ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು , ವಚನ ಸಾಹಿತ್ಯದಲ್ಲಿ ಅಡಗಿರುವ ಸಂಗತಿಗಳು ಮತ್ತು ಗಾದೆಗಳುಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟು ಮತ್ತು ವಚನಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಮನದ ಕೋಪ ತನ್ನ ಅರಿವಿನ ಕೇಡು- ಈ ಅರಿವಿನ ನುಡಿ ಬಸವಣ್ಣನವರ ವಚನದಲ್ಲಿ ಉಲ್ಲೇಖವಾಗಿರುವ ಶ್ರೇಷ್ಟತಮ ನುಡಿಗಳಲ್ಲೊಂದಾಗಿದೆ.
“ಕೋಪವೆಂಬುದು ಅನರ್ಥ ಸಾಧನ” ಎಂಬ ಮಾತು ಎಲ್ಲರಿಗು ತಿಳಿದಿರುವಂಥದ್ದೆ. ಅಂತೆಯೇ ಕೋಪ ಮನಸ್ಸಿನ ವಿಕೃತಿಯೂ ಹೌದು! ಸಾತ್ವಿಕ ಕೋಪದಿಂದ ಕೆಲವರು ಜನರನ್ನು ತಿದ್ದಲು ಪ್ರಯತ್ನಿಸಿದರೆ ಇನ್ನು ಕೆಲವರು ವಿಕೃತಿಯಿಂದ ಕೇಡು ಬಯಸುತ್ತಾರೆ.
ವ್ಯರ್ಥ ಕೋಪದ ತಾಪವನ್ನು ಇಂಗಿಸಿಕೊಳ್ಳಲು ಕುತಂತ್ರ, ಹುನ್ನಾರ, ಚಾಡಿ ಮಾಡುತ್ತಾರೆ ತಮ್ಮ ತಪ್ಪುಗಳನ್ನು ಸಾವರಿಸಿಕೊಳ್ಳಲು ತಂತ್ರಗಾರಿಕೆಗಳನ್ನು ಮಾಡಿಕೊಂಡೇ ಮುನ್ನಡೆಯುತ್ತಾರೆ, ತಮ್ಮ ಅರಿವಿನ ಹಾದಿಯನ್ನು ತಾವೇ ಮೊಟಕುಗೊಳಿಸಿಕೊಳ್ಳುತ್ತಾರೆ ತನುವಿಗಾವರಿಸಿದ ಕೋಪ ಹಿರಿತನಕ್ಕೆ ಕೇಡೊದಗಿಸಿದರೆ ಮನದ ಕೋಪ ಕೋಪಿತನಾದವನಿಗೆ ಹೊಸದೇನನ್ನೂ ಕಲಿಯಲು ಬಿಡುವುದಿಲ್ಲ.
ಪ್ರತಿಯೊಬ್ಬ ವ್ಯಕ್ತಿಯೂ ಮತ್ತೊಬ್ಬರ ಏಳ್ಗೆಯನ್ನು ಕಂಡು ಅಸೂಯೆ ಪಡುವುದು ತಪ್ಪು ಇದರಿಂದ ಬೇರೆಯವರ ಅಧಃಪತನಕ್ಕಿಂಥ ತನ್ನ ಅಧಃಪತನವನ್ನು ತಾನೇ ತಂದುಕೊಳ್ಳುತ್ತಾನೆ. . ಇದಕ್ಕೆ ಬಸವಣ್ಣನವರ ವಚನದಲ್ಲಿಯೇ ಬೆಂಕಿಯ ಹುಟ್ಟಿನ ಉದಾಹರಣೆಯಿದೆ.
ಬೆಂಕಿ ತಾನು ಹುಟ್ಟಿದ ಸ್ಥಳವನ್ನು ಮೊದಲು ಆಹುತಿ ತೆಗೆದುಕೊಳ್ಳುತ್ತದೆ ಆನಂತರ ಇತರೆಡೆಗೆ ವ್ಯಾಪಿಸುತ್ತದೆ. ಮನುಷ್ಯನಿಗೆ ಅನ್ವಯಿಸಿ ಹೇಳುವುದಾದರೆ ಕೋಪ ಅಸೂಯೆ ಎಂಬ ರೋಗಗ್ರಸ್ಥ ಮನಸ್ಸನ್ನು ಮೊದಲು ಆಫೋಶನ ತೆಗದುಕೊಂಡು ಇತರರೆಡೆಗೆ ಮುನ್ನುಗ್ಗುತ್ತದೆ. ಇತರರನ್ನು ಹಾಳು ಮಾಡಬೇಕೇಂಬ ಭರದಲ್ಲಿ ತನ್ನನ್ನೇ ಕಳೆದುಕೊಂಡಮೇಲೆ ಬದುಕಿನಲ್ಲಿ ಉಳಿಯುವುದು ಶೂನ್ಯವೇ ಅಲ್ಲವೇ?
ವಿನಾ ಕಾರಣ ಕೋಪ ಎಂದಿಗೂ ಅಪಾಯಕಾರಿ. ಸಾತ್ವಿಕವಲ್ಲದ ಕೋಪ ಬರುವುದು ಹೆಚ್ಚಾಗಿ ತಮ್ಮವೇ ತಪ್ಪುಗಳಿದ್ದಾಗ, ಅಸೂಯೆಯ ಸಂದರ್ಭದಲ್ಲಿ ಇತರರನ್ನು ಕಂಡು ತಾಳುವಿಕೆಯ ಗುಣ ಇಲ್ಲದೇ ಇದ್ದಾಗ. ಇನ್ಯಾರದ್ದೋ ಕೋಪವನ್ನು ಸುಲಭಕ್ಕೆ ಸಿಕ್ಕಿದ್ದಾರೆಂದು ಇನ್ನೊಬ್ಬರ ಮೇಲೆ ತೀರಿಸಿಕೊಳ್ಳುವ ಭರದಲ್ಲಿ ವ್ಯಕ್ತಿತ್ವ ಹಾನಿಯಾಗುವುದೂ ನಮ್ಮದೇ ಎಂಬ ಕನಿಷ್ಟತಮ ಅರಿವೂ ಸಾಮಾಜಿಕರಲ್ಲಿರಬೇಕು ಎಂಬುದನ್ನು ಬಸವಣ್ಣನವರು ಮಾರ್ಮಿಕವಾಗಿ ಹೇಳಿದ್ದಾರೆ.
ಕೋಪ ಬೇಕು ಆದರೆ ಅದು ಸಾತ್ವಿಕವಾಗಿರಬೇಕು. ಇಂಥ ಕೋಪ ಜನರನ್ನು ತಿದ್ದುತ್ತದೆ. ತಮಸ್ಸಿನ ಕೋಪ ತಾನು ಹುಟ್ಟಿದ ಒಡಲನ್ನೇ ನಾಶಮಾಡುತ್ತದೆ. ಹಾಗಾಗಿ ಅರಿವಿಗೆ ತೊಡಕಾಗುವ ಮನದ ಕೋಪವೇಕೇ? ಅಲ್ಲವೇ!
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
`ಸುಡುವ ಕೋಪ ಸಲ್ಲ, ಸಾತ್ವಿಕ ಸಿಟ್ಟಿಗೆ ತಕರಾರಿಲ್ಲ’…
ಲೇಖನ ಚೆನ್ನಾಗಿದೆ.
ಓದಿದ ಬಳಿಕ ನನಗನಿಸಿದ್ದು…
ಉದಾಹರಣೆಗೆ ಕೆಲ ಪ್ರಸಂಗಗಳನ್ನು ನೆನಪಿಸಿದ್ದರೆ ಚೆನ್ನಾಗಿರುತ್ತಿತ್ತು.
`ದೂರ್ವಾಸ’ರನ್ನು ಕರೆತರಬಹುದಿತ್ತು.
ಶೀಘ್ರಕೋಪಿಗಳನ್ನು ಎಳೆದುತರಬಹುದಿತ್ತು.
ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡಿದ್ದನ್ನು ನೆನಪಿಸಬಹುದಿತ್ತು.
ಕೆಲವೊಮ್ಮೆ ಸಿಟ್ಟಿನಿಂದಾಗುವ `ಪ್ರಯೋಜನ’ಗಳನ್ನೂ ಸ್ಮರಿಸಬಹುದಿತ್ತು…
ಇನ್ನಷ್ಟು ವಿಸ್ತರಿಸಬಹುದಿತ್ತು.
ಈ (ತಮಾಷೆ) ಪ್ರತಿಕ್ರಿಯೆಗೆ ಲೇಖಕಿ `ಸಿಟ್ಟಾಗದಿದ್ದರೆ’ ಸಾಕು….
ಸಿಟ್ಟು ಏಕೆ ಸರ್! ಆದಷ್ಟು ಚುಟುಕಾಗಿ,ಗುಟುಕಾಗಿ ಇರಲಿ ಅನ್ನುವ ಕಾರಣಕ್ಕೆ ಶೀಘ್ರ ಪೂರ್ವಿಣರಾಮವಿಡುತ್ತೇನೆ.ಪ್ರತಿಕ್ರಿಯೆಯಾಗಿ ಧನ್ಯವಾದಗಳು.