸುತ್ತಿರುವುದರಿಂದ ಅದನ್ನವಲಂಭಿಸಿ ನಡೆಸುತ್ತಿರುವ ಜೀವನ ಸುಲಭವಾಗಿಲ್ಲ, ತೊಂದರೆಯಾಗುತ್ತಿದೆ. ಇದಕ್ಕೆ ಪರ್ಯಾಯವಾದ ಆದಾಯ ಗಳಿಕೆಯ ಮಾರ್ಗ ಯಾವುದೆಂಬುದರ ಆನ್ವೇಷಣೆ ಮಾಡುವ ಪ್ರಯತ್ನಗಳು ನಡೆಸುವುದು ಸಹಜವಾಗಿದೆ. ಇಂತಹವರು ತಮ್ಮ ಪ್ರಯತ್ನವನ್ನು ಷೇರುಪೇಟೆಯ ಚಟುವಟಿಕೆಯತ್ತಲೂ ನಡೆಸಬಹುದಾಗಿದೆ. ಷೇರುಪೇಟೆಯ ಚಟುವಟಿಕೆ ಎಂದರೆ ಹೆಚ್ಚಿನವರಲ್ಲಿ ತಪ್ಪು ಕಲ್ಪನೆಗಳಿವೆ. ಅದು ಜೂಜಾಟದ ಅಡ್ಡ, ಅಲ್ಲಿ ಅಪಾಯದ ಮಟ್ಟ ಹೆಚ್ಚು, ಷೇರುಪೇಟೆ ಚಟುವಟಿಕೆಗೆ ಹೆಚ್ಚಿನ ಹಣ ಅಗತ್ಯವಿದೆ, ಅದು ಸಾಮಾನ್ಯರ ಪಾಲಿಗಲ್ಲ, ಎಂಬ ಅನೇಕ ನಕಾರಾತ್ಮಕ ಭಾವನೆಗಳಿವೆ.
ಒಂದು ಕಾಲದಲ್ಲಿ ಕೇವಲ ಪಟಾಕಿ ವ್ಯಾಪಾರದಲ್ಲಿ ಮಾತ್ರ ಶೇ.70, 80 ರಷ್ಟು ಡಿಸ್ಕೌಂಟ್ ನೀಡುತ್ತಿದ್ದರು. ಆ ಸಮಯದಲ್ಲಿ ಯಾವುದಾದರೂ ಹೆಚ್ಚಿನ ಡಿಸ್ಕೌಂಟ್ ನೀಡಿದರೆ ಅದನ್ನು ಪಟಾಕಿ ವ್ಯಾಪಾರಾದಂತೆ ಎಂದು ಹೋಲಿಸುತ್ತಿದ್ದರು. ಆದರೆ ಈಗ ಎಲ್ಲಾ ವ್ಯವಹಾರಗಳೂ ಅದೇ ದಾರಿಯಲ್ಲಿ ಸಾಗುತ್ತಿವೆ. ಪ್ಯಾಕೇಟ್ ಗಳ ಮೇಲೆ ಮುದ್ರಿಸಿದ ಎಂ ಆರ್ ಪಿ ಬೆಲೆಗಳಿಗೂ ಪೇಟೆಯಲ್ಲಿ ರೀಟೇಲ್ ಗ್ರಾಹಕರಿಗೆ ಲಭ್ಯವಾಗುತ್ತಿರುವ ಬೆಲೆಗಳಿಗೂ ಹೆಚ್ಚಿನ ಅಂತರ, ಅಂದರೆ ಮುದ್ರಿತ ಬೆಲೆಗೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಸರ್ಕಾರಿ, ಖಾಸಗಿ ಎಂಬುದಿಲ್ಲ ಎಲ್ಲಾ ವಲಯಗಳಲ್ಲೂ ಈ ವ್ಯವಹಾರಿಕ ಗುಣ ಮುಂದುವರೆಯುತ್ತಿದೆ. ಹೀಗಿರುವಾಗ ಬದಲಾದ ಪರಿಸ್ಥಿತಿಗನುಗುಣವಾಗಿ ನಾವು ಸಹ ನಮ್ಮ ಚಿಂತನೆಗಳನ್ನು ಬದಲಿಸಿಕೊಳ್ಳಬೇಕು.
ಷೇರುಪೇಟೆಯಲ್ಲಿ ಎಲ್ಲಾ ವರ್ಗದ ಜನರಿಗೂ / ವೃತ್ತಿದಾರರಿಗೂ /ಹಿರಿಯ ನಾಗರೀಕರಿಗೂ ಯಾವುದೇ ಲಿಂಗ ಬೇಧವಿಲ್ಲದೆ ಚಟುವಟಿಕೆ ನಡೆಸಲು ಅವಕಾಶವಿದೆ. ಹೊಸದಾಗಿ ಪೇಟೆ ಪ್ರವೇಶಿಸುವವರು ಆರಂಭದಲ್ಲಿ ಕೇವಲ ಒಂದೆರಡು ಷೇರುಗಳಲ್ಲಿ ಚಟುವಟಿಕೆ ನಡೆಸಿ ಅವಶ್ಯವಿರುವ ಅನುಭವ ಪಡೆದುಕೊಳ್ಳಲು ಸಾಧ್ಯವಿದೆ. ಈ ಮೂಲಕ ದೊರೆತ ಅನುಭವವು ಚಟುವಟಿಕೆ ನಡೆಸಲು ಸಾಮರ್ಥ್ಯದ ನಂಬಿಕೆ ಮೂಡಿದ ಮೇಲೆ ತಮ್ಮ ಚಟುವಟಿಕೆಯ ಗಾತ್ರ ವಿಸ್ತರಿಸಿಕೊಳ್ಳಬಹುದಾಗಿದೆ. ಈಗಿನ ಷೇರುಪೇಟೆಯ ವೈಶಿಷ್ಟತೆಯೆಂದರೆ ಹಣದ ಅಗತ್ಯವಿದ್ದಾಗ ದಿಢೀರ್ ನಗದೀಕರಣಕ್ಕೆ ಅವಕಾಶ. ಷೇರು ಮಾರಾಟ ಮಾಡಿದ ಎರಡೇ ದಿನಗಳಲ್ಲಿ ಮಾರಾಟದ ಹಣ ಲಭ್ಯವಾಗುವುದು. ಇಷ್ಟು ತ್ವರಿತವಾಗಿ ಹಣ ಒದಗಿಸುವ ಸ್ವತ್ತು, ಬೇರೆ ಇರಲಾರದು.
ಸಾಮಾನ್ಯವಾಗಿ ಷೇರುಪೇಟೆಯ ಯಶಸ್ಸಿಗೆ ಅವಶ್ಯವಿರುವುದು ಮೌಲ್ಯಾಧಾರಿತ ಖರೀದಿ. ಅಂದರೆ ಒಂದು ಉತ್ತಮ ಕಂಪನಿಯ ಷೇರಿನ ಬೆಲೆ, ಭಾಹ್ಯ ಕಾರಣಗಳ ಪ್ರಭಾವದಿಂದ, ಭಾರಿ ಕುಸಿತ ಕಂಡಾಗ ಅದನ್ನು ಮೌಲ್ಯಾಧಾರಿತ ಖರೀದಿಗೆ ಪರಿವರ್ತಿಸಿಕೊಳ್ಳಬಹುದು. ಈರೀತಿ ಹೂಡಿಕೆಗೆ ಆಯ್ಕೆ ಮಾಡಿಕೊಂಡಾಗ ದೀರ್ಘಕಾಲೀನ ಹೂಡಿಕೆಯ ಚಿಂತನೆಯಿಂದಲೇ ಎಂದು ನಿರ್ಧರಿಸಿರಬೇಕು. ಒಂದು ವೇಳೆ ಖರೀದಿಸಿದ ಷೇರಿನ ಬೆಲೆಯು ಅನಿರೀಕ್ಷಿತ ಮಟ್ಟದ ಏರಿಕೆಯನ್ನು ಅಲ್ಪಾವಧಿಯಲ್ಲೇ ಪ್ರದರ್ಶಿಸಿದಲ್ಲಿ ಪೂರ್ಣವಾಗಿಯಲ್ಲದಿದ್ದರೂ ಭಾಗಶ:ವಾದರೂ ಲಾಭದ ನಗದೀಕರಣ ಮಡಿಕೊಳ್ಳುವುದು ಉತ್ತಮ. ನೆನಪಿರಲಿ ಬ್ಯಾಂಕ್ ಗಳಲ್ಲಿ ಠೇವಣಿ ಮೊತ್ತವು ದ್ವಿಗುಣವಾಗಲು ಸುಮಾರು 12 ವರ್ಷಗಳ ಸಮಯ ಬೇಕಾಗಬಹುದು. ಅಂದರೆ ಈ ಅಲ್ಪಬಡ್ಡಿದರದ ಯುಗದಲ್ಲಿ ಆಕರ್ಷಕ ಲಾಭವನ್ನು ಪೇಟೆ ಒದಗಿಸಿದಾಗ ಫಲಾನುಭವಿಯಾಗುವುದು ಸರಿಯಾದ ಕ್ರಮ.
ಆಕರ್ಷಣೀಯ ಲಾಭಾಂಶ ಮತ್ತು ಕಾರ್ಪೊರೇಟ್ ಫಲಗಳನ್ನು ವಿತರಿಸಿದ ಕಂಪನಿಗಳು:
Name of Company | Market rate | Dividends | Previous year Rs. |
BPCL | 364 | 5+5+ | 79.00 |
COAL INDIA | 187.00 | 9+ 5 + | 16.00 |
GAIL | 162. | 4+5+ buyback | 5.00 + buyback |
H P C L | 277 | 22.75 | |
I O C | 122 | 5 + 4 + | 12.00 |
IRCON ( 2) | 41 | 0.70+0.70 | 2.15 + 1:1 BONUS |
R V N L | 33 | 1.58 | 2.72 |
IRFC | 22 | 0.77+ | 1.05 |
N M D C (1) | 166 | 9.01 +5.73+ | 7.76 + BUY BACK |
N T P C | 142 | 4.00 + | 6.15 + BUYBACK |
P F C | 116 | 2.25+2.50+6.00+ | 10.00 |
POWER GRID CORP | 225 | 7 +5.50+ | 9.00 + 1: 3 BONUS |
OIL INDIA | 238 | 3.50+5.75+ | 5.00 |
R E C | 126 | 2.50+6.00 | 8.71 |
SAIL | 102 | 4.00+2.50 | 2.80 |
BALMER LAWRI INVESTMENTS | 370 | 38.00 (37.50 ಅದರ ಹಿಂದಿನವರ್ಷ) | |
SANOFI | 7,500 | 490.00 CD | 365.00 |
ಸಣ್ಣ ಹೂಡಿಕೆದಾರರ ಗಮನಕ್ಕೆ ತರಬಯಸುವುದೇನೆಂದರೆ ಹಲವಾರು ಕಂಪನಿಗಳು ಪೇಟೆಯ ಬೇಡಿಕೆ, ಪೂರೈಕೆಗಳಿಗನುಗುಣವಾಗಿ ಈಗಿನ ದಿನಗಳಲ್ಲಿ ಹೆಚ್ಚಿನ ಅಲ್ಪಕಾಲೀನ ಏರಿಳಿತಗಳನ್ನು ಪ್ರದರ್ಶಿಸುತ್ತಿರುವ ಕಂಪನಿಗಳೆಂದರೆ:
ಕೆನರಾ ಬ್ಯಾಂಕ್, ಟಾಟಾ ಮೋಟಾರ್ಸ್, ಐಟಿಸಿ, ಐ ಇ ಎಕ್ಸ್, ಲೌರಸ್ ಲ್ಯಾಬ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ವೇದಾಂತ, ಹಿಂದೂಸ್ಥಾನ್ ಝಿಂಕ್, ಟಾಟಾ ಸ್ಟೀಲ್, ಹಿಂದೂಸ್ಥಾನ್ ಕಾಪರ್, ಎಲ್ ಐ ಸಿ ಹೌಸಿಂಗ್, ರೆಡಿಂಗ್ಟನ್, ಗ್ಲೆನ್ ಮಾರ್ಕ್ ಫಾರ್ಮಾ, ಇನ್ ಫೊಸಿಸ್, ಹೆಚ್ ಎ ಎಲ್, ಮದರ್ಸನ್ ಸುಮಿ, ಮುಂತಾದ ಅನೇಕ ಸಾಧನೆಯಾಧಾರಿತ ಕಂಪನಿಗಳ ಪಟ್ಟಿ ಸಿದ್ಧಪಡಿಸಿಟ್ಟುಕೊಂಡು ಅವಕಾಶಕ್ಕಾಗಿ ಕಾದರೆ ಉತ್ತಮ ಫಲ ಪಡೆಯಲು ಸಾಧ್ಯ.
ಷೇರಿನ ಬೆಲೆಗಳಲ್ಲಿ ಏರುಪೇರು ಉಂಟುಮಾಡಬಹುದಾದ ಪ್ರಭಾವಿ ಅಂಶಗಳು
ಷೇರುಪೇಟೆಯ ಚಟುವಟಿಕೆಯನ್ನು ನಮ್ಮ ಅನುಕೂಲಕ್ಕೆ ಪರಿವರ್ತಿಸಿಕೊಳ್ಳಬೇಕಾದಲ್ಲಿ ಅರಿಯ ಬೇಕಾದ ಅಂಶಗಳು ಎಂದರೆ
- ಬೇಡಿಕೆ- ಪೂರೈಕೆಯ ಅನುಪಾತ
- ಕಾರ್ಪೊರೇಟ್ ಗಳಲ್ಲಿನ ಆಂತರಿಕ ಬದಲಾವಣೆಗಳು
- ಸರ್ಕಾರಿ ನಿಯಮಗಳಲ್ಲಿನ ಬದಲಾವಣೆಗಳು ಮತ್ತು ಅದರ ಪ್ರಭಾವ
- ದೇಶದ ಆರ್ಥಿಕತೆಯ ಮೇಲಾಗುವ ಪ್ರಭಾವಿ ಬದಲಾವಣೆಗಳು
- ಜಾಗತಿಕ ಮಟ್ಟದಲ್ಲಾದ ಸೂಚ್ಯಂಕಗಳ ಬದಲಾವಣೆಗಳು
- ಸ್ವದೇಶಿ ಮತ್ತು ವಿದೇಶಿ ವಿತ್ತೀಯ ಸಂಸ್ಥೆಗಳ, ಮ್ಯುಚುವಲ್ ಫಂಡ್ ಚಟುವಟಿಕೆಯ ಶೈಲಿಗಳು
- ಪ್ರವರ್ತಕರ ಭಾಗಿತ್ವದಲ್ಲುಂಟಾದ ಏರುಪೇರು, ಭಾಗಿತ್ವದ
- ಮೂಲಾಧಾರಿತ ಪೇಟೆಯ ಚುಕ್ತಾಚಕ್ರದ ಸಮಯದಲ್ಲಿರುವ ಪರಿಸ್ಥಿತಿ
- ಕಂಪನಿಗಳ ಬಂಡವಾಳ ಸ್ವರೂಪದಲ್ಲಾಗುವ ಬದಲಾವಣೆ, ಸಂಪನ್ಮೂಲ ಸಂಗ್ರಹಣೆಯ ವಿಧ ಮತ್ತು ಷೇರಿನ ಮೇಲುಂಟಾಗುವ ಪ್ರಭಾವ
- ಮಾಧ್ಯಮಗಳಲ್ಲಿನ ಆದ್ಯತಾ ಪ್ರಚಾರ ಶೈಲಿ
- ಕಾರ್ಪೊರೇಟ್ ಫಲಗಳಾದ ಲಾಭಾಂಶ, ಬೋನಸ್, ಹಕ್ಕಿನ ಷೇರು, ಮುಖಬೆಲೆ ಸೀಳಿಕೆ ಮತ್ತು ಕ್ರೋಡೀಕರಣ, ಷೇರು ಹಿಂಕೊಳ್ಳುವಿಕೆಗಳು
- ಕಂಪನಿಗಳ ಸಹಭಾಗಿತ್ವ, ವಿಭಾಗಗಳ ಮಾರಾಟ, ವಿಲೀನ, ಸಮ್ಮಿಲನಗಳ ವಿಚಾರ
- ಪ್ರವರ್ತಕರ ಭಾಗಿತ್ವದ ಅಡವು- ಅದರಲ್ಲಾಗುವ ಬದಲಾವಣೆಗಳು
- ಕಂಪನಿಯ ಹೆಸರಿನಲ್ಲುಂಟಾಗುವ ಬದಲಾವಣೆಗಳು
- ಕಾರ್ಪೊರೇಟ್ ನಿಯಮ ಪಾಲನೆ ಮತ್ತು ಅದರಲ್ಲಿನ ಲೋಪದೋಶಗಳು
- ಸ್ಥಳೀಯ ಮತ್ತು ಅಂತರ ರಾಷ್ಟ್ರೀಯ ಕಂಪನಿಗಳ ರೇಟಿಂಗ್ ಮತ್ತು ಅದರ ಬದಲಾವಣೆಗಳು,
- ಇನ್ವೆಸ್ಟ್ ಮೆಂಟ್ ಕಂಪನಿಗಳ ರೇಟಿಂಗ್
- ಕಂಪನಿಯ ಉತ್ಪನ್ನಗಳಿಗಿರುವ ಸ್ಥಳೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಮಾನ್ಯತೆ
- ಆದಾಯ ತೆರಿಗೆ, ಅಬಕಾರಿ ಸುಂಕ, ಜಿ ಎಸ್ ಟಿ ಗಳಲ್ಲಾದ ಬದಲಾವಣೆಗಳು, ಈ ಇಲಾಖೆಗಳಿಂದ ಕ್ರಮಕ್ಕೊಳಗಾಗುವ ಅಂಶಗಳು
- ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ
- ನಿಯಂತ್ರಕರ ನಿಯಮಗಳು ಮತ್ತು ಅದರ ಬದಲಾವಣೆಗಳಿಂದಾಗುವ ಪ್ರಭಾವಗಳು
- ಷೇರುವಿನಿಮಯ ಕೇಂದ್ರದ ಲೀಸ್ಟಿಂಗ್ ನಲ್ಲಿ ಸೇರಿಸಲಾದ ಗುಂಪು ಮತ್ತು ಪಾಲಿಸಿದ ಶಿಸ್ತುಬದ್ಧತೆ
- ಕಂಪನಿಯ ಮೇಲೇನಾದರೂ ಷೇರುವಿನಿಮಯ ಕೇಂದ್ರವು ಲೋಪಗಳಿಗೆ ಕ್ರಮ ಜರುಗಿಸಿದೆಯೇ
- ಹೂಡಿಕೆದಾರರ ಹಿತರಕ್ಷಣೆಗೆ ಕಂಪನಿ ಕೊಡುವ ಆದ್ಯತೆ
- ಷೇರುವಿನಿಮಯ ಕೇಂದ್ರದ ಸೂಚ್ಯಂಕಗಳಲ್ಲುಂಟಾದ ಬದಲಾವಣೆಗಳಿಂದ ಷೇರಿನ ಬೆಲೆಗಳಲ್ಲಿ ಏರುಪೇರು
ಇಷ್ಠೇ ಅಲ್ಲದೆ ಇನ್ನೂ ಅನೇಕ ಕಾರಣಗಳು ಏರಿಳಿತಕ್ಕೆ ಸೃಷ್ಠಿಯಾಗುತ್ತಿರುತ್ತವೆ. ಈ ಎಲ್ಲಾ ಕಾರಣಗಳನ್ನು ವಿಶ್ಲೇಷಿಸಿ ನಿರ್ಧರಿಸುವುದು ಜನಸಾಮಾನ್ಯರಿಗಂತೂ ಸಾಧ್ಯವಿಲ್ಲ. ಹಾಗೂ ವಿವಿಧ ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ದೊರೆಯುವ, ಲಭ್ಯವಾಗುವ ಮಾಹಿತಿಯು ಎಷ್ಠರ ಮಟ್ಟಿಗೆ ಸರಿ ಇರಬಹುದು ಎಂಬುದು ದೃಢೀಕರಿಸಲಸಾಧ್ಯ. ಇದಕ್ಕೆ ಸುಲಭ ಸೂತ್ರವೆಂದರೆ, ಷೇರುಪೇಟೆಯ ಚಟುವಟಿಕೆ ನಡೆಸುವ ಕಂಪ್ಯೂಟರ್ ಪರದೆ ಅಥವಾ ಮೊಬೈಲ್ ನಲ್ಲಿ ಪ್ರದರ್ಶಿತವಾಗುವ ಕಣ್ಣಿಗೆ ಗೋಚರಿಸುವ ಅಂಕಿ ಅಂಶಗಳ ಮೂಲಕ, ಕಂಪನಿಗಳ ಸಾಮರ್ಥ್ಯವನ್ನಾಧರಿಸಿ, ಪೇಟೆಯ ಪರಿಸ್ಥಿತಿಯೊಂದಿಗೆ ತುಲನೆಮಾಡಿ ನಿರ್ಧರಿಸುವುದು ಉತ್ತಮವಲ್ಲವೇ?
ಮುಖ್ಯವಾಗಿ ಕೇವಲ ವಿಶ್ಲೇಷಣೆಗಳನ್ನು ಅನುಸರಿಸುವ ಬದಲು, ಕಂಪನಿಗಳ ಅರ್ಹತಾ ಮಟ್ಟವನ್ನು ಮಾಪನ ಮಾಡುವ ಚಿಂತನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.
ಜನಸಾಮಾನ್ಯರಿಗೆ, ಬೇರೆ ವ್ಯವಹಾರಾ ಅಥವಾ ವೃತ್ತಿಪರರಿಗೆ ಈ ಎಲ್ಲಾ ವಿವಿಧ ಅಂಶಗಳನ್ನು ಗಮನಿಸಿ ನಿರ್ಧರಿಸುವುದು ಸುಲಭದ ಕೆಲಸವಲ್ಲ. ಅಂತಹವರು ಅಳವಡಿಸಿಕೊಳ್ಳಬೇಕಾದ ಸುಲಭಸೂತ್ರವೆಂದರೆ ʼ ವ್ಯಾಲ್ಯು ಪಿಕ್ – ಪ್ರಾಫಿಟ್ ಬುಕ್ʼ
Value pick – prafit book ಎಂಬುದು ಷೇರುಪೇಟೆ ವಹಿವಾಟಿಗೆ ಸದಾ ಅನ್ವಯವಾಗುವ ಹಸಿರು ಸಮೀಕರಣವಾಗಿದೆ. ಯಾವುದೇ ಒಂದು ಉತ್ತಮ ಕಂಪನಿ ಷೇರು ಖರೀದಿಸುವಾಗ ಅದರ ಮೌಲ್ಯವು ಭಾರಿ ಕುಸಿತದಲ್ಲಿದೆ ಎಂದಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು. ನಂತರ ಈ ಷೇರಿನ ಬೆಲೆ ಏರಿಕೆ ಕಂಡಾಗ ಹೂಡಿಕೆಯ ಅವಧಿ ಮತ್ತು ಅದು ಗಳಿಸಿಕೊಡುವ ಲಾಭದ ಗಾತ್ರಕ್ಕನುಗುಣವಾಗಿ, ಉತ್ತಮವಾಗಿದ್ದಲ್ಲಿ ಮಾರಾಟ ಮಾಡಿ ನಿರ್ಗಮಿಸಬೇಕು. ಮಾರಾಟಮಾಡಿದ ನಂತರ ಇದೇ ಷೇರು ಮತ್ತಷ್ಟು ಏರಿಕೆ ಕಂಡಲ್ಲಿ ಚಿಂತಿಸದೆ, ಲಾಭ ನಗದೀಕರಿಸಿಕೊಂಡ ತೃಪ್ತಿ ಇದ್ದಲ್ಲಿ ಮುಂದಿನ ನಿರ್ಧಾರಗಳು ಸುಸೂತ್ರವಾಗಿರುತ್ತದೆ. ಹಾಗಾಗಿ ಸಮತೋಲನ ಚಿತ್ತ ಭವಿಷ್ಯದ ಚಟುವಟಿಕೆಗೆ ಅತ್ಯಗತ್ಯ. ಒಂದೊಮ್ಮೆ ಮಾರಾಟಮಾಡಿದ ಷೇರೇ, ಉತ್ತಮವೆನಿಸಿದರೆ, ಕುಸಿತ ಕಂಡಾಗ ಮತ್ತೊಮ್ಮೆ ಖರೀದಿಸಬಹುದಾಗಿದೆ. ಒಂದು ಕಂಪನಿಯು ಪ್ರಕಟಿಸುವ ತನ್ನ ಸಾಧನೆಗಳನ್ನು, ಕಾರ್ಪೊರೇಟ್ ಫಲಗಳನ್ನು ಅಥವಾ ಕಂಪನಿಗೆ ಸಂಬಂಧಪಟ್ಟ ಬೆಳವಣಿಗೆಗಳನ್ನು ಸದಾ ಗಮನದಲ್ಲಿರಿಸಿಕೊಂಡು, ಆ ಷೇರಿನ ಬೆಲೆಯು ವಿಬಿನ್ನ ಕಾರಣಗಳಿಂದಾಗಿ ಅಥವಾ ಷೇರುಪೇಟೆಯ ವಾತಾವರಣದಿಂದ ಕುಸಿತಕಂಡಾಗ ಅದನ್ನು ಅಪೂರ್ವ ಅವಕಾಶವೆಂದು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು. ಆ ಕಂಪನಿಯ ಅರ್ಹತಾ ಮಟ್ಟವನ್ನು ಸಾಧ್ಯವಾದಷ್ಠೂ ಮಾಪನಮಾಡಿಕೊಂಡಿರಬೇಕು.ಸಮಯೋಚಿತವಾಗಿ ನಿರ್ವಹಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.