ರತ್ನಾ ಶ್ರೀನಿವಾಸ್
ಅಕ್ಷಯ ಎಂದರೆ ನಾಶವಾಗದ, ಮುಗಿಯದ, ಪುನರುತ್ಪತ್ತಿ ಆಗುವಂತಹುದು. ವೈಶಾಖ ಮಾಸದ ಶುಕ್ಲಪಕ್ಷದ ಮೂರನೆ ದಿನವಾದ ತದಿಗೆಯನ್ನು ” ಅಕ್ಷಯ ತೃತೀಯ ” ಎಂದು ಕರೆಯುವರು.
ವೈಶಾಖ ಎಂದರೆ ಸಂಸ್ಕೃತ ದಲ್ಲಿ ‘ಮಂಥನದ ಕೋಲು’ ಎಂದರ್ಥ. ಇದು ಎಲ್ಲಾ ಕೆಡುಕನ್ನು ಮಥಿಸಿ ಶುದ್ಧಿದಾಯಕ ವಿಚಾರಗಳನ್ನು ಕೊಡುವ ತಿಂಗಳು. ಅಕ್ಷಯ ತೃತೀಯದ ದಿನ ಕೈ ಗೊಂಡ ಯಾವುದೇ ಕಾರ್ಯ ಸಿದ್ಧಿಸುತ್ತದೆ ಎಂಬ ದೃಢ ನಂಬಿಕೆ ಇದೆ. ಹಿಂದೂಗಳಿಗೆ ಪವಿತ್ರ ಶುಭದಾಯಕ ದಿನವಿದು.
ಅಕ್ಷಯ ತೃತೀಯದ ವಿಶೇಷತೆಗಳು:
ಭಗೀರಥನ ಪ್ರಯತ್ನದಿಂದಾಗಿ ಗಂಗಾವತರಣ ಆಗಿದ್ದು ಇಂದೇ.
ಅಕ್ಷಯ ತೃತೀಯದಂದೇ ವ್ಯಾಸರು ಭಾಗವತ ರಚಿಸಿದ್ದು.
ಸೂರ್ಯ ದೇವನು ಯುಧಿಷ್ಟಿರನಿಗೆ ಅಕ್ಷಯ ಪಾತ್ರೆಯನ್ನು ಕೊಟ್ಟಿದ್ದು
ಅನ್ನಪೂರ್ಣೇಶ್ವರಿ ಜನಿಸಿದ್ದು ಅಕ್ಷಯ ತೃತೀಯದಂದೆ.
ವಿಷ್ಣು ಪರುಶುರಾಮನಾಗಿ ಜನಿಸಿದ್ದು ಅಕ್ಷಯ ತದಿಗೆ.
ಧನಾಭಿವೃದ್ದಿಗಾಗಿ ಜನರು ಇಂದು ಬಂಗಾರವನ್ನು ಕೊಂಡುಕೊಳ್ಳುವರು. ಇದನ್ನು ಚಿನ್ನದ ಹಬ್ಬ ಎಂದು ಕರೆಯುವರು.
ಕೃಷ್ಣ ಸುಧಾಮನಿಂದ ಅವಲಕ್ಕಿ ಸ್ವೀಕರಿಸಿ ಅವನಿಗೆ ಅಷ್ಟೈಶ್ವರ್ಯ ಕರುಣಿಸಿದ್ದು ಅಕ್ಷಯ ತದಿಗೆಯಂದು.
ಭಕ್ತಿ ಭಂಡಾರಿ, ಸಮಾಜಸುಧಾರಕ ಬಸವಣ್ಣನವರು ಜನಿಸಿದ್ದು ಅಕ್ಷಯ ತೃತೀಯದಂದೆ.
ವೇದ ಶಾಸ್ತ್ರಗಳ ಪ್ರಕಾರ ನಾವು ನಮ್ಮ ಆಧ್ಯಾತ್ಮಿಕ ಶಕ್ತಿ ಯನ್ನು ವೃದ್ದಿಸಲು ಒಂದು ಶುಭ ದಿನವನ್ನು ನಿರ್ಧರಿಸುವೆವು. ಹವನ ಹೋಮ ಗಳನ್ನು ಮಾಡುವುದು, ಗ್ರಂಥ ಪಾರಾಯಣ ಮಾಡುವುದು. ವಿಶೇಷವಾದ ಪೂಜೆ ಮಾಡುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಅಕ್ಷಯ ತದಿಗೆಯಂದು ಕೈಗೊಂಡ ಯಾವುದೇ ಕಾರ್ಯ ಸಿದ್ದಿಸುತ್ತದೆ. ಅಭಿವೃದ್ಧಿ ಆಗುತ್ತದೆ ಎಂಬ ದೃಢ ನಂಬಿಕೆ ಜನರಲ್ಲಿದೆ. ದಾನ ಧರ್ಮ ಮಾಡಿದರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ.ಈ ಶುಭ ದಿನದಂದು ವಿಷ್ಣು, ಲಕ್ಷ್ಮಿ, ಕುಬೇರರ ಪೂಜೆಯನ್ನು ಶ್ರದ್ದೆ ಯಿಂದ ಆಚರಿಸುವರು.
ಜೈನಧರ್ಮದಲ್ಲು ಅಕ್ಷಯ ತೃತೀಯಗೆ ವಿಶೇಷ ಮಹತ್ವ ಇದೆ.
ತೀರ್ಥಂಕರ ವೃಷಭನಾಥರು ಸಂಸಾರದ ನಶ್ವರತೆಯನ್ನು ಅರಿತು ವೈರಾಗ್ಯ ಹೊಂದಿ ಕಾಡಿಗೆ ತಪಸ್ಸಿಗೆ ಹೋಗುತ್ತಾರೆ. ಆರು ತಿಂಗಳು ಕಠಿಣ ತಪಸ್ಸು ಮಾಡಿ ಆಹಾರಕ್ಕಾಗಿ ನಗರಕ್ಕೆ ಆಗಮಿಸುತ್ತಾರೆ. ಜನರು ಮಹಾರಾಜರಾಗಿದ್ದ ವೃಷಭನಾಥರಿಗೆ ಒಡವೆ, ವಸ್ತ್ರ,ಧನ ಕನಕಗಳನ್ನು ಕೊಡಲು ಬಂದರು.ಇದಾವುದನ್ನು ಬಯಸದ ವೃಷಭನಾಥರು ಪುನಹ ಕಾಡಿಗೆ ತೆರಳಿದರು. ಏಳು ತಿಂಗಳು ಒಂಬತ್ತು ದಿನಗಳು ಉಪವಾಸ ಮಾಡಿ ಹಸ್ತಿನಾನಗರಕ್ಕೆ ಆಹಾರಕ್ಕಾಗಿ ಆಗಮಿಸುತ್ತಾರೆ. ಆ ನಗರದ ರಾಜ ಶ್ರೇಯಾಂಸ ಪರಿವಾರ ಸಮೇತ ಇವರ ದರ್ಶನಕ್ಕೆ ಆಗಮಿಸುತ್ತಾರೆ. ಆ ರಾಜನಿಗೆ ಹಿಂದಿನಜನ್ಮದ ಸ್ಮರಣೆ ಉಂಟಾಗಿ ತಾವು ಹಾಗು ವೃಷಭನಾಥರು ದಿಗಂಬರ ಮುನಿಗಳಿಗೆ ಭಕ್ತಿಯಿಂದ ಆಹಾರ ನೀಡಿದ ಸ್ಮರಣೆ ಆಗುತ್ತದೆ. ತಕ್ಷಣವೇ ರಾಜ ಭಕ್ತಯಿಂದ ಮೊದಲಿಗೆ ಇಕ್ಷುರಸ (ಕಬ್ಬಿನ ರಸ) ವನ್ನು ನೀಡುತ್ತಾರೆ. ನಂತರ ಆಹಾರ ಸೇವಿಸುತ್ತಾರೆ. ದೇವತೆಗಳು ಪಂಚಾಶ್ಚರ್ಯ ವೃಷ್ಟಿ ಮಾಡುತ್ತಾರೆ. ಜನತೆ ಜಯಕಾರ ಹಾಕುತ್ತಾರೆ.
ವೃಷಭನಾಥರಿಗೆ ಮೊದಲು ಆಹಾರ ಪಾರಣವಾದ ದಿನ ವೈಶಾಖ ಶುಕ್ಲ ತೃತೀಯ. ಹಾಗಾಗಿ ಜೈನಧರ್ಮದಲ್ಲು ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಜೈನಧರ್ಮದಲ್ಲಿ ಮುನಿ ಗಳಿಗೆ ಆಹಾರದಾನ ಮಾಡುವುದೇ ಅತಿಶಯ, ಅಕ್ಷಯ ಪುಣ್ಯ ದೊರಕುತ್ತದೆ ಎಂದು ಹೇಳ ಲಾಗಿದೆ. ಈ ದಿನದಂದು ಬಸದಿಯಲ್ಲಿ ವಿಶೇಷವಾಗಿ ಅಭಿಷೇಕ, ಪೂಜೆ, ಉತ್ಸವಗಳನ್ನು ನಡೆಸಲಾಗುತ್ತದೆ. ಈ ದಿನದಂದು ದಿಗಂಬರ ಮುನಿ ಗಳಿಗೆ ಕಬ್ಬಿನ ಹಾಲನ್ನು ನೀಡುವುದರಿಂದ ಮನೆಯಲ್ಲಿ ಧನದಾನ್ಯ, ಸುಖ ನೆಮ್ಮದಿ ಅಕ್ಷಯವಾಗಿ ವೃದ್ದಿಯಾಗುತ್ತದೆ ಎಂಬ ನಂಬಿಕೆ ಇದೆ.
ಪ್ರಸ್ತುತ ನಮ್ಮನ್ನು ಕಾಡುತ್ತಿರುವ ಕೊರೋನ ಎಂಬ ಸಾಂಕ್ರಾಮಿಕ ರೋಗ ದೂರವಾಗಿ ನಾಡಿಗೆ, ಜನತೆಗೆ ಆಯುರಾರೋಗ್ಯ, ಸುಖ, ಶಾಂತಿ, ನೆಮ್ಮದಿ ದೊರಕಲಿ ಎಂದು ಈ ಶುಭ ದಿನದಂದು ಪ್ರಾರ್ಥಿಸೋಣ.
ಎಲ್ಲರಿಗೂ ಅಕ್ಷಯ ತೃತೀಯದ ಶುಭಾಶಯಗಳು.
ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು. ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ ಎಂ.ಎ ಎಂ.ಫಿಲ್ ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.
ತುಂಬಾ ಚೆನ್ನಾಗಿದೆ ಮೇಡಂ ಹಲವು ವಿಷಯಗಳನ್ನು ಒಳಗೊಂಡ ಒಳ್ಳೆಯ ಲೇಖನ.
ಹೊಸ ಲೇಖಕರಿಗೆ ಪ್ರೋತ್ಸಾಹ, ಅವಕಾಶ ಒದಗಿಸಿ ಕೊಡುತ್ತಿರುವ, ಕನ್ನಡ ಪ್ರೆಸ್ ಸಂಪಾದಕರಿಗೆ ಧನ್ಯವಾದಗಳು.
ಶ್ರೀಮತಿ ಭಾರತಿ ಶ್ರೀನಿವಾಸ್ ಅವರ ಸರಕಾರಕ್ಕೆ ಧನ್ಯವಾದಗಳು. 🙏🙏
ಶ್ರೀ ಮತಿ ಭಾರತಿ ಶ್ರೀನಿವಾಸ್ ಅವರ ಸಹಕಾರಕ್ಕೆ ಧನ್ಯವಾದಗಳು. 🙏🙏
ಮೇಲೆ ಆಗಿರುವ ಕಾಗುಣಿತದ ತಪ್ಪಿಗೆ ಕ್ಷಮಾಯಾಚಿಸುವೆ
ಅಕ್ಷಯತೃತೀಯದ ಮಹತ್ವ ನಮ್ಮೆಲ್ಲರಿಗೂ ಇಷ್ಟು ಸರಳವಾದ ರೀತಿಯಲ್ಲಿ ತಿಳಿಸಿ ಕೊಟ್ಟಿರುವುದಕ್ಕೆ ಧನ್ಯವಾದಗಳು Mam🙏
ಜ್ಞಾನಕ್ಕೆ, ವಿದ್ಯೆಗೆ ಎಲ್ಲರೂ ತಲೆಬಾಗಲೇಬೇಕಲ್ಲವೇ ರತ್ನ ಅವರೇ? ಹಾಗಾಗಿ ನಿಮ್ಮ ಸಹಕಾರಕ್ಕೆ ನಮ್ಮ ಧನ್ಯವಾದಗಳು. ಇದರಲ್ಲಿ ನನ್ನದೇನಿಲ್ಲ ಎಲ್ಲಾ ಸಂಪಾದಕರ ಪ್ರೋತ್ಸಾಹ, ಅವರು ಕೊಡುತ್ತಿರುವ ಅವಕಾಶಗಳು ಅಷ್ಟೆ🙏
ತುಂಬಾ ಸರಳವಾಗಿ ,ಅಕ್ಷಯತೃತೀಯ ಬಗ್ಗೇ ಶ್ರೀಮತಿ ರತ್ನ ರವರು ಚೆನ್ನಾಗಿ ತಿಳಿಸಿದ್ದಾರೆ… ಅವರಿಗೆ ಹಾಗು ಕನ್ನಡಪ್ರೆಸ್ ನವರಿಗೂ ಧನ್ಯವಾದಗಳು.🙏🙏
ನನ್ನ ಲೇಖನಕ್ಕೆ ಪ್ರತಿಕ್ರಿಯೆ ನೀಡಿರುವ ಎಲ್ಲರಿಗೂ ಧನ್ಯವಾದಗಳು. 🙏🙏