26.2 C
Karnataka
Thursday, November 21, 2024

    LIC IPO : ಹೂಡುವ ಮುನ್ನ ತಿಳಿದಿರಬೇಕಾದ ಅಂಶಗಳು

    Must read

    ಲೈಫ್‌ ಇನ್ಷೂರನ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ ಲಿಮಿಟೆಡ್‌, ಸಂಸ್ಥೆಯು 1956 ರಿಂದಲೂ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ವಿಮಾ ಸಂಸ್ಥೆಯಾಗಿದೆ. ಜಾಗತೀಕರಣಕ್ಕೂ ಮುನ್ನಾ ದಿನಗಳಲ್ಲಿ ಎಲ್‌ ಐ ಸಿ ಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅದರ ಏಜೆಂಟರ ಪಾತ್ರ ಗಣನೀಯ ಮಟ್ಟದಲ್ಲಿತ್ತು. 1956 ರಲ್ಲಿ ಸುಮಾರು 245 ದೇಶೀಯ ಮತ್ತು ವಿದೇಶೀಯ ವಿತ್ತೀಯ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣದ ಮೂಲಕ ಸ್ವಾದೀನಪಡಿಸಿಕೊಂಡು ಎಲ್‌ ಐ ಸಿ ಆಕ್ಟ್‌ 1956 ಮೂಲಕ ಎಲ್‌ ಐ ಸಿ ಯನ್ನು ಸ್ಥಾಪಿಸಿತು. ಇದಕ್ಕೆ ರೂ.5 ಕೋಟಿ ರೂಪಾಯಿಗಳ ಬಂಡವಾಳವನ್ನೂ ಸಹ ಒದಗಿಸಿತು. ಸಧ್ಯ ಈ ಸಂಸ್ಥೆಯು ಐ ಡಿ ಬಿ ಐ ಬ್ಯಾಂಕ್‌, ಎಲ್‌ ಐ ಸಿ ಹೌಸಿಂಗ್‌ ಫೈನಾನ್ಸ್‌, ಎಲ್‌ ಐ ಸಿ ಮ್ಯುಚುಯಲ್ ಫಂಡ್‌, ಎಲ್‌ ಐ ಸಿ ಕಾರ್ಡ್‌ ಸರ್ವಿಸಸ್‌ ಮುಂತಾದವುಗಳು ಎಲ್‌ ಐ ಸಿ ಯ ಅಂಗ ಸಂಸ್ಥೆಗಳಾಗಿವೆ.

    ದೇಶದ ಶೇ.61 ಕ್ಕೂ ಹೆಚ್ಚಿನ ವಿಮಾ ಸೇವೆಯು ಈ ಸಂಸ್ಥೆಯ ಕೊಡುಗೆಯಾಗಿದೆ. ಸುಮಾರು 39ಲಕ್ಷ ಕೋಟಿ ರೂಪಾಯಿಗಳ ಸ್ವತ್ತನ್ನು ನಿರ್ವಹಿಸುತ್ತಿರುವ, ಎರಡು ಸಾವಿರಕ್ಕೂ ಹೆಚ್ಚಿನ ಶಾಖೆಗಳನ್ನು ಹೊಂದಿರುವ, ವಿವಧ ವಿದೇಶಗಳಲ್ಲಿಯೂ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಹೆಮ್ಮೆಯ ಭಾರತೀಯ ಕಂಪನಿಯಾಗಿದೆ.
    ಹೊಸ ವಿಮಾ ಪಾಲಿಸಿ ವಿತರಣೆಯಲ್ಲಿ ಶೇ.61 % ರಷ್ಟರ ಪಾಲು ಎಲ್‌ ಐ ಸಿ ಹೊಂದಿದೆ. ದೇಶದ ವೈಯಕ್ತಿಕ ವಿಮಾ ಪಾಲಿಸಿಯಲ್ಲಿ ಶೇ.71 ರಷ್ಟರ ಪಾಲು ಎಲ್‌ ಐ ಸಿಯದಾಗಿದೆ. ಸಮೂಹ ವಿಮಾ ಪಾಲಿಸಿಗಳಲ್ಲಿ ಶೇ. 88 ಕ್ಕೂ ಹೆಚ್ಚಿನ ಪಾಲು ಎಲ್‌ ಐ ಸಿಯ ಕೊಡುಗೆಯಾಗಿದೆ. ಭಾರತದ ಶೇ.55 ರಷ್ಟು ವಿಮಾ ಏಜೆಂಟರು ಎಲ್‌ ಐ ಸಿಯ ಭಾಗವಾಗಿದ್ದಾರೆ, ಅಂದರೆ ಸುಮಾರು 13.50 ಲಕ್ಷ ಏಜೆಂಟರಿದ್ದಾರೆ. 2021 ರಲ್ಲಿ ಹೊಸ ಪಾಲಿಸಿಗಳನ್ನು ವಿತರಿಸಿದ ಭಾಗದಲ್ಲಿ ಶೇ.96.42 ರ ಪಾಲು ಏಜೆಂಟರ್‌ ಗಳದಾಗಿದೆ. 2021 ರಲ್ಲಿ ರೂ.22,358 ಕೋಟಿ ಹಣವನ್ನು ಏಜೆಂಟರ ಕಮೀಷನ್‌ ರೂಪದಲ್ಲಿ ವಿತರಿಸಿದೆ. ಸೆಪ್ಟೆಂಬರ್‌ 2021 ರ ಅಂತ್ಯದಲ್ಲಿ ರೂ.9,815 ಕೋಟಿಯನ್ನು ಏಜೆಂಟರ ಕಮೀಷನ್‌ ಆಗಿ ವಿತರಿಸಿದೆ.

    ಇಂತಹ ಬೃಹತ್‌ ಸಂಸ್ಥೆಯು ಸಂಗ್ರಹಿಸಿದ ಪ್ರೀಮಿಯಂ ಹಣವನ್ನು ಹೇಗೆ ವಿನಿಯೋಗಿಸುತ್ತದೆ ಎಂಬುದು ಗಮನಿಸಲೇಬೇಕಾದ ಅಂಶ. ಕಾರಣ ಎಲ್‌ ಐ ಸಿ ಆಫ್‌ ಇಂಡಿಯಾವು ತನ್ನ ವೈವಿಧ್ಯಮಯ ಯೋಜೆನಗಳ ಮೂಲಕ ಸಂಗ್ರಹಿಸಿದ ಪ್ರೀಮಿಯಂ ಹಣವನ್ನು ಬಳಸಿಕೊಂಡು ಅದರಿಂದ ಬಂದ ಇಳುವರಿಯನ್ನು ತನ್ನ ಪಾಲಿಸಿದಾರರಿಗೆ ಬೋನಸ್‌ ಮೂಲಕ ವಿತರಿಸುವುದಲ್ಲದೆ, ಪಾಲಿಸಿದಾರರಿಗೆ ಜೀವವಿಮೆಯನ್ನು ಒದಗಿಸಿ, ಕ್ಲೇಮ್‌ ಹಣವನ್ನು ವಾರಸುದಾರರಿಗೆ ತಲುಪಿಸುವ ಸಾಮಾಜಿಕ ಚಟುವಟಿಕೆಯನ್ನು ನಿರ್ವಹಿಸುತ್ತಿದೆ. ಜಾಗತೀಕರಣಕ್ಕೂ ಮುಂಚಿನದಿನಗಳಲ್ಲಿ, ಉದ್ಯಮಿಗಳಿಗೆ, ಉದ್ಯಮಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎತ್ತಿಕೊಳ್ಳುವ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ಎಲ್‌ ಐ ಸಿ ಆಫ್‌ ಇಂಡಿಯಾ ಒದಗಿಸುತ್ತಿದೆ.

    ಎಲ್‌ ಐ ಸಿಯ ಹೂಡಿಕೆಯು ಯಾವ ರೀತಿ ಹಂಚಲ್ಪಟ್ಟಿದೆ ಎಂಬುದನ್ನು ತಿಳಿಯೋಣ.

    ಶೇ.37.45% ರಷ್ಟು ಹೂಡಿಕೆಯು ಕೇಂದ್ರ ಸರ್ಕಾರದ ಸೆಕ್ಯುರಿಟೀಸ್‌ ಗಳಲ್ಲಿ ವಿನಿಯೋಗಿಸಲ್ಪಟ್ಟರೆ,

    ಶೇ.24.62% ರಷ್ಟು ರಾಜ್ಯ ಸರ್ಕಾರಗಳ ಸೆಕ್ಯುರಿಟೀಸ್‌ ಗಳಲ್ಲಿ ಹೂಡಿಕೆ ಮಾಡಲಾಗಿದೆ.

    ಶೇ.24.78% ರಷ್ಟು ಈಕ್ವಿಟಿ ಷೇರುಗಳಲ್ಲಿ

    ಶೇ.8.06% ರಷ್ಟು ಡಿಬೆಂಚರ್‌ ಗಳು, ಬಾಂಡ್‌ ಗಳು,

    ಶೇ.0.78 ರಷ್ಟು ಮ್ಯುಚುಯಲ್‌ ಫಂಡ್‌, ಇ ಟಿ ಎಫ್‌ ಗಳಲ್ಲಿದೆ.

    ಹಣಕಾಸಿನ ಲೆಕ್ಕಾಚಾರ:

    ಎಲ್‌ ಐ ಸಿಯು ಹಿಂದಿನ ಮೂರು ವರ್ಷಗಳಲ್ಲಿ ಉತ್ತಮವಾದ ಹಣಕಾಸಿನ ಹರಿವನ್ನು ಹೊಂದಿದ್ದು, ಪ್ರೀಮಿಯಂ ಸಂಗ್ರಹಣೆ ಉತ್ತಮವಾಗಿತ್ತು. 2021.22 ವರ್ಷದ ಮೊದಲ ಆರು ತಿಂಗಳಲ್ಲಿ ಕಂಪನಿಯ ನಿರ್ವಹಣಾ ವೆಚ್ಚ, ಏಜೆಂಟರ ಕಮೀಷನ್‌ ಸೇರಿ ರೂ.18,906 ಕೋಟಿಯಾಗಿದೆ. ಆದರೆ ಅದರ ನಿರ್ವಹಣಾ ಸಂಗ್ರಹಣೆ ಮಾತ್ರ ರೂ.11,114.3 ಕೋಟಿ ಮಾತ್ರವಾಗಿದೆ. ಈ ಅಂಶವು ಸ್ವಲ್ಪಮಟ್ಟಿನ ನಕಾರಾತ್ಮಕತೆಯಿಂದ ಕೂಡಿದೆ. ವಿಮಾ ಕ್ಷೇತ್ರದ ಚಟುವಟಿಕೆಯಲ್ಲಿ ಇತರೆ ಕಂಪನಿಗಳಂತೆ ಮುಂಚಿತವಾಗಿ ಗಳಿಸಬಹುದಾದ ಲಾಭದ ಅವಕಾಶಗಳನ್ನು ಅಂದಾಜಿಸಲು ಸಾಧ್ಯವಿಲ್ಲ. ಮತ್ತು ಗೈಡನ್ಸ್‌ ನೀಡುವ ರೀತಿ ಇರುವುದಿಲ್ಲ.

    ವಲಯದ ಇತರೆ ಕಂಪನಿಗಳ ವಿವರ ಹೀಗಿದೆ:

    Name of CompanyFace ValueMarket rateAssets as on30/09/2021
    HDFC Life Insurance LtdyRs.10 FVRs.5821.80 lac crores
    ICICI Prudential Life InsuranceRs.10 FVRs.526Rs.2.36 lac crores
    SBI Life Insurance Company Rs.10 FVRs.1,107Rs.2.45 lac crores
    LIC of IndiaRs.10 FVRs.39.5 lac croes

    ಆರಂಭದ ದಿನ ; 4ನೇ ಮೇ 2022
    ಅಂತಿಮ ದಿನ : 9ನೇ ಮೇ 2022
    ಷೇರಿನ ಮುಖಬೆಲೆ ರೂ.10
    ವಿತರಣಾ ಬೆಲೆಯ ಅಂತರ: ರೂ.902 ರಿಂದ ರೂ.949
    ಕನಿಷ್ಠ ಷೇರುಗಳು : 15
    ವಿತರಣಾ ಷೇರುಗಳ ಸಂಖ್ಯೆ :22,13,74,920
    ರೀಟೇಲ್‌ ರಿಯಾಯಿತಿ : ರೂ.45
    ಪಾಲಿಸಿದಾರರಿಗೆ ರಿಯಾಯಿತಿ : ರೂ.60
    ರೀಟೇಲ್‌ ಸಮೂಹಕ್ಕೆ ಮೀಸಲು : ಶೇ.35
    ಪಾಲಿಸಿದಾರರಿಗೆ ಮೀಸಲು : ಶೇ.10
    ಲೀಸ್ಟಿಂಗ್:‌ ಬಿ ಎಸ್‌ ಇ ಮತ್ತು ಎನ್‌ ಎಸ್‌ ಇ
    ಅಲಾಟ್‌ ಮೆಂಟ್‌ ದಿನ : 12 ನೇ ಮೇ 2022
    ರೀಫಂಡ್‌ ಮಾಹಿತಿ ದಿನ ; 13 ನೇ ಮೇ 2022
    ಷೇರುಗಳನ್ನು ಡಿಮ್ಯಾಟ್‌ ಖಾತೆಗೆ ಜಮೆ ದಿನ : 16 ನೇ ಮೇ 2022
    ಷೇರುಗಳ ಲೀಸ್ಟಿಂಗ್‌, ವಹಿವಾಟಿಗೆ : 17ನೇ ಮೇ 2022

    ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಎಲ್‌ ಐ ಸಿ ಆಫ್‌ ಇಂಡಿಯಾದ ರೂ.10 ರ ಮುಖಬೆಲೆಯ ಷೇರನ್ನು ರೂ.904 ರಂತೆ( ರೀಟೇಲ್ ರಿಯಾಯಿತಿಯ ನಂತರ‌ ) ವಿತರಿಸಲಾಗುತ್ತಿದ್ದು, ಕಂಪನಿಯು ಉತ್ತಮ ಸಾಧನೆಯೊಂದಿಗೆ, ಜನಾನುರಾಗಿಯಾಗಿ, ನಿರಂತರವಾದ ಲಾಭ ಗಳಿಸುತ್ತಿರುವ, ನಂಬಿಕೆ ಗಳಿಸಿರುವ ಮತ್ತು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಸ್ಥೆಯಾಗಿದೆ. ಅಲ್ಲದೆ ಹೆಚ್ಚಿನ ಕಾರ್ಪೊರೇಟ್‌ ವಲಯಕ್ಕೆ ಅವಶ್ಯವಿರುವ ಸಂಪನ್ಮೂಲ ಒದಗಿಸಿದ್ದಲ್ಲದೆ, ದೇಶದ ಮೂಲ ಸೌಕರ್ಯವಲಯಕ್ಕೆ ಮಹತ್ತರ ಕೊಡುಗೆ ನೀಡಿದೆ. ಆದರೆ ಈಚಿನ ವರ್ಷಗಳಲ್ಲಿ ಉಂಟಾಗಿರುವ ಕಠಿಣ ಸ್ಪರ್ಧೆಯು ಯಾವ ರೀತಿಯ ತಿರುವುಗಳನ್ನು ಪಡೆದುಕೊಳ್ಳುವುದೆಂಬುದು ಭವಿಷ್ಯವೇ ನಿರ್ಧರಿಸುತ್ತದೆ.

    ಆದರೆ ಇತ್ತೀಚೆಗೆ ಐ ಪಿ ಒ ಮೂಲಕ ಪೇಟೆ ಪ್ರವೇಶೀಸಿದ ರೂ.1 ರ ಮುಖಬೆಲೆಯ ಪೇಟಿಎಂ, ಝಮೆಟೋ, ನೈಕಾ ಗಳಿಗಿಂತ ಉತ್ತಮವಾದ ಆಕರ್ಷಣೀಯ ಬೆಲೆಯಲ್ಲಿ ವಿತರಿಸಲಾಗುತ್ತಿದೆ ಎನ್ನಬಹುದು. ಷೇರುಪೇಟೆಯ ಹೂಡಿಕೆಯಲ್ಲಿ ಅಪಾಯದ ಅಂಶವಿದ್ದೇ ಇರುತ್ತದೆ. ಆದರೆ ಆ ಮಟ್ಟದ ಪ್ರಮಾಣವನ್ನು ಅಂದಾಜು ಮಾಪನ ಮಾಡಿ ನಿರ್ಧರಿಸಿದಲ್ಲಿ ಉತ್ತಮ ಪ್ರತಿಫಲ ಪಡೆಯಲು ಸಾಧ್ಯ.

    ಈ ವಿತರಣೆಯು ಗರಿಷ್ಠ ಗಾತ್ರದ ವಿತರಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಗರಿಷ್ಠ ಗಾತ್ರದ ವಿತರಣೆ ಮಾಡಿದ ಕಂಪನಿಗಳ ವಿವರ ಇಂತಿದೆ.

    ವಿತರಕ ಕಂಪನಿ ಹೆಸರುಮುಖಬೆಲೆವಿತರಣೆ ಗಾತ್ರ ವಿತರಣೆ ಬೆಲೆವಿತರಣಾ ಆರಂಭದ ದಿನ
    ಎಲ್‌ ಐ ಸಿ ಆಫ್‌ ಇಂಡಿಯಾರೂ.10-20557,23 ಕೋಟಿ ರೂ.949.00 04/05/2022
    ಒನ್‌ 9 ಕಮ್ಯುನಿಕೇಷನ್‌ ( ಪೇಟಿಎಂ)ರೂ 1ರೂ.18,300 ಕೋಟಿ ರೂ.2,150.0008/11/2021
    ಕೋಲ್‌ ಇಂಡಿಯಾರೂ 10ರೂ.15,475 ಕೋಟಿರೂ.245.0018/10/2010
    ರಿಲಯನ್ಸ್‌ ಪವರ್‌ರೂ.10ರೂ.11,563 ಕೋಟಿರೂ.912.0011/10/2017
    ಎಸ್‌ ಬಿ ಐ ಕಾರ್ಡ್ಸ್ ಅಂಡ್‌ ಪೇಮೆಂಟ್ಸ್‌ರೂ.10ರೂ.10,354 ಕೋಟಿರೂ. 75502/03/2020
    ಜಿ ಐ ಸಿ ಆಫ್‌ ಇಂಡಿಯಾ ರೂ.5 ರೂ.11,372 ಕೋಟಿ ರೂ.912.0002/03/2020

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    1 COMMENT

    1. ವಿವರಣೆ ಬಹಳ ಸ್ಪಷ್ಟವಾಗಿದ್ದು , lIC IPO ಬಗ್ಗೆ ವಿವರಿಸಿದ ತಮಗೆ ಧನ್ಯವಾದಗಳು

    LEAVE A REPLY

    Please enter your comment!
    Please enter your name here

    Latest article

    error: Content is protected !!