21.7 C
Karnataka
Tuesday, December 3, 2024

    JDS:ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಅಧಿಕಾರ ಸ್ವೀಕಾರ

    Must read

    BENGALURU APR 17
    ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡರು.

    ಹಾಗೆಯೇ, ಹಿರಿಯ ಶಾಸಕರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ಕೆ.ಕುಮಾರಸ್ವಾಮಿ ಅವರು ಜೆಡಿಎಸ್ ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

    ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಈ ಇಬ್ರಾಹಿಂ ಅವರು ಪಕ್ಷದ ಚುಕ್ಕಾಣಿ ಹಿಡಿದರು.

    ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದರು. ಅವರು ಹೇಳಿದ್ದಿಷ್ಟು;

    ನಾನು ದೇವರನ್ನು ನಂಬುತ್ತೇನೆ. ಅದಕ್ಕೆ ‌‌ಇವತ್ತು ಒಳ್ಳೆಯ ದಿನ ಎನ್ನುವ ಕಾರಣಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಇಬ್ರಾಹಿಂ ಅವರಿಗೆ ನೀಡಿದ್ದೇವೆ. ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಎಚ್.ಕೆ.ಕುಮಾರಸ್ವಾಮಿ ಅವರು ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಎಂದು ಹೇಳಿದ ಕೂಡಲೇ ಒಪ್ಪಿಕೊಂಡರು.

    ನನಗೆ ಈಗ 90 ವರ್ಷ ವಯಸ್ಸು. ಕುಮಾರಸ್ವಾಮಿ ಅನೇಕ ಯೋಜನೆ ಮಾಡಿದ್ದಾರೆ. ಬಡವರಿಗೆ ಅನ್ಯಾಯ ಆಗಬಾರದು ಅಂತ ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ಈಗ ಜಲಧಾರೆ ಕಾರ್ಯಕ್ರಮ ಪ್ರಾರಂಭ ಮಾಡಿದ್ದಾರೆ.

    ಜಲಧಾರೆ ಕಾರ್ಯಕ್ರಮ ಕುಮಾರಸ್ವಾಮಿ ಅವರ ಕಲ್ಪನೆ ಕೂಸು. ಇದೊಂದು ಶ್ರೇಷ್ಠ ಕಾರ್ಯಕ್ರಮ. ಇಬ್ರಾಹಿಂ ಈ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ. ಇದರ ನಡುವೆ ದೇವೇಗೌಡರ ಕುಟುಂಬದವರೇ ಎಲ್ಲಾ ಇದ್ದಾರೆ ಅಂತ ಅಪಪ್ರಚಾರ ಮಾಡಬಹುದು.

    ಇದು ಒಕ್ಕಲಿಗರ ಪಾರ್ಟಿ ಅಂತ ಹೇಳಿದರು. ಬರೀ ಸುಳ್ಳು ಹೇಳುತ್ತಾರೆ. ಅಪಪ್ರಚಾರ ಮಾಡಿದರು. ನಾನು ಮಂತ್ರಿ ಮಂಡಲ ರಚನೆ ಮಾಡಿದಾಗ ಒಕ್ಕಲಿಗರು ಇದ್ದದ್ದು 4 ಜನ ಮಾತ್ರ. ಓಬಿಸಿ, ಎಸ್ಸಿ, ಎಸ್ಟಿಗೆ ಹೆಚ್ಚು ಸ್ಥಾನ ಕೊಟ್ಟಿದ್ದೆ. ಎಲ್ಲಾ ವರ್ಗದವರನ್ನು ಗುರುತಿಸಿ ನಾನು ‌ಮಂತ್ರಿಮಂಡಲ ಮಾಡಿದೆ. ಮುಸ್ಲಿಮರಿಗೆ ಮೀಸಲಾತಿ ತಂದಿದ್ದು ನಾನು.

    ಮಿಷನ್ 123 ಸಾಕಾರ ಆಗುತ್ತದೆ. ಭಗವಂತನ ಅನುಗ್ರಹದಿಂದ ಈ ಪಕ್ಷ ಉಳಿಯುತ್ತದೆ. ಈ‌ ಪಕ್ಷವನ್ನು ಯಾರಿಂದಲೂ ತುಳಿಯಲು ಸಾಧ್ಯವಿಲ್ಲ. ಅಂದು ನಾವು ಮಾಡಿದ ಒಳ್ಳೆಯ ಕೆಲಸಕ್ಕೆ ಅವತ್ತು 16 ಎಂಪಿ ಸ್ಥಾನ ಗೆದ್ದೆವು. ಇನ್ನು ಮುಂದೆ ಜೆಡಿಎಸ್ ಅನ್ನು ಒಕ್ಕಲಿಗರ ಪಕ್ಷ ಅಂತ ಯಾರೂ ಹೇಳಬಾರದು. ಅಂತಹ ಮಾತುಗಳಿಗೆ ಇಬ್ರಾಹಿಂ ತಕ್ಕ ಉತ್ತರ ನೀಡುತ್ತಾರೆ. ನಾನು ‌‌ ಕುಳಿತುಕೊಳ್ಳೊಲ್ಲ. ಪಕ್ಷದ ಪರವಾಗಿ ನಾನು ದುಡಿಮೆ ಮಾಡ್ತೀನಿ.

    ಮಾಜಿ ಮುಖ್ಯಮಂತ್ರಿ ಎಚ್ ಡಿಕೆ ಹೇಳಿದ್ದು:

    ಎರಡು ವರ್ಷಗಳ ಕಾಲ ಕಷ್ಟದ ಕಾಲದಲ್ಲೂ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿದ್ದರು ಎಚ್.ಕೆ.ಕುಮಾರಸ್ವಾಮಿ ಅವರು. ಇಬ್ರಾಹಿಂ ಅವರು ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಮತ್ತೆ ಮರಳಿ ಮನೆಗೆ ಬಂದಿದ್ದಾರೆ.

    ರಾಜ್ಯದಲ್ಲಿ ಜಲಧಾರೆ ಕಾರ್ಯಕ್ರಮ ಆರಂಭವಾಗಿದೆ. 15 ಕಡೆ ಒಂದೇ ಬಾರಿಗೆ ನೀರು ತುಂಬುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇಬ್ರಾಹಿಂ ಅವರ ಸೇರ್ಪಡೆ ಒಂದು ಸಮಾಜವನ್ನು ಓಲೈಕೆ ಮಾಡಲು ಅಲ್ಲ. ನಾನು ಸ್ಪಷ್ಟವಾಗಿ ಹೇಳ್ತಿನಿ ನಾನು ಓಲೈಸಲು ಈ ಕೆಲಸ ಮಾಡ್ತಾ ಇಲ್ಲ. ಒಂದು ಸಮಾಜದ ಪರವಾಗಿ ನಾನು ಇಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಅಂತ ಕುವೆಂಪು ಹೇಳಿದ್ದಾರೆ. ಇದನ್ನು ಉಳಿಸಲು ಹೋರಾಟ ಮಾಡಬೇಕಿದೆ.

    ಪದಗ್ರಹಣ ಸಮಾರಂಭದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ್, ಶಾಸಕರಾದ ಕೆ.ಎಂ.ಕೃಷ್ಣಾರೆಡ್ಡಿ, ದಾಸರಹಳ್ಳಿ ಮಂಜುನಾಥ್, ಮುಖಂಡರಾದ ನಬಿ, ಟಿ.ಎ.ಶರವಣ, ಜಪ್ರುಲ್ಲಾ ಖಾನ್, ಪಕ್ಷದ ನಗರ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!