18.6 C
Karnataka
Friday, November 22, 2024

    ವೈಯಾಲಿಕಾವಲ್ ನ ಚೌಡಯ್ಯ ಸ್ಮಾರಕ ಭವನಕ್ಕೆ ಬರುತಿದೆ ಗಾಂಧಿ ಬಜಾರಿನ ವಿದ್ಯಾರ್ಥಿ ಭವನ

    Must read

    BENGALURU APR 22

    ಬೆಂಗಳೂರು ಗಾಂಧಿಬಜಾರ್ ನ ಜನಪ್ರಿಯ ವಿದ್ಯಾರ್ಥಿ ಭವನ ಮಲ್ಲೇಶ್ವರಕ್ಕೆ ಬರವುದಿಲ್ಲ ಎಂಬುದು ಇದೀಗ ಅಧಿಕೃತವಾಗಿ ಖಚಿತಗೊಂಡಿದೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದ ಪೋಸ್ಟ್ ಒಂದು ಈ ಐಕಾನಿಕ್ ದೋಸೆ ಹೋಟೆಲ್ ಮಲ್ಲೇಶ್ವರದಲ್ಲಿ ಶಾಖೆ ತೆರೆಯುವ ಊಹಾಪೋಹಗಳನ್ನು ಹುಟ್ಟು ಹಾಕಿತ್ತು. ಮಲ್ಲೇಶ್ವರದ ಪ್ರಖ್ಯಾತ ದೋಸೆ ಪಾಯಿಂಟ್ ಸಿಟಿಆರ್ ಗೆ ಪ್ರತಿಸ್ಪರ್ಧಿಯೊಂದು ಬರುತ್ತದೆ ಎಂದು ಈ ಭಾಗದ ದೋಸೆ ಪ್ರಿಯರು ನಿರೀಕ್ಷಿಸಿದ್ದರು. ಆದರೆ ಅದು ಸಧ್ಯಕ್ಕೆ ಸಾಕಾರವಾಗುತ್ತಿಲ್ಲ. ಅದರ ಬದಲು ವಿದ್ಯಾರ್ಥಿ ಭವನ ತನ್ನೊಂದಿಗೆ ಬೆರೆತಿರುವ ಜನರ ಭಾವನೆಗಳನ್ನು ನಾಟಕ ರೂಪದಲ್ಲಿ ಅಭಿವ್ಯಕ್ತಿಸುವ ಮೂಲಕ ಮಲ್ಲೇಶ್ವರಕ್ಕೆ ಪ್ರವೇಶ ನೀಡುತ್ತಿದೆ.

    ಬೆಂಗಳೂರು ಥಿಯೇಟರ್ ಫೌಂಡೇಶನ್ ಸಹಯೋಗದಲ್ಲಿ ತಮ್ಮ ಸಂಸ್ಥೆ ವಿದ್ಯಾರ್ಥಿ ಭವನದಲ್ಲಿ ಘಟಿಸಿದ ಬಸವನಗುಡಿಯ ಕಥೆಗಳನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸುತ್ತಿದೆ ಎಂದು ವಿದ್ಯಾರ್ಥಿಭವನದ ಪಾಲುದಾರ ಅರುಣ್ ಅಡಿಗ ಶುಕ್ರವಾರ ವರದಿಗಾರರಿಗೆ ತಿಳಿಸಿದರು.

    ಅರುಣ್ ಅಡಿಗ

    90 ನಿಮಿಷಗಳ ಈ ನಾಟಕವನ್ನು ಅರ್ಜುನ ಕಬ್ಬಿನ ನಿರ್ದೇಶಿಸುತ್ತಿದ್ದಾರೆ. ರಾಜೇಂದ್ರ ಕಾರಂತ್ ರಚಿಸಿದ್ದಾರೆ. ಬಸವನಗುಡಿಯ ಸಾಂಸ್ಕೃತಿಕ ಜಗತ್ತನ್ನು ವಿದ್ಯಾರ್ಥಿಭವನದ ದೃಷ್ಟಿಕೋನದಲ್ಲಿ ಈ ನಾಟಕ ಅನಾವರಣ ಮಾಡುತ್ತದೆ.

    ಈ ತಲೆಮಾರಿನ ತರುಣರಿಗೆ ಬಸವನಗುಡಿಯ ಭವ್ಯ ಇತಿಹಾಸವನ್ನು ಹೇಳುವುದಲ್ಲದೆ ಆ ಮೂಲಕ ಈಗಿನ ಹುಡುಗ ಹುಡುಗಿಯರಲ್ಲಿ ರಂಗಪ್ರೀತಿಯನ್ನು ಹೆಚ್ಚಿಸುವ ಕೆಲಸವನ್ನು ಈ ನಾಟಕ ಮಾಡಲಿದೆ ಎಂದು ಅರುಣ್ ಅಡಿಗ ಹೇಳಿದರು.

    ವಿದ್ಯಾರ್ಥಿಭವನವೆಂದರ ಕೇವಲ ಅದೊಂದು ಉಪಹಾರ ಕೇಂದ್ರವಲ್ಲ. ಅದು ಅದನ್ನೂ ಮೀರಿದ ಭಾವನಾತ್ಮಕ ನಂಟಿನ ಕೇಂದ್ರ. ಈ ಏಳು ದಶಕಗಳಕಾಲ ನಾವು ದೋಸೆಯನ್ನು ಜನರಿಗೆ ಉಣಬಡಿಸಿದ್ದೇವೆ. ಈಗ ದೋಸೆ ಏಳು ದಶಕಗಳ ಭಾವನಾತ್ಮಕ ನಂಟನ್ನು ತೆರೆದಿಡಲಿದೆ ಎಂದು ಅಡಿಗ ವಿವರಿಸಿದರು. ಗಮ ಗಮ ಭವನದ ನಂತರ ಇದು ಎಂದು ನಮ್ಮ ಎರಡನೇ ರಂಗ ಪ್ರಯತ್ನ ಎಂದೂ ಅವರು ಹೇಳಿದರು.

    ಸದ್ಯದ ಮಟ್ಟಿಗೆ ಬೆಂಗಳೂರಿನಲ್ಲಿ ಮತ್ತೊಂದು ಶಾಖೆ ತೆರೆಯುವ ಉದ್ದೇಶ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು.

    ಅರ್ಜುನ ಕಬ್ಬಿನ

    ಗಾಂಧೀಬಜಾರಿನಲ್ಲೇ ಹುಟ್ಟಿ ಬೆಳೆದಿರುವ ನಿರ್ದೇಶಕ ಕಬ್ಬಿನ ಅವರು ಕೋರೋನಾ ಸಾಂಕ್ರಾಮಿಕ ಹರಡುವ ಮುನ್ನ ತಮ್ಮ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಪೂರ್ಣಪ್ರಮಾಣದ ರಂಗಕರ್ಮಿಯಾದರು. ಸಾಂಕ್ರಾಮಿಕ ಕಾಲದಲ್ಲಿ ರಂಗಚಟುವಟಿಗಳು ಸ್ಥಗಿತಗೊಂಡು ಅನೇಕ ಕಲಾವಿದರಿಗೆ ಕೆಲಸವಿಲ್ಲದೆ ಹೋಗಿದ್ದು ಕಬ್ಬಿನ ಅವರು ರಂಗಭೂಮಿಯಲ್ಲೇ ಮುಂದುವರಿಯಲು ಪ್ರೇರೇಪಣೆಯಾಯಿತು. ಗಾಂಧೀಬಜಾರು ನನಗೆ ತಾಯಿಯಾದರೆ ವಿದ್ಯಾರ್ಥಿಭವನ ನನಗೆ ದೇವಸ್ಥಾನ ಎನ್ನುವ ಕಬ್ಬಿನ ಬಸವನಗುಡಿಯ ಕಥೆಯನ್ನು ನಾಟಕದ ಮೂಲಕ ಹೇಳಲು ಮುಂದಾಗಿದ್ದಾರೆ.

    ಕೆ ಎಸ್ ನಿಸ್ಸಾರ್ ಅಹಮದ್, ಸಿ ಅಶ್ವತ್ಧ ಹೀಗೆ ನೂರಾರು ಮಹನೀಯರ ನೆನಪುಗಳು ಈ ನಾಟಕದಲ್ಲಿ ಕಾಣಸಿಗಲಿದೆ. ಆರು ತಿಂಗಳ ಶ್ರಮ ಈ ನಾಟಕ ರಚನೆಯಲ್ಲಿದೆ. ಈ ನಾಟಕದ ಕಲಾವಿದರು ಬಸವನಗುಡಿಯ ಎಲ್ಲಾ ಸಾಂಸ್ಕೃತಿಕ ಕೇಂದ್ರಗಳಿಗೂ ಹೋಗಿ ಅಲ್ಲಿನ ಸಾಮಾಜಿಕ ಪ್ರಾಮುಖ್ಯವನ್ನು ಅರಿತು ಬಂದಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ವಿದ್ಯಾರ್ಥಿ ಭವನಕ್ಕೆ ಬಂದಾಗ ಇಂಥ ಸಾಂಸ್ಕೃತಿಕ ಸ್ಥಳಗಳನ್ನು ಜತನ ಮಾಡಬೇಕಾದ ಅಗತ್ಯವನ್ನು ಹೇಳಿದ್ದು, ಗೋಪಾಲಕೃಷ್ಣ ಅಡಿಗರ ವಿದ್ಯಾರ್ಥಿ ಭವನದ ಭೇಟಿ ಎಲ್ಲವೂ ಇಲ್ಲಿ ಕಾಣಸಿಗಲಿದೆ.

    ಸಿಹಿಕಹಿ ಚಂದ್ರು, ಸುಂದರ್ , ವೀಣಾ ಸುಂದರ್, ಪವನ್ ಕುಲಕರ್ಣಿ ಅಂಥ ಕಲಾವಿದರ ದಂಡೇ ಈ ನಾಟಕದಲ್ಲಿ ಕಾಣಿಸಿಕೊಳ್ಳಲಿದೆ. ಮೇ 6,7 ಮತ್ತು 8 ರಂದು ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ನಾಟಕ ಪ್ರದರ್ಶನವಾಗಲಿದೆ. bookmyshow ದಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.

    spot_img

    More articles

    2 COMMENTS

    1. ಸದ್ಯಕಲ್ಲದಿದ್ದರು ಮುಂದಾದರು ಮಲ್ಲೇಶ್ವರಕ್ಕೆ ಬನ್ನಿ.

    2. ನಮಗೆ ನಿರಾಸೆ ಮಾಡಿದಿರಿ….ಮಲ್ಲೇಶ್ವರದಲ್ಲಿ ವಿದ್ಯಾರ್ಥಿ ಭವನದ ದೋಸೆ ಸವಿಯಲು ನಾವು ಕಾಯುತ್ತಿದ್ದೆವು.

    LEAVE A REPLY

    Please enter your comment!
    Please enter your name here

    Latest article

    error: Content is protected !!