19.5 C
Karnataka
Thursday, November 21, 2024

    B R Ambedkar School Of Economics -ಬೇಸ್ ವಿವಿ ಕ್ಯಾಂಪಸ್ ಲೋಕಾರ್ಪಣೆ ಮಾಡಿದ ಮೋದಿ; ಅಂಬೇಡ್ಕರ್ ಪ್ರತಿಮೆ ಅನಾವರಣ, ಮೇಲ್ದರ್ಜೆಗೇರಿಸಿರುವ 150 ಐಟಿಐ ಉದ್ಘಾಟನೆ

    Must read

    BENGALURU JUNE 20

    ಇಲ್ಲಿನ ಜ್ಞಾನಭಾರತಿ ಆವರಣದಲ್ಲಿರುವ `ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ’ದ (ಬೇಸ್) ನೂತನ ಕ್ಯಾಂಪಸ್ಸನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

    ಎರಡು ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ಸೋಮವಾರ ಬೆಂಗಳೂರಿಗೆ ಬಂದಿಳಿದ ಮೋದಿಯವರ ಈ ಕಾರ್ಯಕ್ರಮದಲ್ಲಿ ಭಾಷಣಗಳಿರಲಿಲ್ಲ; ಘೋಷಣೆಗಳಿರಲಿಲ್ಲ. ಮೌನದ ಚೆಲುವಿನಲ್ಲಿ ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದುದ್ದಕ್ಕೂ ಬೇಸ್ ಕ್ಯಾಂಪಸ್ಸಿನಲ್ಲಿ ಅವ್ಯಕ್ತ ಸಂಭ್ರಮ ಮನೆಮಾಡಿತ್ತು.

    ಕೊಮ್ಮಘಟ್ಟದಿಂದ ನೇರವಾಗಿ ಬೇಸ್’ ಕ್ಯಾಂಪಸ್ ತಲುಪಿದ ಪ್ರಧಾನಿಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಗೌರವಾದರಗಳಿಂದ ಬರಮಾಡಿಕೊಂಡರು. ಬಳಿಕ ಮೋದಿ ಅವರು ಮೊದಲಿಗೆ,ಬೇಸ್’ ಆವರಣದಲ್ಲಿ ಪ್ರತಿಷ್ಠಾಪಿಸಿರುವ 22 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಮೂಲಕ ಸಂವಿಧಾನ ಶಿಲ್ಪಿ ಮತ್ತು ಅರ್ಥಶಾಸ್ತ್ರಜ್ಞ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಸೂಕ್ತ ಸ್ಮರಣೆಯ ಸಂಕೇತವನ್ನು ಸಮರ್ಪಿಸಿದ ಭಾವ ನೆರೆದಿದ್ದವರಲ್ಲಿ ಮನೆ ಮಾಡಿತ್ತು.

    ಇದಾದ ಬಳಿಕ ಬೇಸ್’ ಕ್ಯಾಂಪಸ್ಸಿನ ಆಡಳಿತ ವಿಭಾಗಕ್ಕೆ ತೆರಳಿದ ಅವರು, 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 13 ಬ್ಲಾಕ್ ಗಳನ್ನು ಲೋಕಾರ್ಪಣೆ ಮಾಡಿದರು. ಅಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರುಬೇಸ್’ ಪರಿವಾರದ ಪರವಾಗಿ ಅಂಬೇಡ್ಕರರ ಚಿಕ್ಕ ಪ್ರತಿಮೆಯನ್ನು ಪ್ರಧಾನಿಗೆ ಉಡುಗೊರೆಯಾಗಿ ಕೊಟ್ಟರು. ಪ್ರಧಾನಿ ಇದನ್ನು ಹರ್ಷಚಿತ್ತರಾಗಿ ಸ್ವೀಕರಿಸಿದರು.

    ಮೋದಿ ಅವರ ವೇಳಾಪಟ್ಟಿಯೆಂದರೆ, ಅಲ್ಲಿ ಅರೆನಿಮಿಷವೂ ವ್ಯರ್ಥವಾಗುವ ಪ್ರಶ್ನೆಯೇ ಇಲ್ಲ! ಇದಕ್ಕೆ ತಕ್ಕಂತೆ, ರಾಜ್ಯ ಸರಕಾರವು ಟಾಟಾ ಸಮೂಹದ ನೆರವಿನೊಂದಿಗೆ 4,736 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಿರುವ 150 ಸರಕಾರಿ ಐಟಿಐಗಳನ್ನು ರಾಜ್ಯಕ್ಕೆ ಸಮರ್ಪಿಸಿದರು. ಮೋದಿಯವರು ಇವುಗಳ ಚಾಲನೆಗೆ ಗುಂಡಿ ಒತ್ತುತ್ತಿದ್ದಂತೆಯೇ, ರಾಜ್ಯಾದ್ಯಂತ ಇರುವ ಐಟಿಐಗಳೆಲ್ಲ ನೂತನ ಅಧ್ಯಾಯಕ್ಕೆ ತೆರೆದುಕೊಂಡು, ಕ್ರಿಯಾಶೀಲವಾದವು. ಇದನ್ನು ಕಂಡು, ಮೋದಿ ಸಂತಸ ಪಟ್ಟರು.

    ಕ್ಷಣಾರ್ಧದಲ್ಲಿ ವಿದ್ಯಾರ್ಥಿಗಳ ಬಳಿಗೆ ಹೋದ ಅವರು, ಅವರೊಂದಿಗೆ ಐದಾರು ನಿಮಿಷ ಕಳೆದು, ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸಿದರು. ಹಾಗೆಯೇ, ಕ್ಯಾಮರಾ ಕ್ಲಿಕ್ ಗಳಿಗೆ ಸಾಕ್ಷಿಯಾದರು. ಆದರೆ, ಏಕೋ ಸಮಾಧಾನವಾಗದೆ, `ಅಲ್ಲಿರುವ ಮೆಟ್ಟಲ ಬಳಿಗೆ ನೀವೆಲ್ಲ ಬನ್ನಿ. ಅಲ್ಲಿ ಫೋಟೋ ಸೆಷನ್ ಆಗಲಿ’ ಎಂದು ಹೇಳಿ, ಉನ್ನತೀಕರಿಸಿರುವ ಐಟಿಐ ಮಾದರಿಯನ್ನು ವೀಕ್ಷಿಸಲು ತೆರಳಿದರು. ಅಲ್ಲಿ ನಿಯೋಜಿತರಾಗಿದ್ದ ಸಿಬ್ಬಂದಿಯಿಂದ ಐಟಿಐ ಸಾಧನ-ಸಲಕರಣೆಗಳ ಬಗ್ಗೆ ಮೋದಿ ಮಾಹಿತಿ ಪಡೆದುಕೊಂಡರು.

    ಇಲ್ಲಿಂದ, ಕ್ಯಾಂಪಸ್ಸಿನ ಮೆಟ್ಟಿಲುಗಳ ಬಳಿ ತೆರಳಿದ ಅವರು, ಇನ್ನೊಮ್ಮೆ ಕ್ಯಾಮರಾಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಬಂಧಿ’ಯಾದರು. ಇವೆಲ್ಲದರ ಮಧ್ಯೆಯೇ ಕಾರ್ಯಕ್ರಮದಲ್ಲಿದ್ದ ಗಣ್ಯರಿಗೆ ಕೈ ಮುಗಿದು, ಅವರೊಂದಿಗೆ ಅರೆಘಳಿಗೆ ಮಾತನಾಡುತ್ತಲೇ ಮುಂದಡಿ ಇಡುತ್ತ ಹೋದರು. ಬೇಸ್ ಕ್ಯಾಂಪಸ್ಸಿನಿಂದ ಪುನಃ ಕೊಮ್ಮಘಟಕ್ಕೆ ಹೊರಟಾಗಲೂ ಮೋದಿ, ಎಲ್ಲರಿಗೂ ವಂದನೆಗಳನ್ನು ಅರ್ಪಿಸಿ, ತಮ್ಮ ಸುಸಂಸ್ಕೃತಿಯನ್ನು ಪ್ರದರ್ಶಿಸಿದರು. ಕೇವಲ ಒಂದು ಗಂಟೆ ಕಾಲಕ್ಕೂ ಕಡಿಮೆ ಅವಧಿಯಲ್ಲಿಬೇಸ್’ ಆವರಣ ಉಜ್ವಲ ಅಧ್ಯಾಯಕ್ಕೆ ಸಾಕ್ಷಿಯಾಯಿತು!

    ಅರ್ಥಶಾಸ್ತ್ರ ಮತ್ತು ಸಮಾಜವಿಜ್ಞಾನಗಳ ಉನ್ನತಾಧ್ಯಯನಕ್ಕೆ ಮೀಸಲಾಗಿರುವ `ಬೇಸ್’ ವಿ.ವಿ.ಯಲ್ಲಿ ಇನ್ನು ಮೂರು ವರ್ಷಗಳಲ್ಲಿ 1,100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಲಭ್ಯವಾಗಲಿದೆ. ಹಾಗೆಯೇ, ಮೇಲ್ದರ್ಜೆಗೇರಿಸಿರುವ ಐಟಿಐಗಳಿಂದ 1.70 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.

    ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಸೋಮಣ್ಣ, ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಶ್ರೀರಾಮುಲು, ಕುಲಪತಿ ಡಾ.ಭಾನುಮೂರ್ತಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಉಪಸ್ಥಿತರಿದ್ದರು.

    ಮಿದುಳು ಅಧ್ಯಯನ ಕೇಂದ್ರದ ಉದ್ಘಾಟನೆ
    ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ
    ಇದಕ್ಕೂ ಮುನ್ನ ಮೋದಿ, ಭಾರತೀಯ ವಿಜ್ಞಾನ ಮಂದಿರದಲ್ಲಿ (ಐಐಎಸ್ಸಿ) 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಿದುಳು ಅಧ್ಯಯನ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು. ಈ ಕೇಂದ್ರಕ್ಕೆ ಮೋದಿಯವರೇ 2015ರ ಫೆ.18ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.

    ಈ ಕೇಂದ್ರವು, ಕರ್ನಾಟಕ ಮತ್ತು ಭಾರತದ ಗ್ರಾಮೀಣ ಭಾಗಗಳಲ್ಲಿ ನಡೆಸುತ್ತಿರುವ ಪ್ರಮುಖ ಸಂಶೋಧನೆಗಳತ್ತ ಗಮನ ಕೇಂದ್ರೀಕರಿಸಲಿದ್ದು, ಡಿಮೆನ್ಶಿಯಾ ಕಾಯಿಲೆಗೆ ವೈದ್ಯಕೀಯ ಪರಿಹಾರ ಕಂಡುಹಿಡಿಯಲಿದೆ.

    ಇದಾದ ಬಳಿಕ ಅವರು, ಐಐಎಸ್ಸಿ ಆವರಣದಲ್ಲಿ ತಲೆಯೆತ್ತಲಿರುವ 800ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯದ `ಬಾಗ್ಚಿ-ಪಾರ್ಥಸಾರಥಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ಯ ಬೃಹತ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಆಸ್ಪತ್ರೆಯ ನಿರ್ಮಾಣಕ್ಕೆ, ಉದ್ಯಮಿಗಳಾದ ಸುಸ್ಮಿತಾ ಮತ್ತು ಸುಬ್ರತೋ ಬಾಗ್ಚಿ ಹಾಗೂ ರಾಧಾ ಮತ್ತು ಎನ್.ಎಸ್.ಪಾರ್ಥಸಾರಥಿಯವರು 425 ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ.

    ಈ ಆಸ್ಪತ್ರೆ ಕಾರ್ಯಾರಂಭ ಮಾಡತೊಡಗಿದರೆ, ಐಐಎಸ್ಸಿಯಲ್ಲಿ ಅಂತರ್ಶಿಸ್ತೀಯ ತರಬೇತಿ, ಸಂಶೋಧನೆ, ಮತ್ತು ಕ್ಯಾನ್ಸರ್ ಹಾಗೂ ಹೃದ್ರೋಗಗಳಂಥ ಕಾಯಿಲೆಗಳಿಗೆ ಚಿಕಿತ್ಸೆ ಸಾಧ್ಯವಾಗಲಿದೆ. ಜೊತೆಗೆ, ಪ್ಲಾಸ್ಟಿಕ್ ಸರ್ಜರಿ, ರೋಬೋಟಿಕ್ ಸರ್ಜರಿ, ಅಂಗಾಂಗ ಕಸಿ ಕೂಡ ನಡೆಯಲಿದೆ.

    ಕ್ಯಾಪ್ಶನ್

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!