ಸುಮಾವೀಣಾ
ತನ್ನಷ್ಟಂ ಯನ್ನದೀಯತೇ (ದಾನಗುಣ ವ್ಯಕ್ತಿತ್ವದ ಸಂಕೇತ) ಇದೊಂದು ಸಂಸ್ಕೃತ ಸುಭಾಷಿತ. ಶಕ್ತಿ ಕವಿ ರನ್ನ ತನ್ನ ಪಾರಮಾರ್ಥಿಕ ಕೃತಿ ‘ಅಜಿತ ತೀರ್ಥಂಕರ ಪುರಾಣಂ’ ದಲ್ಲಿ ಅತ್ತಿಮಬ್ಬೆಯ ದಾನ ಶೀಲತೆಯನ್ನು ವಿವರಿಸುವ ಸಂದರ್ಭದಲ್ಲಿ ಈ ಮಾತನ್ನು ಉಲ್ಲೇಖಿಸಿದ್ದಾನೆ.
ಭಾರತೀಯ ಪರಂಪರೆಯಲ್ಲಿ ದಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಒಬ್ಬ ವ್ಯಕ್ತಿ ತನ್ನ ಗಳಿಕೆಯಲ್ಲಿ ಇಂತಿಷ್ಟು ದಾನಕ್ಕೆ ಮೀಸಲಿಡಬೇಕು ಎನ್ನುವ ನಿಯಮವಿದೆ. ಇನ್ನೊಂದರ್ಥದಲ್ಲಿ ವ್ಯಕ್ತಿಯ ಸಿರಿವಂತಿಕೆಯನ್ನು ಅವನ ಗಳಿಕೆಯಲ್ಲಿ ಅಲ್ಲ ದಾನಗುಣದ ಆಧಾರದ ಮೇಲೆ ನಿರ್ಧರಿಸುವುದು ಎನ್ನುವುದಿದೆ. ಸತ್ಪಾತ್ರಕ್ಕೆ ನೀಡುವುದೆ ಕರಕ್ಕೆ ಶೃಂಗಾರ ಎಂಬ ನುಡಿ ವಚನಕಾರರ ಹಿನ್ನೆಲೆಯಲ್ಲಿ ಬಂದಿದ್ದು ದಾನದ ಹಿರಿಮೆಯನ್ನು ಸಂಕೇತಿಸುತ್ತದೆ.
ಉಳ್ಳವರು ದಾನ ಮಾಡದಿದ್ದರೆ ಅದು ನಷ್ಟವೇ ಎಂಬ ಅರ್ಥವನ್ನು ‘ತನ್ನಷ್ಟಂ ಯನ್ನದೀಯತೇ’ ಎಂಬ ಮಾತು ಹೇಳುತ್ತದೆ. ಇದನ್ನೆ ಬಸವಣ್ಣನವರು ಕೊಡಲಿಲ್ಲದಿದ್ದೊಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವದ ಮಾಬನೆ ಕೂಡಲ ಸಂಗಯ್ಯ ಎಂದಿದ್ದಾರೆ. ಅತ್ತಿಮಬ್ಬೆ ದಾನದಲ್ಲಿ ಎತ್ತಿದ ಕೈ ಆಗಿದ್ದಳು ಹಾಗಾಗೆ ಆಕೆಯನ್ನು ‘ದಾನಚಿಂತಾಮಣಿ ಅತ್ತಿಮಬ್ಬೆ’, ‘ಕಸವರಗಲಿ’ ಎಂದು ಕರೆಯುವುದಿದೆ.
ದಾನವೆಂದರೆ ಅದೊಂದು ವೃತವಿದ್ದಂತೆ ನಾವು ಬಳಸಿ ಬಿಸಾಡಿದ ವಸ್ತುಗಳನ್ನು ಕಸದತೊಟ್ಟಿಗೆ ಎಸೆಯುವಂತೆ ಕೊಡುವುದಲ್ಲ. ದಾನ ತೆಗೆದುಕೊಂಡಿರುವವರಿಗೆ ನಾವು ಕೊಡಮಾಡಿದ ವಸ್ತುಗಳು ಉಪಯೋಗಕ್ಕೆ ಬರುವಂತಿರಬೇಕು. ಇರುವ ಸಂಪತ್ತನ್ನು ಇತರರಿಗೂ ಕೊಡದೆ ತಾನೂ ಅನುಭವಿಸದೆ ವ್ಯರ್ಥ ಮಾಡದೆ ಅಗತ್ಯ ಇರುವವರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೊಡುವುದು ವ್ಯಕ್ತಿತ್ವದ ಹಿರಿತನ. ಕೊಡುವ ದಾನ ಅಲ್ಪವೇ ಆದರೂ ಒಮ್ಮನಸ್ಸಿನಿಂದ ಕೊಟ್ಟರೆ ಅದುವೇ ಮಹಾದಾನವಾಗುತ್ತದೆ.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.