ಸುಮಾ ವೀಣಾ
ಕೊಲ್ವೆಡೆ ಕಾವರಾರೆಲವೊ- ರುದ್ರಭಟ್ಟನ ‘ಜಗನ್ನಾಥ ವಿಜಯದ’ ಮೂರನೆಯ ಆಶ್ವಾಸದಿಂದ ಆರಿಸಿರುವ ವಾಕ್ಯವಿದು. ಕಂಸನು ,ಕೂಸನ್ನು ವಧ್ಯೆ ಶಿಲೆಗೆ ಕರೆದೊಯ್ಯಲು ಕೈ ಎತ್ತಿದಾಗ ಮಗುವು ಗಗನಕ್ಕೇರಿ ಕಂಸನನ್ನು ಕುರಿತು ನಾನು ನಿನ್ನನ್ನು ಕೊಲ್ಲುವುದಾದರೆ ರಕ್ಷಿಸುವರಾರಿರುವರು? ಎಂದು ಹೇಳುತ್ತದೆ. ಕಂಸನ ನಿರ್ದಯತೆಯನ್ನು ಸಾಕ್ಷೀಕರಿಸುವ ಸಂದರ್ಭವಿದು.
ನಾವು ಒಬ್ಬರಿಗೆ ತೊಂದರೆ ಕೊಡಲು ಯತ್ನಿಸಿದರೆ ನಮಗೆ ತೊಂದರೆ ಕೊಡಲು ಇನ್ನೊಬ್ಬರು ಸರದಿಯಲ್ಲಿರುತ್ತಾರೆ ಎಂಬುದು ಇದರ ತಾತ್ಪರ್ಯ. “ಪಾಪಾಯ ಪರಪೀಡನಂ” ಎನ್ನುವಂತೆ ಇತರರಿಗೆ ತೊಂದರೆ ಕೊಟ್ಟು ಪಾಪದ ಬುತ್ತಿಯನ್ನು ನಾವೇ ಭಾರವಾಗಿಸಿಕೊಳ್ಳುವುದು ದುಸ್ಸಾಹಸವೇ ಸರಿ!
“ಉಪ್ಪು ತಿಂದವನು ನೀರು ಕುಡಿಯಬೇಕು” ಎನ್ನುವಂತೆ ನಾವು ಮಾಡುವ ಕರ್ಮ ಅಥವಾ ಕೆಲಸ ನಮ್ಮ ಪಾಲಿನ ಬುತ್ತಿಯೇ ಸರಿ! ಕತ್ತಲು ಹರಿದು, ಬೆಳಕು ಸರಿದು ಪುನಃ ಕತ್ತಲು ಆವರಿಸುವಂತೆ ಆವರ್ತಿಸುವವು ಪಾಪ, ಪುಣ್ಯ ಕೆಲಸಗಳು . ಗಡಿಯಾರದ ಮುಳ್ಳುಗಳಲ್ಲಿ ವೇಗ ,ಅಲ್ಪವೇಗ ಮತ್ತು ನಿಧಾನವಾಗಿ ಸಾಗುವ ಮುಳ್ಳುಗಳಿದ್ದರೂ ಒಟ್ಟಿಗೆ ಅಲ್ಲದೆ ಇದ್ದರೂ ತಾವು ಸಂಧಿಸಿದ ಜಾಗವನ್ನು ಮತ್ತೆ ಮತ್ತೆ ಬೇರೆ ಬೇರೆ ಪ್ರಕಲ್ಪನೆಗಳಲ್ಲಿ ಸಂಧಿಸುವಂತೆ ನಮ್ಮ ಕರ್ಮಗಳು ಬೇರೆ ಬೇರೆ ಪ್ರಕಲ್ಪನೆಗಳಲ್ಲಿ ನಮ್ಮನ್ನು ಸಂಧಿಸಿ ಮುಂದೆ ಹೋಗುತ್ತವೆ.
ಆದ್ದರಿಂದ ನಮ್ಮ ಮಾತು,ಕೃತಿಗಳು, ನಡವಳಿಕೆಗಳೇ ಆಗಲಿ ಕಿಂಚಿತ್ ಕೂಡ ಇತರರನ್ನು ಭಾದಿಸುವಂಥವಾಗಿರಬಾರದು. ಧರ್ಮಮಾರ್ಗಿಯಾಗದೆ ಇದ್ದರೂ ಆದೀತು ದುರ್ಮಾರ್ಗಿಯಾಗಬಾರದು ಅಲ್ಲವೇ!.
ಇತರರ ಬಾಳಿನಲ್ಲಿ ಇನ್ನಿಲ್ಲದ ಸಂಚನೆಗಳನ್ನು ತಂದು ದಿಗ್ವಿಜಯಿಯಾಗುವುದು ಮೂರ್ಖತನದ ಪರಮಾವಧಿ. ಜಗತ್ತನ್ನೇ ಗೆದ್ದ ವೀರರಂಥ ವೀರರೂ ಕೂಡ ಈ ಜಗತ್ತಿನಿಂದ ಶೂನ್ಯವಾಗಿಯೇ ನಿರ್ಗಮಿಸಿರುವುದು. ಹಾಗಾಗಿ ಜಗತ್ತನ್ನು ಶಾಂತಿಯ ಕಡಲಂತೆ ತಿಳಿದು ಕ್ಷಮೆ ಎನ್ನುವ ಕಂದೀಲನ್ನು ನಿರಂತರ ಹಿಡಿಯಬೇಕು.
ಅರಸು ರಾಕ್ಷಸ, ಮಂತ್ರಿ ಮೊರೆವ ಹುಲಿ ಪ್ರಜೆಗಳ ಬಿನ್ನಹವ ಕೇಳುವವರಾರು ? ಎಂದು ಕುಮಾರವ್ಯಾಸ ಹೇಳುವಂತೆ ಎಲ್ಲರೂ ವಿಧ್ವಂಸಕರೆ ಆದರೆ ಜಗತ್ತನ್ನು ರಕ್ಷಿಸುವವರು ಯಾರು? ಜಗತ್ತನ್ನು ಸುಭಿಕ್ಷವಾಗಿ ಮುನ್ನಡೆಸಿಕೊಂಡು ಹೋಗಲು ಧರ್ಮಮಾರ್ಗಿಗಳು ಎಂಬ ಕಾವಲುಗಾರರು ಬೇಕೇ ಬೇಲ್ಲವೆ?
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.
ಎಂದೆಂದಿಗೂ ಸತ್ಯವಾದ ಮಾತು