ಎಲ್ ಐ ಸಿ ಆಫ್ ಇಂಡಿಯಾ ಷೇರು ಲಿಸ್ಟಿಂಗ್ ಆದ ನಂತರ ನಿರಂತರವಾಗಿ ಕುಸಿಯುತ್ತಿದೆ. ಹೂಡಿಕೆದಾರರಿಗೆ ಅಗಾದ ಪ್ರಮಾಣದ ಹಾನಿಯುಂಟಾಗುತ್ತಿದೆ, ಪೇಟೆಯಲ್ಲಿ ಕಂಪನಿಯ ಬಂಡವಾಳೀಕರಣ ಮೌಲ್ಯ ಕರಗುತ್ತಿದೆ. ಹೂಡಿಕೆದಾರರು ಆತಂಕಕ್ಕೊಳಗಾಗಿದ್ದಾರೆ ಎಂಬ ವಿಚಾರದ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರ್ಣಿಸಲ್ಪಡುತ್ತಿದೆ.
ಪ್ರತಿ ಷೇರಿಗೆ ರೂ.949 ರಂತೆ ವಿತರಣೆಮಾಡಿ, ರೀಟೇಲ್ ಹೂಡಿಕೆದಾರರಿಗೆ ರೂ.45 ರ ರಿಯಾಯಿತಿಯೊಂದಿಗೆ ರೂ.904 ರಂತೆ ವಿತರಿಸಿದ ಈ ಕಂಪನಿಯ ಷೇರು ಲಿಸ್ಟಿಂಗ್ ಆಗಿ ಸುಮಾರು ಒಂದು ತಿಂಗಳಾಗುತ್ತಾ ಬಂದಿದೆ. ಆದರೆ ಇಷ್ಟುಬೇಗ ಕಂಪನಿಯ ಬಗ್ಗೆ ಈ ಅಭಿಪ್ರಾಯ ವ್ಯಕ್ತವಾಗುತ್ತಿರುವುದು ಖೇದಕರ. ಮೂಲವಾಗಿ ಇತ್ತೀಚಿನ ತಿಂಗಳುಗಳಲ್ಲಿ ಪೇಟೆ ಪ್ರವೇಶ ಮಾಡಿ ಹೂಡಿಕೆದಾರರ ಸಂಪತ್ತನ್ನು ಇದಕ್ಕಿಂತ ವೇಗವಾಗಿ ನಶಿಸಿಹೋಗುವಂತಹ ಬೆಳವಣಿಗೆಗಳನ್ನು ಕಡೆಗಣಿಸಿ ಎಲ್ ಐ ಸಿ ಆಫ್ ಇಂಡಿಯಾ ಷೇರಿನ ಬಗ್ಗೆ ಮಾತ್ರ ಅಪಪ್ರಚಾರ ನಡೆಯುತ್ತಿದೆ. ಅನೇಕ ಕಂಪನಿಗಳು ವಿತರಣೆಗೆ ಮುನ್ನ ತೆಗೆದುಕೊಂಡ ಕ್ರಮಗಳು, ವಿತರಣೆ ಸಂದರ್ಭದಲ್ಲಿ ಆದಂತಹ ಬೆಳವಣಿಗೆಗಳು, ವಿತರಣೆಯಾದ ನಂತರದ ಘಟನೆಗಳನ್ನು ಪರಿಶೀಲಿಸಿದಾಗ ಮಾತ್ರ ಎಲ್ ಐ ಸಿ ಆಫ್ ಇಂಡಿಯಾದ ಪ್ರತಿಷ್ಠೆ ಎಂತಹುದು ಎಂಬುದರ ಅರಿವಾಗುವುದು.
ಷೇರಿನ ಮುಖಬೆಲೆಯ ವ್ಯತ್ಯಾಸ
ಈ ಸಂದರ್ಭದಲ್ಲಿ ಮೊದಲಿಗೆ ಗಮನಿಸಲೇಬೇಕಾದ ಮುಖ್ಯ ಅಂಶ ಎಂದರೆ ಅದು ಕಂಪನಿಗಳ ಷೇರಿನ ಮುಖಬೆಲೆ. ಒಂದು ಷೇರಿನ ಮುಖಬೆಲೆ ರೂ.1 ಮತ್ತು ಮತ್ತೊಂದು ಕಂಪನಿ ಷೇರಿನ ಮುಖಬೆಲೆ ರೂ.10 ಎಂದರೆ ಅವುಗಳ ವ್ಯತ್ಯಾಸ ರೂ.1 ಮತ್ತು ರೂ.10 ಕರೆನ್ಸಿ ನೋಟ್ ಗಳಿಗಿರುವ ಅಂತರಕ್ಕೆ ಸಮನಾಗಿರುತ್ತದೆ. ಅಂದರೆ ರೂ.10 ರ ಮುಖಬೆಲೆ ಷೇರು ರೂ. 1 ರ ಮುಖಬೆಲೆಯ 10 ಷೇರುಗಳಿಗೆ ಸಮನಾಗಿರುತ್ತದೆ. ಇದು ಎಲ್ಲಾ ರೀತಿಯ ಕಂಪನಿಗಳಿಗೂ ಅನ್ವಯವಾಗುವ ಅಂಶ. ಇತ್ತೀಚಿನ ತಿಂಗಳುಗಳಲ್ಲಿ ಆರಂಭಿಕ ಷೇರು ವಿತರಿಸಿದ ಕೆಲವು ಕಂಪನಿಗಳನ್ನು ಪರಿಶೀಲಿಸೋಣ.
ಕಂಪನಿಗಳು ತೇಲಿಬಿಡುವ ಆರಂಭಿಕ ಷೇರು ವಿತರಣೆಯ ಸಂದರ್ಭಕ್ಕೂ ಮುಂಚಿನ ದಿನಗಳಲ್ಲಿ ಕೈಗೊಂಡ ಕೆಲವು ತೀರ್ಮಾನಗಳು, ನಿರ್ಧಾರಗಳು, ಬೆಳವಣಿಗೆಗಳನ್ನು ಪರಿಶೀಲಿಸಿದಾಗ ಅವು ಎಷ್ಟರ ಮಟ್ಟಿಗೆ ಹೂಡಿಕೆದಾರರ ಸ್ನೇಹಿ, ಎಷ್ಟರ ಮಟ್ಟಿಗೆ ಅವು ತೆಗೆದುಕೊಂಡ ನಿರ್ಧಾರಗಳು ನ್ಯಾಯಸಮ್ಮತ ಎಂಬುದನ್ನು ನಿರ್ಧರಿಸಲು ಕೆಲವು ನಿದರ್ಶನಗಳನ್ನು ನೀಡಲಾಗಿದೆ.
ಹಿಂದಿನ ವರ್ಷ ಜೂನ್ ನಲ್ಲಿ ವಿತರಿಸಿದ ಡೋಡ್ಲಾ ಡೈರಿ ಲಿಮಿಟೆಡ್ ಕಂಪನಿಯು ರೂ.10 ರ ಮುಖಬೆಲೆಯ ಷೇರನ್ನು ರೂ.428 ರಂತೆ ವಿತರಿಸಿತು. ಇದರ ಬೆಲೆ ಸಧ್ಯ ರೂ.494 ರ ಸಮೀಪವಿದೆ. ಹೂಡಿಕೆದಾರರು ನಿರಾಸೆಗೊಳ್ಳಬೇಕಾಗಿಲ್ಲ.
ಅಂತೆಯೇ ಜೂನ್ 2021 ರಲ್ಲಿ ವಿತರಣೆಯಾದ ರೂ.1 ರ ಮುಖಬೆಲೆಯ ಇಂಡಿಯಾ ಪೆಸ್ಟಿಸೈಡ್ಸ್ ಲಿಮಿಟೆಡ್ ಕಂಪನಿಯು ಪ್ರತಿ ಷೇರಿಗೆ ರೂ.296 ರಂತೆ ವಿತರಿಸಿದೆ. ಸಧ್ಯದ ಬೆಲೆಯು ರೂ.229 ರ ಸಮೀಪವಿದೆ. ಅಂದರೆ ಆರಂಭಿಕ ಷೇರು ವಿತರಣೆಯ ಸಂದರ್ಭದಲ್ಲಿ ಹೂಡಿಕೆ ಮಾಡಿದವರಿಗೆ, ಷೇರಿನ ಬೆಲೆ ರೂ.365 ರವರೆಗೂ ಏರಿಕೆ ಕಂಡಾಗ ಮಾರಾಟ ಮಾಡುವ ಅವಕಾಶವನ್ನು ಪೇಟೆ ಕಲ್ಪಿಸಿಕೊಟ್ಟಿತ್ತು. ಆದರೂ ಕಂಪನಿಯು ಲಾಭಗಳಿಕೆಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆಯು ಪುಟಿದೇಳಬಹುದೆಂದು ಆಶಿಸಬಹುದು.
ಐ ಪಿ ಒ ಗಾಗಿ ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಆಗಿ ಪರಿವರ್ತನೆ:
ಝೊಮೆಟೋ ಲಿಮಿಟೆಡ್: 2021 ರ ಜುಲೈನಲ್ಲಿ ಝೊಮೆಟೋ ಲಿಮಿಟೆಡ್ ಪ್ರತಿ ಷೇರಿಗೆ ರೂ.76 ರಂತೆ ಆರಂಭಿಕ ಷೇರು ವಿತರಣೆ ಮಾಡಿತು. ಲಿಸ್ಟಿಂಗ್ ನಂತರದ ಆರಂಭಿಕ ದಿನಗಳಲ್ಲಿ ಷೇರಿನ ಬೆಲೆ ರೂ.169 ರವರೆಗೂ ಏರಿಕೆ ಕಂಡು ಸಧ್ಯ ರೂ.69 ರ ಸಮೀಪವಿದೆ. ಈ ಕಂಪನಿಯು ಐಪಿಒ ವಿತರಣೆಯ ಉದ್ದೇಶದಿಂದ ಮುಂಚಿನ ತಿಂಗಳುಗಳಲ್ಲಿ ಕಂಪನಿಯನ್ನು ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಆಗಿ ಪರಿವರ್ತಿಸಿಕೊಂಡಿತು.
ರೊಲೆಕ್ಸ್ ರಿಂಗ್ಸ್ ಲಿಮಿಟೆಡ್: ಈ ಕಂಪನಿ ಜುಲೈ 2021 ರಲ್ಲಿ ರೂ.10 ರ ಮುಖಬೆಲೆಯ ಪ್ರತಿ ಷೇರಿಗೆ ರೂ.900 ರಂತೆ ವಿತರಿಸಿತು. ಇದೇ ಉದ್ದೇಶಕ್ಕಾಗಿ 2021 ರಲ್ಲಿ ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಆಗಿ ಪರಿವರ್ತನೆಗೊಂಡಿದೆ.
ಕೃಷ್ಣ ಡಯಾಗ್ನಾಸ್ಟಿಕ್ಸ್ ಲಿಮಿಟೆಡ್: ಈ ಕಂಪನಿಯು 2021 ರ ಆಗಷ್ಟ್ ನಲ್ಲಿ ಪ್ರತಿ ರೂ.5 ರ ಮುಖಬೆಲೆಯ ಷೇರನ್ನು ರೂ.954 ರಂತೆ ವಿತರಿಸಿತು. ಸಧ್ಯ ಈ ಷೇರಿನ ಬೆಲೆ ರೂ.568 ರ ಸಮೀಪವಿದೆ. ಈ ಕಂಪನಿಯೂ ಸಹ 2021 ರಲ್ಲಿ ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಆಗಿ ಪರಿವರ್ತನೆಗೊಂಡಿದೆ.
ಕಾರ್ ಟ್ರೇಡ್ ಟೆಕ್ ಲಿಮಿಟೆಡ್: ಪೇಟೆಯು ಚುರುಕಾದ ಚಟುವಟಿಕೆಯಲ್ಲಿದ್ದ ಸಂದರ್ಭವನ್ನು ಬಳಸಿಕೊಳ್ಳಲುಸಫಲವಾದ ಈ ಕಂಪನಿಯ ಆರಂಭಿಕ ಷೇರು ವಿತರಣೆಯನ್ನು ಆಗಸ್ಟ್ 2021 ರಲ್ಲಿ ಪ್ರತಿ ರೂ.10 ರ ಮುಖಬೆಲೆಯ ಷೇರನ್ನು ರೂ.1,618 ರಂತೆ ವಿತರಿಸಲಾಯಿತು. ವಿತರಣೆಗೂ ಮುಂಚಿನ ತಿಂಗಳುಗಳಲ್ಲಿ ಕಂಪನಿಯನ್ನು ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಆಗಿ ಪರಿವರ್ತಿಸಲಾಗಿದೆ. ಸಧ್ಯ ಈ ಷೇರಿನ ಬೆಲೆ ರೂ.696 ರ ಸಮೀಪವಿದೆ. ಈ ಕಂಪನಿಯು ಕಳೆದ ತ್ರೈಮಾಸಿಕಗಳು ಹಾನಿಕಾರಕ ಹಂತದಲ್ಲಿದೆ.
ಪಿ ಬಿ ಫಿನ್ ಟೆಕ್ ಲಿಮಿಟೆಡ್ ( ಪಾಲಿಸಿ ಬಜಾರ್): ಈ ಕಂಪನಿಯು ಕಳೆದ ನವೆಂಬರ್ ತಿಂಗಳಲ್ಲಿ ರೂ.2 ರ ಮುಖಬೆಲೆಯ ಷೇರನ್ನು ರೂ.980 ರಂತೆ ಐ ಪಿ ಒ ಮೂಲಕ ವಿತರಿಸಲಾಯಿತು. ಸಧ್ಯ ಈ ಷೇರಿನ ಬೆಲೆ ರೂ.590 ರ ಸಮೀಪವಿದ್ದು, ಕಳೆದೆರಡು ತ್ರೈಮಾಸಿಕಗಳೂ ಹಾನಿಕಾರಕ ಹಂತದಲ್ಲಿರುವ ಈ ಕಂಪನಿ ಐ ಪಿ ಒ ಗೂ ಮುಂಚಿನ ತಿಂಗಳುಗಳಲ್ಲಿ ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಆಗಿ ಪರಿವರ್ತನೆಗೊಂಡಿದೆ.
ಗೋ ಫ್ಯಾಶನ್ (ಇಂಡಿಯಾ) ಲಿಮಿಟೆಡ್: ನವೆಂಬರ್ 2021 ರಲ್ಲಿ ಪ್ರತಿ ರೂ.10 ರ ಮುಖಬೆಲೆ ಷೇರಿಗೆ ರೂ.690 ರಂತೆ ಐಪಿಒ ಮೂಲಕ ವಿತರಣೆ ಮಾಡಿದ ಈ ಕಂಪನಿ, ವಿತರಣೆಗೂ ಮುನ್ನ ತನ್ನಸ್ಟಾಟಸ್ ನ್ನು ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಆಗಿ ಪರಿವರ್ತನೆಗೊಂಡಿದೆ.
ಐ ಪಿ ಒ ಗೂ ಮುನ್ನ ಷೇರಿನ ಮುಖಬೆಲೆ ಸೀಳಿಕೆಗೆ ಮುಂದಾದ ಕಂಪನಿಗಳು:
ವಿಜಯ ಡಯಾಗ್ನಸ್ಟಿಕ್ ಸೆಂಟರ್ ಲಿಮಿಟೆಡ್: ಈ ಕಂಪನಿಯು 2021 ರ ಆಗಸ್ಟ್ ನಲ್ಲಿ ರೂ.1 ರ ಮುಖಬೆಲೆಯ ಷೇರನ್ನು ರೂ.531 ರಂತೆ ಐಪಿಒ ಮೂಲಕ ವಿತರಿಸಲಾಯಿತು. ಈ ಕಂಪನಿಯು ಐಪಿಒ ಗೂ ಮುಂಚಿನ ತಿಂಗಳುಗಳಲ್ಲಿ ಪ್ರತಿ ರೂ.10 ರಮುಖಬೆಲೆಯ ಷೇರನ್ನು ರೂ.1 ಕ್ಕೆ ಸೀಳಿಕೆ ಮಾಡಿದೆ. ಹಾಗಾಗಿ ರೂ.1 ರ ಮುಖಬೆಲೆ ಷೇರನ್ನು ರೂ.531 ಕ್ಕೆ ವಿತರಿಸಿದೆ.
ಒನ್ 97 ಕಮ್ಯುನಿಕೇಶನ್ಸ್ ಲಿಮಿಟೆಡ್ : ಹಿಂದಿನ ವರ್ಷ ನವೆಂಬರ್ ನಲ್ಲಿ ಪ್ರತಿ ರೂ1 ರ ಮುಖಬೆಲೆಯ ಷೇರನ್ನು ರೂ.2,150 ರಂತೆ ಐಪಿಒ ಮೂಲಕ ವಿತರಣೆ ಮಾಡಿದೆ. ಆದರೆ ಅದಕ್ಕೂ ಮುಂಚೆ ಜೂನ್ ತಿಂಗಳಲ್ಲಿ ರೂ 10 ರ ಮುಖಬೆಲೆಯನ್ನು ರೂ.1 ಕ್ಕೆ ಸೀಳಿದೆ.
ಐ ಪಿ ಒ ಗೂ ಮುನ್ನ ಬೋನಸ್ ಷೇರು ವಿತರಿಸಿ ಬೊಕ್ಕಸ ಬರಿದು ಮಾಡಿದ ಕಂಪನಿಗಳು:
ಕಂಪನಿಗಳ ಬಂಡವಾಳ ಮತ್ತು ರಿಸರ್ವ್ ನಿಧಿಯನ್ನಾಧರಿಸಿ ಅವುಗಳ ಪುಸ್ತಕ ಮೌಲ್ಯವನ್ನು ನಿರ್ಧರಿಸಲಾಗುವುದು. ಆದರೆ ಕೆಲವು ಕಂಪನಿಗಳು ತಮ್ಮ ಷೇರುಗಳನ್ನು ಐ ಪಿ ಒ ಮೂಲಕ ವಿತರಿಸುವ ಮುಂಚೆ ತಮ್ಮಲ್ಲಿರುವ ಮೀಸಲು ನಿಧಿಯನ್ನು ಐಪಿಒ ಗೂ ಮುಂಚಿನ ಸೀಮಿತ ಷೇರುದಾರರಿಗೆ ಬೋನಸ್ ಷೇರು ವಿತರಿಸುವ ಮೂಲಕ ಬೊಕ್ಕಸವನ್ನು ಬರಿದುಮಾಡಿ ನಂತಹ ಅತಿ ಹೆಚ್ಚಿನ ಪ್ರೀಮಿಯಂನಲ್ಲಿ ವಿತರಿಸಲು ಮುಂದಾಗಿ ಯಶಸ್ವಿಯಾಗಿವೆ. ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ.
ಝೋಮೆಟೊ ಲಿಮಿಟೆಡ್: ಈ ಕಂಪನಿ ಕಳೆದ ವರ್ಷದ ಜುಲೈನಲ್ಲಿ ಆರಂಭಿಕ ಷೇರು ವಿತರಣೆಗೂ ಮುನ್ನಾ ತಿಂಗಳುಗಳಲ್ಲಿ ಪ್ರತಿ ಒಂದು ಷೇರಿಗೆ 6,699 ಬೋನಸ್ ಷೇರುಗಳನ್ನು ವಿತರಿಸಿ, ಬೊಕ್ಕಸವನ್ನು ಕರಗಿಸಿದೆ. ನಂತರ ಐ ಪಿ ಒ ಮೂಲಕ ಪ್ರವರ್ತಕರು 375 ಕೋಟಿ ಷೇರುಗಳನ್ನು ಮಾರಾಟಮಾಡಿ ಎರಡು ವಿಧದ ಲಾಭ ಪಡೆದುಕೊಂಡಿದ್ದಾರೆ. ಅಲ್ಲದೆ ಈ ಕಂಪನಿಯು ನಿರಂತರವಾಗಿ ಹಾನಿಗೊಳಗಾಗಿದ್ದರೂ, ವಹಿವಾಟಿನ ವೃದ್ಧಿಯಾಗಿದೆ ಎಂಬ ಅಂಶದೊಂದಿಗೆ ಮಾಧ್ಯಮಗಳಲ್ಲಿಪ್ರಚಾರ ನೀಡಲಾಗುತ್ತಿದೆ.
ವಿಜಯ ಡಯಾಗ್ನಸ್ಟಿಕ್ ಸೆಂಟರ್ ಲಿಮಿಟೆಡ್: ಈ ಕಂಪನಿಯು 2021 ರ ಆಗಸ್ಟ್ ನಲ್ಲಿ ರೂ.1 ರ ಮುಖಬೆಲೆಯ ಷೇರನ್ನು ರೂ.531 ರಂತೆ ಐಪಿಒ ಮೂಲಕ ವಿತರಿಸಲಾದ ಈ ಕಂಪನಿ ಮೇ 2021 ರಲ್ಲಿ ಪ್ರತಿ 4 ಷೇರಿಗೆ 5 ಬೋನಸ್ ಷೇರು ವಿತರಿಸಿ ಬೊಕ್ಕಸವನ್ನು ಬರಿದಾಗಿಸಿ ನಂತರ ಐಪಿಒ ತೇಲಿಬಿಟ್ಟಿದೆ. ಈಗ ಈ ಷೇರಿನ ಬೆಲೆ ವಿತರಣೆ ಬೆಲೆಗಿಂತ ಬಹಳ ಕಡಿಮೆಯಲ್ಲಿದೆ. ಅಂದರೆ ರೂ.328 ರ ಸಮೀಪವಿದೆ.
ಡೆಲ್ಲಿವರಿ ಲಿಮಿಟೆಡ್: ಈ ವರ್ಷದ ಮೇ ತಿಂಗಳಲ್ಲಿ ಪ್ರತಿ ರೂ.1 ರ ಮುಖಬೆಲೆ ಷೇರಿಗೆ ರೂ.487 ರಂತೆ ತೇಲಿಬಿಟ್ಟ ಆರಂಭಿಕ ಷೇರು ವಿತರಣೆಯು ಅಂತಿಮ ಕ್ಷಣದಲ್ಲಿ ಯಶಸ್ವೀಗೊಳಿಸಲಾಯಿತು. ಇದಕ್ಕೂ ಹಲವು ತಿಂಗಳುಗಳ ಮುಂಚೆ ಈ ಕಂಪನಿಯು ಪ್ರತಿ 1 ಷೇರಿಗೆ 9 ಷೇರುಗಳ ಬೋನಸ್ ವಿತರಣೆ ಮಾಡಿಕೊಂಡು, ನಂತರ ಈ ಹಾನಿಗೊಳಗಾಗಿರುವ ಕಂಪನಿಯು ಅತಿ ಹೆಚ್ಚಿನ ಬೆಲೆಯಲ್ಲಿ ವಿತರಣೆ ಮಾಡಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ನಿರಂತರವಾಗಿ ಹಾನಿಗೊಳಗಾಗಿರುವ ಕಂಪನಿಗಳನ್ನು, ಐ ಪಿ ಒ ಗೂ ಮುಂಚೆ ಇರುವ ಮೀಸಲು ನಿಧಿಯನ್ನು ಕರಗಿಸಿದ ಕಂಪನಿಗಳನ್ನು, ಐ ಪಿ ಒ ವಿತರಣೆಯ ನೆಪದಿಂದಲೇ ಮುಂಚಿತವಾಗಿ ಷೇರಿನ ಮುಖಬೆಲೆಯನ್ನು ಸೀಳುವ ಪ್ರಕ್ರಿಯೆಗೊಳಗಾದ ಕಂಪನಿಗಳನ್ನು, ವಿತರಣೆ ಬೆಲೆಗಿಂತ ಭಾರಿ ಪ್ರಮಾಣದಲ್ಲಿ ಹೂಡಿಕೆಯನ್ನು ಕರಗಿಸಿದ ಕಂಪನಿಗಳನ್ನು, ಐ ಪಿ ಒ ಉದ್ದೇಶದಿಂದಲೇ ಪ್ರೈವೇಟ್ ಲಿಮಿಟೆಡ್ ನಿಂದ ಪಬ್ಲಿಕ್ ಲಿಮಿಟೆಡ್ ಕಂಪನಿಗಳನ್ನಾಗಿ ಪರಿವರ್ತಿಸಿಕೊಂಡು ಅಗಾಧ ಪ್ರೀಮಿಯಂ ನಿಗಧಿಪಡಿಸಿ ಹೂಡಿಕೆದಾರರನ್ನು ದಾರಿತಪ್ಪಿಸಿದ ಕಂಪನಿಗಳ ಬಗ್ಗೆ, ಅವುಗಳ ಷೇರಿನ ಬೆಲೆಗಳು ನಿರರ್ಗಳವಾಗಿ ಕರಗಿಸಿದ ಬಗ್ಗೆ ಚಕಾರವೆತ್ತದೆ ಕೇವಲ ಎಲ್ ಐ ಸಿ ಬಗ್ಗೆ ನಕಾರಾತ್ಮಕವಾಗಿ ಬಿಂಬಿಸುವುದು ಸರಿಯಲ್ಲ.
ಎಲ್ ಐ ಸಿ ಬಗ್ಗೆ ಒಂದು ಪ್ರಮುಖ ಅಂಶ ತಿಳಿಯಬೇಕಾದುದೆಂದರೆ ಮಾರ್ಚ್ 2022 ರ ಅಂತ್ಯದಲ್ಲಿ ಅದು ಗಳಿಸಿದ ಲಾಭದ ಪ್ರಮಾಣ ರೂ.7.21 ಲಕ್ಷ ಕೋಟಿಯಲ್ಲಿ ಶೇ.40 ರಷ್ಡರ ಕೊಡುಗೆ ಅದರ ಹೂಡಿಕೆಯಿಂದ ಗಳಿಸಿದ್ದಾಗಿದೆ.ಉಳಿದದ್ದು ಪ್ರೀಮಿಯಂಗ ಸಂಬಂಧಪಟ್ಟಿದ್ದಾಗಿದೆ. ಅಂದರೆ ಆ ಕಂಪನಿಯ ಹೂಡಿಕೆಯ ಗಾತ್ರ ಮತ್ತು ಸ್ವರೂಪದ ಬಗ್ಗೆ ಅರಿವಾಗುವುದು. ಅಲ್ಲದೆ ಈ ಷೇರಿನ ಮುಖಬೆಲೆ ರೂ.10 ಇದ್ದು ಆಕರ್ಷಣೀಯ ಲಾಭ ಗಳಿಸುತ್ತಿದೆ. ಅದೇ ಇತ್ತೀಚೆಗೆ ಪ್ರತಿ ಷೇರಿಗೆ ರೂ.900 ರಂತೆ ತೇಲಿಬಿಟ್ಟ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರನ್ಸ್ ಕಂಪನಿ ಷೇರು ಈಗ ರೂ.690 ರ ಸಮೀಪವಿದ್ದು ಅದರ ಬಗ್ಗೆ ಚಕಾರವೇ ಇಲ್ಲ. ಒಟ್ಟಿನಲ್ಲಿ ಸಣ್ಣ ಹೂಡಿಕೆದಾರರು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ತಮ್ಮ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ ಮಾತ್ರ ಉತ್ತಮ ಪ್ರತಿಫಲ ಪಡೆಯಲು ಸಾಧ್ಯ ಅಲ್ಲವೇ?
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.