HUBBALLI APR 28
ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಬಂದಿಲ್ಲ. ಏಪ್ರಿಲ್ 9 ರ ನಂತರ ಸ್ವಲ್ಪ ಪ್ರಮಾಣದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವದುದನ್ನು ಗಮನಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಯೂರೋಪ್ ಮತ್ತು ಇತರೆ ರಾಷ್ಟ್ರಗಳಲ್ಲಿ ಲಸಿಕೆ ಪಡೆಯದವರಿಂದ ಪುನಃ ಪ್ರಕರಣಗಳು ಉಲ್ಬಣವಾಗಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಎರಡೂ ಡೋಸ್ ಗಳನ್ನು 98% ರಷ್ಟು ಜನ ಲಸಿಕೆ ಪಡೆದಿದ್ದಾರೆ. ಮುನ್ನೆಚ್ಚರಿಕಾ ಡೋಸ್ ಗಳನ್ನು ಇನ್ನಷ್ಟು ಜನಕ್ಕೆ ನೀಡುವ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಲಸಿಕೆಗೆ ಮಹತ್ವ
ಮೊನ್ನೆ ಕೇಂದ್ರ ಸರ್ಕಾರ 6ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ಹಾಕಲು ಅನುಮೋದನೆ ನೀಡಿದೆ. ಅದನ್ನು ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭಿಸುವ ತೀರ್ಮಾನ ಮಾಡಲಾಗಿದೆ. ಲಸಿಕೆ ಹಾಕಲು ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಕೋವಿಡ್ ಸೂಕ್ತ ನಡವಳಿಕೆ ಪಾಲಿಸಲು ಸೂಚನೆ ನೀಡಲಾಗಿದೆ. ಪರೀಕ್ಷೆ ಗಳನ್ನು ಹೆಚ್ಚಿಸಲಾಗುತ್ತಿದೆ.
ವಿಶೇಷವಾಗಿ ಐ.ಎಲ್.ಐ ಮತ್ತು SARI ಪ್ರಕರಣಗಳು ಆಸ್ಪತ್ರೆಗಳಿಗೆ ದಾಖಲಾಗಿರುವವರ ಪರೀಕ್ಷೆ ಮಾಡಿ , ಅವರಲ್ಲಿ ಪಾಸಿಟಿವ್ ಬಂದರೆ, ಅದನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗುವುದು. ಇದನ್ನು ಮಾಡಿದರೆ ಬೇರೆ ಬೇರೆ ರೂಪಾಂತರ ತಳಿಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈಗಾಗಲೇ 8500 ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಗಳನ್ನು ರಾಜ್ಯದಲ್ಲಿ ಮಾಡಲಾಗಿದೆ. 4 ಸಾವಿರ ಬೆಂಗಳೂರಿನಲ್ಲಿ ಹಾಗೂ ಇನ್ನಿತರೆ ಕಡೆಗಳಲ್ಲಿ 4 ಸಾವಿರ ಪರೀಕ್ಷೆಗಳನ್ನು ಮಾಡಲಾಗಿದೆ ಎಂದರು.