BENGALURU JUE 22
ಮಂತ್ರಾಲಯದ ಶ್ರೀಗಳಾದ ಸುಬುಧೀಂದ್ರತೀರ್ಥ ಸ್ವಾಮಿಗಳು ಮಲ್ಲೇಶ್ವರಂನಲ್ಲಿರುವ ದೋಬಿ ಘಾಟ್ ಗೆ ಭೇಟಿ ನೀಡಿ, ಅಲ್ಲಿಯ ಬಟ್ಟೆ ಶುಚಿಗೊಳಿಸಲು ಇರುವ ಆಧುನಿಕ ವ್ಯವಸ್ಥೆಯನ್ನು ತಮ್ಮ ಶ್ರೀಮಠದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಸ್ಥಳೀಯ ಶಾಸಕ ಮತ್ತು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಂದ ಮಾಹಿತಿ ಪಡೆದುಕೊಂಡರು.
ಬುಧವಾರ ಶಾಸಕರನ್ನು ಸಂಪರ್ಕಿಸಿ, ದೋಬಿ ಘಾಟಿಗೆ ಭೇಟಿ ನೀಡುವ ಆಸಕ್ತಿ ವ್ಯಕ್ತಪಡಿಸಿದ ಅವರು, ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಬಂದರು.
ದೋಬಿ ಘಾಟಿನಲ್ಲಿ ಅಳವಡಿಸಿ ಅತ್ಯಾಧುನಿಕ ಯಾಂತ್ರೀಕೃತ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ಇಲ್ಲಿನ ಸೌಲಭ್ಯಗಳು ಮತ್ತು ಇದರಿಂದ ಮಡಿವಾಳ ಸಮುದಾಯದವರಿಗೆ ಆಗಿರುವ ಅನುಕೂಲಗಳನ್ನು ಅರಿತುಕೊಂಡರು. ಶ್ರೀಗಳು ಯಾವುದೇ ಮಡಿವಂತಿಕೆ ಇಲ್ಲದೆ, ತಮ್ಮಲ್ಲಿಗೇ ಬಂದಿದ್ದನ್ನು ಕಂಡು ಆ ಸಮುದಾಯವರು ಹರ್ಷಚಿತ್ತರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, `ಮಡಿವಾಳ ಸಮುದಾಯದ ಸದಸ್ಯರು ಬಟ್ಟೆಗಳನ್ನು ಒಗೆದು, ಶುಚಿಗೊಳಿಸಿದ ನಂತರವಷ್ಟೇ ಮಡಿಯ ಕಲ್ಪನೆ ಮತ್ತು ಸಂಪ್ರದಾಯಕ್ಕೆ ಮಹತ್ತ್ವ ಬರುತ್ತದೆ. ಇದು, ಇಡೀ ಸಮಾಜವನ್ನೇ ಶುದ್ಧವಾಗಿಡಬೇಕೆನ್ನುವ ಸಂಕೇತ’ ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀಗಳು ಸುಮಾರು ಮುಕ್ಕಾಲು ಗಂಟೆ ಕಾಲ ದೋಬಿ ಘಾಟ್ ಸೌಲಭ್ಯಗಳ ಬಗ್ಗೆ ಕೇಳಿ, ತಿಳಿದುಕೊಂಡರು.
ಜತೆಯಲ್ಲಿದ್ದ ಸಚಿವರು, ಅಗತ್ಯ ಮಾಹಿತಿ ನೀಡಿ ಶ್ರೀಗಳಿಗೆ ನೆರವು ನೀಡಿದರು.