BENGALURU MAY 26
ಜನತಾ ಜಲಧಾರೆ ಗಂಗಾ ರಥಯಾತ್ರೆ ಅಂಗವಾಗಿ ರಾಜ್ಯದ ಎಲ್ಲ ಜೀವನದಿ ಹಾಗೂ ಉಪ ನದಿಗಳಿಂದ ಸಂಗ್ರಹ ಮಾಡಿದ ಪವಿತ್ರ ಗಂಗಾ ಜಲದ ಕಳಸ ಪ್ರತಿಷ್ಠಾಪನೆಯ ಮಹಾಪೂಜೆ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ಶಾಸ್ತ್ರೋಕ್ತವಾಗಿ ನಡೆಯಿತು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇರಿಸಿರುವ ಬೃಹತ್ ಬ್ರಹ್ಮ ಕಳಸಕ್ಕೆ ಪಂಡಿತ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದ ಪಂಡಿತರ ತಂಡದಿಂದ ಪೂಜಾ ಕೈಂಕರ್ಯ ಜರುಗಿತು.
10 ಅಡಿಯ ಎತ್ತರದ 500 ಲೀಟರ್ ಜಲ ತುಂಬಲಿರುವ ಕಳಸವನ್ನು ಪ್ರತಿಷ್ಠಾಪನೆ ಮಾಡಲಾಯಿತು.ಬೆಳಗ್ಗೆ 9 ಗಂಟೆಯಿಂದಲೇ ಗಣ ಹೋಮ, ನವಗ್ರಹ ಹೋಮ, ಗಂಗಾ ಪೂಜೆ, ಪರ್ಜನ್ಯ ಹೋಮ, ಪೂರ್ಣಾಹುತಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನೆರವೇರಿದವು. ಪೂಜೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಾಲ್ಗೊಂಡಿದ್ದರು.
ದೇಶದ ಏಳು ಮಹಾನದಿಗಳ ಹೆಸರಿನಲ್ಲಿ ಇಡಲಾಗಿದ್ದ ಹದಿನೈದು ಪುಟ್ಟ ಕಳಸಗಳಿಗೆ ಕುಮಾರಸ್ವಾಮಿ ಅವರು ಶಾಸ್ತ್ರಬದ್ಧವಾಗಿ ಪೂಜೆ, ವಿಧಿ ವಿಧಾನ ನೆರವೇರಿಸಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಪೂಜಾ ಕೈಂಕರ್ಯ ಬೆಳಗ್ಗೆ 12 ಗಂಟೆಗೆ ಸಮಾಪ್ತಿಯಾಯಿತು.
ಇದಾದ ಮೇಲೆ ಬ್ರಹ್ಮ ಕಳಸ ಪ್ರತಿಷ್ಠಾಪನೆ ನಡೆಯಿತಲ್ಲದೆ, ರಾಜ್ಯದ ಉದ್ದಗಲಕ್ಕೂ ಸಂಗ್ರಹ ಮಾಡಲಾಗಿದ್ದ ಜಲವನ್ನು ಅದಕ್ಕೆ ತುಂಬಿಸಲಾಯಿತು. ಮೊದಲು ಕುಮಾರಸ್ವಾಮಿ ಅವರು ಪುಟ್ಟ ಕಳಸದ ಮೂಲಕ ಬ್ರಹ್ಮ ಕಳಸಕ್ಕೆ ಪವಿತ್ರ ಜಲವನ್ನು ತುಂಬಿಸಿದರು.
ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಇಂದಿನಿಂದ ಕಳಸಕ್ಕೆ ಮುಂದಿನ ಒಂದು ವರ್ಷ ಕಾಲ ಸಂಪ್ರದಾಯದಂತೆ ನಿತ್ಯ ಗಂಗಾಪೂಜೆ ನಡೆಯುತ್ತದೆ.
ನೀರಾವರಿ ಯೋಜನೆ ಜಾರಿಗೆ ಸಂಕಲ್ಪ:
ಜನತಾ ಜಲಧಾರೆ ಹಾಗೂ ಬ್ರಹ್ಮ ಕಳಸ ಪ್ರತಿಷ್ಠಾಪನೆ ವೇಳೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಹಾಗೂ ಎಲ್ಲ ಜಿಲ್ಲೆಗಳಿಗೂ ಸಮಗ್ರ ನೀರಾವರಿ ಕಲಿಸುವ ಸಂಕಲ್ಪ ಮಾಡಲಾಯಿತು. ಅದಕ್ಕೆ ಶಕ್ತಿ ಕೊಡು ತಾಯಿ ಎಂದು ಗಂಗಾ ಮಾತೆಯನ್ನು ಪ್ರಾರ್ಥನೆ ಮಾಡಿಕೊಂದಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಐದು ವರ್ಷಗಳ ಪೂರ್ಣ ಪ್ರಮಾಣದ ಸ್ವತಂತ್ರ ಸರಕಾರ ನೀಡಿದರೆ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಈ ಬಗ್ಗೆ ರಾಜಿ ಇಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಇದರ ಜತೆಗೆ, ಸರ್ವ ಜನರ ಹಿತಕ್ಕಾಗಿ ರೂಪಿಸಲಾಗಿರುವ ಪಂಚರತ್ನ ಕಾರ್ಯಕ್ರಮಗಳ ಜಾರಿಗೂ ಶಕ್ತಿ ಕೊಡು ತಾಯಿ ಎಂದು ಗಂಗಾ ಮಾತೆಯವರಲ್ಲಿ ಬೇಡಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ವಿಶೇಷ ಮಂಟಪ ಹಾಗೂ ಬ್ರಹ್ಮ ಕಳಸ:
ಕಳಸ ಪ್ರತಿಷ್ಠಾಪನೆ ಮಾಡಿರುವ ಮಂಟಪವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಕರ್ನಾಟಕದ ಪರಂಪರೆಯನ್ನು ಬಿಂಬಿಸುವ ವಾಸ್ತುಶಿಲ್ಪ ಉಳ್ಳ ಮಂಟಪ ವಿಶೇಷ ಆಕರ್ಷಣೆಯಾಗಿದೆ. ಇಡೀ ಮಂಟಪವನ್ನು ಆವರಣ ಮಂಟಪ ಕಲಾ ಆರ್ಟ್ ನ ಕಲಾವಿದರು ಸಿದ್ಧಪಡಿಸಿದ್ದಾರೆ. ಈ ಮಂಟಪದಲ್ಲಿ ನಿರಂತರವಾಗಿ ಜಪ, ಮಂತ್ರ, ಮಂಗಳ ನಾದ ಮೊಳಗುತ್ತಿರುತ್ತದೆ.
ನೀರು ಶುದ್ಧೀಕರಣಕ್ಕೆ ವಿಶೇಷ ವ್ಯವಸ್ಥೆ:
ಪವಿತ್ರ ಗಂಗಾಜಲವು ಸುಮಾರು ಒಂದು ವರ್ಷ ಕಾಲ ಈ ಕಳಸದಲ್ಲಿ ಇರಲಿದೆ. ನೀರು ಕೆಡದಂತೆ ನೋಡಿಕೊಳ್ಳಲು ವಿಶೇಷ ಯುವಿ – ಓಜೋನೈಶನ್ ವ್ಯವಸ್ಥೆ ಮಾಡಲಾಗಿದೆ. ಇದು ಆಮ್ಲಜನಕಯುಕ್ತ ಆಗಿರುತ್ತದೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.