ಷೇರುಪೇಟೆಯಲ್ಲಿ ದಿನನಿತ್ಯ, ವಹಿವಾಟಿನ ದೃಷ್ಟಿಯಿಂದ ಹೊಸ ಹೊಸ ಕಾರಣಗಳು ಸೃಷ್ಟಿ ಯಾಗುತ್ತವೆ. ವಿಶೇಷವಾಗಿ ಜನ ಸಾಮಾನ್ಯರ ಆಸಕ್ತಿ ಹೆಚ್ಚುತ್ತಿರುವ ಈಗಿನ ದಿನಗಳಲ್ಲಿ ವೈವಿಧ್ಯಮಯ ರೀತಿಯ ಬೆಳವಣಿಗೆಗಳು ಪ್ರಭಾವಿಯಾಗುತ್ತವೆ.
2022-23 ಆರ್ಥಿಕ ವರ್ಷಾರಂಭದಿಂದಲೂ ವಿದೇಶೀ ವಿತ್ತೀಯ ಸಂಸ್ಥೆಗಳು ಮಾರಾಟದತ್ತಲೇ ಹೆಚ್ಚು ಒತ್ತು ನೀಡುತ್ತಿವೆ. ಈ ಆರ್ಥಿಕ ವರ್ಷದಲ್ಲಿ ಅಂದರೆ ಸುಮಾರು ಎರಡೂವರೆ ತಿಂಗಳಲ್ಲಿ ವಿದೇಶೀ ವಿತ್ತೀಯ ಸಂಸ್ಥೆಗಳು ವರ್ಷದ ಆರಂಭದ ಸಮಯ ಅಂದರೆ ಏಪ್ರಿಲ್ 3 ರಂದು ರೂ.1,152.21 ಕೋಟಿ, 4ರಂದು ರೂ.374.80. 28 ರಂದು ರೂ.743.22 ಕೋಟಿ ನಂತರ ಮೇ 30 ರಂದು ರೂ.502.08 ಕೋಟಿ ಮೌಲ್ಯದ ಷೇರುಗಳ ಖರೀದಿ ಬಿಟ್ಟರೆ ಉಳಿದಂತೆ ಎಲ್ಲಾ ದಿನಗಳೂ ಮಾರಾಟದ ಹಾದಿಯಲ್ಲಿ ಸಾಗಿವೆ. ಇದು ವಿದೇಶೀ ವಿತ್ತೀಯ ಸಂಸ್ಥೆಗಳ ಚಟುವಟಿಕೆಯ ಶೈಲಿಯಾಗಿದೆ.
ಸಂವೇದಿ ಸೂಚ್ಯಂಕ ಚಲನೆಯ ಶೈಲಿ:
ಪೇಟೆಯಲ್ಲಿ ಹೆಚ್ಚಿನ ಪಾಲು ವ್ಯವಹಾರಿಕ ಚಿಂತನೆಯ ಚಟುವಟಿಕೆಯೇ ಗುರಿಯಾಗಿದೆ ಎಂದು ತಿಳಿಯಲು ಸಂವೇದಿ ಸೂಚ್ಯಂಕದ (Sensex) ಚಲನೆಯ ಜಾಡು ಹಿಡಿದುಹೊರಟರೆ ಅರಿವಾಗುವುದು. ಮಾರ್ಚ್ 7 ರಂದು ಸೆನ್ಸೆಕ್ಸ್ 52,800 ರಲ್ಲಿದ್ದು ಅಂದು ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.241.10 ಲಕ್ಷ ಕೋಟಿಯಲ್ಲಿತ್ತು. ನಂತರದ ಒಂದು ತಿಂಗಳಲ್ಲಿ ಅಂದರೆ ಏಪ್ರಿಲ್ 8 ರಂದು ಸೆನ್ಸೆಕ್ಸ್ 59,446 ಕ್ಕೆ ಜಿಗಿದಿತ್ತು, ಆ ಸಮಯದಲ್ಲಿ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.274.10 ಲಕ್ಷ ಕೋಟೆಗೆ ಏರಿಕೆಯಾಗಿತ್ತು. ಅಲ್ಲಿಂದ ಒಂದು ತಿಂಗಳಾದ ನಂತರ ಅಂದರೆ ಮೇ 13 ರಂದು ಸೆನ್ಸೆಕ್ಸ್ ಮತ್ತೆ 52,793 ಪಾಯಿಂಟುಗಳಿಗೆ ಹಿಂದಿರುಗಿತು, ಅಂದು ಮತ್ತೆ ಬಂಡವಾಳೀಕರಣ ಮೌಲ್ಯವು ರೂ.241.34 ಲಕ್ಷ ಕೋಟಿಗೆ ಇಳಿಯಿತು.
ಜೂನ್ ತಿಂಗಳ 17 ರಂದು ಸೆನ್ಸೆಕ್ಸ್ 50,921.22 ಕ್ಕೆ ಕುಸಿದು ವಾರ್ಷಿಕ ಕನಿಷ್ಠದ ದಾಖಲೆ ನಿರ್ಮಿಸಿದೆ. ಅಂದಿನ ಬಂಡವಾಳೀಕರಣ ಮೌಲ್ಯವನ್ನು ರೂ.236.77 ಲಕ್ಷ ಕೋಟಿಗೆ ಜಾರುವಂತಾಯಿತು. ಈ ರೀತಿ ಒಂದೊಂದು ತಿಂಗಳಲ್ಲಿ ಒಂದೊಂದು ರೀತಿಯ ಏರಿಳಿತಗಳ ಪ್ರದರ್ಶನವು ಪೇಟೆಯಲ್ಲಿ ನಡೆಯುತ್ತಿರುವ ವ್ಯವಹಾರಿಕ ಚಟುವಟಿಕೆಗೆ ಹಿಡಿದ ಕನ್ನಡಿಯಾಗಿದೆ. ಕಾರಣ ಕಂಪನಿಗಳಲ್ಲಿ ಆಂತರಿಕವಾಗಿ ಇಷ್ಟು ಬದಲಾವಣೆಗಳನ್ನು ತರುವ ರೀತಿ ಬೆಳವಣಿಗೆಗಳೇನು ಇರದೆ ಕೇವಲ ಬಾಹ್ಯ ಕಾರಣಗಳ ಪ್ರಭಾವ, ಚಿಂತನೆಗಳೇ ಕಾರಣವಾಗಿವೆ
ಪೇಟೆಗಳು ಕುಸಿಯುತ್ತಿವೆ ಏಕೆ ?
ಷೇರುಪೇಟೆಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ. ಈ ರೀತಿಯ ಬೆಳವಣಿಗೆ ಕಾಣಲು ಮುಖ್ಯ ಕಾರಣ ತಾಂತ್ರಿಕ ಸೌಲಭ್ಯಗಳು ಒದಗಿಸುವ ಸೌಕರ್ಯಗಳು, ವಹಿವಾಟಿನ ವೇಗ ಮತ್ತು ಎಲ್ಲಕ್ಕೂ ಮಿಗಿಲಾಗಿ ಹಣದ ಅವಶ್ಯಕತೆಯಿದ್ದಾಗ, ಶೀಘ್ರ ನಗದೀಕರಿಸಬಹುದಾದ ಸ್ವತ್ತು ಷೇರು ಹೂಡಿಕೆಯಾಗಿದೆ. ಹಾಗಾಗಿ ಲಾಕ್ ಡೌನ್ ಸಮಯದಲ್ಲಿ ಎಲ್ಲಾ ವ್ಯವಹಾರಗಳು ಸ್ಥಗಿತಗೊಂಡಿದ್ದರೂ ಷೇರುಪೇಟೆಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಕಾರಣದಿಂದಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಜಿ ಎಸ್ ಟಿ ಮೂಲಕ ಉತ್ತಮ ಸಂಗ್ರಹಣೆಯೂ ಆಗುತ್ತಿತ್ತು. ಅಂದರೆ ಪರೋಕ್ಷವಾಗಿ ದೇಶ ಸೇವೆಯಾದಂತಿತ್ತು.
ಸೆನ್ಸೆಕ್ಸ್ ಏರಿಕೆಗೆ ಪ್ರಮುಖ ಕೊಡುಗೆ ಕೊಟ್ಟಿರುವುದೆಂದರೆ ವಿದೇಶೀ ವಿತ್ತೀಯ ಸಂಸ್ಥೆಗಳು. ಇವುಗಳಿಂದ ಬರುತ್ತಿದ್ದ ಹಣದ ಒಳಹರಿವು ಜೊತೆಗೆ ಸ್ಥಳೀಯವಾಗಿ ಸಣ್ಣ ಹೂಡಿಕೆದಾರರ ಮೂಲಕ ನೇರವಾಗಿ ಪೇಟೆಯತ್ತ ಹರಿದುಬರುತ್ತಿದ್ದ ಹಣದೊಂದಿಗೆ ಎಸ್ ಐ ಪಿ ಗಳ ಮೂಲಕ ಹರಿದುಬಂದ ಹಣ ಎಲ್ಲವೂ ಸೇರಿ ಪೇಟೆಯಲ್ಲಿ ಬೇಡಿಕೆ ಹೆಚ್ಚಾಯಿತು. ಮಾಧ್ಯಮಗಳಲ್ಲಿನ ವಿಶ್ಲೇಷಣೆಗಳು, ಬ್ರೋಕಿಂಗ್ ಹೌಸ್ ಗಳ ರೇಟಿಂಗ್ ಗಳು, ಅಪ್ ಗ್ರೆಡೇಷನ್ ಗಳು, ಕಾರ್ಪೊರೇಟ್ ಸಾಧನೆಗಳೂ ಸೇರಿ ಪೇಟೆಯನ್ನು ವಿಜೃಂಭಿಸುವಂತೆ ಮಾಡಿದವು.
ಆ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಎಲ್ಲಾ ಸರ್ಕಾರಗಳೂ ಫ್ರೀಮನಿ ಪಾಲಿಸಿಯನ್ನು ಅಳವಡಿಸಿಕೊಂಡು ಹರಿದಾಡುವ ಹಣದಿಂದ ಜನತೆಗೆ ಸಾಂಕ್ರಾಮಿಕದಿಂದ ತೊಂದರೆಯಾಗದೆ ಇರುವ ರೀತಿ ನೋಡಿಕೊಂಡವು. ಈ ಕಾರಣದಿಂದ ಹಣದುಬ್ಬರದ ಪ್ರಮಾಣ ಹೆಚ್ಚಾಗತೊಡಗಿತು. ಸಾಂಕ್ರಾಮಿಕದ ಪ್ರಭಾವ ಕ್ಷೀಣಿತಗೊಂಡು ಉದ್ಯಮಗಳು, ಜನಜೀವನ ಸಹಜತೆಗೆ ಮರಳಿದ ಕಾರಣ, ಆ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಬಡ್ಡಿದರವನ್ನು ಹೆಚ್ಚಿಸಲು ಮುಂದಾಯಿತು. ಆದರೂ ಪೇಟೆಗಳು ಸಹಜತೆಯೊಂದಿಗೆ ಸಾಗಿದವು. ಆದರೆ ಎರಡನೇ ಬಾರಿ ಬ್ಯಾಂಕ್ ಬಡ್ಡಿದರದೊಂದಿಗೆ ರೆಪೋದರವನ್ನು ಹೆಚ್ಚಿಸಿದ ಕಾರಣ, ಪೇಟೆಯಲ್ಲಿ ಹರಿದಾಡುವ ಹಣದಲ್ಲಿ ರೂ.83 ಸಾವಿರ ಕೋಟಿಯನ್ನು ಹೀರಿಕೊಂಡಿತು. ಜೊತೆಗೆ ಈ ಸಮಯದಲ್ಲಿ ತೇಲಿಬಂದ ಎಲ್ ಐ ಸಿ ಆಫ್ ಇಂಡಿಯಾದ ಆರಂಭಿಕ ಷೇರು ವಿತರಣೆ ಮೂಲಕ ಸುಮಾರು ರೂ.20 ಸಾವಿರ ಕೋಟಿ ಹಣ ಪೇಟೆಯಿಂದ ಹಿಂದೆ ಸರಿಯಿತು. ಇವೆಲ್ಲಾ ಸಾಲದೆಂಬಂತೆ ಏಪ್ರಿಲ್ ನಲ್ಲಿದ್ದ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.274.10 ಲಕ್ಷ ಕೋಟಿಯಿಂದ ಶುಕ್ರವಾರ ರೂ.236.77 ಲಕ್ಷಕೋಟಿಗೆ ಜಾರಿ ಸುಮಾರು ರೂ.37 ಲಕ್ಷಕೋಟಿಗೂ ಹೆಚ್ಚಿನ ಹಣ ಕರಗಿ ಹೋಯಿತು. ಹೀಗಾಗಿ ಪೇಟೆಯಲ್ಲಿ ಸುಲಭ ಹಣ ಮಾಯವಾಗಿ, ಶ್ರಮಕ್ಕನುಗುಣವಾದ ಹಣ ಎಂಬ ವಾತಾವರಣ ನಿರ್ಮಾಣವಾಗಿದ್ದು, ವಿದೇಶೀ ವಿತ್ತೀಯ ಸಂಸ್ಥೆಗಳ ಮಾರಾಟವೂ ಇದಕ್ಕೆ ಪೂರಕವಾದ ವಾತಾವರಣ ಸೃಷ್ಠಿಯಾಗಿ ಕುಸಿತದ ಪ್ರಭಾವ ಹೆಚ್ಚಿಸಿದೆ.
ಪೇಟೆಯಲ್ಲಿ ಹೀಗಾಗಿರಬಹುದೇ ?
ಶುಕ್ರವಾರದ ಚಟುವಟಿಕೆಯನ್ನೊಮ್ಮೆ ಗಮನಿಸಿದಾಗ ಇತ್ತೀಚೆಗೆ ಐ ಪಿ ಒ ವಿತರಣೆ ಮೂಲಕ ಷೇರುಪೇಟೆ ಪ್ರವೇಶಿಸಿದ ಅನೇಕ ಕಂಪನಿಗಳು ಹೆಚ್ಚಿನ ಸಂಖ್ಯಾಗಾತ್ರದ ವಹಿವಾಟಿನೊಂದಿಗೆ ವಿಲೇವಾರಿ ಪ್ರಮಾಣವೂ ಹೆಚ್ಚಿದೆ. ಅಂದರೆ ಕೆಲವು ಕ್ವಾಲಿಫೈಡ್ ಇನ್ಸ್ ಟಿಟ್ಯೂಷನ್ ಗಳು ತಮ್ಮ ಷೇರುಗಳನ್ನು, ಆಂಕರ್ ಇನ್ವೆಸ್ಟರ್ ಕೋಟಾದ ಷೇರುಗಳನ್ನು ಲಾಕ್ ಇನ್ ಅವಧಿ ಮುಗಿದ ಕಾರಣ ಮಾರಾಟಮಾಡಿರುವ ಸಾಧ್ಯತೆ ಹೆಚ್ಚಿರಬೇಕು ಎಂದೆನಿಸುತ್ತದೆ.
- ಮೇ ತಿಂಗಳಲ್ಲಿ ಪ್ರತಿ ರೂ.1 ರ ಮುಖಬೆಲೆಯ ಷೇರಿಗೆ ರೂ.487 ರಂತೆ ಆರಂಭಿಕ ಷೇರು ವಿತರಣೆಮಾಡಿ ಪೇಟೆಯಲ್ಲಿ ಚಟುವಟಿಕೆಗೆ ನೋಂದಾಯಿಸಿಕೊಂಡಿದೆ. ಈ ಕಂಪನಿಯು ಲೀಸ್ಟಿಂಗ್ ಆದ ನಂತರದ ಆರಂಭಿಕ ದಿನಗಳಲ್ಲಿ ಅಂದರೆ 2ನೇ ಜೂನ್ ರಂದು ರೂ.600 ರ ಗಡಿದಾಟಿತ್ತಾದರೂ ಶುಕ್ರವಾರ 17 ರಂದು ಷೇರು ಮಾರಾಟದ ಒತ್ತಡದಿಂದ ರೂ.457 ರವರೆಗೂ ಕುಸಿದು ರೂ.470 ರಲ್ಲಿ ಕೊನೆಗೊಂಡು ವಿತರಣೆಬೆಲೆಗೂ ಕಡಿಮೆ ಬೆಲೆಯಲ್ಲಿ ಕೊನೆಗೊಂಡಿದೆ. ಇದಲ್ಲದೆ ಅಂದು ವಹಿವಾಟಾದ ಸಂಖ್ಯೆಯೊಂದಿಗೆ ವಿಲೇವಾರಿಯಾದ ಷೇರುಗಳ ಗಾತ್ರ ಶೇ.60.21 ರಷ್ಟು ಎಂಬುದು ಗಮನಾರ್ಹ. ಹಿಂದಿನ ಮೂರು ವರ್ಷಗಳಲ್ಲೂ ಹಾನಿಗೊಳಗಾಗಿದ್ದಂತಹ ಈ ಕಂಪನಿಯಿಂದ ಈ ಪ್ರಮಾಣದ ನಿರ್ಗಮನ ಸೋಜಿಗವೇನಲ್ಲವೆಂದೆನಿಸುತ್ತದೆ.
- ಡಿಸೆಂಬರ್ ತಿಂಗಳಲ್ಲಿ ರೂ.10 ರ ಮುಖಬೆಲೆಯ ಷೇರನ್ನು ರೂ.900 ರಂತೆ ವಿತರಿಸಿದ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರನ್ಸ್ ಕಂಪನಿ ಲಿಮಿಟೆಡ್ ಲೀಸ್ಟಿಂಗ್ ಆದ ದಿನಗಳಲ್ಲಿ ಷೇರಿನ ಬೆಲೆ ರೂ.940 ರವರೆಗೂ ಏರಿಕೆ ಕಂಡಂತಹ ಷೇರು. ನಂತರದ ದಿನಗಳಲ್ಲಿ ಅಂದರೆ ಮಾರ್ಚ್ ನಲ್ಲಿ ರೂ.583 ರ ಸಮೀಪದವರೆಗೂ ಕುಸಿದಿತ್ತು. 17ನೇ ಶುಕ್ರವಾರದಂದು ಷೇ ಮರಿನ ಬೆಲೆ ರೂ.650 ರ ಸಮೀಪದಿಂದ ರೂ.605 ರವರೆಗೂ ಕುಸಿದು ಅಂತ್ಯದಲ್ಲಿ ನ್ಯಾಶನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ರೂ.634 ರಲ್ಲಿ ಕೊನೆಗೊಂಡು ಶೇ.64.46 ರಷ್ಟು ವಿಲೇವಾರಿಯಾಗಬಹುದಾದ ವಹಿವಾಟು, ಬಿ ಎಸ್ ಇ ಯಲ್ಲಿ ರೂ.620 ರ ಸಮೀಪಕೊನೆಗೊಂಡು ಶೇ.70.30 ರಷ್ಟು ವಿಲೇವಾರಿ ವಹಿವಾಟಾಗಿರುವುದು ಗಮನಾರ್ಹ.
- ಹಾಗೆಯೇ ಅಕ್ಟೋಬರ್ ತಿಂಗಳಲ್ಲಿ ಪ್ರತಿ ರೂ.1 ರ ಮುಖಬೆಲೆಯ ಷೇರಿಗೆ ರೂ.1,125 ರಂತೆ ವಿತರಿಸಿದ ನೈಕಾ ಕಂಪನಿಯ ಷೇರೂ ಸಹ ರೂ.1,412 ರಿಂದ ಆರಂಭಿಸಿ ಮಧ್ಯಂತರದಲ್ಲಿ ರೂ.1,312 ರವರೆಗೂ ಕುಸಿದು ರೂ.1,389 ರಲ್ಲಿ ಕೊನೆಗೊಂಡಿತು. ವಿಲೇವಾರಿಯಾದ ಷೇರುಗಳ ಸಂಖ್ಯೆಯು ಸಹ ಶೇ.53.97 ರಷ್ಟಿತ್ತು.
ವ್ಯವಹಾರಿಕತೆ ಹೀಗೂ ಇರುತ್ತದೆಯೇ?
ನವೆಂಬರ್ 2021 ರಲ್ಲಿ ಪ್ರತಿ ರೂ.1 ರ ಮುಖಬೆಲೆಯ ಷೇರನ್ನು ರೂ.2,150 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಕಂಪನಿ. ಆ ಸಂದರ್ಭದಲ್ಲಿ ಕಂಪನಿಯ ಪ್ರವರ್ತಕರು ಸಹ ರೂ.402 ಕೋಟಿ ಮೌಲ್ಯದ ಷೇರುಗಳನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟಮಾಡಿದ್ದರು. ಲೀಸ್ಟಿಂಗ್ ಆದ ನಂತರದಲ್ಲಿ ಈ ಷೇರು ತನ್ನ ವಿತರಣೆಬೆಲೆಯನ್ನು ತಲುಪದಾಯಿತು. ಮೇ ತಿಂಗಳಲ್ಲಿ ಷೇರಿನ ಬೆಲೆ ರೂ.510 ರ ವರೆಗೂ ಕುಸಿದಿತ್ತು. ಮೇ ತಿಂಗಳ ಅಂತ್ಯದಲ್ಲಿ ಷೇರಿನ ಬೆಲೆ ರೂ.630 ರ ಸಮಯದಲ್ಲಿದ್ದಾಗ ಕಂಪನಿಯ ಪ್ರವರ್ತಕರು 1.70 ಲಕ್ಷ ಷೇರುಗಳನ್ನು ರೂ.11 ಕೋಟಿ ಮೌಲ್ಯದಲ್ಲಿಖರೀದಿಸಿದ್ದಾರೆ. ರೂ.2,150 ರಂತೆ ಮಾರಾಟಮಾಡಿದ ಷೇರನ್ನು ರೂ.630 ರಂತೆ ಖರೀದಿಸಿ, ಕೇವಲ ಕೆಲವೇ ತಿಂಗಳಲ್ಲಿ ಈ ಪ್ರಮಾಣದ ಆದಾಯ ಗಳಿಸಲು ಷೇರುಪೇಟೆ ಹೇಗೆ ಒದಗಿಸಬಹುದು ಎಂಬುದನ್ನು ತಿಳಿಯಬೇಕು. ವಿಶೇಷವಾಗಿ ಹೊಸದಾಗಿ ಪೇಟೆಯನ್ನು ಪ್ರವೇಶೀಸಿದವರಿಗೆ ಒಂದು ಉದಾಹರಣೆಯಾಗಿದೆ.
ಈಗಿನ ಪರಿಸ್ಥಿತಿ ಇದಾಗಿರಬಹುದೇ?
ಇದುವರೆಗಿನ ಪೇಟೆಯ ತೇಜೀ ವಾತಾವರಣವು ವೇತನದಾರರ ಮಾಸಾರಂಭದ ಪರಿಸ್ಥಿತಿಯಂತೆ ಸುಲಭವಾಗಿ ವೆಚ್ಚಮಾಡುವ ವಾತಾವರಣವಾಗಿತ್ತು. ಸಧ್ಯದ ಪರಿಸ್ಥಿತಿಯು ಮಾಸಾಂತ್ಯದ ಬಿಗಿ ಆರ್ಥಿಕತೆಯ ವಾತಾವರಣವಾಗಿದ್ದು, ನಂತರ ಮಾಸಾರಂಭವಾಗಿ ವೇತನದ ದಿನ ಬರಲೇಬೇಕಲ್ಲವೇ?
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.