ಇತ್ತೀಚೆಗೆ ಪ್ರತಿ ಷೇರಿಗೆ ರೂ.949 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಎಲ್‌ಐ ಸಿ ಆಫ್ ಇಂಡಿಯಾ ಹಿಂದಿನ ವರ್ಷ ಪ್ರತಿ ಷೇರಿಗೆ ರೂ.76 ರಂತೆ ವಿತರಿಸಿದ ಝೊಮೇಟೋ ಕಂಪನಿ ಷೇರಿಗಿಂತ ಕೇವಲ ರೂ. 18.90 ರಷ್ಟು ಮಾತ್ರ ಹೆಚ್ಚಿದೆ. ಅದೇ ರೀತಿ ನವೆಂಬರ್‌ತಿಂಗಳಿನಲ್ಲಿ ಪ್ರತಿ ಷೇರಿಗೆ ರೂ.2,150 ರಂತೆ ವಿತರಿಸಿದ ಪೇಟಿಎಂ ಕಂಪನಿ ಷೇರಿಗೆ ಹೋಲಿಸಿದಾಗ ಪೇಟಿಎಂ ಷೇರು ರೂ.2,055.10 ರಷ್ಟು ಹೆಚ್ಚಿನ ಬೆಲೆಯಲ್ಲಿ ವಿತರಣೆಯಾಗಿದೆ ಎನ್ನಬಹುದು. ಮೊನ್ನೆಯ ದಿನ ಕೊನೆಗೊಂಡ ಡೆಲಿವೆರಿ ಕಂಪನಿಯು ಪ್ರತಿ ಷೇರಿಗೆ ರೂ.487 ರಂತೆ ವಿತರಿಸಿದೆ, ಅದಕ್ಕೆ ಹೋಲಿಕೆ ಮಾಡಿದಾಗ ಎಲ್‌ಐ ಸಿ ಆಫ್‌ಇಂಡಿಯಾ ರೂ.392.10 ರಷ್ಟು ಕಡಿಮೆ ಬೆಲೆಗೆ ವಿತರಿಸಿದೆ ಎನ್ನಬಹುದು.
ಏನಿದು ಆಯಾ ಕಂಪನಿಗಳು ವಿತರಿಸಿದ ಬೆಲೆಗೂ ಇಲ್ಲಿ ನಮೂದಿಸಿದ ಬೆಲೆಗೂ ಭಾರಿ ಅಂತರವಿದೆಯಲ್ಲಾ ಎಂದೆನಿಸುವುದು ಸಹಜ. ಅದೇ ವಿಸ್ಮಯಕಾರಿ ಅಂಶ. ಬಹಳಷ್ಠು ಕಂಪನಿಗಳು ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ. ಈ ವಿಸ್ಮಯಕಾರಿ ಅಂಶವೆಂದರೆ ಆಯಾ ಕಂಪನಿಗಳು ವಿತರಿಸುತ್ತಿರುವ ಷೇರಿನ ಸ್ವರೂಪಗಳು.
ಎಲ್‌ಐ ಸಿ ಆಫ್‌ಇಂಡಿಯಾದ ಒಂದು ಘಟಕ ಅಂದರೆ ಷೇರಿನ ಮುಖಬೆಲೆಯು ರೂ.10 ಇದ್ದು ಉಳಿದಂತೆ ಝೊಮೆಟೋ, ಪೇಟಿಎಂ, ಡೆಲಿವೆರಿ ಕಂಪನಿಗಳ ಷೇರಿನ ಮುಖಬೆಲೆಗಳು ರೂ.1 ಅಗಿದೆ. ಅಂದರೆ ಈ ಕಂಪನಿಗಳ 10 ಷೇರುಗಳು ಎಲ್‌ಐ ಸಿ ಆಫ್‌ಇಂಡಿಯಾದ ಒಂದು ಷೇರಿಗೆ ಸಮವಾಗುವುದು. ಅಂದರೆ ಎಲ್‌ಐ ಸಿ ಆಫ್‌ಇಂಡಿಯಾ ರೂ.10 ರ ಕರೆನ್ಸಿಯಾದರೆ, ಇತರೆ ಮೂರು ಕಂಪನಿಗಳು ರೂ.1 ರ ಕರೆನ್ಸಿಯಾದಂತೆ. ಹೀಗೆ ಕಂಪನಿಗಳ ಷೇರುಗಳನ್ನು ತುಲನೆ ಮಾಡಲು ಸಮಾನಾಂತರ ಮುಖಬೆಲೆಗೆ ಪರಿವರ್ತಿಸಿಕೊಂಡಲ್ಲಿ ಮಾತ್ರ ನ್ಯಾಯಸಮ್ಮತವಾದ ವಿಶ್ಲೇಷಣೆ/ಫಲಿತಾಂಶ ಪಡೆಯಲು ಸಾಧ್ಯ.
ಮುಖ ಬೆಲೆ ಬಹಳ ಮುಖ್ಯ
ಇತ್ತೀಚಿನ ದಿನಗಳಲ್ಲಿ ಷೇರಿನ ಮುಖಬೆಲೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡದೆ ಕೇವಲ ವಿತರಣೆ / ಪೇಟೆಯ ಬೆಲೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಂದರೆ ಮನೆ ಮುಖ್ಯವೇ ಹೊರತು ಅದರ ಪ್ರದೇಶ 20 X 30, 30X40, 40X60 ಎಂಬುದನ್ನು ಪರಿಗಣಿಸಲಾಗುತ್ತಿಲ್ಲ ಎಂಬಂತೆ. ನಮ್ಮ ಚಿಂತನೆಗಳನ್ನು ವಾಸ್ತವತೆ ಕಡೆ ತಿರುಗಿಸುವುದು ಅತ್ಯಗತ್ಯ.
ಷೇರಿನ ಮುಖಬೆಲೆಯು ಯಾವ ರೀತಿ ಪ್ರಭಾವಿಯಾಗುವುದು ಎಂಬುದನ್ನು ತಿಳಿಯೋಣ. ಕಂಪನಿಯು ಶೇ.100 ರಷ್ಟು ಲಾಭಾಂಶ ವಿತರಿಸಿದೆ ಎಂದರೆ ಆ ಕಂಪನಿ ಷೇರಿನ ಮುಖಬೆಲೆ ರೂ.10 ಆಗಿದ್ದರೆ ಆ ಷೇರಿಗೆ ರೂ.10 ರ ಲಾಭಾಂಶ ದೊರೆಯುವುದು. ಒಂದು ವೇಳೆ ಆ ಕಂಪನಿಯ ಷೇರಿನ ಮುಖಬೆಲೆ ರೂ.5 ಆಗಿದ್ದರೆ, ಪ್ರತಿ ಷೇರಿಗೆ ರೂ.5, ರೂ.2 ಆಗಿದ್ದರೆ ಆ ಷೇರಿಗೆ ರೂ.2 ರಂತೆ, ರೂ.1 ಆಗಿದ್ದರೆ ರೂ.1 ರಂತೆ ಲಾಭಾಂಶ ದೊರೆಯುತ್ತದೆ. ಒಂದು ಹೂಡಿಕೆಯಲ್ಲಿ ಲಭ್ಯವಿರುವ ಲಾಭದ ಇಳುವರಿಯ ಮಾಪನ ಮಾಡಲು ಷೇರಿನ ಮುಖಬೆಲೆಯ ಪಾತ್ರ ಅತಿ ಹೆಚ್ಚು.
ಷೇರಿನ ಸ್ವರೂಪಗಳು ಕಂಪನಿಗಳ ಸ್ವಾಸ್ಥ್ಯತೆಯಾಧರಿಸಿ ಬದಲಾಗುತ್ತಿರುತ್ತವೆ. ಆರೋಗ್ಯಕರವಾದ ಕಂಪನಿಗಳು ತಮ್ಮ ಸಾಧನೆಯ ಮೂಲಕ ಬೋನಸ್ ಷೇರುಗಳ ವಿತರಣೆಗೆ ಮುಂದಾಗಬಹುದು. ಈ ಸನ್ನಿವೇಶವನ್ನು ಇತ್ತೀಚಿನ ದಿನಗಳಲ್ಲಿ ಬಿ ಎಸ್‌ಇ, ಹಿಂದೂಜಾ ಗ್ಲೋಬಲ್‌ಸೊಲೂಷನ್ಸ್, ಗೋದಾವರಿ ಪವರ್‌ಅಂಡ್‌ಇಸ್ಪಾಟ್, ರೆಡಿಂಗ್ಟನ್, ಐ ಇ ಎಕ್ಸ್‌ನಂತಹ ಅನೇಕ ಕಂಪನಿಗಳಲ್ಲಿ ಕಂಡಿದ್ದೇವೆ. ಇಲ್ಲಿ ಷೇರಿನ ಮುಖಬೆಲೆಯಲ್ಲಿ ಬದಲಾವಣೆ ಇಲ್ಲದಿದ್ದರೂ, ಕಂಪನಿಯಲ್ಲಿದ್ದ ಮೀಸಲು ನಿಧಿಯು ಬಂಡವಾಳವಾಗಿ ಪರಿವರ್ತನೆಗೊಂಡ ಕಾರಣ ಬೆಲೆ ಕುಸಿತ ಕಾಣಬಹುದಾಗಿದೆ.
ಹಲವು ಬಾರಿ ಕಂಪನಿಗಳು ರೋಗಗ್ರಸ್ತವಾದಾಗ ಐ ಬಿ ಸಿ ( Insolvency and bankruptsy code) ಅಥವಾ ಎನ್ ಸಿ ಎಲ್‌ಟಿ ( National Company Law Tribunal ) ಗಳ
ಆದೇಶದ ಮೇರೆಗೆ ಷೇರು ಬಂಡವಾಳವನ್ನು ಮೊಟಕುಗೊಳಿಸುವ ಮೂಲಕ ಪುನರ್‌ರೂಪಿಸಿ, ಷೇರಿನ ಮುಖಬೆಲೆಯನ್ನು ಕಡಿತಗೊಳಿಸಲಾಗುವುದು. ನಂತರ ಕೆಲವು ಕಂಪನಿಗಳು ಮೊಟಕುಗೊಳಿಸಿದ ಷೇರಿನ ಮುಖಬೆಲೆ ಕ್ರೋಡೀಕರಿಸುವುವು. ಅಂದರೆ ಷೇರಿನ ಮುಖಬೆಲೆ ಸ್ಥಿರವಾಗಿದ್ದರೂ, ಕಂಪನಿಯು ಹೊಂದಿರುವ ಷೇರುಗಳ ಸಂಖ್ಯಾಗಾತ್ರವು ಕ್ಷೀಣಿತವಾಗುತ್ತದೆ.
ಯಾವುದೇ ಒಂದು ಕೈಗಾರಿಕೋದ್ಯಮವನ್ನು ಆರಂಭಿಸಬೇಕಾದರೆ ಅದಕ್ಕೆ ಬೇಕಾದ ಬಂಡವಾಳ ಅತಿ ಹೆಚ್ಚು. ಬಂಡವಾಳದ ಜೊತೆಗೆ ಅದನ್ನು ನಿರ್ವಹಿಸುವುದು ಕೇವಲ ಒಬ್ಬರಿಬ್ಬರಿಂದ ಸಾಧ್ಯವಿಲ್ಲ. ಆ ಉದ್ಯಮವನ್ನು ಆರಂಭಿಸಿ, ಬೆಳೆಸಲು ಹತ್ತಾರು ನೈಪುಣ್ಯರ, ತಜ್ಞರ, ತಾಂತ್ರಿಕ ಪರಿಣಿತರ, ಅನುಷ್ಟಾನ ಕುಶಲತೆಯುಳ್ಳವರ ಕೈಜೋಡಿಸುವಿಕೆ ಅತ್ಯಗತ್ಯ.
ಹಾಗಾಗಿ ಒಂದು ಉದ್ಯಮವನ್ನು ಸ್ಥಾಪಿಸುವಾಗ ಅದರ ಗಾತ್ರಕ್ಕೆ ತಕ್ಕಂತೆ ಹಲವರು ಭುಜಕ್ಕೆ ಭುಜ ಕೊಟ್ಟು ಬಂಡವಾಳ ಮತ್ತು ಕಾರ್ಯಗಳನ್ನು ಹಂಚಿಕೊಂಡು ಆರಂಭಿಸುವರು. ಈ ಒಗ್ಗೂಡಿಕೆಯನ್ನು ಕಂಪನಿ ಎಂಬ ನಾಮಾಂಕಿತದಿಂದ ಗುರುತಿಸಲಾಗುವುದು. ಆರಂಭಿಕ ಹಂತದಲ್ಲಿ ಪಾಲ್ಗೊಂಡವರನ್ನು ಪ್ರವರ್ತಕರು ಎಂದು ಗುರುತಿಸಲಾಗುವುದು. ಈ ಜೊತೆಗಾರಿಕೆ ಕೇವಲ ಇಷ್ಟಕ್ಕೆ ನಿಲ್ಲದೆ ಕಂಪನಿಯು ಮುಂದೆ ಗಳಿಸಬಹುದಾದ ಲಾಭಕ್ಕೆ ಅವರವರ ಹೂಡಿಕೆಗೆ ಅನುಗುಣವಾಗಿ ಲಾಭವನ್ನು ಹಂಚಿಕೊಳ್ಳುವರು.
ಹೂಡಿಕೆಯ ಮಾಪನಕ್ಕೆ ಅನುಕೂಲಕವಾಗಲೆಂದು ಅದನ್ನು ಅನೇಕ ಘಟಕಗಳಾಗಿ ರೂಪಿಸಲಾಗಿದ್ದು ಈ ಘಟಕಗಳ ಮುಖಬೆಲೆಯು ರೂ.10, ರೂ.5, ರೂ.2 ಮತ್ತು ರೂ.1 ರಂತಿರುತ್ತದೆ. ಓರ್ವರು ಒಂದು ಲಕ್ಷ ರೂಪಾಯಿಗಳನ್ನು ರೂ.10 ರ ಮುಖಬೆಲೆಯ ಘಟಕಗಳಿರುವಲ್ಲಿ ಹೂಡಿಕೆ ಮಾಡಿದರೆ ಅವರಿಗೆ ಒಟ್ಟು ಹತ್ತು ಸಾವಿರ ಘಟಕಗಳನ್ನು ನೀಡಲಾಗುವುದು. ಈ ಘಟಕವೇ ಷೇರು. ಅಂದರೆ ಷೇರುದಾರರು ಕಂಪನಿಯಲ್ಲಿ ಬಂಡವಾಳ ಹೂಡಿದ್ದಕ್ಕೆ ಕಂಪನಿಗಳಿಸಿದ ಹಣದಲ್ಲಿ ಖರ್ಚು ವೆಚ್ಚಗಳ ನಂತರ ಉಳಿದ ಹಣದಲ್ಲಿ ಲಾಭಾಂಶ ಎಂಬ ಪ್ರತಿಫಲಗಳನ್ನು ಪಡೆಯುವರು. ಇದು ಒಂದು ರೀತಿಯ ನಮ್ಮ ಹಳೇ ಸಂಸ್ಕೃತಿಯಾದ ಒಟ್ಟುಕುಟುಂಬದ ರೀತಿ ಇರುತ್ತದೆ. ಈ ರೀತಿ ಹತ್ತಾರು, ನೂರಾರು, ಸಹಸ್ರಾರು ಹೂಡಿಕೆದಾರರು ಸೇರಿ ನಡೆಸುವ ಈ ಸಂಸ್ಕೃತಿಗೆ ಕಾರ್ಪೊರೇಟ್ ಸಂಸ್ಕೃತಿ ಎನ್ನುವರು.
ಸಾಮಾನ್ಯವಾಗಿ ವಯಸ್ಕರು, ಹಿರಿಯ ನಾಗರಿಕರು, ಗೃಹಿಣಿಯರು ಭಾವಿಸುವುದೇನೆಂದರೆ ಬ್ಯಾಂಕ್‌ಬಡ್ಡಿ ದರವು ಕ್ಷೀಣಿಸುತ್ತಿರುವುದರಿಂದ ಅದನ್ನವಲಂಬಿಸಿ ನಡೆಸುತ್ತಿರುವ ಜೀವನ ಸುಲಭವಾಗಿಲ್ಲ, ತೊಂದರೆಯಾಗುತ್ತಿದೆ. ಇದಕ್ಕೆ ಪರ್ಯಾಯವಾದ ಆದಾಯ ಗಳಿಕೆಯ ಮಾರ್ಗ ಯಾವುದೆಂಬುದರ ಆನ್ವೇಷಣೆ ಮಾಡುವ ಪ್ರಯತ್ನಗಳು ನಡೆಸುವುದು ಸಹಜವಾಗಿದೆ. ಇಂತಹವರು ತಮ್ಮ ಪ್ರಯತ್ನವನ್ನು ಷೇರುಪೇಟೆಯ ಚಟುವಟಿಕೆಯತ್ತಲೂ ನಡೆಸಬಹುದಾಗಿದೆ.
ಷೇರುಪೇಟೆಯ ಚಟುವಟಿಕೆ ಎಂದರೆ ಹೆಚ್ಚಿನವರಲ್ಲಿ ತಪ್ಪು ಕಲ್ಪನೆಗಳಿವೆ. ಅದು ಜೂಜಾಟದ ಅಡ್ಡ, ಅಲ್ಲಿ ಅಪಾಯದ ಮಟ್ಟ ಹೆಚ್ಚು, ಷೇರುಪೇಟೆ ಚಟುವಟಿಕೆಗೆ ಹೆಚ್ಚಿನ ಹಣ ಅಗತ್ಯವಿದೆ, ಅದು ಸಾಮಾನ್ಯರ ಪಾಲಿಗಲ್ಲ, ಎಂಬ ಅನೇಕ ನಕಾರಾತ್ಮಕ ಭಾವನೆಗಳಿವೆ.
ಜಾಗತೀಕರಣಕ್ಕೂ ಮುಂಚೆ ಷೇರುಪೇಟೆ ಚಟುವಟಿಕೆಯು ಸಾಮಾನ್ಯರಿಗೆ ಎಟುಕದು ಎಂಬ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಇತ್ತು. ಆದರೆ ನಂತರದಲ್ಲಿ ತಾಂತ್ರಿಕತೆಯ ಕಾರಣ ಚಟುವಟಿಕೆಯು ಸರಳೀಕೃತಗೊಂಡಿದ್ದು, ಭಾಗವಹಿಸುವ ಸಂಸ್ಥೆಗಳು, ವಿದೇಶೀ ವಿತ್ತೀಯ ಸಂಸ್ಥೆಗಳು ಮತ್ತು ಹೂಡಿಕೆದಾರರು, ವಿಶ್ಲೇಷಣೆಗಳು, ವಿಚಾರಗಳು, ವಿವೇಚನೆಗಳು, ಚಿಂತನೆಗಳು, ಶೈಲಿಗಳು ಮುಂತಾದವುಗಳೂ ಸಹ ಹೆಚ್ಚಿನ ಬದಲಾವಣೆಗಳನ್ನು ಕಂಡಿವೆ. ಷೇರುಪೇಟೆಯಲ್ಲಿನ ಬೆಳವಣಿಗೆಗಳು, ಹೂಡಿಕೆಗೂ ಮುನ್ನ ಅರಿಯಬೇಕಾದ ಅಂಶಗಳು ಅಪಾರವಾಗಿವೆ.
ದಿನ ನಿತ್ಯದಲ್ಲುಂಟಾಗುತ್ತಿರುವ ಏರುಪೇರುಗಳು ಸಾಮಾನ್ಯರ ನಿರೀಕ್ಷೆಗೂ ಮೀರಿದ ಹಂತದಲ್ಲಿವೆ. ಸ್ವಲ್ಪಮಟ್ಟಿನ ಅಧ್ಯಯನ, ಚಿಂತನೆಗಳಲ್ಲದೆ, ಹೂಡಿಕೆಮಾಡುತ್ತಿರುವ ಕಂಪನಿಗಳ ಬಗ್ಗೆ ಅರಿತು ಹೂಡಿಕೆ ಮಾಡಿದಲ್ಲಿ ಸಕಾರಾತ್ಮಕ ಫಲಿತಾಂಶ ಪಡೆಯಲು ಸಾಧ್ಯ. ಮುಂದಿನ ದಿನಗಳಲ್ಲಿ ಹಣದುಬ್ಬರದ ಪ್ರಭಾವ ತಡೆಯಲು ಪೂರಕವಾದ ಹೂಡಿಕೆ ಎಂದರೆ ಷೇರುಪೇಟೆಯೊಂದೇ ಎಂಬ ಕಾರಣಕ್ಕಾಗಿ ಹೂಡಿಕೆದಾರರ ಸಂಖ್ಯೆ, ಹೂಡಿಕೆದಾರರ ಸಂಸ್ಥೆಗಳು ಹೆಚ್ಚಾಗುತ್ತಿರುವುದು. ಈ ರೀತಿಯ ಪಾಲೊಳ್ಳುವಿಕೆಯು ಹಲವು ಬಾರಿ ಪೇಟೆಯನ್ನು ವಹಿವಾಟಿನ ಕೇಂದ್ರಗಳನ್ನಾಗಿಸುವುದರಿಂದ ಮಧ್ಯಂತರದಲ್ಲಿ ಹತ್ತಾರು ಅವಕಾಶಗಳು ಸೃಷ್ಠಿಯಾಗುವುದರ ಪ್ರಯೋಜನವನ್ನು ಪಡೆಯಬಹುದಾಗಿದೆ.
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.