BENGALURU MAY 3
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಷ್ಠಾಪನೆ ಆಗಲಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯ ಭಾಗವಾದ 4,000 ಕೆ.ಜಿ. ತೂಕದ ಖಡ್ಗವು ದೆಹಲಿಯಿಂದ ಬೆಂಗಳೂರನ್ನು ತಲುಪಿದೆ.
ವಿಶೇಷ ಟ್ರಕ್ ನಲ್ಲಿ ಬಂದ ಈ ಖಡ್ಗವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನೆರೆದಿದ್ದ ಪುರೋಹಿತರು, ಸಚಿವರ ನೇತೃತ್ವದಲ್ಲಿ ಖಡ್ಗಕ್ಕೆ ಸಾಂಪ್ರದಾಯಿಕ ಶಕ್ತಿಪೂಜೆಯನ್ನು ನೆರವೇರಿಸಿದರು. ಜತೆಗೆ, ಈ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಎಲ್ಲ ಕಾರ್ಮಿಕ ಸಿಬ್ಬಂದಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೆಐಎನಲ್ಲಿ 23 ಎಕರೆ ವಿಸ್ತಾರದಲ್ಲಿ ಕೆಂಪೇಗೌಡರ ಸ್ಮರಣಾರ್ಥ ಹೆರಿಟೇಜ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು, ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಇಲ್ಲಿ ತಲೆಯೆತ್ತಲಿರುವ ಕೆಂಪೇಗೌಡರ ಭವ್ಯ ಪ್ರತಿಮೆಗೆ 85 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ನೋಯಿಡಾದ ಪದ್ಮಭೂಷಣ ಪುರಸ್ಕೃತ ಶಿಲ್ಪಿಗಳಾದ ರಾಮ್ ವಾನಜಿ ಸುತರ್ ಅವರು ಈ ಪ್ರತಿಮೆಯನ್ನು ಮಾಡಿಕೊಡುತ್ತಿದ್ದಾರೆ’ ಎಂದರು.
ಕೆಂಪೇಗೌಡರು ಕೈಯಲ್ಲಿ ಹಿಡಿದಿರುವ ಕತ್ತಿಯು (ಖಡ್ಗ) ಕ್ಷಾತ್ರಬಲವನ್ನು ಪ್ರತಿನಿಧಿಸುತ್ತಿದ್ದು, ನವಭಾರತಕ್ಕೊಂದು ಸಂಕೇತವಾಗಿದೆ. ವಿಮಾನ ನಿಲ್ದಾಣದ ಮೂಲಕ ಹೋಗುವವರು ಮತ್ತು ಇಲ್ಲಿಗೆ ಬಂದಿಳಿಯುವವರಿಗೆ ಕೆಂಪೇಗೌಡರ ಬೃಹದಾಕಾರದ ಪ್ರತಿಮೆಯ ನೋಟವೇ ಒಂದು ದಿವ್ಯ ಅನುಭೂತಿಯನ್ನು ಮಾಡುವಂತಿರಬೇಕು ಎನ್ನುವುದು ಸರಕಾರದ ಉದ್ದೇಶವಾಗಿದೆ’ ಎಂದು ಅವರು ಬಣ್ಣಿಸಿದರು.
ಈ ಸಂದರ್ಭದಲ್ಲಿ ಅಮೆರಿಕದ `ಅಕ್ಕ’ ಕನ್ನಡ ಕೂಟಗಳ ಮುಖ್ಯಸ್ಥ ಡಾ.ಅಮರನಾಥ್ ಗೌಡ, ಪ್ರಾಧಿಕಾರದ ಆಯುಕ್ತ ವಿನಯ್ ದೀಪ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಪ್ರಾಧಿಕಾರದ ನಿರ್ದೇಶಕರು ಉಪಸ್ಥಿತರಿದ್ದರು.