ಷೇರು ಪೇಟೆಯಲ್ಲಿ ಹೆಚ್ಚಿನ ಕಂಪನಿಗಳ ಷೇರುಗಳು ಭಾರಿ ಏರಿಳಿತಗಳನ್ನು ಕಾಣುತ್ತಿವೆ. ಇದು ಹೆಚ್ಚಿನ ಅಸ್ಥಿರತೆ ಮತ್ತು ಹೂಡಿಕೆದಾರರ ನಂಬಿಕೆಯ ಕೊರತೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಜಾಗತಿಕ ಮಟ್ಟದಲ್ಲಾಗುತ್ತಿರುವ ಬೆಳವಣಿಗೆಳು, ಬದಲಾವಣೆಗಳು, ಒತ್ತಡಗಳಾಗಿವೆ. ಆದರೂ ಕೆಲವು ಕಂಪನಿಗಳು ಆಕರ್ಷಕವಾದ ಕುಸಿತಗಳನ್ನು, ಚೇತರಿಕೆಯನ್ನು ಪ್ರದರ್ಶಿಸುವುದರೊಂದಿಗೆ ಹತ್ತಾರು ಅವಕಾಶಗಳನ್ನು ಒದಗಿಸಿವೆ.
- ಆರ್ ಇ ಸಿ ಲಿಮಿಟೆಡ್ ಕಂಪನಿಯು ಈಗಾಗಲೇ ಪ್ರತಿ ಷೇರಿಗೆ ರೂ.4.80 ರಂತೆ ಲಾಭಾಂಶ ಘೋಷಿಸಿದೆ. ಈಗ ಅದರೊಂದಿಗೆ ಈ ತಿಂಗಳ 30 ರಂದು ಕಂಪನಿಯ ಆಡಳಿತ ಮಂಡಳಿಯು ಷೇರುದಾರರಿಗೆ ಬೋನಸ್ ಷೇರು ವಿತರಣೆಯನ್ನು ಪರಿಶೀಲಿಸಲಿದೆ ಎಂದು ಪ್ರಕಟಿಸಿದೆ.
- ಮೋರ್ಗನ್ ಸ್ಟಾನ್ಲಿ ಇನ್ವೆಸ್ಟ್ ಮೆಂಟ್ ಫಂಡ್ಸ್ ನ ಎಮರ್ಜಿಂಗ್ ಲೀಡರ್ ಈಕ್ವಿಟಿ ಫಂಡ್ ಸೋಮವಾರದಂದು 13.14 ಲಕ್ಷ ಹ್ಯಾಪಿಯೆಸ್ಟ್ ಮೈಂಡ್ಸ್ ಷೇರನ್ನು ರೂ.800 ರಂತೆ ಮಾರಾಟ ಮಾಡಿದೆ.
- ಬಜಾಜ್ ಆಟೋ ಲಿಮಿಟೆಡ್ ಕಂಪನಿಯು ಈ ಹಿಂದೆ 14 ನೇ ಜೂನ್ ನಂದು ಷೇರು ಹಿಂಕೊಳ್ಳುವಿಕೆಯನ್ನ ಪರಿಶೀಲಿಸುವ ಕಾರ್ಯ ಸೂಚಿ ಪ್ರಕಟಿಸಿತ್ತು. ಅಂದು ಷೇರಿನ ಬೆಲೆ ರೂ.3,890 ರಿಂದ ಆರಂಭವಾಗಿ ರೂ.4,000 ನ್ನು ತಲುಪಿ ನಂತರ ಇಳಿಕೆ ಕಾಣತೊಡಗಿತು. ಈ ಇಳಿಕೆ ಕಾಣಲು ಕಾರಣ ಕಂಪನಿಯು ತನ್ನ ಷೇರು ಹಿಂಕೊಳ್ಳುವಿಕೆ ಯೋಜನೆ ಪರಿಶೀಲನೆಯನ್ನು ಮುಂದೂಡಿತ್ತು. ಹಾಗಾಗಿ ಷೇರಿನ ಬೆಲೆ ರೂ.3,684 ರ ಸಮೀಪ ಕೊನೆಗೊಂಡಿತು. ನಂತರ 20 ನೇ ಸೋಮವಾರದಂದು ರೂ.3,577 ರವರೆಗೂ ಕುಸಿದಿತ್ತು. ಕಂಪನಿಯು 22 ರಂದು ಬುಧವಾರ ಸಂಜೆ ಮತ್ತೊಮ್ಮೆ ಆಡಳಿತ ಮಂಡಳಿಯು 27 ರಂದು ಸಭೆಸೇರಿ ಷೇರು ಹಿಂಕೊಳ್ಳುವ ಯೋಜನೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಕಾರ್ಯ ಸೂಚಿ ಪ್ರಕಟಿಸಿದ ಕಾರಣ ಗುರುವಾರ ಷೇರಿನ ಬೆಲೆ ಪುಟಿದೆದ್ದಿತು. ಅಂದು ರೂ.3,795 ರಗಡಿ ದಾಟಿತು. ಶುಕ್ರವಾರ ರೂ.3,841 ರವರೆಗೂ ಏರಿಕೆ ಕಂಡು ರೂ.3,812 ರ ಸಮೀಪ ಕೊನೆಗೊಂಡಿತು. ಅಂದರೆ ಕೆಲವು ಬೆಳವಣಿಗೆಗಳಿಗೆ ಪೇಟೆ ಎಷ್ಟು ತೀಕ್ಷ್ಣವಾಗಿ ಸ್ಪಂಧಿಸುವುದು ಎಂಬುದನ್ನು ಈ ಬೆಳವಣಿಗೆ ತಿಳಿಸುತ್ತದೆ.
- ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಮೇ ತಿಂಗಳಲ್ಲಿ ತನ್ನ ವಾರ್ಷಿಕ ಫಲಿತಾಂಶ ಪ್ರಕಟಿಸಿದ್ದು ಆಕರ್ಷಣೀಯ ಅಂಕಿ ಅಂಶಗಳನ್ನು ಸಾಧಿಸಿದೆ. ಆದರೂ ಆ ಸಂದರ್ಭದಲ್ಲಿ ಕಂಪನಿಯು ಅಂತಿಮ ಲಾಭಾಂಶ ಪ್ರಕಟಣೆಯನ್ನು ಮಾಡಿರಲಿಲ್ಲವಾದ್ದರಿಂದ ನಂತರದ ದಿನಗಳಲ್ಲಿ ಸ್ವಲ್ಪ ಕುಸಿತಕ್ಕೊಳಗಾಗಿ ನಂತರ ಚೇತರಿಸಿಕೊಂಡಿತು. ಕಂಪನಿಯ ಆಡಳಿತ ಮಂಡಳಿಯು 28 ರಂದು ಸಭೆ ಕರೆದಿದ್ದು ಅಂದು ಅಂತಿಮ ಲಾಭಾಂಶ ಪ್ರಕಟಣೆಯ ಕಾರ್ಯ ಸೂಚಿ ಹೊರಡಿಸಿದೆ. ಘೋಷಣೆಯು ಸ್ವಲ್ಪ ವಿಳಂಬವಾದರೂ ಆಕರ್ಷಣೀಯ ಅಂಶ ಹೊರಬೀಳಬಹುದು.
- ಕೆನರಾ ಬ್ಯಾಂಕ್ ತನ್ನ ಆಡಳಿತ ಮಂಡಳಿಯ ಸಭೆಯಲ್ಲಿ ರೂ.9,000 ಕೋಟಿ ಮೌಲ್ಯದ ಸಂಪನ್ಮೂಲ ಸಂಗ್ರಹಣೆ ಮಾಡಲು ನಿರ್ಧರಿಸಿದೆ.
- ಗ್ಲೆನ್ ಮಾರ್ಕ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ ಕಂಪನಿಯ ಘಟಕವು ಅಮೇರಿಕಾದ ಎಫ್ ಡಿ ಎ ಯ ತನಿಖೆಗೊಳಪಟ್ಟಿದ್ದು, ಇದರಿಂದ 6 ಅಬ್ಸರ್ವೇಷನ್ ಗಳನ್ನು ಎಫ್ ಡಿ ಎ ನೀಡಿದೆ. ಈ ಕಾರಣದಿಂದಾಗಿ ಷೇರಿನ ಬೆಲೆಯು 23 ರಂದು ರೂ.351 ರವರೆಗೂ ಕುಸಿದಿತ್ತು. ಆದರೆ ಶುಕ್ರವಾರದಂದು ಪೇಟೆಯ ಚಟುವಟಿಕೆಯು ಚುರುಕಾದ ಕಾರಣ ರೂ.385 ರವರೆಗೂ ಜಿಗಿಯಿತು.
- ಹಿಕಾಲ್ ಲಿಮಿಟೆಡ್ ಕಂಪನಿಯ ಷೇರಿನ ಬೆಲೆಯು ಕಂಪನಿಯ ಫಲಿತಾಂಶವು ಆಕರ್ಷಣಿಯವಲ್ಲದ ಕಾರಣ ಕಳೆದ ಒಂದು ತಿಂಗಳಲ್ಲಿ ರೂ.400 ರ ಸಮೀಪದಿಂದ ವಾರ್ಷಿಕ ಕನಿಷ್ಠ ರೂ.215 ರ ಸಮೀಪಕ್ಕೆ ಕುಸಿದಿತ್ತು. ಈ ವಾರದ ಆರಂಭದಿಂದಲೂ ಸ್ವಲ್ಪ ಚೇತರಿಸಿಕೊಂಡು ಶುಕ್ರವಾರದಂದು ರೂ.233 ರಿಂದ ರೂ.253 ರವರೆಗೂ ಏರಿಕೆ ಕಂಡಿದೆ.
- ಇನ್ವೆಸ್ಕೋ ಮ್ಯುಚುಯಲ್ ಫಂಡ್ ಶುಕ್ರವಾರದಂದು ತನ್ನ ಇನ್ವೆಸ್ಕೋ ಟ್ಯಾಕ್ಸ್ ಪ್ಲಾನ್ ಯೋಜನೆಯ 3,39,349 ರೆಪ್ಕೋ ಹೋಮ್ ಫೈನಾನ್ಸ್ ಲಿಮಿಟೆಡ್ ಕಂಪನಿಯ ಷೇರನ್ನು ಗಜಗಾತ್ರದ ವಹಿವಾಟಿನಲ್ಲಿ ರೂ.117 ರಂತೆ ಮಾರಾಟ ಮಾಡಿದೆ. ನಂತರದಲ್ಲಿ ಷೇರಿನ ಬೆಲೆಯು ಚೇತರಿಸಿಕೊಂಡು ರೂ.131 ರ ಸಮೀಪ ಕೊನೆಗೊಂಡಿದೆ.
- ಹೀರೋ ಮೋಟೊ ಕಾರ್ಪ್ ಲಿಮಿಟೆಡ್ ಕಂಪನಿಯು ತನ್ನ ದ್ವಿಚಕ್ರವಾಹನಗಳಾದ ಸ್ಕೂಟರ್ ಮತ್ತು ಮೋಟಾರ್ ಸೈಕಲ್ ಗಳ ಬೆಲೆಯನ್ನು ಪ್ರತಿ ಘಟಕಕ್ಕೆ ರೂ.3,000 ದಂತೆ ಜುಲೈ ಒಂದರಿಂದ ಬೆಲೆ ಹೆಚ್ಚಿಸಲಿದೆ.
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.