ಸುಮಾ ವೀಣಾ
ತನ್ನ ನೋಡಲಿ ಎಂದು ಕನ್ನಡಿ ಕರೆಯುವುದೆ?- ಇದು ಸರ್ವಜ್ಞನ ವಚನದ ಸಾಲು. ಲೋಕ ನೀತಿಯನ್ನು ಹೇಳುವ ಸಂದರ್ಭದಲ್ಲಿ ಈ ಮಾತುಗಳನ್ನು ಉದ್ಗರಿಸಿದ್ದಾನೆ. ಸರ್ವಜ್ಞ ಅರ್ಥವತ್ತಾದ ಹೋಲಿಕೆಗಳನ್ನು ನೀಡುವ ಸಾರ್ವಕಾಲಿಕ ತ್ರಿಪದಿಗಳಿಂದಲೇ ಹೆಸರಾಗಿರುವವನು.
ಜ್ಞಾನಿ ಎಂದರೆ ಈತನ ಪ್ರಕಾರ ಮಹಾತ್ಮನೇ ಸರಿ ಹಾಗಾಗಿ ಈತ ಲೋಕದ ಪಾಲಿಗೆ ಕನ್ನಡಿಯಂತೆ ಇರುವವನು. ಕನ್ನಡಿಯನ್ನು ನೋಡಿಕೊಂಡು ನಾವು ಅಲಂಕಾರ ಮಾಡಿಕೊಂಡು ಸುಂದರವಾಗಿ ಕಾಣಿಸುತ್ತೇವೆ. ಕನ್ನಡಿಯನ್ನು ನೋಡಿಕೊಂಡಾಗಲೆ ನಮ್ಮ ಓರೆಕೋರೆಗಳು ತಿಳಿಯುತ್ತವೆ. ವಿಶಿಷ್ಟ ಮಾರ್ಗದಾಳು ಈ ಕನ್ನಡಿ. ಹಾಗೆಯೇ ನಮ್ಮ ಮನಸ್ಸಿನ ವ್ಯಕ್ತಿತ್ವದ ಓರೆಕೋರೆಗಳು ತಿಳಿಯಬೇಕೆಂದರೆ ‘ಜ್ಞಾನಿ’ ಎಂಬ ‘ಕನ್ನಡಿ’ಯ ಬಳಿಗೆ ಹೋಗಬೇಕು ಅವನ ಮಾರ್ಗದರ್ಶನದಲ್ಲಿ ನಮ್ಮನ್ನು ತಿದ್ದಿಕೊಳ್ಳಬೇಕು ಸದ್ವಿಚಾರಗಳನ್ನು ಅಳವಡಿಸಿಕೊಳ್ಳಬೇಕು.
‘ಕನ್ನಡಿ’ ಯಾರ ಬಳಿಗೂ ಹೋಗಿ ‘‘ನಿಮ್ಮಲ್ಲಿ ಲೋಪವಿದೆ ಸರಿಮಾಡಿಕೊಳ್ಳಿ! ಅಲಂಕಾರ ಮಾಡಿಕೊಳ್ಳಿ’’ ಎಂದು ಬೆನ್ನು ಹತ್ತುವುದಿಲ್ಲ. ಹಾಗೆ ಗುರುವಾದವನು ಶಿಷ್ಯರನ್ನು ಹುಡುಕಿಕೊಂಡು ಹೋಗುವುದಿಲ್ಲ. ಶಿಷ್ಯರೆ ಗುರುವಿನ ಬಳಿಗೆ ಹೋಗಬೇಕು. ನಮ್ಮ ದೈಹಿಕ ಕಲ್ಮಷಗಳನ್ನು ತೊಳೆದುಕೊಳ್ಳಲು ಸ್ನಾನಕ್ಕೆ ನೀರನ್ನರಸಿ ಹೋಗುವಂತೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಆವರಿಸಿಕೊಂಡಿರುವ ಸಂಚನೆಗಳನ್ನು ಕಳೆಯಲು ಸನ್ಮಾರ್ಗದಲ್ಲಿ ನಡೆಯಲು ಜ್ಞಾನಿಗಳ ಹಿರಿಯರ , ಅನುಭವಿಗಳ ಮಾರ್ಗದರ್ಶನ ಬೇಕು.
‘ಜ್ಞಾನಿಯಾದವನು ಅರಿವಿನ ಸಾಗರ’ವಿದ್ದಂತೆ. ‘ತಿಳಿವಳಿಕೆ’ ಎಂಬ ಜ್ಞಾನ ಸರೋವರ’ದ ತಂಪನ್ನು ಕಂಪನ್ನು ಅನುಭವಿಸಬೇಕಾದರೆ ಸರೋವರದ ಬಳಿಗೆ ನಾವು ತೆರಳಲೆಬೇಕು. ಅಲ್ಲಿ ನಾವುಗಳು ಹಮ್ಮು ಬಿಮ್ಮುಗಳನ್ನು ಪ್ರತಿಷ್ಠೆಗಳನ್ನು ತೊರೆದು ಸ್ವಚ್ಛಂದ ಮನಸ್ಸಿನಲ್ಲಿ ವಿಹರಿಸಬೇಕು. ಲೋಪಗಳನ್ನು ಅಲ್ಲಿಯೇ ಮೌನವಾಗಿ ವಿಸರ್ಜಿಸಿಬಿಡಬೇಕು ಹಾಗಾದಾಗ ಯಾವುದೇ ಶೇಷಗಳು ಉಳಿಯದೆ ನಮ್ಮ ವ್ಯಕ್ತಿತ್ವಕ್ಕೆ ವಿಶೇಷ ಹೊಳಹು ಲಭ್ಯವಾಗುತ್ತದೆ.
‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬಂತೆ ಜ್ಞಾನಿಯಾದವನು ತನ್ನ ತಿಳಿವಿನ ಪ್ರದರ್ಶನ ಮಾಡುವುದಿಲ್ಲ . ನಿಧಿಯನ್ನು ಹುಡುಕಿ ಹೊರಡುವ ದ್ರವ್ಯ ನಿರೀಕ್ಷರಂತೆ ಜ್ಞಾನಾಪೇಕ್ಷಿಗಳು ಜ್ಞಾನವೆಂಬ ಸ್ವಯಂಪ್ರಕಾಶವನ್ನು ಹುಡುಕಿ ಹೊರಟು ಅದರ ಪ್ರಭೆಯಿಂದ ಅಜ್ಞಾನವನ್ನು ನೀಗಿಕೊಳ್ಳಬೇಕಿದೆ. ಕನ್ನಡಿ ದೈಹಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವಂತೆ ಜ್ಞಾನಿಯ ಸಂಗಾತ ನಮ್ಮ ತಿಳಿವಳಿಕೆಯನ್ನು ಸುಸೂಕ್ಷ್ಮಗೊಳಿಸುತ್ತದೆ.ಪರಿಪೂರ್ಣತೆಗೆ ಹಣತೆಯಾಗುತ್ತದೆ.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.