ಆರ್ಥಿಕ ಸಾಕ್ಷರತೆ ಎಂದರೆ ಕೈ ತುಂಬಾ ಹಣ ಸಂಪಾದನೆ ಮಾಡಿ ಬ್ಯಾಂಕ್ ಖಾತೆಯಲ್ಲಿ ತುಂಬಿಸಿ, ಐಶಾರಾಮಿ ಬಂಗಲೆ, ಕಾರುಗಳನ್ನು ಹೊಂದಿ ಹಣವನ್ನು ನೀರಿನಂತೆ ವೆಚ್ಚ ಮಾಡುವುದರೊಂದಿಗೆ, ಅವಶ್ಯವೋ, ಅನಾವಶ್ಯವೋ ನೋಡಿದ್ದನ್ನೆಲ್ಲಾ ಖರೀದಿಸುತ್ತಾ, ಕ್ರೆಡಿಟ್ ಕಾರ್ಡ್ ಗಳನ್ನು ಉಜ್ಜುತ್ತಾ, ಮಾಸಾರಂಭದಿಂದ ಅಂತ್ಯದವರೆಗೂ ತೆರಬೇಕಾದ ಇ ಎಂ ಐ ಗಳ ಕೊರತೆಯನ್ನು ಸರಿಪಡಿಸಿಕೊಳ್ಳುವುದಲ್ಲ. ಲಭ್ಯವಿರುವ ಹಣವನ್ನು ಸದ್ವಿನಿಯೋಗ ಮಾಡುವುದರೊಂದಿಗೆ, ಸರಿಯಾಗಿ ನಿರ್ವಹಿಸುವುದರೊಂದಿಗೆ, ನೆಮ್ಮದಿ, ಶಾಂತಿ, ಸಂತೋಷಗಳನ್ನು ಪಡೆದುಕೊಳ್ಳುವುದಾಗಿದೆ.
ಈ ಹಿಂದೆ ಉಳಿತಾಯ ಎಂಬುದು ಗಳಿಸಿದ ಹಣದಲ್ಲಿನ ಪ್ರಕ್ರಿಯೆಯಾಗಿದ್ದರೆ, ಈಗ ವೆಚ್ಚ ಮಾಡುವ ಹಣದ ಪ್ರಕ್ರಿಯೆಯಾಗಿದೆ. ಗಳಿಸಿದ ಹಣದಿಂದ ಉಳಿತಾಯ ಮಾಡಿದಲ್ಲಿ, ಉಳಿಸಿದ ಹಣವು ಬೆಳೆಸಲೂ ಸಹ ಅವಕಾಶವಿದ್ದು, ಅವಶ್ಯವಿರುವ ಸಮಯದಲ್ಲಿ ಬಳಕೆಮಾಡಿಕೊಳ್ಳಲು ಲಭ್ಯವಿರುವುದರಿಂದ ಹೊರಗಿನ ಸಾಲಗಳಿಗೆ ಮೊರೆಹೋಗುವ ಅವಶ್ಯಕತೆ ಇರುವುದಿಲ್ಲ. ಆದರೆ ವೆಚ್ಚ ಮಾಡುವ ಹಣದಲ್ಲಿ ಉಳಿತಾಯ ಎಂದರೆ ಅದು ಲಭ್ಯತೆಗಿಂತ ಸ್ವಲ್ಪಮಟ್ಟಿನ ಬಾಧ್ಯತೆಯನ್ನು, ಇ ಎಂ ಐ ಮೊಟಕುಗೊಳಿಸುವ ಮೂಲಕ ಸಹಕಾರಿಯಾಗಬಹುದಷ್ಠೆ. ಅವಶ್ಯಕತೆ ಎನಿಸಿದಾಗ ಲಭ್ಯವಿರುವುದಿಲ್ಲ.
ಇಂದಿನ ದಿನಗಳಲ್ಲಿ ಹೂಡಿಕೆದಾರರು ಹೂಡಿಕೆಯ ಮೂಲ ಉದ್ದೇಶಗಳನ್ನೇ ಮರೆತು ಕೇವಲ ಭಾವನಾತ್ಮಕ, ಕಾಲ್ಪನಿಕ, ವರ್ಣನಾತ್ಮಕ, ಚಿಂತಾಜನಕಾತ್ಮಕ ಶೈಲಿಗಳಿಗೆ ಮಾರು ಹೋಗಿ ತಮ್ಮ ಹೂಡಿಕೆಯ ಹಣವನ್ನುತಳ್ಳುವುದು ಹವ್ಯಾಸ ಮಾಡಿಕೊಂಡಿದ್ದಾರೆ. ಹೂಡಿಕೆಯ ಮೂಲ ಉದ್ದೇಶ ಎಂದರೆ ಹೂಡಿಕೆ ಮಾಡಿದ ಹಣವನ್ನು ಸುರಕ್ಷಿತಗೊಳಿಸಿ ಅದನ್ನು ಬೆಳೆಯುವಂತೆ ಮಾಡುವುದರೊಂದಿಗೆ ಹೆಚ್ಚಿನ ನಿಯತಕಾಲಿಕ ಆದಾಯವನ್ನೂ ಸಹ ಒದಗಿಸುತ್ತದೆಯೇ ಎಂಬುದಾಗಿರಬೇಕು. ಷೇರುಪೇಟೆಯೊಂದೇ ಈ ರೀತಿಯ ಸವಲತ್ತುಗಳನ್ನು ಒದಗಿಸಲು ಸಾಧ್ಯ. ಆದರೆ ನಾವುಗಳು ನಮ್ಮ ತಪ್ಪು ಕಲ್ಪನೆಗಳಿಗೊಳಗಾಗಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳಿಂದ ಹಾನಿಗೊಳಗಾಗುತ್ತೇವೆ. ಕೆಲವೊಮ್ಮೆ ಉತ್ತಮ ಅವಕಾಶ ಕಂಡರೂ ಮತ್ತಷ್ಠು ಹೆಚ್ಚಿನ ಆದಾಯದ ಆಸೆಯಿಂದ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ. ಅದು ಇಂದಿನ ಪೇಟೆಯಲ್ಲಿ ಹೆಚ್ಚಿನ ಸಣ್ಣ ಹೂಡಿಕೆದಾರರ ಸ್ಥಿತಿಗೆ ಹಿಡಿದ ಕನ್ನಡಿಯಾಗಿರುತ್ತದೆ.
ಪರಿಸ್ಥಿತಿ ಪರಿವರ್ತನೆ:
ಹೆಚ್ಚಿನ ಹೊಸ ಹೂಡಿಕೆದಾರರು ಷೇರುಪೇಟೆಯ ಹಿಂದಿನ ವರ್ಷಗಳ ಫಲಾಫಲಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇನ್ಫೋಸಿಸ್ ನ ಐ ಪಿ ಒ ನಲ್ಲಿ ಷೇರು ಅಲಾಟ್ ಆದವರು ಕೋಟಿಗಟ್ಟಲೆ ಹಣ ಮಾಡಿಕೊಂಡಿದ್ದಾರೆ. ಅದೇ ತರಹ ಈಗಲೂ ನಾವು ಹೂಡಿಕೆಯನ್ನು ಐ ಪಿ ಒ ಗಳಲ್ಲಿ ತೊಡಗಿಸಿದಲ್ಲಿ ಹಣ ಗಳಿಸಬಹುದೆಂಬ ಭ್ರಮೆಯಿಂದ ಹೂಡಿಕೆಗೆ ಮುಂದಾಗುತ್ತಾರೆ. ಆದರೆ ಬದಲಾದ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಹಿಂದಿನ ಚಿಂತನೆಗಳನ್ನೇ ಅಳವಡಿಸಿಕೊಂಡಲ್ಲಿ ಬಂಡವಾಳಕ್ಕೆ ಕುತ್ತು ತಂದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಇನ್ಫೋಸಿಸ್ ಐ ಪಿ ಒ ಬಂದ ಸಮಯದಲ್ಲಿ ಆ ಕಂಪನಿಗೆ ತಮ್ಮ ಚಟುವಟಿಕೆಯನ್ನು ಅಭಿವೃದ್ಧಿಪಡಿಸಿ, ವಿಸ್ತರಿಸಿ, ಉದ್ದೇಶ ಸಾಫಲ್ಯತೆಗೆ ಸಂಪನ್ಮೂಲದ ಅವಶ್ಯಕತೆ ಇತ್ತು. ಆ ಕಾರಣದಿಂದಾಗಿ ಐ ಪಿ ಒ ತೇಲಿಬಿಟ್ಟು ಸಂಪನ್ಮೂಲ ಸಂಗ್ರಹಣೆ ಮಾಡಿ ತಮ್ಮೊಂದಿಗೆ ಷೇರುದಾರರನ್ನೂ ಸಹ ಹರ್ಷಿತಗೊಂಡು, ಭಾವನಾತ್ಮಕ ಬಾಂಧವ್ಯಕ್ಕೆ ನಾಂದಿ ಹಾಡಿತು.
ಆದರೆ ಈಗಿನ ಐ ಪಿ ಒ ಗಳ ಉದ್ದೇಶವೇ ಬೇರೆ. ಆ ಕಂಪನಿಗಳು ಸದೃಢವಾಗಿದ್ದು, ಸಂಪನ್ಮೂಲದ ಅಗತ್ಯತೆ ಇರುವುದಿಲ್ಲ, ಆದರೆ ಕಂಪನಿಯ ಪ್ರವರ್ತಕರು, ಖಾಸಗಿ ಹೂಡಿಕೆದಾರರು ಪೇಟೆಯು ಉತ್ತುಂಗದಲ್ಲಿರುವಾಗ, ಸಂದರ್ಭವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಲಾಭ ಪಡೆವ ದೃಷ್ಠಿಯಿಂದ ಐ ಪಿ ಒ ಗಳನ್ನು ತೇಲಿಬಿಡುತ್ತಾರೆ ಇದರೊಂದಿಗೆ ಆಫರ್ ಫಾರ ಸೇಲ್ ನ್ನು ಲಗತ್ತಿಸುತ್ತಾರೆ. ಇವೆರಡಕ್ಕೂ ವಿತರಣೆ ಬೆಲೆ ಒಂದೇ ಇರುತ್ತದೆ. ಇಲ್ಲಿ ನಿಗದಿಪಡಿಸುವ ಪ್ರೀಮಿಯಂ ಇತ್ತೀಚಿನ ದಿನಗಳಲ್ಲಿ ಅತ್ಯಧಿಕಾವಾಗಿರುತ್ತದೆ. ಇನ್ಫೋಸಿಸ್ ಷೇರು ವಿತರಣೆಯಾದ ಮೇಲೆ ಬಂದಂತಹ ಅನೇಕ ಕಂಪನಿಗಳು ಹೇಳ ಹೆಸರಿಲ್ಲದೆ ಹೂಡಿಕೆದಾರರ ಬಂಡವಾಳವನ್ನು ಕರಗಿಸಿ ಮಾಯವಾಗಿರುವ ಅನೇಕ ನಿದರ್ಶಗಳಿವೆ.
ಒಂದು ಸಮಯದಲ್ಲಿ ರೂ.3 ಸಾವಿರದ ಗಡಿ ದಾಟಿದ್ದ ಡಿ ಎಸ್ ಕ್ಯು ಸಾಫ್ಟ್ ವೇರ್, ಒಂದು ಸಾವಿರ ರೂಪಾಯಿಗಳ ದಾಟಿದ್ದ ಸಿಲ್ವರ್ ಲೈನ್, ಸಮೀಪವಿದ್ದ ರೋಲ್ಟಾ ಇಂಡಿಯಾ, ರೂ. 3,000 ಕ್ಕೂ ಹೆಚ್ಚಿನ ಬೆಲೆಯಲ್ಲಿದ್ದ ಹಿಮಾಚಲ್ ಫ್ಯೂಚರಿಸ್ಟಿಕ್ ಈಗ ಎರಡಂಕಿಗಳಲ್ಲಿದೆ, ಪೆಟಾಮೀಡಿಯಾ ಗ್ರಾಫಿಕ್ಸ್ ಏಕ ಅಂಕಿಯಲ್ಲಿದೆ. ಆಲ್ಪ್ಸ್ ಇನ್ಫೋಸಿಸ್, ಕಂಪ್ಯೂಡೈನ್ ವಿನ್ ಫೊಸಿಸ್, ಐ ಸಿ ಇ ಎಸ್ ಸಾಫ್ಟ್ ವೇರ್, ಇನ್ಫರ್ಮೇಷನ್ ಟೆಕ್ನಾಲಜೀಸ್ ಇಂಡಿಯಾ, ನೆಕ್ಸಸ್ ಸಾಫ್ಟ್ವೇರ್, ಪದ್ಮಿನಿ ಟೆಕ್ನಾಲಜೀಸ್, ಶಾಲಿಭದ್ರ ಇನ್ಫೋಸೆಕ್, ಸಾಫ್ಟ್ ಟ್ರಾಕ್ ಟೆಕ್ನಾಲಜೀಸ್ ಗಳಲ್ಲಿ ಹೂಡಿಕೆ ಮಾಡಿದವರು ಶಾಶ್ವತ ಹೂಡಿಕೆದಾರರಾಗಿ ಪರಿವರ್ತಿತಗೊಂಡಿದ್ದಾರೆ. ಕಾರಣ ಈ ಕಂಪನಿಗಳು ವಹಿವಾಟಿನಿಂದ ಡೀಲೀಸ್ಟ್ ಆಗಿವೆ.
ಹೊಸ ಷೇರು ಮತ್ತು ಆಫರ್ ಫಾರ್ ಸೇಲ್:
ಐ ಪಿ ಒ ನಲ್ಲಿ ಹೊಸ ಷೇರುಗಳು ಬಿಡುಗಡೆಯಾದಲ್ಲಿ ಆ ಹಣವು ನೇರವಾಗಿ ಕಂಪನಿಯ ಖಜಾನೆಗೆ ಸೇರಿಕೊಳ್ಳುತ್ತದೆ. ಆದರೆ ಆಫರ್ ಫಾರ್ ಸೇಲ್ ನಲ್ಲಿ ವಿತರಣೆಯಾಗುವ ಷೇರುಗಳ ಮೊತ್ತವು ಮಾರಾಟಮಾಡುತ್ತಿರುವ ಪ್ರವರ್ತಕರು ಮತ್ತು / ಅಥವಾ ಖಾಸಗಿ ವಿತರಕರ ಕಿಸೆ ಸೇರಿ ಕಂಪನಿಗೆ ಯಾವುದೇ ಅನುಕೂಲ ಕಲ್ಪಿಸುವುದಿಲ್ಲ. ಕೆಲವು ಬಾರಿ ವಿತರಣೆಗೊಳ್ಳುತ್ತಿರುವ ಐಪಿಒ ಗಳು ಕೇವಲ ಆಫರ್ ಫಾರ್ ಸೇಲ್ ಮಾತ್ರವಿದ್ದು, ಹೊಸ ಷೇರು ವಿತರಣೆ ಇರುವುದಿಲ್ಲ. ಅಂತಹ ಕಂಪನಿಗಳು ಸಂಗ್ರಹಿಸಿದ ಹಣವು ನೇರವಾಗಿ ಕಂಪನಿಗೆ ಸೇರದೆ ಮಾರಾಟಮಾಡುವವರ ಖಜಾನೆಗೆ ಸೇರುವುದು.
ಹಿಂದೆ ಇನ್ಫೋಸಿಸ್ ನಂತಹ ಕಂಪನಿಗಳು ಷೇರು ವಿತರಣೆಯ ಸಂದರ್ಭದಲ್ಲಿ ಹೂಡಿಕೆದಾರರ ಹಿತದಿಂದ ನಿಗದಿಪಡಿಸುತ್ತಿದ್ದ ಪ್ರೀಮಿಯಂ ಕಡಿಮೆ ಇರುತ್ತಿತ್ತು ಆದರೆ ಈಗ ಹೂಡಿಕೆದಾರರಿಂದ ಸಂಗ್ರಹಿಸಿ ಪ್ರವರ್ತಕರು, ಮತ್ತು ಫಂಡಿಂಗ್ ಮಾಡಿರುವವರ ಹಿತದಿಂದ ಪ್ರೀಮಿಯಂ ನಿಗದಿಪಡಿಸಲಾಗುತ್ತಿದೆ. ಇದು ಸ್ವಹಿತಾಸಕ್ತ ಚಟುವಟಿಕೆಯಂತಾಗಿದೆ. ಅಂದರೆ ಐ ಪಿ ಒ ಗಳು ಪ್ರಾಫಿಟಬಲ್ ಅನ್ನುವುದಕ್ಕಿಂತ ಚಾರಿಟಬಲ್ ರೀತಿಯಾಗುತ್ತಿದೆ. ಐಪಿಒ ಗಳಲ್ಲಿ ಅಲಾಟ್ಮೆಂಟ್ ಆದಲ್ಲಿ ಬರಬಹುದಾದ ಲಾಭದ ಹೆಚ್ಚಿನ ಪ್ರಮಾಣವನ್ನು ವಿತರಕರೇ ಸೆಳೆದುಕೊಳ್ಳುವುದರಿಂದ ಆ ಹೂಡಿಕೆ ಹೇಗೆ ಲಾಭದಾಯಕವಾಗುವುದು?
ಹೂಡಿಕೆ ಹೇಗಿರಬೇಕು?
ಷೇರುಪೇಟೆಯಲ್ಲಿ ನಡೆಸುವ ಚಟುವಟಿಕೆ ಹೂಡಿಕೆಯಾಗಲಿ ಅಥವಾ ವ್ಯವಹಾರಿಕತೆಯಿಂದಾಗಲಿ ಯಶಸ್ಸು ಕಂಡು ಫಲಪ್ರದವಾಗಲು ಅನುಸರಿಸಬೇಕಾದ ರೀತಿ ಹೇಗಿರಬೇಕೆಂದರೆ ಹೂಡಿಕೆ ಮಾಡಿದ ಷೇರಿನ ಬೆಲೆಯಲ್ಲೂ ಏರಿಕೆ ಕಾಣುವುದರೊಂದಿಗೆ ಆಕರ್ಷಕ ಡಿವಿಡೆಂಡ್ ನೀಡುವ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ಕಂಪನಿಯು ತನ್ನ ಫಲಿತಾಂಶ ಪ್ರಕಟಿಸಿದಾಗ, ಕಾರ್ಪೊರೇಟ್ ಫಲಗಳಾದ ಲಾಭಾಂಶ, ಬೋನಸ್ ಗಳನ್ನು ಪ್ರಕಟಿಸಿದಾಗ, ಅಥವಾ ಇತರೆ ಬೆಳವಣಿಗೆಗಳು ಎಂದರೆ, ವಿಲೀನ, ಸಮ್ಮಿಲನ, ಮಿಲನ, ಇತರೆ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದ ಮುಂತಾದವುಗಳನ್ನು ಪ್ರಕಟಿಸಿದಾಕ್ಷಣ ಕಂಡ ಬೆಲೆ ಏರಿಕೆಗೆ ಹೊಸ ಹೂಡಿಕೆಗೆ ಸ್ಪಂದಿಸದೆ, ಸ್ವಲ್ಪ ಸಮಯದ ನಂತರ ಷೇರಿನ ಬೆಲೆ ಕುಸಿತ ಕಂಡಾಗ ಅದನ್ನು ವ್ಯಾಲ್ಯು ಪಿಕ್ ಎಂದು ಹೂಡಿಕೆಗೆ ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಫಲ ಪಡೆಯಲು ಸಾಧ್ಯ.
ಆಯ್ಕೆ ಮಾಡಬೇಕಾಗಿರುವ ಕಂಪನಿ ಉತ್ತಮವಾಗಿದ್ದರೂ ಖರೀದಿಸುವ ಸಮಯದಲ್ಲಿ ಅದು ಇಳಿಕೆಯಲ್ಲಿದ್ದು ಉತ್ತಮ ಮೌಲ್ಯಾದಾರಿತವಾಗಿರಬೇಕು. ಆದರೆ ಷೇರಿನ ಬೆಲೆಯೇ ಗರಿಷ್ಠದಲ್ಲಿದ್ದಾಗ ಖರೀದಿ ಮಾಡಿದಲ್ಲಿ ಆ ಹೂಡಿಕೆಯು ಚಾರಿಟಬಲ್ ಶೈಲಿಯಾಗುತ್ತದೆಯೇ ಹೊರತು, ಲಾಭ ಗಳಿಕೆಯ ದೃಷ್ಠಿಯಿಂದ ಸರಿಯಲ್ಲ. ಷೇರಿನ ಬೆಲೆ ಗರಿಷ್ಠದಲ್ಲಿದ್ದಾಗ ಮಾರಾಟಮಾಡಿ ಹೊರಬಂದು, ಮತ್ತೊಮ್ಮೆ ಕುಸಿದಾಗ ಅದನ್ನೇ ಮರುಖರೀದಿ ಮಾಡಿದಲ್ಲಿ ಹೂಡಿಕೆಯ ಹೊರೆಯನ್ನು ತಗ್ಗಿಸಿಕೊಂಡಂತಾಗಿ ಹೂಡಿಕೆ ಫಲಪ್ರದವಾಗುತ್ತದೆ. ಉತ್ತಮ ಸಾಧನೆಯ ಅಗ್ರಮಾನ್ಯ ಕಂಪನಿಗಳೂ ಇತ್ತೀಚಿನ ದಿನಗಳಲ್ಲಿ ವೈವಿಧ್ಯಮಯ ಕಾರಣಗಳಿಂದ ಭಾರಿ ಏರಿಳಿತ ಪ್ರದರ್ಶಿಸುವ ಕಾರಣ ದೀರ್ಘಕಾಲೀನ ಹೂಡಿಕೆಯ ಚಿಂತನೆಯಿಂದ ಅವಕಾಶ ವಂಚಿತರಾಗುವಂತೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬ್ಯಾಂಕ್ ಗಳ RTGS ಶೈಲಿಯಂತೆ ಷೇರುಪೇಟೆಯ ಚಟುವಟಿಕೆಯಲ್ಲಿ RTMS ( REAL TIME MARKET STRATEGY) ನಿಯಮ ಅಳವಡಿಸಿಕೊಂಡು ಬಂಡವಾಳ ಸುರಕ್ಷತೆಯೊಂದಿಗೆ ಬೆಳೆಸುವ ಪ್ರಯತ್ನವು ಒಳಿತಲ್ಲವೇ?
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.