ಕಡವರನೆಡಹಿ ಸಂಧಿಸಿದ ಕಡುನಡವನಂತೆ– ಉಪಮಾಲೋಲ ಲಕ್ಷ್ಮೀಶನ ‘ಜೈಮಿನಿ ಭಾರತ’ದ ‘ಚಂದ್ರಹಾಸನ ಬಾಲ್ಯ’ದಲ್ಲಿ ಉಲ್ಲೇಖವಾಗಿರುವ ಮಾತಿದು. ಕುಳಿಂದಕ ಎನ್ನುವ ಮಹಾರಾಜ ಬೇಟೆ ನಿಮಿತ್ತ ಕಾಡಿಗೆ ಬಂದಿರುವಾಗ ಕಾಡಿನ ನಡುವೆ ರೋಧಿಸುತ್ತಿದ್ದ ಮಗುವನ್ನು ಪಡೆದಾಗ ರಾಜನಿಗಾದ ಸಂತೋಷವನ್ನು ವಿವರಿಸುವ ಸಂದರ್ಭದಲ್ಲಿ ಕವಿ ಈ ಮಾತುಗಳನ್ನಾಡಿದ್ದಾನೆ.
ಮಕ್ಕಳಿಲ್ಲದ ರಾಜನಿಗೆ ಕಾಡಿನ ನಡುವೆ ಬೆರಳನ್ನು ಕಳೆದುಕೊಂಡು ಅಸಾಧ್ಯವಾದ ನೋವಿನ ನಡುವೆಯೂ ಹರಿನಾಮಸ್ಮರಣೆ ಮಾಡುತ್ತಿದ್ದ ಬಾಲಕನ ಸಾಂಗತ್ಯ ಅತ್ಯಂತ ಖುಷಿ ಕೊಡುತ್ತದೆ . ಕಡು ಬಡವನೊಬ್ಬ ದಾರಿಯಲ್ಲಿ ನಡೆದುಹೋಗುವಾಗ ಅಕಸ್ಮಾತ್ ಎಡವಿ ಪಡೆಯುವ ದ್ರವ್ಯದ ಗಂಟು ಹೇಗೆ ಸಂತೋಷ ನೀಡುತ್ತದೆಯೋ ಹಾಗೆ ಕುಳಿಂದಕನಿಗೆ ಅಕಸ್ಮಿಕ ಎಂಬಂತೆ ಮಗು ಸಿಕ್ಕಿದ್ದು ಅವರ್ಣನೀಯ ಆನಂದ ತರುತ್ತದೆ.
ಇಂದಿನ ದಿನಮಾನಗಳಲ್ಲಿ ಅನ್ನಾಹಾರಗಳಿಲ್ಲದೆ ಇದ್ದವರು ಮಾತ್ರ ಬಡವರು ಎನ್ನುವಂತಿಲ್ಲ. ವಿಶಾಲ ಚಿಂತನೆ ಮಾಡಿದರೆ ಅವಕಾಶ ದೇಹಿಗಳೂ ಬಡವರೇ ಸರಿ! ಪೈಪೋಟಿ ಯಿಂದ ಕೂಡಿರುವ ಜಗತ್ತು ಇದು. ಆರೋಗ್ಯಕರ ಪೈಪೋಟಿ ಇಲ್ಲವೇ ಇಲ್ಲ. ಆನಾರೋಗ್ಯಕರ ಪೈಪೋಟಿ ಇರುವಂಥದ್ದು .ಹೀಗಿರುವಾಗ ನಿಜಕ್ಕೂ ಪ್ರತಿಭಾವಂತನಿಗೆ ತನ್ನ ಸಾಮರ್ಥ್ಯವನ್ನು ತೋರಿಸಲು ಅವಕಾಶ ಸಿಕ್ಕರೆ ಅಪರಿಮಿತ ಸಂತೋಷವಾಗುತ್ತದೆ.
ಯಾವ ನಿರೀಕ್ಷೆಯೂ ಇಲ್ಲದೆ ನಮ್ಮ ನಿರೀಕ್ಷೆಗೂ ಮೀರಿದ್ದನ್ನು ಆಕಸ್ಮಿಕವಾಗಿ ಪಡೆಯುವುದೆಂದರೆ ಸಂತೋಷದ ವಿಚಾರವೆ ಅಲ್ವೆ! ಬದುಕಿನಲ್ಲಿ ಎಲ್ಲವೂ ನಿರೀಕ್ಷೆಯಂತೆ ಆಗುತ್ತದೆ ಎನ್ನುವುದು ಸುಳ್ಳು. ‘ತಾನೊಂದು ಬಗೆದರೆ ದೈವವೊಂದು ಬಗೆದಂತೆ’ ಎಂಬಂತೆ ಅಪಸವ್ಯಗಳಾಗುವುದೇ ಹೆಚ್ಚು. ಅವುಗಳ ನಡುವೆ ಇಂಥ ಅನಿರೀಕ್ಷಿತಗಳು ಸಂತಸದ ಕಡಲಿನಂತೆಯೇ ಭಾಸವಾಗುತ್ತದೆ.
ಲಕ್ಷ್ಮೀಶ ಕವಿ ಇಲ್ಲಿ ಕಡುಬಡವ ಬಂದರೆ ತೀವ್ರ ಬಯಕೆಯನ್ನು ಹೊಂದಿದ್ದವನು ಎಂಬ ಅರ್ಥದಲ್ಲಿ ಬಳಸಿರುವುದು ಕವಿಯ ಪ್ರತಿಭೆಗೆ ಹಿಡಿದಿರುವ ಕೈಗನ್ನಡಿ ಎನ್ನಬಹುದು.
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.